Sunday, 8 January 2012


 ಜನನಿಯ ಘೋಷ 

ಅವಳು ನನ್ನ ಮನವ ಹೆತ್ತ ಜನನಿ
ಸುಧೆಯುಣಿಸಿ ಬೆಳೆಸಿದ ಕಾರುಣಿ.,
ನಿತ್ಯಸುಂದರಿ ಆಕೆ, ವನನದಿಪರ್ವತಗಳಲಿ..
ಸಂಗೀತಪ್ರಿಯೆ ಝರಿಪಕ್ಷಿಕವಿಗಳ ಘೋಷದಲಿ..,   
ನಾಟ್ಯವಾಡಿಹಳು ಸರ್ವರ ಮನರಂಗದಲಿ.,
ಅವಳೇ ನನ್ನ ತಾಯಿ ಭಾರತಿ
ಈ ನಾಡ ನಿಜ ಒಡತಿ..


ಸಾವಿರ ಸೂರ್ಯರಿಗಿಂತ
ದೇದೀಪ್ಯಮಾನವಾದ ಅವಳ 
ಮುಗುಳ್ನಗೆಯ ಮೊಗಕ್ಕೆ ಬಡಿಯಿತಂದು ಗ್ರಹಣ..
ಎಗ್ಗಿಲ್ಲದೆ ನುಗ್ಗಿಬಂದ 
ಪರರ ಸಂಕೋಲೆಯ ಬಂಧನ..


ಮಾತೆಯ ಮಾಂಗಲ್ಯವನೆ ಸೀಳಹೊರಟ
ಪರಂಗಿಗಳ ಫಿರಂಗಿಗೆ, ಬಂದೂಕಿನ ನಳಿಕೆಗೆ
ಎದೆಯೊಡ್ಡಿದ ಕಲಿಗಳು,
ಸಜ್ಜುಗೊಳಿಸಿದ ಉರುಳಿಗೆ ಕೊರಳಿತ್ತು
ಸ್ವರಾಜ್ಯದರಮನೆಗೆ ತೋರಣಗಳಾದ
ಗುಂಡಿಗೆಯ ಪ್ರಚಂಡರು,.
ಹೂತುಹೋದರು ಇತಿಹಾಸದೊಳು..
ಕಾಲಗರ್ಭದಲ್ಲಿ ಇಂಗಿಹೋದ, ಹೆಪ್ಪುಗಟ್ಟಿದ 
ರಕ್ತದಮಡು ನಮಗೀಗ ಕಾಣುತ್ತಲೇ ಇಲ್ಲ.
ಅದರಿಂದ ಚಿಗುರೊಡೆದ ಸ್ವಾತಂತ್ರ್ಯವೃಕ್ಷವಷ್ಟೇ ನಮಗೆ ಕಂಡಿದ್ದು..!!


ಈಗ ಈ ಮರಕ್ಕೂ ಗೆದ್ದಲು,
ಕಾಂಡ ಕೊರೆದು ಪೊಳ್ಳಾಗಿಸುವ ಹುಳು..
ಬೃಹತ್ತಾಗಿ ಬೆಳೆದ ಈ ಮರದ
ನಿತ್ಯಹಸಿರಿನಲ್ಲಿ, ಹಾಡಬೇಕಿತ್ತು ಕೋಗಿಲೆ,
ಕುಸುಮಗಳ ನಡುವೆ, ಚಿಟ್ಟೆಗಳ ಕಲೆ..
ಆದರೆ, ಇಲ್ಲೀಗ ವಾಸ ಬಾವುಲಿಗಳ ಟ್ಹಾವು 
ಎಲ್ಲವನು ತಿಂದು ಮಬ್ಬಾದ ಹೆಬ್ಬಾವು..


ಮತ್ತೆ ಭಾರತಿಗೆ ಕವಿದಿದೆ ಗ್ರಹಣ.,
ನಮ್ಮ ಅನ್ಯಾಯಗಳ ಕೇತುವಿನಿಂದ
ಅಕ್ರಮಗಳ ರಾಹುವಿಂದ ಗ್ರಸ್ತಗ್ರಹಣ..
ಪ್ರಕೃತಿಯ ಗ್ರಹಣ ತಾನಾಗೇ ಸರಿದೀತು..,
ಈ ಗ್ರಹಣ... ಉಹೂ..
ಕಳಚಲು ಒಗ್ಗೂಡಿ ಕೈಹಚ್ಚಲೇಬೇಕು.
ಜನಮಾನಸವ ಬೆಸೆದು...


ಸರ್ವಶಕ್ತಳಾಕೆ ಭಾರತಾಂಬೆ,
ನಮ್ಮ ಮನದಾಳದ ಕೂಗಿಗೆ
ಒಂದಾಗಿ ಅವಳೆಡೆ ಚಾಚುವ ಕೈಗೆ
ಕಾದು ಹೊಸ್ತಿಲಲ್ಲೇ ನಿಂತು
ಹವಣಿಸುತ್ತಿಹಳು..
ಕೇಳಿಸದಾಯಿತೇ ಆಕೆಯ ಕರೆ.??
ಬನ್ನಿ ಜೊತೆಗೂಡಿ ಮುನ್ನಡೆಯಲು,
ತಾಯ ಹೊನ್ನ ಚರಿತೆಯ ಮತ್ತೆ ಬೆಳಗಿಸಲು,
ಮೈಕೊಡವಿ ಆಲಸ್ಯವನು
ಪಾಂಚಜನ್ಯವ ಮೊಳಗಿಸಲು 
ನಾಡನಿರ್ಮಾಣದಲಿ ಅಡಿಗಲ್ಲನಿಡಲು.... 

