Friday, 6 April 2012

ಏಕಪಾತ್ರಾಭಿನಯಕ್ಕೆ ಪಾತ್ರ ಹುಡುಕುತ್ತಿದ್ದಾಗ ಸಿಕ್ಕ ಸೇನಾನಿ..!!!!!

ಪ್ರತಿವರ್ಷ ನಮ್ಮ ಕಾಲೇಜಿನಲ್ಲಿ ನಡೆಯುವ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧಾಹಬ್ಬ "ದವನ"ದಲ್ಲಿ "ಏಕಪಾತ್ರಾಭಿನಯ"ವೂ ಒಂದು ಸ್ಪರ್ಧೆ.. ಈ ವರ್ಷ ಯಾರ ಅಭಿನಯ ಮಾಡಲಿ ಎಂದು ಯೋಚಿಸುತ್ತಿದ್ದೆ.. ಅಭಿನಯವಂತೂ ಇದ್ದಿದ್ದೇ. ಆದಷ್ಟು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಪಾತ್ರ ಆಯ್ದುಕೊಂಡರೆ, ಬಹಳಷ್ಟು ಜನಕ್ಕೆ ಆ ಚರಿತ್ರೆಯನ್ನು ತಲುಪಿಸಿದಂತಾಗುತ್ತದೆ, ಅದರಲ್ಲೂ ಕರ್ನಾಟಕದವನೇ ಆದರೆ, ಪಾತ್ರದ ಸಂಭಾಷಣೆ ಬರೆಯುವುದೂ ನನಗೆ ಸುಲಭವಾಗುತ್ತದೆ ಎಂದು ಭಾವಿಸಿ, ಅಂಥಾ ಚಾರಿತ್ರಿಕವ್ಯಕ್ತಿಯ ಹುಡುಕಾಟದಲ್ಲಿ ಇದ್ದಾಗ, ಥಟ್ಟನೆ ಒಬ್ಬನ ನೆನಪಾಯಿತು..
ಎಂಟನೆ ತರಗತಿಯಲ್ಲಿದ್ದಾಗ ಅವನ ಬಗೆಗಿನ ಪುಸ್ತಕ ಓದಿದ್ದಷ್ಟೇ ನೆನಪು.. ಆದರೆ, ಅವನ ಉಜ್ವಲ ದೇಶಭಕ್ತಿ ಇವತ್ತಿಗೂ ಅವನ ಚಿತ್ರಣವನ್ನು ನನ್ನ ಮನಸ್ಸಿನಲ್ಲಿ ಹಸಿರಾಗಿಸಿದೆ..




"ಸುರಪುರ"-ಗದಗ ಜಿಲ್ಲೆಯ ಊರು. "ಬೇಡ"ನಾಯಕರು ಅದನ್ನು ಆಳುತ್ತಿದ್ದರು. ವಿಜಯನಗರದ ರಾಜರುಗಳಿಂದ ಪ್ರಭಾವಿತರಾಗಿದ್ದ ನಾಯಕರು, ಸಹಜವಾಗಿಯೇ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಧೈರ್ಯ-ಸಾಹಸಗಳಿಗೆ ಹೆಸರಾದ ವಂಶ ಅದು.. ಇಂಥ ಪರಂಪರೆಯಲ್ಲಿ ಬಂದವನೇ ಈ ಲೇಖನದ ಮೂಲಸ್ರೋತ "ವೆಂಕಟಪ್ಪ ನಾಯಕ"...!!


ವೈಸರಾಯ್ ಲಾರ್ಡ್ ಡಾಲ್ಹೌಸೀ ಆಡಳಿತ ನಡೆಸುತ್ತಿದ್ದ ಕಾಲ ಅದು. ವೆಂಕಟಪ್ಪ ಸಣ್ಣ ಬಾಲಕನಾಗಿದ್ದಾಗಲೇ ಅವನ ತಂದೆ, "ಕೃಷ್ಣಪ್ಪ ನಾಯಕ" ತೀರಿಹೋಗಿದ್ದರು. ಹೀಗಾಗಿ, ವೆಂಕಟಪ್ಪನನ್ನು ಬೆಳೆಸುವ ಜವಾಬ್ದಾರಿ ಅವನ ತಾಯಿ 'ಈಶ್ವರಮ್ಮ"ನ ಮೇಲೆ ಬಂತು. ಜೊತೆಗೆ, ಅವನ ಮಾವ 'ಪಿದ್ದನಾಯಕ' ಸುರಪುರದ ಚುಕ್ಕಾಣಿ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದ್ದ.. ಇಂಥಾ ಸಂದರ್ಭಗಳಿಗೆ ಕಾಯುತ್ತಿದ್ದ ಬ್ರಿಟಿಶ್ ಸರ್ಕಾರ, ಸುರಪುರದ ಆಡಳಿತದಲ್ಲಿ ತನ್ನ ಕೈವಾಡ ತೋರಿಸಲು ಪ್ರಾರಂಭಿಸಿತು..


