Sunday, 27 July 2014

ಬಳೆಗಳ ಸದ್ದಿನ ನಡುವೆ, ಕ್ರಾಂತಿಯ ಕಹಳೆ..

ಈ ದೇಶದ ಸ್ತ್ರೀಯರು, ಪ್ರಾಚೀನಕಾಲದಿಂದಲೂ ರಾಷ್ಟ್ರದ,ಸಮಾಜದ ಹಿತಾಸಕ್ತಿಗೆ ಬದ್ಧವಾಗಿ ದುಡಿದಿದ್ದಾರೆ. ರಾಜಕೀಯ,ಕಲೆ,ಸಾಹಿತ್ಯಗಳಷ್ಟೇ ಅಲ್ಲ, ಯುದ್ಧಗಳಲ್ಲೂ ತಮ್ಮ ಪರಾಕ್ರಮವನ್ನು ಮೆರೆದವರಿದ್ದಾರೆ. ಕೃಷ್ಣ ಪಾರಿಜಾತ ವೃಕ್ಷ ತರಲು ಹೋದಾಗ, ಸ್ವತಃ ಸತ್ಯಭಾಮೆಯೂ ದೇವತೆಗಳೊಂದಿಗೆ ತನ್ನ ಪರಾಕ್ರಮ ತೋರಿಸಿದ ಘಟನೆ  ಇದೆ. ಕೈಕೇಯಿಯು, ದಶರಥನ ಜೊತೆ ಯುದ್ಧಗಳಲ್ಲಿ ಭಾಗವಹಿಸಿ ಅದ್ಭುತ ಶೌರ್ಯವನ್ನು ಮೆರೆದ ಕಥೆಯೂ ನಮಗೆ ವಿದಿತವಾಗಿದೆ. ಬರೀ ಪುರಾಣಗಳಲ್ಲಷ್ಟೇ ಅಲ್ಲ, ಇತಿಹಾಸದುದ್ದಕ್ಕೂ ಸ್ತ್ರೀಯರು ಸಾಹಸಮೆರೆದ ಘಟನೆಗಳು ಜರುಗಿವೆ. ಕಾಕತೀಯ ಸಂಸ್ಥಾನದ ರಾಣಿ ರುದ್ರಮ್ಮ ದೇವಿ, ಚಿತ್ತೂರಿನ ರಾಣಿ ಪದ್ಮಿನಿ, ಉಲ್ಲಾಳದ ರಾಣಿ ಅಬ್ಬಕ್ಕ, ಕಿತ್ತೂರಿನ ರಾಣಿ ಚೆನ್ನಮ್ಮ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ದುರ್ಗದ ಓಬವ್ವ, ಅಹಲ್ಯಾಬಾಯಿ ಹೋಳ್ಕರ್ ಹೀಗೆ ಸಾಲು ಸಾಲು ಹೆಸರುಗಳು ಚರಿತೆಯಲ್ಲಿ ಘರ್ಜಿಸಿವೆ. ಸ್ವಾತಂತ್ರ್ಯಕಾಲದಲ್ಲಂತೂ, ಬದುಕನ್ನು ಸಮರ್ಪಿಸಿದ ಅಸಂಖ್ಯಾತ ಯುವಕರ ಹಿಂದೆ ಅವರವರ ತಾಯಿ-ತಂಗಿ-ಹೆಂಡತಿಯರ ಮಹಾ ತ್ಯಾಗವಿದೆ. ತೆರೆಯ ಹಿಂದೆಯಿದ್ದು ಸರ್ವಸ್ವವನ್ನೂ ಅರ್ಪಿಸಿದ ತಾಯಂದಿರು ಒಂದೆಡೆಯಾದರೆ, ಹೋರಾಟದ ಅಖಾಡಕ್ಕಿಳಿದು ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ ಸ್ತ್ರೀಯರ ಸಂಖ್ಯೆಗೂ ಕಮ್ಮಿಯೇನಿಲ್ಲ. ಮೇಡಂ ಕಾಮಾ,ಶಕುಂತಲಾ ಧಮಂಕರ್, ಕ್ಯಾ.ಲಕ್ಷ್ಮೀ ಸೆಹಗಲ್, ಪ್ರೀತಿಲತಾ ವದ್ದೆದಾರ್ ಮುಂತಾದ ಸ್ತ್ರೀರತ್ನಗಳು ಭಾರತಿಯ ಮುಕುಟವನ್ನು ಶೃಂಗರಿಸಿವೆ.
ಕಲ್ಪನಾ ದತ್ತ - ಇಂತಹ ಸ್ತ್ರೀಯರ ಸಾಲಿನಲ್ಲಿ ನಿಲ್ಲುವ ಮತ್ತೋರ್ವ ಧೀಮಂತೆ. ಬಂಗಾಳದ ಕ್ರಾಂತಿಯಲ್ಲಿ ಈಕೆಯದು ಎಂದೂ ಅಳಿಸಲಾಗದ ಹೆಸರು.

ಚಿತ್ತಗಾಂಗ್ - ಪೂರ್ವ ಬಂಗಾಳದ ಒಂದು ಸಣ್ಣ ಊರು. ಅಲ್ಲಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕನಾಗಿದ್ದವನು ಸೂರ್ಯಸೇನ್. ಅದ್ಭುತ ರಾಷ್ಟ್ರೀಯ ಚಿಂತಕ. ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾಗಿ ಬಂಗಾಳದ ಮಹಾನ್ ಕ್ರಾಂತಿಕಾರಿ ಸಂಸ್ಥೆ "ಅನುಶೀಲನ ಸಮಿತಿ"ಯ ಸದಸ್ಯನಾಗಿದ್ದ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸ್ ನಲ್ಲಿ ಇದ್ದ ಸೂರ್ಯಸೇನ್, ಅದರ ನಿಧಾನಗತಿಯ ಹೋರಾಟದಿಂದ ಬೇಸತ್ತು, ಕ್ರಾಂತಿಯ ಮಾರ್ಗಕ್ಕೆ ಧಾವಿಸಿದ್ದ. ಶಾಲೆಯಲ್ಲಿ ಓದುತ್ತಿದ್ದ ೧೪-೧೫ ವರ್ಷದ  ಬಾಲಕರೇ ಅವನೊಟ್ಟಿಗೆ ಕೈಜೋಡಿಸಿದರು. ಲೋಕನಾಥ್ ಬಲ್, ಅನಂತ ಸಿಂಹ, ಗಣೇಶ್ ಘೋಷ್ ಮೊದಲಾದ ಸಾಹಸಿಗರ ಗುಂಪೇ "ಇಂಡಿಯನ್ ರಿಪಬ್ಲಿಕನ್ ಆರ್ಮಿ"ಯ ಹೆಸರಿನಲ್ಲಿ ಸಂಘಟಿತವಾಗಿತ್ತು. ಈ ಸಂಘಟನೆಯ ಬಗ್ಗೆ ತಿಳಿದಿದ್ದ ಕಲ್ಪನಾ, ತಾನೂ ಸಂಘಟನೆಯ ಭಾಗವಾಗಲು ಹುಮ್ಮಸ್ಸಿನಿಂದ ಕೇಳಿಕೊಂಡಳು. ಅದರ ಪರಿಣಾಮವಾಗಿ ಕಲ್ಪನಾ ಮತ್ತವಳ ಗೆಳತಿ ಪ್ರೀತಿಲತಾ ಭಾರತದ ಅಧ್ಯಾಯದಲ್ಲಿ ಒಂದು ಕ್ರಾಂತಿ ಸಂಘದ ಕಂಬಗಳಾದರು.

ಚಿತ್ತಗಾಂಗ್ ನಲ್ಲಿ ಮೆಟ್ರಿಕುಲೆಶನ್ ಮುಗಿಸಿದ್ದ ಕಲ್ಪನಾ, ಕಲ್ಕತ್ತಾದ ವಿಜ್ಞಾನ ಕಾಲೇಜಿನಲ್ಲಿ ಪದವಿಗಾಗಿ ಸೇರಿದ್ದಳು. ವಿಜ್ಞಾನದ ವಿದ್ಯಾರ್ಥಿಯೇ ಆಗಿದ್ದರಿಂದ ಬಾಂಬುಗಳ  ತಾಯಾರಿಗೆ ಬೇಕಾದ ರಾಸಾಯನಿಕಗಳ ತಿಳುವಳಿಕೆ,ಮಾಹಿತ ಸಂಪೂರ್ಣ ಅವಳಲ್ಲಿತ್ತು. ಅಲ್ಲದೆ ಆ ಎಲ್ಲ ಪದಾರ್ಥಗಳನ್ನೂ ಆಕೆ ಸಂಗ್ರಹಿಸಿ ಇಟ್ಟಿದ್ದಳು. ಸೋರ್ರ್ಯಸೇನ್ ತನ್ನ ಸಂಘಟನೆಯ ಮೂಲಕ ಇಡೀ ಚಿತ್ತಗಾಂಗ್ ಅನ್ನು ಸ್ವತಂತ್ರಗೊಳಿಸಲು ನಕ್ಷೆ ಸಿದ್ಧಪಡಿಸಿದ್ದ.

ಏಪ್ರಿಲ್ ೧೮ - ೧೯೩೦. ಎಲ್ಲರೂ ಅಂದು ಏಕಕಾಲಕ್ಕೆ, ನಿಗದಿಪಡಿಸಿದ ಜಾಗಗಳಿಂದ ದಂಗೆ ಏಳಲು ನಿರ್ಧರಿಸಲಾಗಿತ್ತು.ಗಣೇಶ್ ಘೊಶನ ತಂಡ ಪೊಲಿಸ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡರೆ, ಲೋಕನಾಥನ ತಂಡ 'ಅರೆಸೈನ್ಯ'ದ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿತು. ಅಂಬಿಕಾ ಚಕ್ರವರ್ತಿಯ ಜೊತೆಗಾರರು, ಚಿತ್ತಗಾಂಗ್ ಗೆ ಕೂಡುವ ಎಲ್ಲ ರೈಲ್ವೆ ಮಾರ್ಗವನ್ನು ಭಗ್ನಗೊಳಿಸಿದರು. ನಿರ್ಮಲ್ ಸೇನ್ ಟೆಲಿಗ್ರಾಫ್ ಸಂಪರ್ಕವನ್ನು ಕಡಿತಗೊಳಿಸಿದ. ಎಲ್ಲರೂ ಸೇರಿ ಭಾರತ ಧ್ವಜ ಹಾರಿಸಿ, ಚಿತ್ತಗಾಂಗ್ ಸ್ವತಂತ್ರವಾಗಿದೆ ಎಂದು ಘೋಷಿಸಿಯೇ ಬಿಟ್ಟರು.

ಎಲ್ಲವೂ ಪ್ಲಾನಿನಂತೆ ಆಗಿದ್ದರೆ, ಎಲ್ಲರೂ ಸೌಖ್ಯವಾಗಿರುತ್ತದ್ದರೆನೋ. ಆದರೆ ಅಲ್ಲೊಂದಿಷ್ಟು ಎಡವಟ್ಟುಗಳಾಗಿದ್ದವು. ಬಂದೂಕುಗಳನ್ನು ವಶ ಪಡಿಸಿಕೊಂಡ ಕ್ರಾಂತಿಕಾರಿಗಳಿಗೆ ಮದ್ದು-ಗುಂಡುಗಳು ಸಿಗಲೇ ಇಲ್ಲ. ಬ್ರಿಟಿಷರು ಬಂದೂಕು ಹಾಗು ಗುಂಡುಗಳನ್ನು ಬೇರೆ ಬೇರೆ ಜಾಗಗಳಲ್ಲಿಟ್ಟಿರುತ್ತಾರೆಂಬ ವಿಷಯ ನಮ್ಮವರಿಗೆ ಗೊತ್ತೇ ಇರಲಿಲ್ಲ. ಅಷ್ಟೇ ಅಲ್ಲ, ಅವತ್ತು ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡಿ ಅಲ್ಲಿನ ಬ್ರಿಟಿಷರನ್ನು ಸೆರೆ ಹಿಡಿದು, ಅವರು ಊರು ಬಿಟ್ಟು ಕದಲದಂತೆ ಮಾಡಬೇಕೆನ್ನುವ ತಯಾರಿಯೂ ಇತ್ತು. ಆದರೆ ಅವತ್ತು ಗುಡ್ ಫ್ರೈಡೆ ಆಗಿದ್ದರಿಂದ ಆಂಗ್ಲರಾರೂ ಕ್ಲಬ್ ನಲ್ಲಿ ಇರಲೇ ಇಲ್ಲ..!!
ಇಂತಹ ಕೆಲವು ಲೋಪಗಳಿಂದ ಬ್ರಿಟಿಷರಿಗೆ ಕ್ರಾಂತಿಯ ಸುದ್ದಿ ಹೋಯಿತು. ಕ್ರಾಂತಿಕಾರಿಗಳೂ ಓಡಿಹೋಗಿ ಜಲಾಲಾಬಾದ್ ನ ಗುಡ್ಡದಲ್ಲಿ ಅವಿತುಕೊಂಡರು. ೧೫ ವರ್ಷದ ಬಾಲಕರೆಲ್ಲಿ, ಆಧುನಿಕ ಶಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಆಂಗ್ಲ ಸೈನಿಕರೆಲ್ಲಿ. ಆ ಗುಡ್ಡದಲ್ಲಿ ಘೋರ ಕದನವೇ ನಡೆಯಿತು. ವಯಸ್ಸು ಸಣ್ಣದಿದ್ದರೂ , ರಾಷ್ಟ್ರಭಕ್ತಿಯ ಕೆಚ್ಚಿಗೆ ಎಂಥವರೂ ಕೊಚ್ಚಿಕೊಂಡು ಹೋಗುತ್ತಾರೆಂಬ ಸಂದೇಶ ಅವತ್ತು ಆ ಹುಡುಗರಿಂದ ಜಗಜ್ಜಾಹೀರಾಗಿತ್ತು. ಕೆಲವು ಬಾಲಕರು ಅಲ್ಲೇ ಆ ಹೋರಾಟದಲ್ಲೇ ಗುಂಡು ತಗುಲಿ ಹುತಾತ್ಮರಾದರು. ಉಳಿದವರು ತಲೆಮರೆಸಿಕೊಂಡರು.

