Sunday, 27 July 2014

ಬಳೆಗಳ ಸದ್ದಿನ ನಡುವೆ, ಕ್ರಾಂತಿಯ ಕಹಳೆ..

ಈ ದೇಶದ ಸ್ತ್ರೀಯರು, ಪ್ರಾಚೀನಕಾಲದಿಂದಲೂ ರಾಷ್ಟ್ರದ,ಸಮಾಜದ ಹಿತಾಸಕ್ತಿಗೆ ಬದ್ಧವಾಗಿ ದುಡಿದಿದ್ದಾರೆ. ರಾಜಕೀಯ,ಕಲೆ,ಸಾಹಿತ್ಯಗಳಷ್ಟೇ ಅಲ್ಲ, ಯುದ್ಧಗಳಲ್ಲೂ ತಮ್ಮ ಪರಾಕ್ರಮವನ್ನು ಮೆರೆದವರಿದ್ದಾರೆ. ಕೃಷ್ಣ ಪಾರಿಜಾತ ವೃಕ್ಷ ತರಲು ಹೋದಾಗ, ಸ್ವತಃ ಸತ್ಯಭಾಮೆಯೂ ದೇವತೆಗಳೊಂದಿಗೆ ತನ್ನ ಪರಾಕ್ರಮ ತೋರಿಸಿದ ಘಟನೆ  ಇದೆ. ಕೈಕೇಯಿಯು, ದಶರಥನ ಜೊತೆ ಯುದ್ಧಗಳಲ್ಲಿ ಭಾಗವಹಿಸಿ ಅದ್ಭುತ ಶೌರ್ಯವನ್ನು ಮೆರೆದ ಕಥೆಯೂ ನಮಗೆ ವಿದಿತವಾಗಿದೆ. ಬರೀ ಪುರಾಣಗಳಲ್ಲಷ್ಟೇ ಅಲ್ಲ, ಇತಿಹಾಸದುದ್ದಕ್ಕೂ ಸ್ತ್ರೀಯರು ಸಾಹಸಮೆರೆದ ಘಟನೆಗಳು ಜರುಗಿವೆ. ಕಾಕತೀಯ ಸಂಸ್ಥಾನದ ರಾಣಿ ರುದ್ರಮ್ಮ ದೇವಿ, ಚಿತ್ತೂರಿನ ರಾಣಿ ಪದ್ಮಿನಿ, ಉಲ್ಲಾಳದ ರಾಣಿ ಅಬ್ಬಕ್ಕ, ಕಿತ್ತೂರಿನ ರಾಣಿ ಚೆನ್ನಮ್ಮ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ದುರ್ಗದ ಓಬವ್ವ, ಅಹಲ್ಯಾಬಾಯಿ ಹೋಳ್ಕರ್ ಹೀಗೆ ಸಾಲು ಸಾಲು ಹೆಸರುಗಳು ಚರಿತೆಯಲ್ಲಿ ಘರ್ಜಿಸಿವೆ. ಸ್ವಾತಂತ್ರ್ಯಕಾಲದಲ್ಲಂತೂ, ಬದುಕನ್ನು ಸಮರ್ಪಿಸಿದ ಅಸಂಖ್ಯಾತ ಯುವಕರ ಹಿಂದೆ ಅವರವರ ತಾಯಿ-ತಂಗಿ-ಹೆಂಡತಿಯರ ಮಹಾ ತ್ಯಾಗವಿದೆ. ತೆರೆಯ ಹಿಂದೆಯಿದ್ದು ಸರ್ವಸ್ವವನ್ನೂ ಅರ್ಪಿಸಿದ ತಾಯಂದಿರು ಒಂದೆಡೆಯಾದರೆ, ಹೋರಾಟದ ಅಖಾಡಕ್ಕಿಳಿದು ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ಸ್ತ್ರೀಯರ ಸಂಖ್ಯೆಗೂ ಕಮ್ಮಿಯೇನಿಲ್ಲ. ಮೇಡಂ ಕಾಮಾ,ಶಕುಂತಲಾ ಧಮಂಕರ್, ಕ್ಯಾ.ಲಕ್ಷ್ಮೀ ಸೆಹಗಲ್, ಪ್ರೀತಿಲತಾ ವದ್ದೆದಾರ್ ಮುಂತಾದ ಸ್ತ್ರೀರತ್ನಗಳು ಭಾರತಿಯ ಮುಕುಟವನ್ನು ಶೃಂಗರಿಸಿವೆ.
ಕಲ್ಪನಾ ದತ್ತ - ಇಂತಹ ಸ್ತ್ರೀಯರ ಸಾಲಿನಲ್ಲಿ ನಿಲ್ಲುವ ಮತ್ತೋರ್ವ ಧೀಮಂತೆ. ಬಂಗಾಳದ ಕ್ರಾಂತಿಯಲ್ಲಿ ಈಕೆಯದು ಎಂದೂ ಅಳಿಸಲಾಗದ ಹೆಸರು.