ಬಾಲಕನಾಗಿದ್ದ ವೆಂಕಟಪ್ಪನನ್ನು ಅವನ ಮಾವ ಪಿದ್ದನಾಯಕನಿಂದ ರಕ್ಷಣೆ ಮಾಡುವ ನೆಪಹೂಡಿ, ಬ್ರಿಟಿಶ್ ಸರ್ಕಾರ, "ಮೆದೊಸ್ ಟೇಲರ್' ಎಂಬ ಅಧಿಕಾರಿಯನ್ನು ನೇಮಿಸಿತು.. ವಾಸ್ತವವಾಗಿ 'ಟೇಲರ್' ತುಂಬಾ ಸಜ್ಜನ ವ್ಯಕ್ತಿಯಾಗಿದ್ದ. ತುಂಬಾ ಅಕ್ಕರೆಯಿಂದ ವೆಂಕಟಪ್ಪನನ್ನು ಬೆಳೆಸಿದ. ವೆಂಕಟಪ್ಪ ಕೂಡ 'ಟೇಲರ್' ಮೇಲೆ ಬಹಳ ಅಭಿಮಾನವನ್ನು ಬೆಳೆಸಿಕೊಂಡಿದ್ದ, ಟೇಲರ್ ನನ್ನೇ 'ಅಪ್ಪಾ' ಅಂತಲೇ ಕೆರೆಯುತ್ತಿದ್ದ. ಟೇಲರ್, ವೆಂಕಟಪ್ಪನಿಗೆ ಎಲ್ಲಾ ಥರದ ಶಿಕ್ಷಣವನ್ನೂ ನೀಡಿದ..


ಕಾಲಾನುಕ್ರಮೇಣ, ವೆಂಕಟಪ್ಪ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ, ಅವನನ್ನೇ ಸುರಪುರದ ರಾಜನನ್ನಾಗಿ ಮಾಡಲಾಯಿತು. ಆದರೆ ಜೊತೆಗೆ ಒಂದು ಷರತ್ತನ್ನೂ ವಿಧಿಸಲಾಯಿತು. ವೆಂಕಟಪ್ಪ ರಾಜನಾದರೂ, ಒಬ್ಬ ಬ್ರಿಟಿಶ್ ಅಧಿಕಾರಿಯನ್ನು, ಸಲಹೆಗಾರನನ್ನಾಗಿ ನೇಮಿಸಿ, ಸಕಲ ನಿಯಂತ್ರಣಶಕ್ತಿಗಳನ್ನೂ ನೀಡಿ, ಜೊತೆಗೆ  ೨೦,೦೦೦ ರೂಪಾಯಿಗಳ ಸಂಬಳವನ್ನೂ ನಿಗದಿಪಡಿಸಬೇಕು ಎಂದು ಬ್ರಿಟಿಶ್ ಸರ್ಕಾರ ಆದೇಶ ನೀಡಿತು. ಬ್ರಿಟಿಷರ ಅನಗತ್ಯ ಮೂಗುತೂರಿಸುವಿಕೆಯಿಂದ ರೋಸಿಹೋಗಿದ್ದ ವೆಂಕಟಪ್ಪ, ಇಂಥಾ ಆದೇಶ ದಿಂದ ಮತ್ತಷ್ಟು ಕುಪಿತನಾಗಿ, ಆ ರೀತಿಯ ಸಲಹೆಗಾರನ ನೇಮಕಾತಿ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ..  ಹಾಗೆಯೇ ಬ್ರಿಟಿಷರು 'ಪಿದ್ದನಾಯಕ'ನಿಗೆ ಜಾಗೀರಾಗಿ ಕೊಟ್ಟಿದ್ದ ಜಮೀನನ್ನು ವಾಪಸ್ ಪಡೆದುಕೊಂಡ. ಇಲ್ಲಿಂದ ಆರಂಭವಾಯಿತು ಬ್ರಿಟಿಷರ ಮತ್ತು ವೆಂಕಟಪ್ಪನ ನಡುವಿನ ವೈಮನಸ್ಯ..!!!!




೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಿನಗಳವು..ಪವಿತ್ರ ಭಾರತದಿಂದ ಆಂಗ್ಲಪ್ರಭುತ್ವವನ್ನು ಉಚ್ಚಾಟನೆ ಮಾಡುವ ಸಂಕಲ್ಪದೊಂದಿಗೆ, ದೇಶದೆಲ್ಲೆಡೆ ಬ್ರಿಟಿಶ್-ವಿರೋಧಿ ಹೋರಾಟಗಳು ನಡೆಯುತ್ತಿದ್ದವು.. ಬ್ರಿಟಿಷರ ಕುಟಿಲತೆಗಳನ್ನು, ಅಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಟಪ್ಪ ನಾಯಕನಿಗೂ, ಆ ಕಾಲಘಟ್ಟದ ಉಳಿದ ರಾಜರುಗಳಂತೆ, ಬ್ರಿಟಿಷರನ್ನು ಹೊರಗೋಡಿಸಿ, ಸಶಕ್ತನಾಡನ್ನು ನಿರ್ಮಿಸುವ ಹಂಬಲವಿತ್ತು.. ಆ ನಿಟ್ಟಿನಲ್ಲಿ ವೆಂಕಟಪ್ಪ ತನ್ನ ಕಾರ್ಯಾಚರಣೆಯನ್ನೂ ಪ್ರಾರಂಭಿಸಿದ್ದ.!!!


ವೆಂಕಟಪ್ಪ, ನಾನಸಾಹಿಬ್ ಪೆಶ್ವೇಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಿದ್ದ.. ಜೊತೆಗೆ ತನ್ನದೇ ಆದ, ಸಾವಿರಾರು ಸೈನಿಕರ ದೊಡ್ಡ ಸೈನ್ಯವನ್ನೇ ನಿರ್ಮಿಸಿ, ಅನವರತ ತರಬೇತಿಯನ್ನು ನೀಡಿದ. ೧೮೫೮ ಆಗಸ್ಟ್ ೮ ರಂದು ಬ್ರಿಟಿಷರ ವಿರುದ್ಧ ಸಿಡಿದೇಳಲು ಎಲ್ಲ ತಯಾರಿಯನ್ನು ನಡೆಸಿದ್ದ. ಜೊತೆಗೆ, ಬೆಳಗಾವಿ, ಕೊಲ್ಹಾಪುರ, ಧಾರವಾಡದಲ್ಲಿದ್ದ ಬ್ರಿಟಿಷರ ರೆಜಿಮೆಂಟಿನ ಸೈನಿಕರನ್ನೂ ಸಂಪರ್ಕಿಸಿ ದಂಗೆ ಏಳಲು ಸೂಚಿಸಿದ್ದ..



ಇವೆಲ್ಲದರ ಮಧ್ಯೆ, ಬ್ರಿಟಿಷರಿಗೂ ವೆಂಕಟಪ್ಪನ ಈ ತಯಾರಿಯ ವಾಸನೆ ಬಡಿದಿತ್ತು. ಅವನ ಹಿಂದೆ ಸದಾ ಗೂಧಚಾರರನ್ನು ಬಿಟ್ಟು ವರದಿಗಳನ್ನು ಕಲೆಹಾಕುತ್ತಿದ್ದರು. ಅಷ್ಟರಲ್ಲೇ 'ಮಹಿಪಾಲ್ ಸಿಂಗ್' ಎಂಬ ಸೈನಿಕನೊಬ್ಬ, ಬ್ರಿಟಿಷರ ಸೆರೆ ಸಿಕ್ಕ.. ಪ್ರಾಣಭಯಕ್ಕೆ, ವೆಂಕಟಪ್ಪನ ಎಲ್ಲ ಉಪಾಯಗಳನ್ನು, ರಣತಂತ್ರಗಳನ್ನೂ ಬ್ರಿಟಿಷರಿಗೆ ತಿಳಿಸಿಬಿಟ್ಟ.!!!! ತಕ್ಷಣ ಕಾರ್ಯೋನ್ಮುಖರಾದ ಬ್ರಿಟಿಷರು, ಸುರಪುರದ ಮೇಲೆ ದಾಳಿ ಮಾಡಲು ನಿರ್ಧರಿಸಿದರು..