Sunday, 25 December 2011

ಗೆಂದಾಲಾಲ್ ದಿಕ್ಷಿತ್ -- ಅಪರೂಪದ ಅಜ್ಞಾತ ಕ್ರಾಂತಿಕಾರಿ..!!!


     
   
ಭಾಳ ಅಂದ್ರೆ ಆ ಹುಡುಗನಿಗೆ 9-10 ವರ್ಷ ವಯಸ್ಸಿರಬಹುದು.. ಅವತ್ತೊಂದಿನ, ಬೆಳಗಿನ ನಸುಕಿನಲ್ಲಿಯೇ ಎದ್ದು, ತನ್ನೂರಿನಲ್ಲಿ ಹರಿಯುತ್ತಿದ್ದ ಯಮುನಾ ನದಿಗೆ ತೆರಳಿ ಸ್ನಾನ ಮಾಡಿ ಶುದ್ಧನಾದ. ಮಿಂದೆದ್ದು ಬಂದವನೇ, ದಡದ ಮೇಲಿದ್ದ ಕಾಳಿಯ ಗುಡಿಯೆಡೆ ಹೊರಟ.. ಪೂಜೆಗೆ ಹೋಗ್ತಾ ಇರಬಹುದೆಂದು ಎಲ್ಲರೂ ಅನ್ಕೊಂಡಿದ್ರು.. ಆದ್ರೆ ಅವನು ಹೋಗ್ತಿದ್ದಿದ್ದು ಪೂಜೆಗಲ್ಲ, ಪ್ರತಿಜ್ಞೆಗೆ..!!!!!!!!
" ತಾಯೆ, ಆಂಗ್ಲರ ದುರಾಡಳಿತದಲ್ಲಿ ನಲುಗುತಿರುವ ದೇಶದ ಸ್ವಾತಂತ್ರ್ಯವೇ ನನ್ನ ಜೀವನದ ಧ್ಯೇಯ.. ನನ್ನ ಕೊನೆ ಉಸಿರಿನವರೆಗೂ, ಕೊನೆ ರಕ್ತದ ಹನಿ ಪುಟಿಯುವವರೆಗೂ ಭಾರತಿಯ ಸೇವೆಗಾಗಿ ನನ್ನ ಬದುಕು ಮುಡಿಪು", ಅಂತ ಆ ಸಣ್ಣ ಬಾಲಕ ಶಪಥಗೈದಿದ್ದ..!!!!

ಅವನ ಹೆಸರು "ಗೆಂದಾಲಾಲ್ ದಿಕ್ಷಿತ್". 1888 ರಲ್ಲಿ, ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಹಳ್ಳಿಯೊಂದರಲ್ಲಿ  ಜನನ. ಸಣ್ಣವನಿಂದಲೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದವ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಮೇಲೆ, DAV ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡ..

ಅದು 1905. 'ಒಡೆದು ಆಳುವ' ನೀತಿಯನ್ನೇ ಅನುಸರಿಸುತ್ತಿದ್ದ ಆಂಗ್ಲರ ಅಧಿಕಾರಿ "ಲಾರ್ಡ್ ಕರ್ಜನ್" ಬಂಗಾಳವನ್ನು ವಿಭಜಿಸಿದ. ಅವನೇನೋ ಜನರನ್ನು ಒಡೆಯಲು ಹಾಗೆ ಮಾಡಿದ.. ಆದರೆ ಆದದ್ದೇ ಬೇರೆ. ಅವನ ಈ ಕೃತ್ಯಕ್ಕೆ ಇಡೀ ದೇಶವೇ ಎದ್ದು ನಿಂತಿತು. ಎಲ್ಲೆಲ್ಲೂ ಹರತಾಳ, ಮೆರವಣಿಗೆ, ಹೋರಾಟಗಳು ನಡೆದವು. ತಿಲಕರಂತೂ ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರತಿದಿನ, ಬಂಗಾಳ-ವಿಭಜನೆಯ ವಿರುದ್ಧ ಬೆಂಕಿಯ ಬರಹಗಳನ್ನು ಪ್ರಕಟಿಸ್ತಿದ್ರು.. ಅದರ ಕಿಡಿ, ಗೆನ್ದಾಲಾಲನಿಗೂ ಬಡಿಯಿತು. ತಿಲಕರಿಂದ ತುಂಬಾ ಸ್ಫೂರ್ತಿಗೊಂಡ ಗೆಂದಾಲಾಲ್, ಅವರು ಶುರುಮಾಡಿದ ಶಿವಾಜಿ-ಉತ್ಸವ, ಸಾರ್ವಜನಿಕ ಗಣೇಶ-ಉತ್ಸವ ಇದರಿಂದಲೂ ಪ್ರಭಾವಿತನಾದ. ಶಿವಾಜಿಯ ಚರಿತೆಯನ್ನು ಓದಿ, ಆ ಛತ್ರಪತಿಯ ಸಂಘಟನಾ ಕೌಶಲ್ಯ, ಧೈರ್ಯಗಳಿಂದ ಉತ್ತೇಜಿತಗೊಂಡ. ಗೆಂದಾಲಾಲ್ ಸಣ್ಣವನಿದ್ದಾಗ ಮಾಡಿದ್ದ ಪ್ರತಿಜ್ಞೆ ಈಡೇರುವ ಕಾಲ ಆಗ ಬಂದಿತ್ತು.. ಅದರ ಫಲವೇ, ಭಾರತದ ಕ್ರಾಂತಿ ಇತಿಹಾಸದಲ್ಲಿ, ಮತ್ತೊಂದು ಕ್ರಾಂತಿ ಸಂಘಟನೆಯ ಜನನ..
ಅದುವೇ ಗೆನ್ದಾಲಾಲನ "ಶಿವಾಜಿ ಸಮಿತಿ"..!!!