ಚಿತ್ತಗಾಂಗ್ - ಪೂರ್ವ ಬಂಗಾಳದ ಒಂದು ಸಣ್ಣ ಊರು. ಅಲ್ಲಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕನಾಗಿದ್ದವನು ಸೂರ್ಯಸೇನ್. ಅದ್ಭುತ ರಾಷ್ಟ್ರೀಯ ಚಿಂತಕ. ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾಗಿ ಬಂಗಾಳದ ಮಹಾನ್ ಕ್ರಾಂತಿಕಾರಿ ಸಂಸ್ಥೆ "ಅನುಶೀಲನ ಸಮಿತಿ"ಯ ಸದಸ್ಯನಾಗಿದ್ದ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸ್ ನಲ್ಲಿ ಇದ್ದ ಸೂರ್ಯಸೇನ್, ಅದರ ನಿಧಾನಗತಿಯ ಹೋರಾಟದಿಂದ ಬೇಸತ್ತು, ಕ್ರಾಂತಿಯ ಮಾರ್ಗಕ್ಕೆ ಧಾವಿಸಿದ್ದ. ಶಾಲೆಯಲ್ಲಿ ಓದುತ್ತಿದ್ದ ೧೪-೧೫ ವರ್ಷದ  ಬಾಲಕರೇ ಅವನೊಟ್ಟಿಗೆ ಕೈಜೋಡಿಸಿದರು. ಲೋಕನಾಥ್ ಬಲ್, ಅನಂತ ಸಿಂಹ, ಗಣೇಶ್ ಘೋಷ್ ಮೊದಲಾದ ಸಾಹಸಿಗರ ಗುಂಪೇ "ಇಂಡಿಯನ್ ರಿಪಬ್ಲಿಕನ್ ಆರ್ಮಿ"ಯ ಹೆಸರಿನಲ್ಲಿ ಸಂಘಟಿತವಾಗಿತ್ತು. ಈ ಸಂಘಟನೆಯ ಬಗ್ಗೆ ತಿಳಿದಿದ್ದ ಕಲ್ಪನಾ, ತಾನೂ ಸಂಘಟನೆಯ ಭಾಗವಾಗಲು ಹುಮ್ಮಸ್ಸಿನಿಂದ ಕೇಳಿಕೊಂಡಳು. ಅದರ ಪರಿಣಾಮವಾಗಿ ಕಲ್ಪನಾ ಮತ್ತವಳ ಗೆಳತಿ ಪ್ರೀತಿಲತಾ ಭಾರತದ ಅಧ್ಯಾಯದಲ್ಲಿ ಒಂದು ಕ್ರಾಂತಿ ಸಂಘದ ಕಂಬಗಳಾದರು.