೧೮೫೮ ಫೆಬ್ರವರಿ ೭ ರ, ಬೆಳಗಾಗುವುದರೊಳಗೆ, ಸುರಪುರದ ಭದ್ರ ಕೋಟೆಯ ಸುತ್ತ, ಕ್ಯಾಪ್ಟನ್.ಕಾಮ್ಪ್ ಬೆಲ್ ನ ನೇತೃತ್ವದಲ್ಲಿ, ದೊಡ್ಡ ಪಡೆ ಬಂದು ನಿಂತಿತು.. ಯುದ್ಧಕ್ಕೆ ಸದಾ ಸನ್ನದ್ಧರಾಗಿದ್ದ ಸುರಪುರದ ಸೈನಿಕರೂ ಅಷ್ಟೇ ಪ್ರಬಲ ಶಕ್ತಿಯೊಂದಿಗೆ ಹೋರಾಟ ನಡೆಸಿದರು.. ವೀರಾವೇಶದಿಂದ ಆಕ್ರಮಣ ಮಾಡಿದ, ವೆಂಕಟಪ್ಪನ ಸುಸಜ್ಜಿತ ಯೋಧರು, ದುಷ್ಟ ಆಂಗ್ಲರನ್ನು ಸದೆಬಡಿದರು. ಅಲ್ಲಿನ ಪ್ರತಿಯೊಬ್ಬರಲ್ಲೂ ಮಹಾಕಾಳಿ ಆವರಿಸಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ನಾಡನ್ನು ಬಂಧಮುಕ್ತಗೊಳಿಸಬೇಕೆಂಬ ಹಠ, ರಕ್ತದ ಕಣಕಣದಲ್ಲೂ ತುಂಬಿತ್ತು..!!!


ಆದರೆ, ಬ್ರಿಟಿಷರ ಪಡೆಗೆ ಹೋಲಿಸಿದರೆ, ಸುರಪುರದ ಸೈನ್ಯ ಅಷ್ಟೊಂದು ಪ್ರಖರವಾಗಿರಲಿಲ್ಲ. ಆಧುನಿಕ ಶಸ್ತ್ರಗಳೂ ಅವರ ಬಳಿ ಇರಲಿಲ್ಲ.. ಇದರ ಮಧ್ಯೆ,  ಬ್ರಿಟಿಷರಿಂದ ದುಡ್ಡು ಪಡೆದ  'ಭೀಮರಾಯ' ಎಂಬ  ಆಂಗ್ಲರ ಗೂಢಚಾರಿ , 'ವೆಂಕಟಪ್ಪ'ನಿಗೆ ಸುರಪುರದಿಂದ ಓಡಿಹೋಗಿ ಹೈದರಾಬಾದಿನಲ್ಲಿ ತಲೆಮರೆಸಿಕೊಳ್ಳಲು ಸಲಹೆ ನೀಡಿದ. ಹೈದರಾಬಾದಿಗೆ ಹೋದಾಕ್ಷಣ, ನಿಜಾಮನ ಸಹಾಯದಿಂದ ವೆಂಕಟಪ್ಪನನ್ನು ಹಿಡಿಯಬೇಕೆಂಬ ಪೂರ್ವಯೋಜಿತ ಉಪಾಯದಂತೆ ಆತನನ್ನು ಕಳಿಸಲಾಯಿತು. ಇದರ ಸುಳಿವೇ ಇಲ್ಲದ ವೆಂಕಟಪ್ಪ ಹೈದರಾಬಾದಿಗೆ ಹೋದ..!!!! ವೆಂಕಟಪ್ಪ ಸುರಪುರ ಬಿಟ್ಟಾಕ್ಷಣ, ಇತ್ತ ಸುರಪುರದ ಕೋಟೆಯ ಬಾಗಿಲನ್ನು ದ್ರೋಹಿ ಭೀಮರಾಯ ತೆರೆದುಬಿಟ್ಟ. ಯಾವುದೇ ಅಡೆತಡೆಯಿಲ್ಲದೆ ಬ್ರಿಟಿಶ್ ಸೈನ್ಯ ಸುರಪುರದ ಅಭೇದ್ಯ ಕೋಟೆಯನ್ನು ವಶಪಡಿಸಿಕೊಂಡಿತು..!!