ಸ್ವಲ್ಪ ಕಾಲದಲ್ಲಿಯೇ, ಲೋಕನಾಥ, ನಿರ್ಮಲ್ ಸೆನ್ ಎಲ್ಲರೂ ಸಿಕ್ಕರೂ. ಸೂರ್ಯಸೇನ್ ಮಾತ್ರ ಚಾಣಾಕ್ಷತೆಯಿಂದ ತಪ್ಪಿಸಿಕೊಂಡೆ ಇದ್ದ.


                             
ಕಲ್ಪನಾ ದತ್ತ

ಕಲ್ಪನಾ ಪ್ಲಾನಿನ ಪ್ರಕಾರ ಯೂರೋಪಿಯನ್ ಕ್ಲಬ್ ಮೇಲೆ ದಾಳಿ ಮಾಡುವ ಗುಂಪಿನ ಸದಸ್ಯೆಯಾಗಿದ್ದಳು. ಅದಕ್ಕಾಗಿ ಬಾಂಬಿನ ಸಹಕಾರವನ್ನು ನೀಡಿದ್ದಳು. ಬಂದೂಕನ್ನು ಪ್ರಯೋಗಿಸುವುದು ಆಕೆಗೆ ಕರಗತವಾಗಿತ್ತು. ಆದರೆ ದುರದೃಷ್ಟವೆಂಬಂತೆ ದಾಳಿ ನಡೆಯುವ ಒಂದು ವಾರದ ಹಿಂದೆಯೇ ರೈಲು ನಿಲ್ದಾಣದಲ್ಲಿ, ಪೊಲೀಸರು ತಪಾಸಣೆ ನಡೆಸುವಾಗ, ಆಕೆಯ ಬಳಿಯಿದ್ದ ಕ್ರಾಂತಿಯ ಕರಪತ್ರಗಳಿಂದ ಆಕೆ ಬಂಧನಕ್ಕೊಳಗಾಗಿಬಿಟ್ಟಳು. ಆಕೆಯ ತಂದೆ ದೊಡ್ಡ ಶ್ರೀಮಂತ ಹಾಗು ಪ್ರಭಾವಿ ವ್ಯಕ್ತಿಯಾಗಿದ್ದರಿಂದ, ಜಾಮೀನಿನ ಮೇಲೆ ಬಿಡುಗಡೆಯಾದಳು. ಆ ನಂತರ ಭೂಗತೆಯಾಗಿ, ಸೂರ್ಯಸೇನನೊಂದಿಗೆ ನಿರಂತರ ಅಲೆದಾಡುತ್ತಿದ್ದಳು. ಫೆಬ್ರವರಿ ೧೭, ೧೯೩೩ - ಹಾಗೊಂದು ಮನೆಯಲ್ಲಿ ತಲೆಮರೆಸಿಕೊಂಡಿದ್ದಾಗ, ಬ್ರಿಟಿಷರು ಆಕ್ರಮಿಸಿದರು. ಇಬ್ಬರ ನಡುವೆ ಸ್ವಲ್ಪ ಕಾದಾಟ ನಡೆದರೂ, ಸೂರ್ಯಸೇನನ ಬಳಿ ಅಷ್ಟೊಂದು ಮದ್ದುಗಳಿರಲಿಲ್ಲ. ಅಲ್ಲದೆ ಜೊತೆಗಿದ್ದ ಕೆಲವು ಹುಡುಗರಿಗೆ ಗುಂಡುಗಳು ತಗುಲಿದ್ದವು. ಅವರನ್ನು ಕಲ್ಪನಾಳ ಜೊತೆಗೆ ಕಳುಹಿಸಿ, ತಾನು ಬೇರೆ ದಿಕ್ಕಿನಲ್ಲಿ ಓಡಿದ. ಆದರೆ, ಸುತ್ತಲಿದ್ದ ಪೊಲೀಸರು ಅವನನ್ನು ಹಿಡಿದೇ ಬಿಟ್ಟರು. ಕಲ್ಪನಾ ಮತ್ತೆ ಭೂಗತಳಾದಳು.ಇತ್ತ, ವಿಚಾರಣೆ ನಡೆದು, ಸೂರ್ಯಸೇನ ಹಾಗು ತಾರಕೆಶ್ವರನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅತಿ ಕ್ರೂರವಾಗಿ ಸೂರ್ಯಸೆನನನ್ನು ಹಿಂಸಿಸಿ, ನೇಣಿಗೇರಿಸಲಾಯಿತು.

ಇದರ ನಡುವೆಯೇ, ತಪ್ಪಿಸಿಕೊಂಡಿದ್ದ ಕಲ್ಪನಾಳೂ ಸೆರೆಸಿಕ್ಕಿದ್ದಳು. ಕ್ರಾಂತಿಕಾರಿಗಳಿಗೆ ಸಹಾಯ ಮಾಡಿ, ಆಂಗ್ಲಪ್ರಭುತ್ವದ ವಿರುದ್ಧ ದಂಗೆದ್ದ ಕಾರಣಕ್ಕೆ ಆಕೆಗೆ ಕಠಿಣ ಸಜೆಯನ್ನು ವಿಧಿಸಲಾಯಿತು.

೧೯೩೯ ರಲ್ಲಿ ಬಿಡುಗಡೆಯಾದ ಕಲ್ಪನಾ, ತನ್ನ ಓದನ್ನು ಪೂರ್ಣಗೊಳಿಸಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಯನ್ನು ಸೇರಿದಳು. ೧೯೪೩ ರಲ್ಲಿ ಪೂರ್ಣಚಂದ್ ಜೋಷಿ ಯನ್ನು ವಿವಾಹವಾದ ಕಲ್ಪನಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದಳು. ೧೯೯೫ ಫೆಬ್ರವರಿ ೮ ರಂದು, ಕಲ್ಕತ್ತಾದಲ್ಲಿ ಕಲ್ಪನಾ ಕೊನೆಯುಸಿರೆಳೆದಳು.

ಜುಲೈ ೨೭ - ಕಲ್ಪನಾಳ ಜನ್ಮದಿನ. ಯಾವ ಚಿತ್ತಗಾಂಗ್ ನ ಕ್ರಾಂತಿಯು ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ನಿಂತಿತೋ, ಆ ಬೃಹತ್ ಹೋರಾಟದ ಮುಖ್ಯ ಭಾಗವಾಗಿದ್ದವಳು ಈ ಕಲ್ಪನಾ. ಮನೆಯಲ್ಲಿ ಅಪಾರ ಶ್ರೀಮಂತಿಕೆಯಿದ್ದರೂ, ರಾಷ್ಟ್ರಕ್ಕಾಗಿ ತನ್ನದೂ ಒಂದು ಸೇವೆ ಸಲ್ಲಬೇಕೆಂಬ ಆಕಾಂಕ್ಷೆಯಿಂದ ಕ್ರಾಂತಿಯನ್ನು ಸೇರಿದ್ದವಳು.ಮದುವೆಯಾಗಿ, ಮನೆಯಲ್ಲೇ ಉಳಿದುಹೊಗುತ್ತಿದ್ದ ಆಗಿನ ಹೆಣ್ಣುಮಕ್ಕಳ ನಡುವೆ, ಧೈರ್ಯವಾಗಿ ಬಂದೂಕನ್ನು ಕೈಗೆತ್ತಿಕೊಂಡು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಳು. ಕೇವಲ ೨೦ ನೆ ವಯಸ್ಸಿನಲ್ಲೇ ಕ್ರಾಂತಿಗೆ ಧುಮುಕಿ, ಹತ್ತಾರು ಆಂಗ್ಲ ಸಿಪಾಯಿಗಳನ್ನು, ಬಂದೂಕಿನಿಂದ ಹೊಡೆದುರುಳಿಸಿದ ಧೀರಸ್ತ್ರೀ. ಭಾರತಿಯ ಮಕ್ಕಳಾರೂ ಅಬಲೆಯರಲ್ಲ ಎಂದು ಸಾರಿ ಹೇಳುವಂತೆ ಆಕೆ ಬದುಕಿದಳು. ಆ ಧೀಮಂತ ಹೆಣ್ಣಿನ ರಾಷ್ಟಭಕ್ತಿ ನಮ್ಮ ಪ್ರೇರಕಶಕ್ತಿಯಾಗಲಿ...

ವಂದೇ ಮಾತರಂ..!!




[ ಚಿತ್ರಕೃಪೆ -http://www.thehindu.com/todays-paper/tp-national/leafing-over-the-past/article4330572.ece ]

[ ಚಿತ್ತಗಾಂಗ್ ಹೋರಾಟದ ಪೂರ್ಣ ಮಾಹಿತಿಗೆ, ಈ ಲೇಖನಗಳನ್ನು ಓದಿ.

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 1
'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 2
'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3      ]
[ ಆಶುತೋಷ್ ಗೊವಾರಿಕರ್ ನಿರ್ದೇಶನದ "ಖೇಲೇ ಹಮ್ ಜೀ ಜಾನ್ ಸೆ" ಚಿತ್ರವೂ, ಇದೆ ಚಿತ್ತಗಾಂಗ್ ಹೋರಾಟದ ಮೇಲೆ ನಿರ್ಮಾಣವಾಗಿರುವ ಚಿತ್ರ. ಆಸಕ್ತರು ವೀಕ್ಷಿಸಬಹುದು. ]


Friday, 6 December 2013

"ನಾವು ಸತ್ತು, ದೇಶವನ್ನೆಬ್ಬಿಸೋಣ" ಎಂದಿದ್ದ ಆ 'ಹುಲಿ'..!!

ನನ್ನಲ್ಲಿ ದೇಶಭಕ್ತಿಯನ್ನು ಉಜ್ಜುಗಿಸಿದ ಅನೇಕ ಮಹಾನ್ ಕ್ರಾಂತಿಕಾರಿಗಳಲ್ಲಿ, 'ಜತೀನ್'ನದ್ದು ಮಹತ್ತರ ಪಾತ್ರ. ಬಂಗಾಳದ ಕ್ರಾಂತಿಕಾರಿಗಳ ಒಂದು ವೈಶಿಷ್ಟ್ಯವೆಂದರೆ, ಧರ್ಮದ ಮೂಲಕ ರಾಷ್ಟ್ರವನ್ನು, ರಾಷ್ಟ್ರದ ಮೂಲಕ ಧರ್ಮವನ್ನು ನೋಡುವ ಅವರ ದೃಷ್ಟಿ.ಅದು ವಿವೇಕಾನಂದರ, ಶ್ರೀಅರವಿಂದರ ಪ್ರಭಾವವೇ ಸರಿ...

"ಒಂದು ವೇಳೆ ಜತೀಂದ್ರನ ಯೋಜನೆಗಳು ಫಲಿಸಿದ್ದಿದ್ದರೆ, ಗಾಂಧೀಜಿಯ ಆಗಮನಕ್ಕಿಂತ ಮುಂಚೆಯೇ ಭಾರತ ಸ್ವಾತಂತ್ರವಾಗುತ್ತಿತ್ತು ಮತ್ತು ರಾಷ್ಟ್ರಪಿತನ ಸ್ಥಾನ ಜತೀಂದ್ರನಿಗೆ ಸಲ್ಲುತ್ತಿತ್ತು."
-- ಹೀಗಂತ ಬರೆದಿದ್ದು ಜೆಕ್ ಮೂಲದ, ಅಮೇರಿಕಾದ ಪತ್ರಕರ್ತ ರಾಸ್.ಹೆದ್ವಿಸೆಕ್..