ಮೊದಮೊದಲು ಗೆನ್ದಾಲಾಲ್, ಊರಿನ ವಿದ್ಯಾವಂತರನ್ನ, ಶ್ರೀಮಂತರನ್ನ ಸೇರಿಸಿಕೊಂಡು ಸಂಘಟನೆ ಬೆಳೆಸುವ ಉತ್ಸಾಹದಲ್ಲಿದ್ದ.. ಆದರೆ ಆತ ಕಂಡಿದ್ದು ನಿರಾಶೆ.. ಬ್ರಿಟಿಷರ ಆಂಗ್ಲ ಶಿಕ್ಷಣದಲ್ಲಿ ಬೆಳೆದಿದ್ದ ವಿದ್ಯಾವಂತರೆಲ್ಲ, ಭಾರತದ ಬಗ್ಗೆ ಕಿಂಚಿತ್ತೂ ಗೌರವ ಉಳಿಸಿಕೊಂಡಿರಲಿಲ್ಲ. ಆಂಗ್ಲರು ಭಾರತದ ಉದ್ಧಾರಕ್ಕಾಗಿಯೇ ಬಂದಿದ್ದಾರೆ ಎಂಬ ಭ್ರಮೆಯಲ್ಲಿದ್ದರು.. ಜೊತೆಗೆ ಊರಿನ ಶ್ರೀಮಂತರೂ ಆಂಗ್ಲರ ಬಾಲಬಡುಕರಾಗಿದ್ದರು.. ಹೀಗಾಗಿ ಗೆನ್ದಾಲಾಲನಿಗೆ ಯಾವ ಸಹಾಯವೂ ಸಿಗಲೇ ಇಲ್ಲ..

ಆಗ ಅವನಿಗೆ ಹೊಳೆದದ್ದೆ ಚಂಬಲ್ ಕಣಿವೆ.. ಕಳ್ಳ-ಕಾಕರ ಪ್ರಸಿದ್ಧ ತಾಣ, ಚಂಬಲ್ ಕಣಿವೆ ಇದ್ದದ್ದು ಅಲ್ಲೇ. ಅಲ್ಲಿನ ಡಕಾಯಿತರನ್ನೇ ಸೇರಿಸಿಕೊಂಡು ಸಂಘಟನೆ ಕಟ್ಟುವ ಸಂಕಲ್ಪ ಮಾಡಿದ.. ಅಂಥ ವಿಚಾರ ಬಂದೊಡನೆ, ಚಂಬಲ್ ಕಣಿವೆಗೆ ಹೊರಟು ನಿಂತ.ಅಂಥಾ ಕಡಿದಾದ ಕಣಿವೆಯಲ್ಲಿ ಸಂಚರಿಸುವುದು ಅದೇನೂ ಅಷ್ಟು ಸಣ್ಣ ಕೆಲಸವಾಗಿರಲಿಲ್ಲ..ಆದರೂ ದೇಶಕ್ಕಾಗಿ ದುಡಿಯಲೆಬೇಕೆಂಬ ಇಚ್ಛೆ ಅವನಲ್ಲಿ ಭೀಮಬಲ ತುಮ್ಬಿಸಿತ್ತು..ಅಲ್ಲಿನ ಡಕಾಯಿತರನ್ನ ಭೇಟಿ ಮಾಡಿ ಅವರ ಮನವೊಲಿಸುವ ಕೆಲಸ ಮಾಡಿದ.
ನಿಜ ಹೇಳ್ಬೇಕಂದ್ರೆ, ಆ ಡಕಾಯಿತರು ಮೂಲತಃ ಕ್ರೂರಿಗಳಲ್ಲ.. ಆಂಗ್ಲರ ದಬ್ಬಾಳಿಕೆಗೆ, ಸಮಾಜದ ಕೆಲವು ಹುಳುಕುಗಳಿಗೆ ನೊಂದು, ಬೇಸತ್ತು, ಆಕ್ರೋಶದಿಂದ ಕಳ್ಳರಾದವರು.. ಆ ವಿಷಯ ಗೆನ್ದಾಲಾಲನಿಗೂ ಗೊತ್ತಿತ್ತು. ಹೀಗಾಗಿಯೇ, ಅವರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದು, 'ಶಿಕ್ಷಕ'ನಾಗಿದ್ದ ಅವನಿಗೆ  ಅಷ್ಟೇನೂ ಕಷ್ಟವಾಗಲಿಲ್ಲ.. ಪ್ರತಿನಿತ್ಯ 'ಶಿವಾಜಿ', 'ಮಹಾರಾಣಾ ಪ್ರತಾಪ ಸಿಂಹ','ಝಾನ್ಸಿಯ ರಾಣಿ' ಯ ಕಥೆಗಳನ್ನು ಹೇಳಿ, ಆ ಕಳ್ಳರ ಮನಸ್ಸನ್ನು ದೇಶಭಕ್ತಿಯೆಡೆ ಪರಿವರ್ತಿಸಿದ. ಹೀಗೆ ಸಂಘಟನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ನಿರಂತರ ಯುದ್ಧ ಸಾರಿದ. ಅನೇಕ ಅಧಿಕಾರಿಗಳ ಮನೆಗಳ ದರೋಡೆಯನ್ನೂ ಮಾಡಿದ. ಗೆನ್ದಾಲಾಲ್ ಆಂಗ್ಲರಿಗೆ ಬೆಮ್ಬೆತ್ತಿದ ಬೇತಾಳದಂತೆ ಆಗಿದ್ದ.