ಇತ್ತ ನಿಜಾಮನೂ ಬ್ರಿಟಿಷರ ಜೊತೆ ಕೈಜೋಡಿಸಿ, ವೆಂಕಟಪ್ಪನನ್ನು ಹಿಡಿಯಲು ಸೈನ್ಯವನ್ನು ಇಡೀ ಹೈದರಾಬಾದಿನ ತುಂಬೆಲ್ಲ ಕಳಿಸಿದ.. ಅನೇಕ ದಿನಗಳ ಹುಡುಕಾಟದಲ್ಲಿ, ಕೊನೆಗೆ ವೆಂಕಟಪ್ಪ ಬಂಧಿಯಾದ.. ಸೆರೆಸಿಕ್ಕ ಅವನನ್ನು ಸಿಕಂದರಾಬಾದಿನ ಜೈಲಿನಲ್ಲಿಡಲಾಯಿತು. ವಿಚಾರಣೆಯ ನಾಟಕ ನಡೆಸಿ, ಆಂಗ್ಲಪ್ರಭುತ್ವದ ವಿರುದ್ಧ ಬಂಡೆದ್ದ ಕಾರಣಕ್ಕೆ 'ಗಲ್ಲುಶಿಕ್ಷೆ' ವಿಧಿಸಲಾಯಿತು.. ಆದರೆ, ವೆಂಕಟಪ್ಪನನ್ನು ಸಾಕಿ ಬೆಳೆಸಿದ್ದ ಟೇಲರ್ ಗೆ ಇದನ್ನು ಸಹಿಸಲಾಗಲಿಲ್ಲ. ತುಂಬಾ ನೊಂದಿದ್ದ ಟೇಲರ್, ಹೇಗಾದರೂ ಮಾಡಿ ಈ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿ ವೆಂಕಟಪ್ಪನನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿ, ಅದಕ್ಕಾಗಿ ಮಾತುಕತೆಯನ್ನೂ ಮೇಲಿನ ಅಧಿಕಾರಿಗಳ ಜೊತೆಗೆ ನಡೆಸಿದ್ದ. ಆನಂತರ ವೆಂಕಟಪ್ಪನನ್ನು ಭೇಟಿ ಮಾಡಲು ಜೈಲಿಗೆ ಬಂದ.. 


[ಈ ಸಂದರ್ಭವನ್ನೇ ನನ್ನ ಏಕಪಾತ್ರಾಭಿನಯಕ್ಕೆ ಆಯ್ದುಕೊಂಡು, ಸಂಭಾಷಣೆಯನ್ನೂ ಬರೆದಿದ್ದೆ. ಅದರ ಒಂದೆರಡು ತುಣುಕುಗಳು ಇಲ್ಲಿವೆ.]