ಚಿತ್ತಗಾಂಗ್ ನಲ್ಲಿ ಮೆಟ್ರಿಕುಲೆಶನ್ ಮುಗಿಸಿದ್ದ ಕಲ್ಪನಾ, ಕಲ್ಕತ್ತಾದ ವಿಜ್ಞಾನ ಕಾಲೇಜಿನಲ್ಲಿ ಪದವಿಗಾಗಿ ಸೇರಿದ್ದಳು. ವಿಜ್ಞಾನದ ವಿದ್ಯಾರ್ಥಿಯೇ ಆಗಿದ್ದರಿಂದ ಬಾಂಬುಗಳ  ತಾಯಾರಿಗೆ ಬೇಕಾದ ರಾಸಾಯನಿಕಗಳ ತಿಳುವಳಿಕೆ,ಮಾಹಿತ ಸಂಪೂರ್ಣ ಅವಳಲ್ಲಿತ್ತು. ಅಲ್ಲದೆ ಆ ಎಲ್ಲ ಪದಾರ್ಥಗಳನ್ನೂ ಆಕೆ ಸಂಗ್ರಹಿಸಿ ಇಟ್ಟಿದ್ದಳು. ಸೋರ್ರ್ಯಸೇನ್ ತನ್ನ ಸಂಘಟನೆಯ ಮೂಲಕ ಇಡೀ ಚಿತ್ತಗಾಂಗ್ ಅನ್ನು ಸ್ವತಂತ್ರಗೊಳಿಸಲು ನಕ್ಷೆ ಸಿದ್ಧಪಡಿಸಿದ್ದ.

ಏಪ್ರಿಲ್ ೧೮ - ೧೯೩೦. ಎಲ್ಲರೂ ಅಂದು ಏಕಕಾಲಕ್ಕೆ, ನಿಗದಿಪಡಿಸಿದ ಜಾಗಗಳಿಂದ ದಂಗೆ ಏಳಲು ನಿರ್ಧರಿಸಲಾಗಿತ್ತು.ಗಣೇಶ್ ಘೊಶನ ತಂಡ ಪೊಲಿಸ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡರೆ, ಲೋಕನಾಥನ ತಂಡ 'ಅರೆಸೈನ್ಯ'ದ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿತು. ಅಂಬಿಕಾ ಚಕ್ರವರ್ತಿಯ ಜೊತೆಗಾರರು, ಚಿತ್ತಗಾಂಗ್ ಗೆ ಕೂಡುವ ಎಲ್ಲ ರೈಲ್ವೆ ಮಾರ್ಗವನ್ನು ಭಗ್ನಗೊಳಿಸಿದರು. ನಿರ್ಮಲ್ ಸೇನ್ ಟೆಲಿಗ್ರಾಫ್ ಸಂಪರ್ಕವನ್ನು ಕಡಿತಗೊಳಿಸಿದ. ಎಲ್ಲರೂ ಸೇರಿ ಭಾರತ ಧ್ವಜ ಹಾರಿಸಿ, ಚಿತ್ತಗಾಂಗ್ ಸ್ವತಂತ್ರವಾಗಿದೆ ಎಂದು ಘೋಷಿಸಿಯೇ ಬಿಟ್ಟರು.