ಆಗಲೇ, ಮತ್ತೊಂದು ಬೆಳವಣಿಗೆ ಆ ಪ್ರಾಂತದಲ್ಲಾಯಿತು. ರಾಮ್ ಪ್ರಸಾದ್ ಬಿಸ್ಮಿಲ್ ಆಗಿನ್ನೂ ಯುವಕ. ಅವನು ಷಹಜಹಾನ್ ಪುರದಲ್ಲಿ, "ಮಾತೃವೇದಿ" ಎಂಬ ಕ್ರಾಂತಿ ಸಂಘಟನೆ ಕಟ್ಟಿ, ಕಾರ್ಯ ನಿರ್ವಹಿಸುತ್ತಿದ್ದ. ಬಿಸ್ಮಿಲ್ಲನಿಗೆ, ಸ್ವಾಮೀ ಸೋಮದೇವರಿಂದ ಈ ಗೆನ್ದಾಲಾಲನ ಬಗ್ಗೆ ತಿಳಿಯಿತು. ಕೂಡಲೇ, ಬಿಸ್ಮಿಲ್, ಗೆನ್ದಾಲಾಲ್ ನನ್ನು ಸಂಧಿಸಿ ತನಗೆ  ಮಾರ್ಗದರ್ಶನ ನೀಡಬೇಕೆಂದು ಕೋರಿದ..ಕ್ರಾಂತಿಯ ಬಗ್ಗೆ ಚರ್ಚೆ ನಡೆಸಿದ.. ಗೆನ್ದಾಲಾಲನಿಗೂ ಬಿಸ್ಮಿಲ್ಲನ ಪರಿಚಯ ಇನ್ನಷ್ಟು ಬಲ ತಂದಿತು.. ಇಬ್ಬರೂ ಕೂಡಿ ಮತ್ತೆ ಸಂಘಟನೆಯನ್ನು ಬಲಗೊಳಿಸಿದರು.

ಮಣಿಪುರಿ ಅನ್ನೋ ಗ್ರಾಮ. ಅಲ್ಲಿ ಬಿಸ್ಮಿಲ್ ಜನರನ್ನು ಸಂಘಟಿಸಲು, "ಮಣಿಪುರಿಯ ಪ್ರತಿಜ್ಞೆ" ಎಂಬ ಕರಪತ್ರ ಹಂಚಿದ. ಜೊತೆಗೆ ಗೆನ್ದಾಲಾಲನ ಜೊತೆಗೂಡಿ, ಮಣಿಪುರಿಯ ಕೆಲವು ಶ್ರೀಮಂತರ ಮನೆಗಳ ಮೇಲೆ, ದಾಳಿಯೂ ಆಯಿತು.. ಆದರೆ, ಜೊತೆಗೆ ಬ್ರಿಟಿಷರೂ ಎಚ್ಚೆತ್ತರು. ಈ ಕ್ರಾಂತಿಕಾರಿಗಳನ್ನು ಬಂಧಿಸಲು ಬಲೆ ಬೀಸಿದರು. ಅದರ ಸುಳಿವು ಸಿಕ್ಕ ಕೂಡಲೇ, ಬಿಸ್ಮಿಲ್ ಭೂಗತನಾದ. ಆದರೆ ಗೆನ್ದಾಲಾಲ್ ಸೆರೆ ಸಿಕ್ಕುಬಿಟ್ಟ...

once again,ವಿಚಾರಣೆ ಶುರುವಾಯಿತು. ಸಂಘಟನೆಯ ಬಗ್ಗೆ ತಿಳಿದುಕೊಳ್ಳಲು ಆಂಗ್ಲರು ಅನೇಕ ವಿಧದ ಪ್ರಯೋಗ ನಡೆಸಿದರು. ಕೊನೆಗೆ ಗೆನ್ದಾಲಾಲ್ ಒಂದು ಉಪಾಯ ಮಾಡಿ, ತನ್ನ ಸಂಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ಒಪ್ಪಿಕೊಂಡ.. ಅದನ್ನು ನಂಬಿದ ಆಂಗ್ಲರು, ಗೆನ್ದಾಲಾಲನನ್ನು, ಉಳಿದ ಬಂಧಿತ ಕ್ರಾಂತಿಕಾರಿಗಳ ಜೊತೆ ಇಟ್ರು. ಅದೇ ಸಮಯಕ್ಕೆ ಕಾಯುತ್ತಿದ್ದ ಗೆನ್ದಾಲಾಲ್ ಉಳಿದ ಸಹಚರರ ಸಹಾಯದೊಂದಿಗೆ, ಜೈಲಿನಿಂದ ತಪ್ಪಿಸಿಕೊಂಡುಬಿಟ್ಟ...