ವೆಂಕಟಪ್ಪ:- "ಬನ್ನಿ ಟೇಲರ್ ಸಾಹೇಬರೇ,!! ಬನ್ನಿ.. ನೀವೇ ಅಕ್ಕರೆಯಿಂದ ಸಾಕಿ ಬೆಳೆಸಿದ ಈ ವೆಂಕಟಪ್ಪ, ಈಗ ಕಬ್ಬಿಣದ ಕೋಳಗಳಲ್ಲಿ ಹೇಗೆ ಬಂಧಿಯಾಗಿದ್ದಾನೆ ಅಂತ ನೋಡೋದಿಕ್ಕೆ ಬಂದ್ರೇನು.?!
ನಿಮ್ಮ ಬರ್ಬರ ಬ್ರಿಟಿಶ್ ಸರ್ಕಾರದ ಕುಟಿಲತೆಗಳ ಕಬಂಧಬಾಹುಗಳಿಂದ ನನ್ನ ತಾಯ್ನಾಡು ಮಮ್ಮಲ ಮರುಗುತ್ತಿರುವಾಗ, ನಾನು ಸುಖದ ಸುಪ್ಪತ್ತಿಗೆಯಲ್ಲಿ ಮಲಗಲು ಸಾಧ್ಯವೇ.? ಈ ನಾಯಕನಿಗೆ ಅದು ಸಾಧ್ಯವಿಲ್ಲ.. ನಾಡು-ನುಡಿಗೆ ನಿರಂತರ ರುಧಿರಧಾರೆಯನ್ನು ಅರ್ಪಿಸಿದ ನನ್ನ ಪೂರ್ವಜರಿಗೆ ನಾನು ದ್ರೋಹ ಬಗೆಯಲಾರೆ.. ಈ ನಾಡಿಂದ ಈ ಸರ್ಕಾರವನ್ನು ಉಚ್ಚಾಟಿಸುವವರೆಗೂ ನಾನು ಹೋರಾಡುತ್ತಲೇ ಇರುತ್ತೇನೆ..!!
ಅಲ್ಲ, ಟೇಲರ್ ಸಾಹೇಬರೇ, ನನ್ನ ಮರಣದ ಶಿಕ್ಷೆಯನ್ನು ಕಡಿಮೆಗೊಳಿಸಲು ನೀವು ಪ್ರಯತ್ನಿಸುತ್ತಿದ್ದೀರಂತೆ.!! ನಂಗೊತ್ತು, ನನ್ನ ಬಗ್ಗೆ ನಿಮಗೆ ಅಪಾರ ಪ್ರೀತಿಯಿದೆ. ಸಾಕಿದ ಮಮತೆಯಿದೆ. ಆದರೆ, ನಾನು ಹೇಡಿಯಲ್ಲ.. ನೆನಪಿರಲಿ.. ಈ ನಾಯಕ, ನಾಡಿಗಾಗಿ ಪ್ರಾಣಕೊಡಲು ಯಾವತ್ತೂ ಸಿದ್ಧ. ಅತ್ಯಂತ ಸಂತೋಷದಿಂದ ಆ ನೇಣನ್ನು ಅಪ್ಪಿಕೊಳುತ್ತೇನೆ. ನನ್ನ ಪ್ರಾಣಭಿಕ್ಷೆಯನ್ನು ದಯವಿಟ್ಟು ಆ ಆಂಗ್ಲಕುನ್ನಿಗಳ ಎದುರು ಕೇಳಬೇಡಿ.. ದೇಶಕ್ಕಾಗಿ ಜೀವನೀಡುವ ಸೌಭಾಗ್ಯವನ್ನು ನನ್ನಿಂದ ಕಿತ್ತುಕೊಳಬೇಡಿ. ಈಗ ನೀವು ನನ್ನನ್ನು ಬಿಡಿಸಿದರೂ, ನಾನು ಮಾತ್ರ  ಸುಮ್ಮನೆ ಕೂರುವವನಲ್ಲ..ಮತ್ತೆ ಸಿಡಿದೆದ್ದು ಬ್ರಿಟಿಷರನ್ನು ಹೊಡೆದೋಡಿಸುವೆ.. ರಾಷ್ಟ್ರದ ಸ್ವಾತಂತ್ರ್ಯವನ್ನೇ ಜೀವನದ ಧ್ಯೇಯವನ್ನಾಗಿಸಿದ ಈ ವೆಂಕಟಪ್ಪ ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧನಿದ್ದಾನೆ ಅನ್ನೋದನ್ನ ನೆನಪಿಟ್ಟುಕೊಳ್ಳಿ.. ನನ್ನಂತಹ ಅಸಂಖ್ಯ ದೇಶಭಕ್ತರು ಹುಟ್ಟಿಬರಲಿದ್ದಾರೆ. ಅವರೆಲ್ಲರ ಆಕ್ರೋಶದ ಕಿಡಿಯಲ್ಲಿ ಈ ಬ್ರಿಟಿಶ್ ಸರ್ಕಾರ ಸುಟ್ಟು ಭಸ್ಮವಾಗುವುದಂತೂ ನಿಶ್ಚಿತ.. ಆ ಕಾಲ ಸನ್ನಿಹಿತವಾಗಿದೆ.. ಸಶಕ್ತ, ಸುಭಿಕ್ಷ ನಾಡಿನ ಕನಸಿನಲ್ಲೇ ನಾನಿದ್ದೇನೆ.. 
ಸದಾ ತಾಯಿ ಭಾರತಿಯ ನಗುವನ್ನೇ ಹಂಬಲಿಸುವ ಯುವಕರು ಇರೋತನಕ, ಭಾರತವನ್ನು ನಾಶಮಾಡಲು ಸಾಧ್ಯವಿಲ್ಲ.. ಈ ಮಾತನ್ನು ನಿಮ್ಮ ಅಧಿಕಾರಿಗಳಿಗೆ ಹೇಳಿ. ಭಾರತಾಂಬೆ ಬಂಜೆಯಲ್ಲ. ಸಿಂಹಗಳನ್ನೇ ಹೆರುವ ತಾಯಿ ಆಕೆ.. ಆಕೆಯ ಬಿಡುಗಡೆಯೇ ಭಾರತೀಯರ ಗುರಿ.
ಹರಹರ ಮಹಾದೇವ..!!!!!!!"................