ಇಷ್ಟಕ್ಕೂ, ಹೀಗೆ ಬರೆದಿದ್ದು ಉತ್ಪ್ರೆಕ್ಷೆಯೇನು ಅಲ್ಲ. ಜತೀಂದ್ರನ ಆಲೋಚನೆಗಳೇ ಹಾಗಿದ್ದವು.ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ನಿರಂತರ ತುಡಿತ, ಅದ್ಭುತ ಬುದ್ಧಿಶಕ್ತಿ, ಬಾಹುಬಲ ಇವೆಲ್ಲದರ ಸಂಗಮವಾಗಿದ್ದವನು ಅವನು. ಸುಭಾಶರಿಗಿಂತಲೂ ಮೊದಲೇ, ಅನ್ಯ ದೇಶಗಳ ಸಹಾಯ ಪಡೆದುಕೊಂಡು ಭಾರತದ ನೆಲದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೇಳುವ ಮಹತ್ ಸಾಹಸಕ್ಕೆ ಕೈಹಾಕಿದ ಧೀರ..!!
ಶ್ರೀ.ಬಾಬು ಕೃಷ್ಣಮೂರ್ತಿಯವರು, ಇದೆ ಜತೀಂದ್ರನ ಪೂರ್ಣ ಇತಿಹಾಸವನ್ನು, 'ರುಧಿರಾಭಿಷೇಕ'ದಲ್ಲಿ ಅದ್ಭುತವಾಗಿ ಲಿಖಿತಗೊಳಿಸಿದ್ದಾರೆ..ಆದರೂ, ಜತೀಂದ್ರನಂತಹ ಮೇರು ವ್ಯಕ್ತಿಯ ಬಗ್ಗೆ
ಸ್ವಲ್ಪವಾದರೂ ಬರೆಯುವುದರಿಂದ ನನ್ನ ಲೇಖನಿಗೂ ಪಾವಿತ್ರ್ಯತೆ ಸಿಕ್ಕೀತು ಎಂಬ ಭಾವವೇ ಈ ಬರಹಕ್ಕೆ ಪ್ರೇರಣೆ..!!
 
ಜತೀಂದ್ರ ವಿವೇಕಾನಂದರ ಆಶೀರ್ವಾದದೊಂದಿಗೆ, ಶ್ರೀಅರವಿಂದರ ಮಾರ್ಗದರ್ಶನದಲ್ಲಿ ಬೆಳೆದವನು. ಸಂಪೂರ್ಣ ಸಮಾಜಸೆವೆಯಲ್ಲಿಯೇ ತೊಡಗಿಸಿಕೊಂಡವನು ಈ ಜತೀನ್. ಬಾಲ್ಯದಲ್ಲಿ, ತಾಯಿ ಹೇಳುತ್ತಿದ್ದ ಮಹಾಭಾರತ,ರಾಮಾಯಣ, ಶಿವಾಜಿಯ ಚರಿತ್ರೆ ಇವನ್ನೆಲ್ಲ ಕೇಳಿ ಮಾನಸಿಕವಾಗಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿದ್ದ..ಶಿವಾಜಿಗೆ ತಾಯಿ ಭವಾನಿಯೇ ಬಂದು ಖಡ್ಗವನ್ನು ಕೊಟ್ಟ ಕಥೆಯನ್ನು ಕೇಳಿದ ಮೇಲಂತೂ, ತನಗೂ ಹಾಗೊಂದು ಖಡ್ಗ ಸಿಗಬಾರದೇ ಅಂತ ಹಂಬಲಿಸುತ್ತಿದ್ದ..ಒಮ್ಮೆ ಊರಿನ ಕಾಳಿಯ ಗುಡಿಯಲ್ಲಿ ಅಡ್ಡಾಡುವಾಗ, ಹರಕೆಗೆಂದು ಇಟ್ಟಿದ್ದ ಕೆಲವು ಕತ್ತಿಗಳು ಕಂಡವು. ತಾಯಿಯೇ ಅದನ್ನು ಅನುಗ್ರಹಿಸದಳೆಂದು ಅದರಲ್ಲಿನ ಒಂದನ್ನು ತಾನಿಟ್ಟುಕೊಂಡಿದ್ದ.

ಜತೀಂದ್ರನಿಗೆ 'ಬಾಘಾ ಜತೀನ್' ಎಂಬ ಹೆಸರೂ ಇದೆ. ಅದು ಬರಲು ಕಾರಣವೂ ಒಂದು ರೋಚಕ. ಜತೀನ್ ಇದ್ದದ್ದು ಕೋಯಾ ಎಂಬ ಹಳ್ಳಿಯಲ್ಲಿ. ಆಗೆಲ್ಲ ಒಂದು ಹಳ್ಳಿಯಿಂದ ಮತೂಂದು ಹಳ್ಳಿಗೆ ಹೋಗಲು ಕಾಲುನಡಿಗೆಯೇ ಇದ್ದದ್ದು. ಅದೂ ಕಾಡಿನ ದಾರಿಯ ಮಧ್ಯೆ. ಹೇಳಿ ಕೇಳಿ ಬಂಗಾಳದ ಪ್ರಾಂತ ಅದು. ಹುಲಿಗಳ ಪ್ರದೇಶ. ಇವನಿದ್ದ ಹಳ್ಳಿಯ ಸುತ್ತ ಒಂದು ಹುಲಿ ಆತಂಕ ಸೃಷ್ಟಿಸಿತ್ತು.ಅದೊಮ್ಮೆ, ಯಾವುದೇ ಕಾರ್ಯಕ್ಕೆ ಆ ಕಾಡಿನ ಮಾರ್ಗವಾಗಿ ಪಕ್ಕದ ಹಳ್ಳಿಗೆ ಹೋಗುವ ಅನಿವಾರ್ಯ ಸಂದರ್ಭ ಒದಗಿತು.ಅದೂ ರಾತ್ರಿಯಲ್ಲಿ. ಜತೀನ್ ತನ್ನ ಆ ಕತ್ತಿ, ಮತ್ತು ಅಂಚೆಪೇದೆ ಬಳಸುತ್ತಿದ್ದ ಗೆಜ್ಜೆಯ ಕೋಲನ್ನು ತೆಗೆದುಕೊಂಡು ಹೊರಟ.ಕಾಡಿನ ಮಧ್ಯೆ ಹೋಗುವಾಗ, ದೂರದಲ್ಲಿ ಎರಡು ಸಣ್ಣ ಮಿಣುಕು ದೀಪಗಳು ಕಂಡವು. ಯಾರೋ ದೀಪ ಹಚ್ಚಿಕೊಂಡು ಬರುತ್ತಿರಬೇಕೆಂದು ಭಾವಿಸಿದ.ಬರುಬರುತ್ತಾ ದೀಪ ಸಮೀಪ ಬಂದಂತೆ ಅನ್ನಿಸಿತು. ಪೂರ್ಣ ಹತ್ತಿರಕ್ಕೆ ಬಂದಾಗಲೇ ಅವನಿಗೆ ತಿಳಿದದ್ದು, ಅವು ದೀಪವಲ್ಲ, ಹುಲಿಯ ಕಣ್ಣುಗಳೆಂದು.!! ಎದುರಿಗೆ, ನರಭಕ್ಷಕ ಹುಲಿಯನ್ನು ಕಂಡವನಿಗೆ ಹೇಗಾಗಿರಬೇಡ.ಹುಲಿ ಅವನ ಮೇಲರಿಗಿತು.ಅವನೂ ಅದರ ಮೇಲೆ ಪ್ರಹಾರ ಮಾಡಿದ.. ಹುಲಿಯ ಪಂಜಿನ ಹೊಡೆತ ತಿಂದ ಮೇಲೆಯೂ ಕೊನೆಗೆ ಆ ಹುಲಿಯನ್ನು ಕೊಲ್ಲುವಲ್ಲಿ ಯಶಸ್ವಿಯಾದ.ಯಾರಿಂದಲೂ ಸಾಧ್ಯವಾಗದ ಹುಲಿಯ ಸಂಹಾರವನ್ನು ಜತೀಂದ್ರ ಮಾಡಿ ಮುಗಿಸಿದ್ದ. ಅಂದಿನಿಂದ 'ಬಾಘಾ ಜತೀನ್' ಎಂಬ ಬಿರುದು ಅಂಟಿಕೊಂಡಿತು..ನಂತರ, ಕಲ್ಕತ್ತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ವಾಮೀ ವಿವೇಕಾನಂದರ ದರ್ಶನವಾಯಿತು. ಅಲ್ಲಿಂದ ಅವನ ಜೀವನ ಸಂಪೂರ್ಣ ರಾಷ್ಟ್ರಮಯ..!

'ಆಲಿಪುರ ಬಾಂಬ್ ಪ್ರಕರಣ'ದ ನಂತರ, ಅರವಿಂದರ ಸಹೋದರ, ಬಾರೀಂದ್ರಕುಮಾರ್ ಘೋಷ್ ಶಿಕ್ಷೆಗೆ ಗುರಿಯಾದ ಮೇಲೆ, ಬಂಗಾಳದ "ಅನುಶೀಲನ ಸಮಿತಿ"ಯು, ಸಮರ್ಥ ನಾಯಕನಿಲ್ಲದೇ ಶಿಥಿಲವಾಗತೊಡಗಿತ್ತು. ಆಗ ಅರವಿಂದರ ಕಣ್ಣಿಗೆ ಬಿದ್ದವನೇ ಈ ಜತೀನ್. ತನ್ನ ಧೈರ್ಯ-ಸಾಹಸಗಳಿಂದ, ಅಪ್ರತಿಮ ದೇಶಭಕ್ತಿಯಿಂದ, ಎಲ್ಲರೊಡನೆ ಬೆರೆಯುವ ಸರಳತೆಯಿಂದ ಎಲ್ಲರಿಗೂ ಅಚ್ಚುಮೆಚ್ಚಿನವನಾದ್ದರಿಂದ, ಸಹಜವಾಗಿಯೇ ಉಳಿದೆಲ್ಲ ಯುವಕ್ರಾಂತಿಕಾರಿಗಳು, ಅವನ ನಾಯಕತ್ವಕ್ಕೆ ಸಮ್ಮತಿ ಸೂಚಿಸಿದರು.. ಜತೀನ್ ಒಬ್ಬ ಅತ್ಯುತ್ತಮ ಸಂಘಟನಾಕಾರ. ಅಲ್ಲೊಂದು ಛಾತ್ರಭಂಡಾರ ಅನ್ನೋ ಅಂಗಡಿ ಇತ್ತು. ಅದೇ ಈ ಕ್ರಾಂತಿಕಾರಿಗಳ training center.. ಅದು ನೋಡ್ಲಿಕ್ಕೆ ಒಂದು ಬಟ್ಟೆ ಅಂಗಡಿ, ಆದ್ರೆ ಅದರ ನೆಲಮಾಳಿಗೆಯಲ್ಲಿ ಪ್ರತಿನಿತ್ಯ ಕ್ರಾಂತಿಕಾರಿಗಳ ಸಭೆ ಸೇರ್ತಿತ್ತು. ಅಲ್ಲಿ ದಿನಾ ಉಪನ್ಯಾಸ ನೀಡುತ್ತಿದ್ದವನು ಈ ಜತೀನನೆ. ನಡೆಯುತ್ತಿದ್ದಿದ್ದು ಗೀತೆಯ ಉಪನ್ಯಾಸ. ಪ್ರತಿನಿತ್ಯ ಗೀತೆಯ ಶ್ಲೋಕಗಳನ್ನು ಮನನ ಮಾಡುತ್ತಾ, ಅದರ ಅರ್ಥವನ್ನು ರಾಷ್ಟ್ರೀಯವಾಗಿ ಮಾರ್ಪಡಿಸಿ, ಯುವಕರಲ್ಲಿ ದೇಶಭಕ್ತಿಯ ಕೆಚ್ಚನ್ನು ಮೂಡಿಸುವ ಚಾಕಚಕ್ಯತೆ ಜತೀನನಲ್ಲಿತ್ತು."ಆಮ್ರೋ ಮಾರ್ಬೋ, ಜಾತ ಜಾಗ್ಬೆ"-(ನಮ್ಮ ಆಹುತಿ, ರಾಷ್ಟದ ಜಾಗೃತಿ ) ಎಂಬ ಘೋಷಣೆಯನ್ನು ಸಹ ಕ್ರಾಂತಿಕಾರಿಗಳ ಮಂತ್ರವನ್ನಾಗಿಸಿದ್ದ. ಹೀಗೆ 'ಅನುಶೀಲನ ಸಮಿತಿ'ಯನ್ನು ಮತ್ತೆ ಕಟ್ಟಿ, ಒಂದುಗೊಡಿಸಿದ್ದು ಕ್ರಾಂತಿಕಾರಿಗಳಲ್ಲಿ ನವಚೈತನ್ಯವನ್ನು ಮೂಡಿಸಿತ್ತು..