ಎಲ್ಲವೂ ಪ್ಲಾನಿನಂತೆ ಆಗಿದ್ದರೆ, ಎಲ್ಲರೂ ಸೌಖ್ಯವಾಗಿರುತ್ತದ್ದರೆನೋ. ಆದರೆ ಅಲ್ಲೊಂದಿಷ್ಟು ಎಡವಟ್ಟುಗಳಾಗಿದ್ದವು. ಬಂದೂಕುಗಳನ್ನು ವಶ ಪಡಿಸಿಕೊಂಡ ಕ್ರಾಂತಿಕಾರಿಗಳಿಗೆ ಮದ್ದು-ಗುಂಡುಗಳು ಸಿಗಲೇ ಇಲ್ಲ. ಬ್ರಿಟಿಷರು ಬಂದೂಕು ಹಾಗು ಗುಂಡುಗಳನ್ನು ಬೇರೆ ಬೇರೆ ಜಾಗಗಳಲ್ಲಿಟ್ಟಿರುತ್ತಾರೆಂಬ ವಿಷಯ ನಮ್ಮವರಿಗೆ ಗೊತ್ತೇ ಇರಲಿಲ್ಲ. ಅಷ್ಟೇ ಅಲ್ಲ, ಅವತ್ತು ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡಿ ಅಲ್ಲಿನ ಬ್ರಿಟಿಷರನ್ನು ಸೆರೆ ಹಿಡಿದು, ಅವರು ಊರು ಬಿಟ್ಟು ಕದಲದಂತೆ ಮಾಡಬೇಕೆನ್ನುವ ತಯಾರಿಯೂ ಇತ್ತು. ಆದರೆ ಅವತ್ತು ಗುಡ್ ಫ್ರೈಡೆ ಆಗಿದ್ದರಿಂದ ಆಂಗ್ಲರಾರೂ ಕ್ಲಬ್ ನಲ್ಲಿ ಇರಲೇ ಇಲ್ಲ..!!
ಇಂತಹ ಕೆಲವು ಲೋಪಗಳಿಂದ ಬ್ರಿಟಿಷರಿಗೆ ಕ್ರಾಂತಿಯ ಸುದ್ದಿ ಹೋಯಿತು. ಕ್ರಾಂತಿಕಾರಿಗಳೂ ಓಡಿಹೋಗಿ ಜಲಾಲಾಬಾದ್ ನ ಗುಡ್ಡದಲ್ಲಿ ಅವಿತುಕೊಂಡರು. ೧೫ ವರ್ಷದ ಬಾಲಕರೆಲ್ಲಿ, ಆಧುನಿಕ ಶಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಆಂಗ್ಲ ಸೈನಿಕರೆಲ್ಲಿ. ಆ ಗುಡ್ಡದಲ್ಲಿ ಘೋರ ಕದನವೇ ನಡೆಯಿತು. ವಯಸ್ಸು ಸಣ್ಣದಿದ್ದರೂ , ರಾಷ್ಟ್ರಭಕ್ತಿಯ ಕೆಚ್ಚಿಗೆ ಎಂಥವರೂ ಕೊಚ್ಚಿಕೊಂಡು ಹೋಗುತ್ತಾರೆಂಬ ಸಂದೇಶ ಅವತ್ತು ಆ ಹುಡುಗರಿಂದ ಜಗಜ್ಜಾಹೀರಾಗಿತ್ತು. ಕೆಲವು ಬಾಲಕರು ಅಲ್ಲೇ ಆ ಹೋರಾಟದಲ್ಲೇ ಗುಂಡು ತಗುಲಿ ಹುತಾತ್ಮರಾದರು. ಉಳಿದವರು ತಲೆಮರೆಸಿಕೊಂಡರು.

ಸ್ವಲ್ಪ ಕಾಲದಲ್ಲಿಯೇ, ಲೋಕನಾಥ, ನಿರ್ಮಲ್ ಸೆನ್ ಎಲ್ಲರೂ ಸಿಕ್ಕರೂ. ಸೂರ್ಯಸೇನ್ ಮಾತ್ರ ಚಾಣಾಕ್ಷತೆಯಿಂದ ತಪ್ಪಿಸಿಕೊಂಡೆ ಇದ್ದ.