ಇಷ್ಟೆಲ್ಲಾ ಸಂಧಾನದ ನಂತರವೂ, ವೆಂಕಟಪ್ಪನಿಗೆ ಇಷ್ಟವಿಲ್ಲದಿದ್ದರೂ, ಅಂತೂ ಕೊನೆಗೆ, ಟೇಲರ್ ನ ನಿರಂತರ ಮಧ್ಯಸ್ಥಿಕೆಯಿಂದ, ವೆಂಕಟಪ್ಪನಿಗೆ ವಿಧಿಸಲಾದ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಕಡಿತಗೊಲಿಸಲಾಯಿತು., ಆನಂತರ ಅದು ಇನ್ನೂ ಕಡಿಮೆಯಾಗಿ, ನಾಲ್ಕು ವರ್ಷಗಳ ಸೆರೆಮನೆವಾಸವನ್ನು ನೀಡಲಾಯಿತು.. ಇದರಿಂದ, ದೇಶಕ್ಕಾಗಿ ಪ್ರಾಣ ಕೊಡುವ ಸೌಭಾಗ್ಯ ಹೋಯಿತಲ್ಲ ಅಂತ ವೆಂಕಟಪ್ಪ ದುಃಖಿಯಾದರೆ, ಇತ್ತ ಸುರಪುರವನ್ನು ಕೊಳ್ಳೆಹೊಡೆಯಬೇಕೆಂದು ಹವಣಿಸುತ್ತಿದ್ದ ನಿಜಾಮನಿಗೂ ಈ ತೀರ್ಪು ಬೇಸರ ತಂದಿತ್ತು..!!


ಆದರೂ, ಬ್ರಿಟಿಷರಿಗೆ ಇನ್ನೂ ಸಣ್ಣ ಭಯ ಇದ್ದೇ ಇತ್ತು. ವೆಂಕಟಪ್ಪ, ಬಿಡುಗಡೆಯಾಗಿ ಬಂದ ಮೇಲೆ, ಮತ್ತೆ ಸೈನ್ಯ ಕಟ್ಟೇ ಕಟ್ಟುತ್ತಾನೆ. ಆಗ ಸಂದರ್ಭ ಇನ್ನೂ ಭಯಾನಕವಾಗಬಹುದೆಂದು ಅಂದಾಜಿಸಿ, ಬ್ರಿಟಿಷರು ನಿಜಾಮನ ಜೊತೆಗೂಡಿ, ಹೇಗಾದರೂ ಆ ವೆಂಕಟಪ್ಪನನ್ನು ಮುಗಿಸಲು ಸಂಚು ರೂಪಿಸತೊಡಗಿದರು..
ವೆಂಕಟಪ್ಪನ ಸಾಕುತಂದೆ 'ಟೇಲರ್' ಸುರಪುರವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋದಾಕ್ಷಣ, ವೆಂಕಟಪ್ಪನನ್ನು ಸಾಯಿಸಲು ಎಲ್ಲರೂ ಮುಗಿಬಿದ್ದರು..
ವೆಂಕಟಪ್ಪನನ್ನು ಕರ್ನೂಲಿನ ಬಂಧೀಖಾನೆಗೆ ಸಾಗಿಸುವ ವೇಳೆ, ದಾರಿಮಧ್ಯದಲ್ಲೇ, ಅವನನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು.. ಅಪ್ರತಿಮ ಸಾಹಸಿ, ನೈಜ ರಾಷ್ಟ್ರಪ್ರೇಮಿ ಹೀಗೆ ಅನಾಥವಾಗಿ ಹೆಣವಾಗಿ ಬಿದ್ದಿದ್ದ.. ಜನತೆಗೆ ಅನುಮಾನ ಬರಬಾರದೆಂದು, "ವೆಂಕಟಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಅಂತ ಸುಳ್ಳು ಸುದ್ದಿಯನ್ನು ಹಬ್ಬಿಸಲಾಯಿತು.. ಆದರೆ ಸುರಪುರದ ಜನತೆಗಂತೂ, ಇದು ಸಹ್ಯವಿರಲಿಲ್ಲ. ಬ್ರಿಟಿಷರೆ ಅವನನ್ನು ಕೊಂದಿದ್ದಾರೆ ಅನ್ನೋದನ್ನೂ ಊಹೆ ಮಾಡದಷ್ಟು ದಡ್ದರೆನೂ ಅವರಿರಲಿಲ್ಲ..!!!!