ಅವು ಮೊದಲನೇ ಪ್ರಪಂಚದ ಮಹಾಯುದ್ಧದ ದಿನಗಳು. ಜರ್ಮನಿ ಮತ್ತು ಇಂಗ್ಲೆಂಡ್ ವಿರುದ್ಧ ಬಣಗಳಲ್ಲಿದ್ವು  ಅದೇ ಸಮಯವನ್ನು ಸದುಪಯೋಗಪಡಿಸಿಕೂಳಬೇಕೆಂದು ಜತೀನ್ ಒಂದು ಉಪಾಯ ಮಾಡಿದ. ಜರ್ಮನಿಯ ಕ್ರಾಂತಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಲ್ಲಿಂದ ಆಯುಧಗಳನ್ನು ಆಮದುಮಾಡಿಕೊಂಡು, ಭಾರತದಲ್ಲಿ ದೊಡ್ಡ ಸಶಸ್ತ್ರಕ್ರಾಂತಿಯನ್ನು ಮಾಡಬೇಕು ಅಂತ. ಅದಕ್ಕಾಗಿ 'ವೀರೇಂದ್ರನಾಥ್ ಚಟ್ಟೋಪಾಧ್ಯಾಯ ' ಎಂಬ ಕ್ರಾಂತಿಕಾರಿಯ ಮುಂದಾಳತ್ವದಲ್ಲಿ "ಬರ್ಲಿನ್ ಕಮಿಟಿ' ಯನ್ನು ಸ್ಥಾಪಿಸಿ, ಜರ್ಮನಿಗೆ ಕಳಿಸಿದ್ದೂ ಆಯಿತು. ಎಲ್ಲ ಮಾತುಕತೆ ನಡೆದು, ಇನ್ನೇನು ಶಸ್ತ್ರಗಳು ಭಾರತಕ್ಕೆ ಬರಬೇಕು ಅನ್ನುವಷ್ಟರಲ್ಲಿ, ಅದ್ಹೇಗೋ ಜತೀನನ ಈ master plan, ಜೆಕ್ ಕ್ರಾಂತಿಕಾರಿಗಳ ಮುಖಾಂತರ ಬ್ರಿಟಿಷರಿಗೆ ಗೊತ್ತಾಗಿಹೋಯಿತು. ತಕ್ಷಣ ಕಾರ್ಯಪ್ರವೃತ್ತರಾದ ಬ್ರಿಟಿಷರು, ಜತೀನನ ಮೇಲೆ, ಅವನ 'ಅನುಶೀಲನ ಸಮಿತಿ' ಹಾಗೂ ಅದರ ಅಂಗವಾದ 'ಯುಗಾಂತರ' ಸಂಘಟನೆಗಳ ಕಣ್ಣಿಡಲು ಶುರುಮಾಡಿದರು. ಇದರ ವಾಸನೆಯನ್ನು ಅರಿತ ಜತೀನ್ ಕೂಡಲೇ ಭೂಗತನಾಗಿಹೋದ. ಜೊತೆಗಿದ್ದ ರಾಸಬಿಹಾರಿ ಬೋಸ್ ಕೂಡ ಜಪಾನಿಗೆ ಹೋಗಿಬಿಟ್ಟಿದ್ರು. 
ಜತೀನ್ ಇದ್ದಿದ್ದು ಕಪ್ತಿಪಾಡಾ ಎಂಬಲ್ಲಿನ ಆಶ್ರಮದಲ್ಲಿ. ಕ್ರಾಂತಿಕಾರಿಗಳ ಮೇಲೆ ತೀವ್ರನಿಗಾ ಇಟ್ಟಿದ್ದ ಆಂಗ್ಲರು, ಬಾರಿಸೋಲ್ ನಗರದಲ್ಲಿನ "ಯುನಿವೆರ್ಸಲ್ ಎಂಪೋರಿಯಂ"ನ ಮೇಲೆ ದಾಳಿ ಮಾಡಿದಾಗ ಜತೀನನ ಬಗ್ಗೆ ಸುಳಿವು ಸಿಕ್ಕತು. ತಕ್ಷಣ ಕಪ್ತಿಪಾಡಾಕ್ಕೆ ಬ್ರಿಟಿಶ್ ಪಡೆ ಹೊರಟಿತು.ಕಪ್ತಿಪಾಡಾಕ್ಕೆ ಬ್ರಿಟಿಶ್ ಸೈನ್ಯ ಬರುತ್ತಿದೆ ಎಂಬ ಮಾಹಿತಿ ಸಿಕ್ಕಾಕ್ಷಣ ಪರಿಸ್ಥಿತಿಯ ವೈಷಮ್ಯವನ್ನು ತಿಳಿದ ಕೂಡಲೇ, ಜತೀನ್ ಅಲ್ಲಿದ್ದ ಕೆಲವರನ್ನು ಸೇರಿಸಿ ಸಭೆ ನಡೆಸಿದ. ರಾತ್ರೋರಾತ್ರಿ 'ತಲಿದಾಹಾ'ಕ್ಕೆ ತೆರಳಿದ ಜತೀನ್ ಅಲ್ಲಿ ಇನ್ನಿಬ್ಬರು ತನ್ನ ಗೆಳೆಯರನ್ನು ಕೂಡಿಸಿ ತಿರುಗಿ ಕಪ್ತಿಪಾಡಾಕ್ಕೆ ಬಂದ. ಈಗ ಅವನೊಟ್ಟಿಗಿದ್ದಿದ್ದು, ಪಟ್ಟ ಶಿಷ್ಯರಾದ, "ಚಿತ್ತಪ್ರಿಯರಾಯ್ ಚೌಧರಿ", "ಮನೋರಂಜನ್ ಸೇನಗುಪ್ತ", "ನೀರೆಂದ್ರ ದಾಸಗುಪ್ತ", ಮತ್ತು "ಜ್ಯೋತಿಶ್ ಚಂದ್ರ ಪಾಲ್".. ಮೌಸೆರ್ ಪಿಸ್ತೂಲ್, ಇನ್ನೊಂದಿಷ್ಟು ಆಯುಧಗಳನ್ನು ತೆಗೆದುಕೊಂಡು ಬಾರಿಸೋಲ್ ನತ್ತ ಹೊರಟರು.  ಆದರೆ ಅಲ್ಲಿಯೂ ಪರಿಸ್ಥಿತಿ ಸರಿಯಿರಲಿಲ್ಲ. ಕ್ರಾಂತಿಕಾರಿಗಳು ಡಕಾಯಿತರು ಎಂಬ ಭಾವನೆಯನ್ನು ಆಂಗ್ಲರು ಅಲ್ಲಿನ ಜನರಲ್ಲಿ ಬಿತ್ತಿದ್ದರಿಂದ ಜತೀನನಿಗೆ ಅಲ್ಲಿ ಕಷ್ಟವಾಗಿದ್ದರಿಂದ, ಅವರೆಲ್ಲ ಚಾಸಖಂದದ ಗುಡ್ಡಗಾಡಿನ ಪ್ರದೇಶಕ್ಕೆ ಹೊರಟರು. ದುರ್ದೈವದಿಂದ ಬ್ರಿಟಿಶ್ ಪಡೆ ಎಡೆಬಿಡದೆ ಜತೀನನನ್ನು ಬೆನ್ನಟ್ಟಿತ್ತು. ಚಾಸಖಂದದ ಗುಡ್ಡದ ಆಯಕಟ್ಟಿನ ಪ್ರದೇಶಗಳಲ್ಲಿ ಅಡಗಿ ಕುಳಿತರು ಜತೀನ್ ಮತ್ತು ಗೆಳೆಯರು, ಆಂಗ್ಲರನ್ನು ಕಾಯುತ್ತಾ....
ಗುಡ್ಡದ ಕೆಳಗೆ, ರುದರಫೋರ್ದ್ ಮತ್ತು ಕಿಲ್ಬಿಯ ಮುಂದಾಳತ್ವದಲ್ಲಿ ಬ್ರಿಟಿಷ ಪಡೆ ಬಂದು ನಿಂತಿತು.ಆಗ ಸೆಪ್ಟೆಂಬರ್ 9 ರ ಸಂಜೆ. ಬ್ರಿಟಿಷರ ಮತ್ತು ಜತೀನ್ ತಂಡದ ನಡುವೆ ಅಲ್ಲೊಂದು ಭೀಕರ ಕಾಳಗಕ್ಕೆ ಸಂಜೆಯ ಸೂರ್ಯ ಸಾಕ್ಷಿಯಾದ.ಹೋರಾಟದಲ್ಲಿ ಚಿತ್ತಪ್ರಿಯ ಹುತಾತ್ಮನಾಗಿಹೋದ. ಉಳಿದ ಮೂವರು ಮತ್ತು ಜತೀನ್ ಮೈಯೆಲ್ಲಾ ಗುಂಡೇಟಿನಿಂದ ಜರ್ಜ್ಹರಿತರಾಗಿ ಪ್ರಜ್ನೆತಪ್ಪಿದರು. ಕೂಡಲೇ ಆಸ್ಪತ್ರೆಗೆ ಅವರನ್ನು ಸಾಗಿಸಿ, ರಾತ್ರಿಯೇ ಶಸ್ತ್ರಚಿಕಿತ್ಸೆ ಮಾಡಿದರು. ಜತೀನ್ ಬದುಕುಳಿದ. 
ಬಾಘಾ ಜತೀನ್



ಅದು ಸೆಪ್ಟೆಂಬರ್ 10 ರ ಬೆಳಿಗ್ಗೆ. ಎಚ್ಚರಗೊಂಡಿದ್ದ ಜತೀನ್ ಮನಸ್ಸೆಲ್ಲ ತನ್ನ ಪೂರ್ಣ ಜೀವನದ ಅವಲೋಕನ ಮಾಡುತ್ತಿತ್ತು. ಆಗ ಅವನಕ್ಕ ವಿನೋದಬಾಲಾ ಹೇಳಿದ ಮಾತುಗಳು ನೆನಪಾದವು. ಎಂದಿಗೂ ಬ್ರಿಟಿಷರ ಗುಲಾಮನಾಗಿ ಬದುಕಬಾರದೆಂದು ಹೇಳಿಕೊಟ್ಟ ಸಾಲುಗಳು ಸ್ಮರಣೆಯಾದ ತಕ್ಷಣ, ಜತೀನ್ ಮೈಮೇಲಿದ್ದ ಬ್ಯಾಂಡೇಜ್ ಗಳನ್ನೆಲ್ಲ ಕಿತ್ತುಕೊಂಡುಬಿಟ್ಟ.. ಧಾರಾಕಾರವಾಗಿ ರಕ್ತ ಸುರಿಯಲಾರಂಭಿಸಿತು. ನೋಡುನೋಡುತ್ತಲೇ ಜತೀನನ ಪ್ರಾಣಪಕ್ಷಿ ಹಾರಿಹೋಗಿತ್ತು. ಜತೀನ್ ಭಾರತಮಾತೆಗೆ ಅಕ್ಷರಶಃ 'ರುಧಿರಾಭಿಷೇಕ' ಮಾಡಿ ಹುತಾತ್ಮನಾಗಿದ್ದ. ನಂತರ ಬಂದ ಆಂಗ್ಲ ಅಧಿಕಾರಿಗಳು ಆ ಸಂದರ್ಭಕ್ಕೆ ಮೂಕವಿಸ್ಮಿತರಾಗಿ ನಿಂತರಷ್ಟೇ..


ಮನೆಯಲ್ಲಿ ಮುದ್ದಾದ ಹೆಂಡತಿ, ಮಕ್ಕಳಿದ್ದರೂ, ಕೇವಲ ಸಂಸಾರಕ್ಕೆಂದು ಬದುಕದೆ, ಎಲ್ಲವನ್ನೂ ಬಿಟ್ಟು, ನೈಜ ರಾಷ್ಟ್ರಸನ್ಯಾಸಿಯಾಗಿ ನಾಡಿನ ಸ್ವಾತಂತ್ರ್ಯಕ್ಕಾಗಿ ತನ್ನ ಬಲಿದಾನ ಕೊಟ್ಟಿದ್ದ. 
ಇವತ್ತು ಅವನ ಹುಟ್ಟಿದ ದಿನ.! ನೆನಪಿಸಿಕೊಳ್ಳಲು ಈ ನೆಪ ಸಾಕಲ್ಲವೇ..!!


ವಂದೇ ಮಾತರಂ..!!

Wednesday, 4 December 2013

"ಭಾರತಮಾತಾ ಅಸೋಸಿಯೇಷನ್" ಎಂಬ ಆ ಸಂಘಟನೆ,.!!!