ಆನಂತರ, ಭೂಗತನಾದ ಗೆನ್ದಾಲಾಲನನ್ನು ಹಿಡಿಯಲು, ಬ್ರಿಟಿಷರು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಕೊನೆಗೂ ಆತ ಸಿಗಲೇ ಇಲ್ಲ.ಇಷ್ಟರಲ್ಲೇ ಅವನಿಗೆ ಮಾರಣಾಂತಿಕ ಕ್ಷಯ ರೋಗ ತಗುಲಿಬಿಟ್ಟಿತು.. ಅದಕ್ಕೆ ಅವನ ನಿರಂತರವಾದ ಕೆಲಸವೇ ಕಾರಣ. ಚಂಬಲ್ ಕಣಿವೆಯಲ್ಲಿ, ಡಕಾಯಿತರನ್ನು ಸಂಘಟಿಸುವಾಗ, ತನ್ನ ಆರೋಗ್ಯದ ಪರಿವೆಯೂ ಇಲ್ಲದೆ, ಸತತ ಅಲೆದಾಟ, ಅದೂ ಪಾದರಕ್ಷೆಗಳೂ ಇಲ್ಲದೆ, ಊಟ-ನೀರು ಇಲ್ಲದೆ ಅದೆಷ್ಟೋ ದಿನ ಉಪವಾಸದಲ್ಲೇ ದಿನವನ್ನೂ ದೂಡಿದ್ದ.
ಇಷ್ಟೆಲ್ಲಾ ಕಷ್ಟಗಳನ್ನೂ ಸಹಿಸಿದ್ದು ದೇಶಕ್ಕಾಗಿಯೇ, ತನ್ನ ಪ್ರತಿಜ್ನೆಗಾಗಿಯೇ....   ಅವೆಲ್ಲದರ ರೂಪವಾಗಿ TB ತಗುಲಿತು..
ಹೇಗೋ ಅವನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆತನ ಹೆಂಡತಿಯೂ ಸೇವೆಗಾಗಿ ಬಂದಳು. ಆದರೆ, ಅದು ಮಾರಣಾಂತಿಕ ಕಾಯಿಲೆ, ಅವನು ಬದುಕುಳಿಯುವುದು ಸಾಧ್ಯವಿರಲಿಲ್ಲ. ಅವನ ಹೆಂಡತಿಯ ಮನವೊಲಿಸಿ, ಮನೆಗೆ ಕಳಿಸಲಾಯಿತು..
ಕೊನೆಗೆ 1920 ರಲ್ಲಿ, ಆ ರೋಗದ ನರಳುವಿಕೆಯಲ್ಲಿಯೇ ಆಸ್ಪತ್ರೆಯಲ್ಲಿ ಅಸುನೀಗಿದ..

ಜೀವನದುದ್ದಕ್ಕೂ ಯಾವ ಸಂಸಾರದ ಸುಖವನ್ನೂ ಬಯಸದೆ, ತನ್ನ ಶಪಥದಂತೆ ಬದುಕಿದ ವ್ಯಕ್ತಿ ಆತ. ಕೇವಲ ಸ್ವಾತಂತ್ರ್ಯಕ್ಕಾಗಿ ಅಲ್ಲದೆ, ಸಮಾಜವಿರೋಧಿಗಳಾಗಿದ್ದ ಡಕಾಯಿತರನ್ನು ಮತ್ತೆ ಸಂಸ್ಕೃತಿಯ ದಾರಿಗೆ ತಂದ ಅಪರೂಪದ ಕ್ರಾಂತಿಕಾರಿ ಆತ..
ಆದರೆ ಎಲ್ಲ ಇತಿಹಾಸದಿಂದ ಅಜ್ಞಾತವಾಗಿಯೇ ಉಳಿದುಹೋದ.
ಒಂದಂತೂ ನಿಜ. ಅವನಂತೂ ತನಗೆ ಪ್ರಸಿದ್ಧಿ ಸಿಗಲಿ ಅನ್ನೋ ಕಾರಣಕ್ಕೆ, ಹೋರಾಟ ಮಾಡಿದವನಲ್ಲ. ಕೇವಲ ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿದ ಧೀರೋದಾತ್ತ ವ್ಯಕ್ತಿ ಅವನು.. ಆದ್ರೆ ನಮ್ಮ ಕೃತಘ್ನತೆಯಿಂದ,ಮರೆಯುವಿಕೆಯಿಂದ ಅಂಥಾ ವೀರರೆಲ್ಲ ಮರೆಯಾಗಿದ್ದಾರೆ ಅನ್ನೋದು ದೇಶದ ದುರಂತ..!!
ನವೆಂಬರ್ 30, ಆ ಕ್ರಾಂತಿಕಾರನ ಜನ್ಮದಿನ.. ಆ ಪುಣ್ಯಚೇತನಕ್ಕೆ, ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ, ಅವನ ರಾಷ್ಟ್ರಭಕ್ತಿ ನಮಗೆ ಪ್ರೇರಣೆಯಾಗಲಿ ಎಂಬ ಹಾರೈಕೆಯೊಂದಿಗೆ..
 

ವಂದೇ ಮಾತರಂ..
 

Thursday, 22 December 2011

ಇವರನ್ನು ಮರೆಯಲಾದೀತೇ..?!!!!

ಅವತ್ತು ಬೆಳಿಗ್ಗೆ ಅವನು, ಸ್ನಾನ ಮಾಡಿ ಶುದ್ಧನಾದ.. "ಇಂದ್ರಸ್ತ್ವಂ ರುದ್ರಸ್ತ್ವಂ ವಿಷ್ಣುಸ್ತ್ವಂ" ಎಂದು ಮಂತ್ರ ಹೇಳುತ್ತಿದ್ದ.
ಕೂಡಲೇ ಬಂದ ಬ್ರಿಟಿಶ್ ಅಧಿಕಾರಿ, 'ಹೊತ್ತಾಯಿತು ನಡೆ' ಅಂದ..
ನಗುತ್ತಲೇ, ಗಲ್ಲಿನ ಕಂಬದೆಡೆಗೆ ಆತ ನಡೆದ.
ನೇಣು ಕುಣಿಕೆಯ ಎದುರು ನಿಂತಾಗಲೂ ಅವನ ನಗು ಮಾಸಲಿಲ್ಲ.
ಅಧಿಕಾರಿ ಕೇಳಿದ, 'ರಾಮ್' ಇನ್ನೇನು ನಿನ್ನ ಸಾವಾಗುತ್ತೆ.. ಕೊನೆಯಾಸೆ ಏನು? ಅಂತ..
ರಾಮ ಅಧಿಕಾರಿಯ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ.,
"ನೈನಂ ಛಿನ್ದನ್ತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನ ಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ.."
"ನೀವು ಕೇವಲ 'ರಾಮ'ನ ದೇಹವನ್ನು ಸಾಯಿಸಬಹುದು. 'ರಾಮ'ನ ಆತ್ಮವನ್ನಲ್ಲ.. ನನ್ನ ಆದರ್ಶಗಳನ್ನಲ್ಲ.
ನನ್ನ ತಾಯಿಯ ಬಿಡುಗಡೆಯಾಗುವವರೆಗೂ, ನನ್ನ ಆತ್ಮ ಮತ್ತೆ ಮತ್ತೆ ಹುಟ್ಟಿ ಬರುತ್ತಲೇ ಇರುತ್ತದೆ" ಅಂತ ಆ ಬಿಸ್ಮಿಲ್ ಹೇಳುತ್ತಿದ್ದಂತೆ, ಅಧಿಕಾರಿಯೇ ಬೆವೆತು ಹೋದ..