ಇದಾದ ಮೇಲೆ, ಮೊದಲೇ ಮಾಡಿಕೊಂಡ ಒಪ್ಪಂದದಂತೆ, ಬ್ರಿಟಿಷರು ನಿಜಾಮನಿಗೆ ಒಂದಿಷ್ಟು ಹಣವನ್ನೂ ಮತ್ತು ಸುರಪುರದ ಭಾಗವನ್ನೂ ನೀಡಿಬಿಟ್ಟರು.. 
ಅಪರಿಮಿತ ಕಾಲಾವಧಿಯಿಂದ, ಧೀರ'ನಾಯಕರ' ಆಳ್ವಿಕೆಯಲ್ಲಿ ಸುಭದ್ರವಾಗಿದ್ದ 'ಸುರಪುರ', ವೆಂಕಟಪ್ಪನ ಮರಣದ ನಂತರ ನಿಜಾಮನ ಆಳ್ವಿಕೆಯ ಭಾಗವಾಯಿತು..

ಇತಿಹಾಸದ ಪುಸ್ತಕಗಳಲ್ಲಿ, ಸುರಪುರ ವೆಂಕಟಪ್ಪ ನಾಯಕನ ಕಥೆ, ಮರೆಯಾಗಿದೆಯಾದರೂ, ಆ ಪ್ರಾಂತದ ಜಾನಪದ ಹಾಡುಗಳಲ್ಲಿ, ಇಂದಿಗೂ ವೆಂಕಟಪ್ಪ ಜೀವಂತವಾಗಿದ್ದಾನೆ.. ಅವನ ಶೌರ್ಯ-ಸಾಹಸ-ದೇಶಭಕ್ತಿಯನ್ನು ಇವತ್ತಿಗೂ ಜನರ ಕಂಠ ಹಾಡಿ ಹೊಗಳುತ್ತಿದೆ.. 
ಸುರಪುರದ ವೆಂಕಟಪ್ಪನ ತರಹದ ರಾಷ್ಟ್ರಪ್ರೇಮಿಗಳು ನಮಗೆ ಆದರ್ಶವಾಗಲಿ.. ರಾಷ್ಟ್ರೀಯತೆಯ ಅಧಃಪತನದಲ್ಲಿರುವ ನಮಗೆ, ವೆಂಕಟಪ್ಪನ ದೇಶಭಕ್ತಿ ಮಾರ್ಗದರ್ಶಿಯಾಗಲಿ..

[ ಅಂದಹಾಗೆ, ಕೆಲವು ಕಾರಣಾಂತರಗಳಿಂದ, ಕಾಲೇಜಿನಲ್ಲಿ,  'ಏಕಪಾತ್ರಾಭಿನಯದ' ಸ್ಪರ್ಧೆಯನ್ನು ಕೈಬಿಡಲಾಯಿತು. ಹೀಗಾಗಿ, ಅಲ್ಲಿ ಅಭಿನಯದ ಮೂಲಕ ಈ ನಾಯಕನನ್ನು ಪರಿಚಯಿಸುವ ಅವಕಾಶ ಸಿಗಲಿಲ್ಲ.. ಸ್ಪರ್ಧೆಯನ್ನು ಕೈಬಿಟ್ಟಿದ್ದಕ್ಕೆ ಬೇಸರವಿದ್ದರೂ, ಒಬ್ಬ ಸ್ವಾತಂತ್ರ್ಯ ಹೋರಾಟಗಾರನ ಪರಿಚಯ ಆಯಿತು ಅನ್ನೋದೇ ನನಗೆ ಹೆಚ್ಚಿನ ಸಂತೋಷ..]


ವೆಂಕಟಪ್ಪ ನಾಯಕನ ಊಹಾತ್ಮಕ ಚಿತ್ರ.( ಸ್ವರಚಿತ..!!!!!!!!! )
                     
ವಂದೇ ಮಾತರಂ....!!