ಅವತ್ತು ಜೂನ್ ೧೭, ೧೯೧೧. ತಮಿಳುನಾಡಿನ ತೂತುಕುಡಿಯ(ಟುಟಿಕಾರಿನ್)  ಸಬ್-ಕಲೆಕ್ಟರ್ ಆಗಿದ್ದ ರಾಬರ್ಟ್.ಆಶ್ ನ ಹಣೆಬರಹ ಅಂದು ನೆಟ್ಟಗಿರಲಿಲ್ಲ ಅನ್ಸುತ್ತೆ. ಅವನು ರೈಲಿನಲ್ಲಿ ಸಂಚರಿಸುತ್ತಿದ್ದ. ರೈಲ್ ಗಾಡಿ 'ಮನಿಯಚಿ' ನಿಲ್ದಾಣದಲ್ಲಿ ನಿಂತಿತ್ತು. ಆಶ್ ಮೊದಲನೇ ದರ್ಜೆಯ ಬೋಗಿಯಲ್ಲಿ ಕುಳಿತಿದ್ದ. ಆತ ಹಾಗೆ ತನ್ನದೇ ಲಹರಿಯಲ್ಲಿ ವಿಚಾರಮಗ್ನನಾಗಿದ್ದ. ನೋಡುನೋಡುತ್ತಲೇ  ೨೫ ರ ಹರೆಯದ ತರುಣನೊಬ್ಬ ಧಿಡೀರನೆ ಬೋಗಿಯೊಳಗೆ ನುಗ್ಗಿದ. ಏನಾಗುತ್ತಿದೆ ಎಂದು ಕಣ್ತೆರೆಯುವಷ್ಟರಲ್ಲಿ, ಆ ಯುವಕ ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಪಿಸ್ತೂಲನ್ನು ತೆಗೆದು, ಆಶ್ ಗೆ ಗುರಿಯಿಟ್ಟು ಗುಂಡು ಹೊಡೆದ. ಪಾಯಿಂಟ್-ಬ್ಲಾಂಕ್ ರೇಂಜ್ ನಲ್ಲಿ ಬಂದ ಗುಂಡು ಆಶ್ ನ ಪ್ರಾಣವನ್ನು ಥಟ್ಟನೆ ತೆಗೆಯಿತು. ಆಶ್ ಧರೆಗುರುಳಿದ.
ಇದ್ದಕ್ಕಿದ್ದಂತೆ ಸ್ಟೇಷನ್ ತುಂಬಾ ಜನರ ಕೋಲಾಹಲ. ಜನ ಅತ್ತಿತ್ತ ಚೆಲ್ಲಾಪಿಲ್ಲಿಯಾಗಿ ಓಡಾಡಲು ಶುರುಮಾಡಿದರು. ಗುಂಡು ಹೊಡೆದ ಯುವಕ ಒಂದೆರಡು ನಿಮಿಷ ಅಲ್ಲೇ ನಿಂತು, ಆಶ್ ನ ಪ್ರಾಣ ಹೋಗಿದ್ದನ್ನು ಖಾತ್ರಿ ಮಾಡಿಕೊಂಡು ನಂತರ ನಿರ್ಭೀತನಾಗಿ, ಬೋಗಿಯಿಂದ ಕೆಳಗಿಳಿದ. ಇಳಿದವನೇ ನಿಲ್ದಾಣದ ಶೌಚಾಲಯಕ್ಕೆ ಹೋಗಿ, ತನ್ನದೇ ಪಿಸ್ತೂಲಿನಿಂದ ತನ್ನ ಬಾಯಿಯಲ್ಲಿ ತಾನೇ ಗುಂಡು ಹೊಡೆದುಕೊಂಡು ಹುತಾತ್ಮನಾಗಿಯೇ ಬಿಟ್ಟ. ರಕ್ತದ ಮಡುವಿನಲ್ಲಿ ಬಿದ್ದಿದ್ದ  ಅವನ ಶವವನ್ನು ನಂತರ ಪೊಲೀಸರು ತೆಗೆದುಕೊಂಡು ಹೋಗಿ ವಿಚಾರಣೆ ನಡೆಸಲು ಪ್ರಾರಂಭಿಸಿದರು..ಅವನ ಶವದ ಜೊತೆಗೆ ಒಂದು ಪತ್ರವೂ ಪೊಲೀಸರಿಗೆ ಸಿಕ್ಕಿತು.
 "ನಮ್ಮೀ ಭಾರತ ದೇಶಕ್ಕೆ ಶತ್ರುವಾದ ಆಂಗ್ಲರನ್ನು ಹೊರಗೋಡಿಸಿ, ಮತ್ತೆ ಪವಿತ್ರ ಭಾರತವನ್ನು ಸ್ಥಾಪಿಸಲು ಪ್ರಯೊಬ್ಬ ಭಾರತೀಯನೂ ಹೋರಾಡುತ್ತಿದ್ದಾನೆ..ಅದಕ್ಕಾಗಿ ಸುಮಾರು ೩೦೦೦ ಮದ್ರಾಸಿಗರು ಶಪಥ ಮಾಡಿದ್ದಾರೆ. ಅದನ್ನು ಎಲ್ಲರಿಗೂ ತಿಳಿಸಲೆಂದೇ ನಾನು ಈ ಕಾರ್ಯವನ್ನು ಮಾಡಿದ್ದೇನೆ." ಎಂಬ ಬರಹ ಅದರಲ್ಲಿತ್ತು..!!

ಅವನ ಹೆಸರು "ವಾಂಚಿನಾಥ್ ಅಯ್ಯರ್". ತಿರುವನ್ಲ್ವೇಲಿ ಜಿಲ್ಲೆಯ ಸೆಂಗೊತ್ತೈ ಊರಿನವನು. ಆಗ ಅದು ಟ್ರಾವನ್ಕೋರ್ ಸಂಸ್ಥಾನದ ಅಡಿಯಲ್ಲಿತ್ತು.ಅವನು ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ.ಮದುವೆಯೂ ಆಗಿತ್ತು.ಸರ್ಕಾರಿ ಹುದ್ದೆಯಲ್ಲಿ ನೌಕರಿ ಮಾಡುತ್ತಿದ್ದ. ಹೀಗೆ ತನ್ನ ಬದುಕು ಸಾಗಿಸುತ್ತಿದ್ದ ಇವನ ಮೇಲೆ ಅಪಾರ ಪ್ರಭಾವ ಬೀರಿದ್ದು "ದಕ್ಷಿಣ ಭಾರತದ ಸಿಂಹ" ಎಂದು ಖ್ಯಾತಿ ಹೊಂದಿದ್ದ ಬಿಪಿನ್ ಚಂದ್ರ ಪಾಲರು. ಪಾಲರ ಅನೇಕ ಭಾಷಣಗಳನ್ನು ಕೇಳಿ ವಾಂಚಿ ಉದ್ದೀಪಿತನಾಗಿದ್ದ. ಈ ಪಾಲರ ಜೊತೆಗೆ ಇನ್ನೊಬ್ಬ ದೇಶಪ್ರೇಮಿಯೋಬ್ಬರು ಕೈಗೂಡಿಸಿದ್ದರು. ವಿ.ಓ.ಚಿದಂಬರಂ ಪಿಳ್ಳೈ. ಸಶಸ್ತ್ರ ಕ್ರಾಂತಿಯಿಂದಲೇ ಸ್ವಾತಂತ್ರ್ಯವೆಂದು ನಂಬಿದ್ದ ಪಿಳ್ಳೈ, ಶಸ್ತ್ರಗಳ ತಯಾರಿಕೆಗೆ ಸಹಾಯ ಮಾಡ್ತಿದ್ರು. ಅಲ್ಲದೆ ಬ್ರಿಟಿಷರಿಗೆ ಸೆಡ್ಡು ಹೊಡೆಯಲು ತಮ್ಮದೇ ಆದ "ಸ್ವದೇಶೀ ನೇವಿಗೇಶನ್" ಎಂಬ ಸ್ವತಂತ್ರ ಹಡಗು ಸಂಸ್ಥೆಯನ್ನೂ ಸ್ಥಾಪಿಸಿದ್ದರು.
ವಾಂಚಿನಾಥ್ ಅಯ್ಯರ್

ಪಿಳ್ಳೈ ಅವರ ಇಷ್ಟೆಲ್ಲಾ ಕಾರ್ಯಗಳನ್ನು ನೋಡಿಕೊಂಡು ಆಂಗ್ಲರಿಗೆ ಸುಮ್ಮನಿರಲಾಗಲಿಲ್ಲ. ಇವರನ್ನು ಹತ್ತಿಕ್ಕಲೆಂದೇ ಕಲೆಕ್ಟರ್ ಆಶ್ ವಿಶೇಷ ಮುತುವರ್ಜಿ ವಹಿಸಿದ್ದ. ಪಿಳ್ಳೈ ಅವರ ಮೇಲೆ ಅನೇಕ ಕೇಸ್ ಗಳನ್ನು ಹಾಕಿದ. ಅವರ ನೇವಿಗೇಶನ್ ಸಂಸ್ಥೆಯನ್ನೂ ಮುಳುಗಿಸಿಬಿಟ್ಟ.ಇದಕ್ಕಾಗಿ ತನ್ನ ಮೇಲಧಿಕಾರಿಗಳ  ಶಹಬ್ಬಾಸನ್ನೂ ಪಡೆದಿದ್ದ.ಇವೆಲ್ಲ ಕಾರಣಗಳಿಗಾಗಿ, ಆಶ್ ಅಲ್ಲಿನ ಯುವಕರ ಕೆಂಗಣ್ಣಿಗೆ ಗುರಿಯಾಗಿದ್ದ. ಪಿಳ್ಳೈ ಅಂತಹ ವ್ಯಕ್ತಿಯನ್ನು ಮುಳುಗಿಸಿದ, ಆಶ್ ನನ್ನೂ ಮುಗಿಸಬೇಕೆಂಬ ಭಾವನೆ ಎಲ್ಲರಲ್ಲೂ ಕೆಂಡದಂತೆ ಜ್ವಲಿಸುತ್ತಿತ್ತು. ಇಷ್ಟಕ್ಕೂ ಆಶ್ ಸ್ವಭಾವತಃ ಆಗಿಯೂ ಸಜ್ಜನನೇನೂ ಇರಲಿಲ್ಲ. ಕ್ಷಣಕ್ಷಣಕ್ಕೂ ಭಾರತೀಯರನ್ನು ದ್ವೇಷಿಸುತ್ತಿದ್ದ ವ್ಯಕ್ತಿ ಆತ. ಭಾರತೀಯರನ್ನು ಸದೆಬಡಿಯುವ ಯಾವ ಅವಕಾಶವನ್ನೂ ತಪ್ಪಿಸಿಕೊಂಡವನಲ್ಲ.  ಹೀಗಾಗಿ ಅವನ ಹತ್ಯೆ ಅನಿವಾರ್ಯವಾಗಿತ್ತು.!

*********************************************************************************
ನೀಲಕಂಠ ಬ್ರಹ್ಮಚಾರಿ ( ಸದ್ಗುರು ಓಂಕಾರ್)


ವಾಂಚಿ ಹುತಾತ್ಮನಾದ ಮೇಲೆ, ಅವನ ಮನೆಯನ್ನು ತಡಕಾಡಿದ ಪೊಲೀಸರಿಗೆ ಇನ್ನಷ್ಟು ಮಾಹಿತಿಗಳೂ ದೊರಕಿದವು. ಅಲ್ಲದೆ ವಾಂಚಿಯ ಜೊತೆಗೆ ನಿಕಟ ಸಂಬಂಧ ಹೊಂದಿದ್ದ ಅರುಮುಘಂ ಪಿಳ್ಳೈ ನನ್ನು ಬಂಧಿಸಲಾಯಿತು. ಅವನು ತನ್ನ ತಪ್ಪೊಪ್ಪಿಕೊಂಡು ಅಪ್ರೂವರ್ ಆಗಿಬಿಟ್ಟ. ಅವನ ಮೂಲಕ ಈ ಆಶ್ ನ ಕೊಲೆಯ ಸಂಪೂರ್ಣ ರೂಪುರೇಷೆ ಪೊಲೀಸರಿಗೆ ಗೊತ್ತಾಗಿಹೋಯಿತು.ಹೀಗಾಗಿ ಸಂಬಂಧಪಟ್ಟ ವ್ಯಕ್ತಿಗಳ ಶೋಧನೆಯಲ್ಲಿ ಪೊಲೀಸರು ತೊಡಗಿದರು.ಅಂತೂ ಕೊನೆಗೆ,
ಒಟ್ಟು ೧೪ ಮಂದಿಯನ್ನು ಪೊಲೀಸರು ಬಂಧಿಸಿದರು.
೧)ನೀಲಕಂಠ ಬ್ರಹ್ಮಚಾರಿ,
೨)ಶಂಕರಕೃಷ್ಣ ಅಯ್ಯರ್ (ವಾಂಚಿ ಅಯ್ಯರ್ ನ ಸಂಬಂಧಿ. ಆಶ್ ನ ಹತ್ಯೆಯಲ್ಲಿ ಇವನೂ ಭಾಗಿಯಾಗಿದ್ದ.)
೩)ಎಂ.ಚಿದಂಬರಂ ಪಿಳ್ಳೈ
೪)ಮುತ್ತುಕುಮಾರಸ್ವಾಮಿ ಪಿಳ್ಳೈ
೫)ಸುಬ್ಬಯ್ಯ ಪಿಳ್ಳೈ
೬)ಜಗನ್ನಾಥ ಅಯ್ಯಂಗಾರ್
೭)ಹರಿಹರ ಅಯ್ಯರ್
೮)ಬಾಪು ಪಿಳ್ಳೈ
೯)ದೆಶಿಕಾಚಾರಿ
೧೦)ವೆಂಬು ಪಿಳ್ಳೈ
೧೧)ಸವಡಿ ಅರುಣಾಚಲಂ ಪಿಳ್ಳೈ
೧೨)ಅಳಗಪ್ಪ ಪಿಳ್ಳೈ
೧೩)ಸುಬ್ರಹ್ಮಣ್ಯ ಅಯ್ಯರ್
೧೪)ಪಿಚುಮಣಿ ಅಯ್ಯರ್
ಈ ಎಲ್ಲರನ್ನೂ ಮದ್ರಾಸಿನ ಹೈಕೋರ್ಟ್ ಗೆ ಹಾಜರಿ ಪಡಿಸಲಾಯಿತು. ತ್ರಿಸದಸ್ಯ ಪೀಠದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲು ಪ್ರಾರಂಭವಾಯಿತು..