ರಾಮ್ ಪ್ರಸಾದ್ ಬಿಸ್ಮಿಲ್
ಅಶ್ಫಾಕ್ ಉಲ್ಲಾ ಖಾನ್
ರಾಜೇಂದ್ರ ಲಾಹಿರಿ
ರೋಶನ್ ಸಿಂಗ್
                                                                                                     



ಕಾಕೋರಿ ಪ್ರಕರಣದಲ್ಲಿ, ಬಹುತೇಕ 40 ಮಂದಿ, HRA ಸಂಘಟನೆಯ ಕ್ರಾಂತಿಕಾರಿಗಳು ಸಿಕ್ಕಿಬಿದ್ದು ಅವರಿಗೆಲ್ಲಾ ವಿವಿಧ ಶಿಕ್ಷೆಗಳಾದ್ವ. ಅದ್ರಲ್ಲಿ ನಾಲ್ಕು ಜನರಿಗೆ ಗಲ್ಲು ಶಿಕ್ಷೆ..
ರಾಮ್ ಪ್ರಸಾದ್ ಬಿಸ್ಮಿಲ್
ರಾಜೇಂದ್ರ ಲಾಹಿರಿ
ರೋಶನ್ ಸಿಂಗ್
ಅಶ್ಫಾಕ್ ಉಲ್ಲಾ ಖಾನ್..

ರಾಮ್, ಅಶ್ಫಾಕ್ ಮತ್ತು ರೋಶನ್ ಸಿಂಗ್ ಎಲ್ಲರೂ ಷಹಜಹಾನ್ ಪುರದವರೇ..
ರಾಮ್ ಮತ್ತು ರೋಶನ್, 'ಆರ್ಯಸಮಾಜ'ದ ನಿಷ್ಠಾವಂತ ಕಾರ್ಯಕರ್ತರು..
ಆನಂತರ ಅಷ್ಪ್ಹಾಕನೂ ಅವರೊಟ್ಟಿಗೆ ಸೇರಿಕೊಂಡ.

ರಾಜೇಂದ್ರ ಲಾಹಿರಿ ಬಂಗಾಳದ ಯುವಕ, M.A ಪದವೀಧರ. ಅವನಣ್ಣ, ಕಾಶಿಯಲ್ಲಿ ಒಂದು ಹೋಮಿಯೋಪತಿ ಔಷಧಾಲಯ ಇಟ್ಟುಕೊಂಡಿದ್ದ.. ಅಲ್ಲಿಯೇ, ಶಚಿಂದ್ರನಾಥ್ ಸನ್ಯಾಲ್ ಮತ್ತಿತರು ಸೇರಿ ಪ್ರಸಿದ್ಧ "ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್" ಪ್ರಾರಂಭಿಸಿದ್ದು.. ಅಲ್ಲಿಯೇ ಆಜಾದನ ಜೊತೆ ಇವನೂ ಸೇರಿಕೊಂಡ.
ಕಾಕೊರಿಯಲ್ಲಿ ಇವರೆಲ್ಲರ ಕಾರ್ಯ ಅದೆಂಥಾದ್ದು ಅನ್ನೋದು ವಿದಿತ ಸಂಗತಿಯೇ..

ಅವರೆಲ್ಲ ನಗುನಗುತ್ತಲೇ ಉರುಳಿಗೆ ಕೊರಳಿತ್ತರು.
ಡಿಸೆಂಬರ್ 17 - ರಾಜೇಂದ್ರ ಲಾಹಿರಿ ಮೃತನಾದ..
ಡಿಸೆಂಬರ್ 19 - ರಾಮ್ ಪ್ರಸಾದ್ ಮತ್ತು ಅಶ್ಫಾಕ್ ಬೇರೆ ಬೇರೆ ಜೈಲಿನಲ್ಲಿ ನೇಣಿಗೇರಿದರು.
ಡಿಸೆಂಬರ್ 20 - ರೋಶನ್ ಸಿಂಗ್ ಗಲ್ಲಿಗೇರಿದ..

ನಾಲ್ವರು ಅಪ್ಪಟ ಸ್ನೇಹಿತರು, ದೇಶಭಕ್ತರು, ಸಾವಿನಲ್ಲೂ ಒಂದಾಗಿದ್ದರು..

ಬಿಸ್ಮಿಲ್, ಜೈಲಿನಲ್ಲಿ ಕೂತು ಒಂದು ಪದ್ಯ ಬರೆದಿದ್ದ..
"ಮರತೆ ಬಿಸ್ಮಿಲ್,ರೋಶನ್,ಲಾಹಿರಿ
ಅಶ್ಫಾಕ್ ಅತ್ಯಾಚಾರ ಸೆ..
ಹೋಂಗೆ ಪೈದಾ ಸೈಕಡೋ
ಉನ್ಕೆ ರುಧಿರ್ ಧಾರ್ ಸೆ.."