                             
ಕಲ್ಪನಾ ದತ್ತ

ಕಲ್ಪನಾ ಪ್ಲಾನಿನ ಪ್ರಕಾರ ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡುವ ಗುಂಪಿನ ಸದಸ್ಯೆಯಾಗಿದ್ದಳು. ಅದಕ್ಕಾಗಿ ಬಾಂಬಿನ ಸಹಕಾರವನ್ನು ನೀಡಿದ್ದಳು. ಬಂದೂಕನ್ನು ಪ್ರಯೋಗಿಸುವುದು ಆಕೆಗೆ ಕರಗತವಾಗಿತ್ತು. ಆದರೆ ದುರದೃಷ್ಟವೆಂಬಂತೆ ದಾಳಿ ನಡೆಯುವ ಒಂದು ವಾರದ ಹಿಂದೆಯೇ ರೈಲು ನಿಲ್ದಾಣದಲ್ಲಿ, ಪೊಲೀಸರು ತಪಾಸಣೆ ನಡೆಸುವಾಗ, ಆಕೆಯ ಬಳಿಯಿದ್ದ ಕ್ರಾಂತಿಯ ಕರಪತ್ರಗಳಿಂದ ಆಕೆ ಬಂಧನಕ್ಕೊಳಗಾಗಿಬಿಟ್ಟಳು. ಆಕೆಯ ತಂದೆ ದೊಡ್ಡ ಶ್ರೀಮಂತ ಹಾಗು ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಜಾಮೀನಿನ ಮೇಲೆ ಬಿಡುಗಡೆಯಾದಳು. ಆ ನಂತರ ಭೂಗತೆಯಾಗಿ, ಸೂರ್ಯಸೇನನೊಂದಿಗೆ ನಿರಂತರ ಅಲೆದಾಡುತ್ತಿದ್ದಳು. ಫೆಬ್ರವರಿ ೧೭, ೧೯೩೩ - ಹಾಗೊಂದು ಮನೆಯಲ್ಲಿ ತಲೆಮರೆಸಿಕೊಂಡಿದ್ದಾಗ, ಬ್ರಿಟಿಷರು ಆಕ್ರಮಿಸಿದರು. ಇಬ್ಬರ ನಡುವೆ ಸ್ವಲ್ಪ ಕಾದಾಟ ನಡೆದರೂ, ಸೂರ್ಯಸೇನನ ಬಳಿ ಅಷ್ಟೊಂದು ಮದ್ದುಗಳಿರಲಿಲ್ಲ. ಅಲ್ಲದೆ ಜೊತೆಗಿದ್ದ ಕೆಲವು ಹುಡುಗರಿಗೆ ಗುಂಡುಗಳು ತಗುಲಿದ್ದವು. ಅವರನ್ನು ಕಲ್ಪನಾಳ ಜೊತೆಗೆ ಕಳುಹಿಸಿ, ತಾನು ಬೇರೆ ದಿಕ್ಕಿನಲ್ಲಿ ಓಡಿದ. ಆದರೆ, ಸುತ್ತಲಿದ್ದ ಪೊಲೀಸರು ಅವನನ್ನು ಹಿಡಿದೇ ಬಿಟ್ಟರು. ಕಲ್ಪನಾ ಮತ್ತೆ ಭೂಗತಳಾದಳು.ಇತ್ತ, ವಿಚಾರಣೆ ನಡೆದು, ಸೂರ್ಯಸೇನ ಹಾಗು ತಾರಕೆಶ್ವರನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅತಿ ಕ್ರೂರವಾಗಿ ಸೂರ್ಯಸೆನನನ್ನು ಹಿಂಸಿಸಿ, ನೇಣಿಗೇರಿಸಲಾಯಿತು.

ಇದರ ನಡುವೆಯೇ, ತಪ್ಪಿಸಿಕೊಂಡಿದ್ದ ಕಲ್ಪನಾಳೂ ಸೆರೆಸಿಕ್ಕಿದ್ದಳು. ಕ್ರಾಂತಿಕಾರಿಗಳಿಗೆ ಸಹಾಯ ಮಾಡಿ, ಆಂಗ್ಲಪ್ರಭುತ್ವದ ವಿರುದ್ಧ ದಂಗೆದ್ದ ಕಾರಣಕ್ಕೆ ಆಕೆಗೆ ಕಠಿಣ ಸಜೆಯನ್ನು ವಿಧಿಸಲಾಯಿತು.