***********************************************************************************

ಆಶ್ ನ ಹತ್ಯೆಯ ಮೂಲ ಸೂತ್ರಧಾರನೇ 'ನೀಲಕಂಠ ಬ್ರಹ್ಮಚಾರಿ'. ನೀಲಕಂಠ ಮೊದಲಿನಿದಲೂ ರಾಷ್ಟ್ರದ ಸ್ವಾತಂತ್ರ್ಯದ ಕನಸು ಕಾಣುತ್ತಿದ್ದ ವ್ಯಕ್ತಿ. ಆಗ ದಕ್ಷಿಣದಲ್ಲಿ ಕ್ರಾಂತಿಕಾರಿಗಳಿಗೆ ಹೇಳಿ ಮಾಡಿಸಿದ ಜಾಗವೆಂದರೆ 'ಪಾಂಡಿಚೆರಿ'. ಫ್ರೆಂಚರ ತಾಣವಾಗಿದ್ದ ಇದೆ ಪಾಂಡಿಚೆರಿಯೇ ಅರವಿಂದ ಘೋಷ್, ವಿ.ವಿ.ಎಸ್.ಅಯ್ಯರ್, ಮಹಾಕವಿ ಸುಬ್ರಹ್ಮಣ್ಯ ಅಯ್ಯರ್ ಇಂತಹ ಅದ್ಭುತ ರಾಷ್ಟ್ರಪ್ರೇಮಿಗಳ ಆವಾಸವಾಗಿತ್ತು. ನೀಲಕಂಠನೋ ಇಲ್ಲೆಯೆ ಅಸ್ಶ್ರಾಯ ಪಡೆದಿದ್ದು. ಪತ್ರಿಕೋದ್ಯಮಿ ಆಗಿದ್ದ ಇವನು ಬ್ರಿಟಿಷರ ವಿರುದ್ಧ "ಸೂರ್ಯೋದಯ"ವೆಂಬ ಪತ್ರಿಕೆ ಹೊರತರುತ್ತಿದ್ದ. ಆಂಗ್ಲರ ದುಷ್ಕೃತ್ಯಗಳು, ಭಾರತದ ಸ್ವಾತಂತ್ರ್ಯ ಮುಂತಾದ ವಿಚಾರಗಳ ಬಗ್ಗೆ ಅದ್ಭುತ ಬರಹಗಳನ್ನು ಬರೆಯುತ್ತಿದ್ದ..ಇವನ ಎಲ್ಲ ಕಾರ್ಯಗಳಲ್ಲೂ ಶಂಕರಕೃಷ್ಣ ಅಯ್ಯರ್ ಮುಂದಿರುತ್ತಿದ್ದ.

ಆಶ್ ನ ಹೇಯ ಕೃತ್ಯಗಳಿಂದ ತಪ್ತನಾಗಿದ್ದ  ವಾಂಚಿಗೆ  ಹೆಗಲಾಗಿದ್ದು "ಭಾರತಮಾತಾ ಅಸೋಸಿಯೇಷನ್" ಎಂಬ ಸಂಸ್ಥೆ. ದಕ್ಷಿಣ ಭಾರತದ ಕೆಲವೇ ಕೆಲವು ಕ್ರಾಂತಿಕಾರಿ ಸಂಘಟನೆಗಳಲ್ಲಿ ಇದೂ ಒಂದು. ಅದೇ ನೀಲಕಂಠನಿಂದ  ಪ್ರಾರಂಭವಾದ ಈ ಸಂಸ್ಥೆ, ಸಶಸ್ತ್ರ ಕ್ರಾಂತಿಗಾಗಿ ಯುವಕರನ್ನು ತರಬೇತಿಗೊಳಿಸುತ್ತಿತ್ತು. ಈ ಸಂಸ್ಥೆಯ ಜೊತೆಗೂಡಿದ ವಾಂಚಿ ಹಿಂತಿರುಗಿ ನೋಡಲಿಲ್ಲ. ೧೯೧೦ ಡಿಸೆಂಬರ್ ನಲ್ಲಿ ಪ್ಯಾರಿಸ್ ನಿಂದ ಬಂದ ವಿ.ವಿ.ಎಸ್.ಅಯ್ಯರ್ ಯುವಕರಿಗೆ ಗುಂಡು ಹೊಡೆಯುವ ತರಬೇತಿ ಶುರು ಮಾಡಿದರು.. ಅಲ್ಲಿಂದ ಆಶ್ ನ ಹತ್ಯೆಯ ನಕ್ಷೆ ಸಿದ್ಧವಾಯಿತು. ವಸ್ತುತಃ ಜೂನ್ ೧೧ ರಂದೇ ಆಶ್ ನನ್ನು ಕೊಲ್ಲಬೇಕೆಂಬ ನಿರ್ಧಾರವಾಗಿತ್ತು. ಯಾಕಂದ್ರೆ ಅವತ್ತು ಇಂಗ್ಲೆಂಡ್ ನಲ್ಲಿ ಐದನೇ ಜಾರ್ಜ್ ನ ಪಟ್ಟಾಭಿಷೇಕ ನಡೆಯುತ್ತಿತ್ತು. ಅಲ್ಲಿನ ಆಂಗ್ಲರಿಗೆ ಬಿಸಿ ಮುಟ್ಟಿಸಲು ಇದೆ ಸರಿಯಾದ ದಿನವೆಂದು ಹಾಗೆ ನಿರ್ಧರಿಸಿದ್ದರು. ಆದರೆ ಅವತ್ತು ಆಶ್ ಎಲ್ಲಿಯೂ ಕಾಣಲೇ ಇಲ್ಲ. ಹೀಗಾಗಿ ಅವತ್ತು ಮೃತ್ಯುವಿನಿಂದ ತಪ್ಪಿಸಿಕೊಂಡ..
ಆದರೆ ಹಠ ಬಿಡದ ವಾಂಚಿ ಮುಂದಿನ ವಾರದಲ್ಲೇ ಅವನ ಸಂಹಾರ ಮಾಡಿ, ತಾನೂ ಹುತಾತ್ಮನಾಗಿದ್ದ.

ನ್ಯಾಯಾಲಯದಲ್ಲಿ ದೀರ್ಘ ವಿಚಾರಣೆ ನಡೆಯಿತು. ಆದರೆ ವಾಂಚಿ ಅದಾಗಲೇ ಮೃತನಾದ್ದರಿಂದ, ಹಾಜರುಪಡಿಸಿದ ೧೪ ಆರೋಪಿಗಳ ಮೇಲೆ ನೇರವಾಗಿ ಕೊಲೆಯ ಆರೋಪ ಹೊರಿಸಲು ಯಾವ ಸಾಕ್ಷ್ಯಗಳೂ ಸಿಗಲೇ ಇಲ್ಲ. ಆದರೂ, ಆಂಗ್ಲ ಪ್ರಭುತ್ವದ ವಿರುದ್ಧ ದಂಗೆದ್ದ ಕಾರಣಕ್ಕೆ ಶಿಕ್ಷೆ ವಿಧಿಸಲಾಯಿತು. ನೀಲಕಂಠನಿಗೆ ಏಳು ವರ್ಷಗಳ ಕಠಿಣ ಕಾರಾಗೃಹವಾಸ ವಿಧಿಸಿದರು..!

ಜೈಲಿನಿಂದ ಹೊರಬಂದ ನೀಲಕಂಠನ ಮನಸ್ಸು ಅಧ್ಯಾತ್ಮದತ್ತ ಹೊರಳಿತ್ತು. ಥೇಟ್ ನಮ್ಮ ಅರವಿಂದರ ಹಾಗೆ. ನೀಲಕಂಠ ಸದ್ಗುರು ಓಂಕಾರ ಎಂಬ ಹೆಸರಿನೊಂದಿಗೆ ಸನ್ಯಾಸಿಯಾದ. ಆಧ್ಯಾತ್ಮದಲ್ಲೇ ಭಾರತವನ್ನು ಅನವರತ ಧ್ಯಾನಿಸುತ್ತಿದ್ದ.!!

ಡಿಸೆಂಬರ್ ೪, ಆ ನೀಲಕಂಠ ಹುಟ್ಟಿದ ದಿನ.. ದಕ್ಷಿಣ ಭಾರತದ ಏಕೈಕ ಹುತಾತ್ಮನನ್ನು ಹುಟ್ಟುಹಾಕಿದ ಕೀರ್ತಿ ನೀಲಕಂಠನದ್ದು.ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ವಾಜದಿಂದ ರಾಷ್ಟ್ರವನ್ನು ಪ್ರೀತಿಸಿದ, ಅದಕ್ಕಾಗಿ ಎಲ್ಲ ಕಷ್ಟಗಳನ್ನೂ ಸ್ವೀಕರಿಸಿದ ಇಂತಹ ವೀರರು ನಮಗೆ ಆದರ್ಶವಾಗಿರಲಿ. ಬಹುತೇಕ ಎಲ್ಲ ಪಠ್ಯಗಳಿಂದ, ಜನರ ಮಾನಸದಿಂದ ಮರೆಯಾಗಿ ಹೋದ ಇವರನ್ನು ಕಡೆಪಕ್ಷ ನಾವಾದರೂ ನೆನೆಯೋಣ..

ವಂದೇ ಮಾತರಂ..!!

Friday, 6 September 2013

ಗಣಾನಾಂ ತ್ವಾ ಗಣಪತಿಂ...!!!

ಇದೊಂಥರಾ ಸಮೂಹಸನ್ನಿ ಇದ್ದಂತೆ.. ಮನೆ ಎದುರಿಗೆ ಡೊಳ್ಳು ಬಾರಿಸುತ್ತಿದ್ದರೆ, ಎಲ್ಲರ ಜೊತೆಗೆ ನಮಗೂ ಕುಣಿಯುವ ಹಂಬಲವಾಗುವುದಿಲ್ಲವೇ..!.. ಹಾಗೆಯೇ ಈ ಲೇಖನವೂ.. ದಿನನಿತ್ಯ ಈ ಗಣಪತಿಯ, ಅವನ ಪುಸ್ತಕದ ಕುರಿತಾದ ಹತ್ತು ಹಲವು ಲೇಖನಗಳನ್ನು ಓದಿ, ನನ್ನದೂ ಈ ವಿಷಯದಲ್ಲಿ ಅಭಿಪ್ರಾಯಗಳೆದ್ದು ಇಲ್ಲಿ ಬರೆಯಲಾಗಿವೆ..!!

ನೈತಿಕವಾಗಿ ಹೇಳೋದಾದ್ರೆ, ಈ ವಿವಾದಿತ ಪುಸ್ತಕವನ್ನು ಓದದೆಯೇ ಅದರ ವಿಮರ್ಶೆ ಮಾಡುವುದು ಮೂರ್ಖತನವೇ ಆಗುತ್ತದೆ.. ಹೀಗಾಗಿ ನಾನು ಆ ಪುಸ್ತಕದ ವಿಷಯವಾಗಿ ಭಾವಾವೇಶದಿಂದ ಮಾತನಾಡಲಾರೆ.. ಇನ್ನು ಈ ಪುಸ್ತಕದ ನಿಷೆಧವೂ ಅಪ್ರಸ್ತುತ. ಓದಲು ಪುಸ್ತಕವೇ ಇಲ್ಲದಿದ್ದರೆ, ಅದರ ಸತ್ಯಾಸತ್ಯತೆ ತಿಳಿಯುವುದಾದರೂ ಹೇಗೆ.? 
ಹಾಗಿದ್ದರೂ ಯಾವ ಆಧಾರದಲ್ಲಿ ಈ ಲೇಖನ ಹೊರಟಿದೆ ಎಂದರೆ, ಆ ಪುಸ್ತಕವನ್ನು ಓದಿದ ಸಾಹಿತಿಗಳು ಅದರಲ್ಲೇನಿದೆ ಎಂಬ ಅಂಶಗಳನ್ನು ಹೇಳಿದ್ದಾರಲ್ಲ, ಆ ಅಂಶಗಳ ಬಗ್ಗೆ ತಾರ್ಕಿಕವಾಗಿರುವ ವಾದವಷ್ಟೇ.!