ಅವನಾಡಿದ್ದ ಮಾತು, ನಿಜವಾಯಿತು. ಅಸಂಖ್ಯಾತ ತರುಣರು ಮೇಲೆದ್ದು ಭಾರತಿಯನ್ನು ಸ್ವತಂತ್ರಗೊಳಿಸಿದರು..

ಆದರೆ ಅವನ ಮಾತು, ಮತ್ತೊಮ್ಮೆ ಸತ್ಯವಾಗಬೇಕಿದೆ. ನಮ್ಮೆಲ್ಲರ ಹೃದಯದಲ್ಲಿ ಆ ಎಲ್ಲ ಕ್ರಾಂತಿಕಾರಿಗಳ ಪುನಶ್ಚೇತನ ಮಾಡಬೇಕಿದೆ..
ಆ ಎಲ್ಲ ಹುತಾತ್ಮರಿಗೂ ಭಾವಪೂರ್ಣ ನಮನ..

ವಂದೇ ಮಾತರಂ..

Thursday, 6 October 2011

                                             ಆಹ್ವಾನ 
                        
                   ನಡುಗಿಸು ತಾಯೆ ಖಳರೆದೆ ನಡುಗಿಸು ತಾಯೆ 
                         ಗುಡುಗುತ ಖಡ್ಗವ ಝಳಪಿಸಿ ನಡುಗಿಸು ತಾಯೆ ..|

                         ಕಂಡಿಹರು ನಿನ್ನಯ ಶುಭ-ಸೌಮ್ಯದ ವದನ
                         ಕಾಣರು ಚಾಮುಂಡಿಯ ಭೀಕರ ಅವತರಣ 
                         ಜಲಜಾಕ್ಷಿಯೇ ತೋರು, ನೆತ್ರದಿ ಅಗ್ನಿಯ ತನನ 
                         ರಕುತದ ಒಕುಳಿಯಾಡು, ಮಾಡುತ ರಿಪುದಮನ ||

                         ತ್ರಿಶೂಲಭೂಷಣೆ ಮಹಿಷಾಸುರ ಮರ್ದಿನಿ ನೀನು 
                         ತಾಮಸಿಗಳ ಸದೆಬಡಿಯುವ ಪ್ರಳಯದೇವಿ ನೀನು,
                         ಭಾರತಮಾತೆಯೇ, ದುರ್ಗೆಯ ನವನವ್ಯಾಕೃತಿಯೇ
                         ಸುಮ್ಮನೆ ಇಹುದೇಕೆ ?, ಶತ್ರುವ ಶಮಿಸದೆ ಇಂದೇ ||

                         ಭಯಗೊಂಡಿಹರು ನಾಡಿನ ಜನರೆಲ್ಲರೂ ಬಹಳ
                         ಸಹಿಸದೆ ದುರುಳರು ಹಿಂಸಿಸಿ ಕೊಡುತಿಹ ಕಷ್ಟಗಳ..
                         ರಕ್ಕಸರ ಸೊಕ್ಕಿನಟ್ಟಹಾಸವ ಮೆಟ್ಟುತಲಿ..
                         ಬಾ ತಾಯೆ ಭಾರತಿ, ಕೆಸರಿವಾಹನೆ ಕಾಳಿ...||

(ಚಿತ್ರಕೃಪೆ - exoticindiaart.com )

Monday, 15 August 2011

                    ಸ್ವಾತಂತ್ರ್ಯದ ಬೆಳಕು

          ಸ್ವಾತಂತ್ರ್ಯದ ಬೆಳಕು ಮತ್ತೆ ಪ್ರಜ್ವಲಿಸಿಹುದು 
          ತಮದಿಂದ ನಾಡನುತ್ತರಿಸಲೆಂದೇ..
          ಮಂಜಿನಲಿ ಮರೆಯಾದ ನಾಡಚರಿತೆಯ ಮತ್ತೆ
          ಎಲ್ಲರೆದೆಯಲೂ ಸ್ಫುಟಿಸಿ ಬಿತ್ತರಿಸಲೆಂದೇ...||

          ಬರಿಯ ಪ್ರಭೆಯನು ಕೊಡುವ ಬೆಳಕಲ್ಲ ಇದು ನಿತ್ಯ,
          ರಾಷ್ಟ್ರಚೈತನ್ಯವನು ಬೆಳಗಿಸುವ ಜ್ಯೋತಿ..
          ನಾಡರಕ್ಷಣೆಗೆಂದು ಪ್ರಾಣಕೊಟ್ಟಿಹ ವೀರ,
          ಜನರ ರುಧಿರಾಜ್ಯದಿಂ ಝಗಮಗಿಪ ದೀಪ್ತಿ...||

          ಸುಖದ ನಶೆಯಲಿ ನಾಡುನುಡಿಗಳೆಲ್ಲವ ಮರೆತು,
          ಮೈಹೊದ್ದು ಮಲಗಿರುವ ಯುವಕರನ್ನೇ,
          ದೇಶಭಕ್ತಿಯ ದಿವ್ಯ ಕಿರಣವನೆ ಸೋಕಿಸುತ 
          ಬಡಿದೆಬ್ಬಿಸಲು ಪುಟಿಸಿ ನೆತ್ತರನ್ನೇ..