೧೯೩೯ ರಲ್ಲಿ ಬಿಡುಗಡೆಯಾದ ಕಲ್ಪನಾ, ತನ್ನ ಓದನ್ನು ಪೂರ್ಣಗೊಳಿಸಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಯನ್ನು ಸೇರಿದಳು. ೧೯೪೩ ರಲ್ಲಿ ಪೂರ್ಣಚಂದ್ ಜೋಷಿ ಯನ್ನು ವಿವಾಹವಾದ ಕಲ್ಪನಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದಳು. ೧೯೯೫ ಫೆಬ್ರವರಿ ೮ ರಂದು, ಕಲ್ಕತ್ತಾದಲ್ಲಿ ಕಲ್ಪನಾ ಕೊನೆಯುಸಿರೆಳೆದಳು.

ಜುಲೈ ೨೭ - ಕಲ್ಪನಾಳ ಜನ್ಮದಿನ. ಯಾವ ಚಿತ್ತಗಾಂಗ್ ನ ಕ್ರಾಂತಿಯು ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ನಿಂತಿತೋ, ಆ ಬೃಹತ್ ಹೋರಾಟದ ಮುಖ್ಯ ಭಾಗವಾಗಿದ್ದವಳು ಈ ಕಲ್ಪನಾ. ಮನೆಯಲ್ಲಿ ಅಪಾರ ಶ್ರೀಮಂತಿಕೆಯಿದ್ದರೂ, ರಾಷ್ಟ್ರಕ್ಕಾಗಿ ತನ್ನದೂ ಒಂದು ಸೇವೆ ಸಲ್ಲಬೇಕೆಂಬ ಆಕಾಂಕ್ಷೆಯಿಂದ ಕ್ರಾಂತಿಯನ್ನು ಸೇರಿದ್ದವಳು.ಮದುವೆಯಾಗಿ, ಮನೆಯಲ್ಲೇ ಉಳಿದುಹೊಗುತ್ತಿದ್ದ ಆಗಿನ ಹೆಣ್ಣುಮಕ್ಕಳ ನಡುವೆ, ಧೈರ್ಯವಾಗಿ ಬಂದೂಕನ್ನು ಕೈಗೆತ್ತಿಕೊಂಡು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಳು. ಕೇವಲ ೨೦ ನೆ ವಯಸ್ಸಿನಲ್ಲೇ ಕ್ರಾಂತಿಗೆ ಧುಮುಕಿ, ಹತ್ತಾರು ಆಂಗ್ಲ ಸಿಪಾಯಿಗಳನ್ನು, ಬಂದೂಕಿನಿಂದ ಹೊಡೆದುರುಳಿಸಿದ ಧೀರಸ್ತ್ರೀ. ಭಾರತಿಯ ಮಕ್ಕಳಾರೂ ಅಬಲೆಯರಲ್ಲ ಎಂದು ಸಾರಿ ಹೇಳುವಂತೆ ಆಕೆ ಬದುಕಿದಳು. ಆ ಧೀಮಂತ ಹೆಣ್ಣಿನ ರಾಷ್ಟಭಕ್ತಿ ನಮ್ಮ ಪ್ರೇರಕಶಕ್ತಿಯಾಗಲಿ...

ವಂದೇ ಮಾತರಂ..!!
[ ಚಿತ್ರಕೃಪೆ -http://www.thehindu.com/todays-paper/tp-national/leafing-over-the-past/article4330572.ece ]

[ ಚಿತ್ತಗಾಂಗ್ ಹೋರಾಟದ ಪೂರ್ಣ ಮಾಹಿತಿಗೆ, ಈ ಲೇಖನಗಳನ್ನು ಓದಿ.

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 1
'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 2
'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3      ]
[ ಆಶುತೋಷ್ ಗೊವಾರಿಕರ್ ನಿರ್ದೇಶನದ "ಖೇಲೇ ಹಮ್ ಜೀ ಜಾನ್ ಸೆ" ಚಿತ್ರವೂ, ಇದೆ ಚಿತ್ತಗಾಂಗ್ ಹೋರಾಟದ ಮೇಲೆ ನಿರ್ಮಾಣವಾಗಿರುವ ಚಿತ್ರ. ಆಸಕ್ತರು ವೀಕ್ಷಿಸಬಹುದು. ]