Once again ಈ ಎಲ್ಲ ಕಥಾಹಂದರಕ್ಕೆ ಮೂಲವಾಗಿರುವುದು ಆರ್ಯ-ಅನಾರ್ಯ ಸಿದ್ಧಾಂತ.. ಗಣೇಶ ಅನಾರ್ಯ(ದ್ರವಿಡ) ನಾಗಿದ್ದು ಆನಂತರ ಆರ್ಯರ ಬೇಡಿಕೆಯಂತೆ ಪೂಜಿಸಲ್ಪಡುವ ದೇವತೆಯಾದ ಎಂಬುದು ಪುಸ್ತಕದ ಆಶಯ.. ಆಶ್ಚರ್ಯ ಅಂದ್ರೆ ಇಲ್ಲಿ ಗಣೇಶನ ಜೊತೆ ಶಿವ,ಪಾರ್ವತಿ ಹೀಗೆ ಸಿಕ್ಕವರನ್ನೆಲ್ಲಾ ಅನಾರ್ಯರೆಂದು ಹೇಳಲಾಗಿದೆ. ಮೂಲವಾಗಿ, ಈ ಆರ್ಯ-ದ್ರವಿಡ ಸಿದ್ಧಾಂತವೇ ಬುಡವಿಲ್ಲದ ಗಿಡದಂತಿರುವಾಗ, ಈ ಶಿವ,ಗಣೇಶ ಅನಾರ್ಯರಾದದ್ದು ಯಾವಾಗ.?

ಅಸಲಿಗೆ ಸಂಶೋಧನೆ ಅಂದರೇನು.? ಯಾವುದಾದರೂ ದೃಢವಾದ ಆಧಾರದ ಮೇಲೆ ವಿಭಿನ್ನ ಚರ್ಚೆಯಾಗುವ ಅವಕಾಶವಿದ್ದಲ್ಲಿ ಸಂಶೋಧನೆಗೆ ಜಾಗವಿದೆ. ಜೋಕಾಲಿ ಆಡುವವನು ಗಟ್ಟಿಯಾದ  ಹುಣಸೆಮರಕ್ಕೆ ಜೋಕಾಲಿ ಕಟ್ಟಿದರೆ ಅದು ಗಟ್ಟಿಯಾಗಿ ನಿಲ್ಲುತ್ತದೆ, ಬದಲಿಗೆ ಟೊಳ್ಳಾದ ನುಗ್ಗೆಮರಕ್ಕೆ ಜೋಕಾಲಿ ಕಟ್ಟಿದರೆ, ಜೋಕಾಲಿಯ ಜೊತೆಗೆ ಅವನೂ ಕೆಳಕ್ಕೆ ಬೀಳುವುದಿಲ್ಲವೇನು.!     ಹಾಗೆಯೇ ದೃಢವೇ ಅಲ್ಲದ ಕಪೋಲಕಲ್ಪಿತವಾದ ಈ ಆರ್ಯ-ದ್ರವಿಡ ಸಿದ್ಧಾಂತವನ್ನು ಅವಲಂಬಿಸಿ ಮತ್ತೇನಾದರೂ ಬರೆದರೆ ಅದೂ ಕಪೋಲಕಲ್ಪಿತವೇ ಆಗುತ್ತದಲ್ಲವೇ..!!

ಇವತ್ತು ಯಾರು ತಮ್ಮನ್ನು ತಾವು "ದ್ರವಿಡರು" ಎಂದುಕೊಂಡು, ಹೊರಗಿನಿಂದ ಬಂದ ಆರ್ಯರು ಅವರನ್ನು ಗುಲಾಮರನ್ನಾಗಿಸಿದರು ಎನ್ನುತ್ತಿದ್ದಾರೋ, ಅವರು ಆರ್ಯರಿಗಿಂತ ಹೆಚ್ಚು ಆಂಗ್ಲರ ಗುಲಾಮರಾಗಿಯೇ ಉಳಿದಿದ್ದಾರೆ ಅನ್ನೋದು ತಿಳಿಯುತ್ತದೆ. ಯಾವ ಪ್ರಾಚೀನ ಸಾಹಿತ್ಯದಲ್ಲೂ ಉಲ್ಲೇಖವೇ ಇರದೇ, ಈಗ್ಗೆ ಧುತ್ತನೆ ಹಲವು ದಶಕಗಳ ಹಿಂದೆ ಬ್ರಿಟಿಷರಿಂದ ಉದ್ಭವವಾದ ಈ AIT [ Aryan Invasion Theory ] ವಾದಗಳನ್ನು ನಂಬಿಕೊಂಡು, ಅದರದ್ದೇ ಆಧಾರದ ಮೇಲೆ ಮತ್ತಷ್ಟು ಹೊಸ ಕಥೆಗಳನ್ನು ಹೇಳುತ್ತಾರೆಂದರೆ, ಅವರ ಅಜ್ಞಾನಕ್ಕೆ ಮರುಕವನ್ನಷ್ಟೇ ಪಡಬಹುದು.!

ಭೌಗೋಳಿಕವಾಗಿಯೂ ಈ ಸಿದ್ಧಾಂತವು ಅವಾಸ್ತವಿಕ ಎಂಬುದನ್ನು ಹಲವು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ವೇದದ ಯಾವ ಮೂಲೆಯಲ್ಲಿಯೂ ಗಣೇಶ-ಶಿವ ಅನಾರ್ಯರ ದೇವತೆ ಎಂದಾಗಲೀ, ಅಥವಾ ಇವರು ಹೇಳುವ ಭೂತಗಣ, ರುದ್ರಗಣಗಳು ಅನಾರ್ಯರೆಂದು ಎಲ್ಲೂ ಹೇಳಿಲ್ಲ. ಅವರೆಲ್ಲ ದೇವತೆಗಳ ಒಂದು ಭಾಗವೇ ಆಗಿದ್ದು, ಕಶ್ಯಪರ ಮಕ್ಕಳೆಮ್ಬುದು ಸ್ಪಷ್ಟವಾಗಿದೆ. ಹೀಗಿದ್ದೂ ತಾವಾಗೆ ಇವರೆಲ್ಲರನ್ನು 'ಅನಾರ್ಯ' ಎಂಬ ಕಲ್ಪಿತವಾದ ಗುಂಪಿಗೆ ಸೇರಿಸಿದರೆ, ಅದು ಅವರ ಹಣೆಬರಹ..!!


ಇನ್ನು, ಬೇರೆ ಕಡೆಯ ಲೇಖನಗಳನ್ನು ಓದುವಾಗ, ಶಿವನ ಬಗ್ಗೆ "ತಸ್ಕರಾಣಾಂ ಪತಯೇ", ಕುಮ್ಬಾರನೆಂಬ ವರ್ಣನೆಯಿರುವುದನ್ನು ಉಲ್ಲೇಖಿಸಿದ್ದಾರೆ. ಸರಿ. ಆದರೆ ಈ ಕುಂಬಾರ-ಕಮ್ಮಾರ ಅಂದರೆ ದ್ರಾವಿಡರು ಅಂತ ಹೇಳಿರುವುದು ಯಾರು.? ವೇದವೇ.? ಅಲ್ಲ, ಮತ್ತದೇ ಬ್ರಿಟಿಷರು..
ಮಣ್ಣಿನಿಂದ ಮಡಿಕೆಯನ್ನು ಸೃಷ್ಟಿ ಮಾಡುವವನಿಗೆ 'ಕುಂಬಾರ' ಎಂದು ಕರೆದಂತೆ, ಇಡೀ ಜಗತ್ತನ್ನು ಸೃಷ್ಟಿ ಮಾಡುವವನಿಗೆ ವಿಶ್ವದ ಕುಂಬಾರ ಎನ್ನುವುದರಲ್ಲಿ 'ಸಂಘರ್ಷ' ಉಂಟುಮಾಡುವ ವಿಚಾರ ಎಲ್ಲಿದೆ.? 
ವೇದ-ಪುರಾಣಗಳಿಗೆ ತನ್ನದೇ ಆದ ಅರ್ಥವ್ಯಾಪ್ತಿಯಿದೆ. ಅದಕ್ಕೆಂದೇ ಅವುಗಳ ಅರ್ಥಗಳನ್ನು ಸರಿಯಾಗಿ ತಿಳಿದುಕೊಳ್ಳಲೆಂದೇ, ಶಿಕ್ಷಾ-ನಿರುಕ್ತ ಮುಂತಾದ ಪರಿಕರಗಳು, ಭಾಷಾತ್ರೈವಿಧ್ಯ,ರೀತಿಶತಕಗಳ ಪರಿಚಯ ಇವುಗಳನ್ನು ಹೇಳಲಾಗಿದೆ. ಇವಾವುದರ ಗಂಧ-ಗಾಳಿಯೂ ಇಲ್ಲದೆ ವೇದ-ಪುರಾಣಗಳನ್ನು ಅರ್ಥೈಸಲು ಹೊರಟರೆ ಆಗುವ ಸ್ಥಿತಿ ಇಷ್ಟೇ..!!!

ಬರೆಯಲೂ ಎಲ್ಲರಿಗೂ ಹಕ್ಕಿದೆ. ಒಬ್ಬ ಹುಚ್ಚನೂ ಸಾಹಿತ್ಯವನ್ನು ಬರೆಯಬಹುದು.. ಆ ನಿಟ್ಟಿನಲ್ಲಿ  ಇದೂ ಒಂದು ಕೃತಿ ಅಂತ ಭಾವಿಸಿ, ಮನೆಯ ಇಲಿಗಳ ಆಹಾರವಾಗಿ ತಂದಿಡಬಹುದು.. ಆದರೆ, ಇದು ಒಂದು  ಸಂಶೋಧನೆಯೆಂದೋ, ವಸ್ತುನಿಷ್ಠ ಕಾದಂಬರಿಯೆಂದೋ ಹೇಳುವುದಾದಲ್ಲಿ, ಅದು ಹಾಸ್ಯಾಸ್ಪದ..!!

ವೇದಗಳ ಕಾಲದಿಂದಲೂ ಇಂತಹ ಕಿಡಿಗೇಡಿಗಳು ಇದ್ದೆ ಇದ್ದಾರೆ.. ಸದಾ ವೇದಗಳನ್ನು ತೆಗಳುವುದು, ದೇವತೆಗಳನ್ನು ಕೀಳಾಗಿ ನೋಡುವುದು ಇವೇ ಅವರ ಕುಲಕಸುಬು. ಶಿಶುಪಾಲ,ಹಿರಣ್ಯಕಶಿಪು,ಮಧು-ಕೈಟಭ,ಕಲಿ ಇವರೆಲ್ಲ ಇದೇ ಗುಂಪಿಗೆ  ಸೇರಿದವರು.. ಇಂತಹ ಲಕ್ಷಣವುಳ್ಳ ವ್ಯಕ್ತಿಗಳನ್ನು, ಮಹರ್ಷಿ ವೇದವ್ಯಾಸರು "ದೈತ್ಯ"ರು ಎಂದು ಕರೆದಿದ್ದಾರೆ.

ಈಗಲೂ ಇಂತಹ ವ್ಯಕ್ತಿಗಳಿದ್ದಾರೆ.. ಅವರನ್ನು "ಬುದ್ಧಿಜೀವಿಗಳು" ಎಂದು ಕರೆಯಬಹುದಾಗಿದೆ..!!


Thursday, 25 July 2013

ಶ್ರದ್ಧಾಗೀತೆ

ಸಮರದಲ್ಲಿ ಅಮರರಾಗಿಹ ಹುತಾತ್ಮರ ಸ್ಮರಣದಿ
ಹಾಡುತಿಹೆನು ಇಂದು ಶ್ರದ್ಧಾಗೀತೆ ಧನ್ಯವಾದದಿ..

ಮರಳಿ ಮತ್ತೆ ಬರುವರೇನು ? ಜಯವ ತಂದ ವೀರರು..
ನನ್ನ ಹಾಡಿನಂಜಲಿಯಲಿ ಅವರಿಗಾಗಿ ಕಣ್ಣನೀರು..

ರಕ್ತಹೋಳಿಯಾಡಿದವರು,
ಧ್ವಜದಲಿಹ ತ್ರಿವರ್ಣ ಇವರು
ಹೆಮ್ಮೆಯ ಈ ಶೂರರು..!!

ವಿಜಯದ ಪುಷ್ಪ ಅರಳುತಿಹುದು, ಸೂಸಿ ನಗುವಿನ ಸೊಡರು..
ಅವರ ರುಧಿರ ಸಿಂಚನದಿ, ಆಯಿತೆಮ್ಮ ಭೂಮಿ ಹಸಿರು..
ಕ್ರಾಂತಿಗೀತೆಯಾತ್ಮದಲರು..
ನವ್ಯ ಬಾನ ಭಾನು ಇವರು..
ಹೆಮ್ಮೆಯ ಈ ಶೂರರು..!!

ಸ್ವದೇಶದ ಸ್ವತಂತ್ರತೆಯನು ಉಳಿಸಲವರು ಮಡಿದರು..
ವಿಶ್ವದಲ್ಲಿ ವಿಹರಿಸಿಹುದು ಮುಕ್ತಿಯ ಸಂದೇಶ ತೇರು..
ದೇಶ ಜೀವದೊಂದೇ ಉಸಿರು..
ಸ್ವಾಭಿಮಾನರೂಪ ಇವರು..
ಹೆಮ್ಮೆಯ ಈ ಶೂರರು..!!    





Monday, 17 September 2012

"ಗಣೇಶನ ಹಬ್ಬ" ಅಂದಾಗಲೆಲ್ಲಾ ನೆನಪಾಗೋದು ಅವರೇ....