          ಹೇಡಿತನ,ಜಾಡ್ಯತೆಗಳಿಂದ ದುರ್ಬಲರಿಹರ
          ನರಗಳಲಿ ಹುರುಪೂಡಿ ಹೊಸೆದು ಧೈರ್ಯ 
          ಕಣಕಣವ ಹುರಿದುಂಬಿಸುತ, ಮನದಿ ಹೊತ್ತಿಸಲು,
          ಅನ್ಯಾಯವೆದುರಿಸುವ ಕ್ರಾಂತಿಕಿಡಿಯ...||

          ರತ್ನಸಿಂಹಾಸನದಿ ಕಂಗೊಳಿಪ ಭಾರತಿಯ 
          ಭವ್ಯರೂಪವ ಮತ್ತೆ ತೋರಲಿಂದೇ
          ಸತ್ಯ ಧರ್ಮದ ಶುಭ್ರ ಪ್ರಗತಿ ಮಾರ್ಗದಿ ಮುಂದೆ,
          ಕಣ್ತೆರೆಸಿ ಕೈಪಿಡಿದು ನಡೆಸಲೆಂದೇ...||
                                
                              ಸ್ವಾತಂತ್ರ್ಯ ದಿನ

                              ಕುಣಿಯೋಣ ಸ್ವಾತಂತ್ರ್ಯದ ದಿನವು ಬಂತು,
                              ಭಾರತಕೆ ನವಜನ್ಮ ಬಂದ ದಿನವೆಂದು..
                              ಸ್ವಾತಂತ್ರ್ಯಗೀತೆಗಳ ಹಾಡೋಣ ಇಂಪು,
                              ಬೀರೋಣ ದೇಶದಿತಿಹಾಸದ ಕಂಪು...||

                              ಬೀಸಿ ವ್ಯಾಪಾರ ವ್ಯವಹಾರದ ಜಾಲ,
                              ಭಾರತದಿ ನೂರಾರು ವರ್ಷಗಳ ಕಾಲ,
                              ಆಳಿದರು ಪರದೇಶದವರೆಮ್ಮಯ ನೆಲ,
                              ಹಾಳುಗೆಡುವುತ ನಮ್ಮ ಸಂಸ್ಕೃತಿಯ ಮೂಲ...||

                              ಆಂಗ್ಲರ ದುರಾಡಳಿತ ದೌರ್ಜನ್ಯವುಂಡು,
                              ಬಸವಳಿದ ಜನರ ಬಿಸಿಕಣ್ಣೀರ ಕಂಡು 
                              ಬಂಡೆದ್ದಿತು ಯುವಕ-ಯುವತಿಯರ ದಂಡು,
                              ಕಂಡಲ್ಲಿ, ಆಂಗ್ಲರಿಗೆ ಹೊಡೆದರು ಗುಂಡು...||

                              ಸಾವಿರ ಹುತಾತ್ಮರ ರುಧಿರಾಭಿಷೇಕ 
                              ಕೆಳಗಿಳಿಯಿತು ಸೋತು, ಆಂಗ್ಲರ ಪತಾಕ.
                              ದಾಸ್ಯವನು ಕಳಚಿ, ಪಡೆದಳು ಮುಕ್ತಿ,
                              ಸ್ವಾತಂತ್ರ್ಯದ ನಗೆಯ ಬೀರಿದಳು ಭಾರತಿ...||

                              ಶ್ರಮವಹಿಸಿ ಹಿರಿಯರು ತಂದಿಹ ಸ್ವತಂತ್ರ 
                              ಉಳಿಸದಿರೆ ಆದೇವು, ಮತ್ತೆ ಪರತಂತ್ರ 
                              ಸ್ವಾತಂತ್ರ್ಯರಕ್ಷೆಯಾಗಲಿ ನಮ್ಮ ಮಂತ್ರ 
                              ಸಂಘಟಿಸುವ ಬನ್ನಿ, ಮತ್ತೆ ಜನತಂತ್ರ...||

Thursday, 28 July 2011

                                 
                              ರಾಷ್ಟ್ರಯೋಗಿ

                                           ನಾವಾಗುವೆವು ಈ ರಾಷ್ಟ್ರದಯೋಗಿ
                                  ಮಾಡುವೆವು ಭಾರತ ಧ್ಯಾನ.. 
                                  ಧರ್ಮಪತಾಕೆಯನಾರೋಹಿಸುತಾ 
                                  ಮಾಡುವೆವು ರಾಷ್ಟ್ರೋತ್ಥಾನ... ||

                                  ಶೀಲವೇ ಮಾಲೆಯು ಕೊರಳೊಳಗೆ 
                                  ಸುಜ್ಞಾನವೇ ಕಾಷಾಯದ ವಸನ..
                                  ತ್ಯಾಗದ ದಂಡವ ಕೈಯಲಿ ಹಿಡಿದು,
                                  ಮಾಡುವೆವು ರಾಷ್ಟ್ರೋತ್ಥಾನ... ||

                                  ಸ್ವಾರ್ಥಚಿಂತನೆಯ ಭಸ್ಮೀಕರಿಸಿ,
                                  ಎದುರಿಸಿ ಕಷ್ಟಗಳಾವರಣ..
                                  ಸಂತಸಮೂಹವನು ಸಂಘಟಿಸಿ 
                                  ಮಾಡುವೆವು ರಾಷ್ಟ್ರೋತ್ಥಾನ... ||

                                  ನಮ್ಮ ಜನ್ಮದ ಸಾರ್ಥಕ್ಯವಿದು,
                                  ನಮ್ಮ ಮೋಕ್ಷದ ಕಾರಣ..
                                  ನಮ್ಮಯ ಸ್ವರ್ಗದ ಸಾಧನವಿದುವೇ
                                  ಭಾರತ ರಾಷ್ಟ್ರದ ಉತ್ಥಾನ... ||

ಚಿತ್ರಕೃಪೆ:- awakeningthebay.com