1890 ರ ದಶಕ.. 1857 ರ ಭೀಕರ ಸ್ವತಂತ್ರ ಸಂಗ್ರಾಮ ತಣ್ಣಗಾಗಿ ಅದೆಷ್ಟೋ ವರ್ಷಗಳು ಕಳೆದು ಹೋಗಿದ್ವು. ತದನಂತರ ಅಲ್ಲಲ್ಲಿ ಸಣ್ಣ-ಪುಟ್ಟ ಹೋರಾಟಗಳು ನಡೆದರೂ, ಅಷ್ಟೊಂದು ಯಶಸ್ವಿಯಾಗಲಿಲ್ಲ. ಈ ಮಧ್ಯೆ ಬ್ರಿಟಿಷರನ್ನು ನಡುಗಿಸಿದ ಒಂದೇ ಒಂದು ದಿಟ್ಟ ಹೋರಾಟವೆಂದರೆ, 'ವಾಸುದೇವ ಬಲವಂತ್ ಫಡ್ಕೆ'ಯ ಮೊಟ್ಟಮೊದಲ ಸಶಸ್ತ್ರಕ್ರಾಂತಿ. ಆದರೆ ಅವನ ಬಂಧನದ ನಂತರ ಆ ಹೋರಾಟವೂ ಶಮನವಾಗಿಹೋಯಿತು. ಕ್ರಾಂತಿಯ ಜ್ವಾಲೆ ತಣ್ಣಗಾಗಿದ್ದರೂ, ಅದರದೊಂದು ಕಿಡಿ ಮಾತ್ರ ಎಲ್ಲರಲ್ಲಿ ಬೂದಿಮುಚ್ಚಿದ ಕೆಂಡದಂತೆ ಹಾಗೇ ಜೀವಂತವಾಗಿತ್ತು. 

ಇದನ್ನರಿತ ಬ್ರಿಟಿಶ್ ಸರ್ಕಾರ, 1885 ರಲ್ಲಿ ಎ.ಓ.ಹ್ಯೂಮ್ ನಿಂದ "ಇಂಡಿಯನ್ ನ್ಯಾಷನಲ್ ಕಾಂಗ್ರೆಸ್"ನ್ನು ಸ್ಥಾಪಿಸಿತು."ಯುದ್ಧ ಮಾಡಿದರೆ ಸ್ವಾತಂತ್ರ್ಯ ಸಿಗೋದಿಲ್ಲ, ಅರ್ಜಿಗಳನ್ನು ಹಾಕಿ 'ಭಿಕ್ಷಾ'ಪಾತ್ರೆ ಹಿಡಿದು ನಿಂತರೆ, ಸ್ವತಂತ್ರ ಸಿಕ್ಕರೂ ಸಿಗಬಹುದು" ಎಂಬ ಧೋರಣೆಯನ್ನಿಟ್ಟುಕೊಂಡು ಹುಟ್ಟಿಕೊಂಡ I.N.C ಜನರಲ್ಲಿನ ಕ್ರಾಂತಿಯ ಮನೋಭಾವವನ್ನು ಮತ್ತಷ್ಟು ಶಾಂತಗೊಳಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಯಿತು. 

ಇಂತಹ ನಿಸ್ತೇಜವಾದ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ, ಸ್ವಾತಂತ್ರ್ಯಯಜ್ಞದ ಅಗ್ನಿಯನ್ನು ಮತ್ತೆ ಪ್ರಜ್ವಲಗೊಳಿಸುವ ಕಾರ್ಯ ಆಗಲೇಬೇಕಿತ್ತು. ಅಂಥ ಯಜ್ಞದ ಆಧ್ವರ್ಯು ಆದವರು, "ಲೋಕಮಾನ್ಯ ಬಾಲಗಂಗಾಧರ ತಿಲಕರು". ಮನೆಗಳಲ್ಲಿ ಅವರವರ ಕುಟುಂಬದ ಮಟ್ಟಿಗೆ ಆಚರಿಸುತ್ತಿದ್ದ "ಗಣೇಶ ಚತುರ್ಥಿ"ಯನ್ನು ಸಾರ್ವಜನಿಕ ಉತ್ಸವವಾಗಿ ಮಾಡಿದವರು ಅವರೇ.1894 ರಲ್ಲಿ.. ಅದರ ಜೊತೆ ಶಿವಾಜಿ ಮಹಾರಾಜರ ಜಯಂತಿಯನ್ನೂ ಸಾರ್ವಜನಿಕ ಹಬ್ಬವನ್ನಾಗಿಸಿದ ಕೀರ್ತಿ ಅವರದ್ದೇ. ರಾಷ್ಟ್ರೀಯತೆಯ ಪುನರುತ್ಥಾನದಲ್ಲಿ ಇದೊಂದು ಮೈಲಿಗಲ್ಲು..
ಒಂದು ಧಾರ್ಮಿಕ ಹಬ್ಬವನ್ನು, ರಾಷ್ಟ್ರೀಯ ಉತ್ಸವವನ್ನಾಗಿ ಮಾಡಿದ್ದು ಮಹಾನ್ ಸಾಹಸವೇ..ಅದೊಂದು ಕಾರ್ಯದಿಂದ ಮತ್ತೆ ಜನರೆಲ್ಲರೂ ಮಾನಸಿಕವಾಗಿಯೇ ಸಂಘಟಿತರಾದರು. ಮುಂದಿನ ಹೋರಾಟಗಳಲ್ಲಿ, ಈ ಪೀಠಿಕೆ ಅದೆಂಥ ಮಹತ್ತರ ಪಾತ್ರ ವಹಿಸಿತು ಅನ್ನೋದು ಇತಿಹಾಸ ಬಲ್ಲವರಿಗೆ ಅಪರಿಚಿತವೇನೂ ಅಲ್ಲ..

ಇವತ್ತು ಗಲ್ಲಿ-ಗಲ್ಲಿಗಳಲ್ಲಿ, ಮನೆ-ಮನಗಳಲ್ಲಿ, ಜಾತಿ-ಪಂಥದ ಭೇದ ಮರೆತು, ಜನರೆಲ್ಲಾ ಒಗ್ಗೂಡಿ ಅತೀವ ಸಂಭ್ರಮದಿಂದ ಗಣೇಶನ ಹಬ್ಬವನ್ನ ಆಚರಿಸುತ್ತಿದ್ದಾರೆಂದರೆ, ಅದಕ್ಕೆ ಕಾರಣ ಆ ಲೋಕಮಾನ್ಯರೆ.. ಈ ಸಡಗರ-ಉತ್ಸಾಹಗಳನ್ನು ನೋಡಿದಾಗಲೆಲ್ಲಾ, ಮತ್ತೆ ಮತ್ತೆ ನೆನಪಾಗೋದು ಆ ತಿಲಕರು, ಅವರ ಸಂಘಟನಾ ಚಾತುರ್ಯ, ಮತ್ತು ದೂರದೃಷ್ಟಿ. ಗಣೇಶನ ಹಬ್ಬದಲ್ಲಿ ಸಂಸ್ಕೃತಿಯ ಜೊತೆಗೆ ರಾಷ್ಟ್ರಚಿಂತನೆಯೂ ಬೆರೆಯಲಿ ಎಂಬ ಅವರ ಸದಭಿಲಾಷೆ, ಶಾಶ್ವತವಾಗಿ ನೆಲೆಗೊಳ್ಳಲಿ..

ಎಲ್ಲರಿಗೂ ಗೌರೀ-ಗಣೇಶ ಉತ್ಸವದ ಹಾರ್ದಿಕ ಶುಭಾಶಯಗಳು...

Thursday, 10 May 2012

೧೮೫೭ ಮೇ ೧೦ ರ ಕಿಡಿ - ಸ್ವಾತಂತ್ರ್ಯದ ಮುನ್ನುಡಿ..

೧೮೫೭ ಮೇ ೧೦ , ಅಂದು ನಡೆಯಲಿದ್ದ ಮಹಾ ಸಂಗ್ರಾಮಕ್ಕೆ ಸಾಕ್ಷಿಯಾಗಲು ಸೂರ್ಯ ಆಗ ತಾನೇ ಉದಿಸುತ್ತಿದ್ದ.. ಮೀರತ್ ನಲ್ಲಿದ್ದ ೨೦ ನೆ ಪದಾತಿ ರೆಜಿಮೆಂಟಿನವರು ಮತ್ತು ೩ ನೆ ಅಶ್ವಾರೋಹಿ ದಳದವರೂ ತಮ್ಮಲ್ಲಿ ಭುಗಿಲೆದ್ದಿದ್ದ ದೇಶಪ್ರೇಮದ ಜ್ವಾಲೆಯನ್ನು ಕಾಳ್ಗಿಚ್ಚಿನಂತೆ ಹರಡಿಸಲು ತವಕಿಸುತ್ತಿದ್ದರು. ಅದಕ್ಕೆ ಕಾರಣ ೧೮೫೭ ಏಪ್ರಿಲ್ ೮ ರಂದು ನಡೆದ ಮಂಗಲ್ ಪಾಂಡೆಯ ಬಲಿದಾನ. 

೧೮೫೭ ಮಾರ್ಚ್ ೨೯ ರಂದೇ ಬ್ಯಾರಕ್ಪುರದ ೧೯ ನೆ ರೆಜಿಮೆಂಟಿನ ಮಂಗಲ್ ಪಾಂಡೆ ಉಕ್ಕುತ್ತಿದ್ದ ದೇಶಪ್ರೇಮವನ್ನು ಬದಿಗೊತ್ತದೆ, ತನ್ನ ಸಹ-ಸೈನಿಕರನ್ನೆಲ್ಲಾ ಹುರಿದುಂಬಿಸುತ್ತ ಸ್ವಾತಂತ್ರ ಸಂಗ್ರಾಮಕ್ಕೆ ಶ್ರೀಗಣೇಶ ಮಾಡಿಯೇ ಬಿಟ್ಟ. ಸಾರ್ಜಂಟ್-ಮೇಜರ್ ಹ್ಯುಸನ್ ನನ್ನು ಗುಂಡಿಕ್ಕಿ ಕೊಂದು ರಣಕಹಳೆ ಊದಿದ..ಆ ಕಾರಣಕ್ಕಾಗಿಯೇ ಆತನನ್ನು ಏಪ್ರಿಲ್ ೮ ರಂದು ನೇಣಿಗೇರಿಸಲಾಯಿತು..

ಇದರ ಜೊತೆ ಇನ್ನೊಂದು ಹೃದಯ-ವಿದ್ರಾವಕ ಘಟನೆಯೊಂದು ನಡೆಯಿತು.. ಬ್ರಿಟಿಷರು ಕೊಟ್ಟಿದ್ದ ಕಾಡತೂಸುಗಳನ್ನು ಉಪಯೋಗಿಸಲು ನಿರಾಕರಿಸಿದ ೮೫ ಜನ ದೇಶೀ ಸೈನಿಕರನ್ನು ಬೆತ್ತಲಾಗಿಸಿ, ಬೇಡಿಗಳನ್ನು ತೊಡಿಸಿ ಕಾರಾಗೃಹಕ್ಕೆ ತಳ್ಳಿದರು. ತಮ್ಮ ಮುಂದೆಯೇ ತಮ್ಮ ಸಹೋದರರಿಗಾದ ಅಪಮಾನವನ್ನು ನೋಡಿ ಉಳಿದ ಸೈನಿಕರು ಕುದ್ದು ಹೋದರು..ಇದು ನಡೆದಿದ್ದು ಮೇ ೯ ರಂದು..

ಮೊದಲಿನ ನಿರ್ಧಾರದಂತೆ, ನಿಜವಾಗಿಯೂ ೧೮೫೭ ಮೇ ೩೧ ರಂದು ಇಡೀ ದೇಶವೇ ಭುಗಿಲೇಳಬೇಕೆಂದು ನಾನಾ-ಸಾಹಿಬ್-ಪೇಶ್ವ , ರಾಣಿ ಲಕ್ಷ್ಮಿಬಾಯಿ ಅವರ ಸಹಮತದೊಂದಿಗೆ ನಿರ್ಣಯವಾಗಿತ್ತು... ಆದರೆ ಇಷ್ಟೆಲ್ಲಾ ಬ್ರಿಟಿಷರ ಕುಕೃತ್ಯಗಳಿಂದ ತಪ್ತರಾಗಿದ್ದ ಮೀರತ್ ನ ಸಿಪಾಯಿಗಳು ಮೇ ೩೧ ರ ತನಕ ಕಾಯುವ ತಾಳ್ಮೆಯನ್ನು ಕಳೆದುಕೊಂಡಿದ್ದರು... ಹೀಗಾಗಿ ಮೇ ೧೦ ರಂದೇ ಆಂಗ್ಲರ ಮೇಲೆ ಆಕ್ರಮಿಸಲು ನಿರ್ಧರಿಸಿದರು.. ಅವರ ಜೊತೆ ಸುತ್ತಲಿದ್ದ ಹಳ್ಳಿಗಳ ಜನರೂ ಕೈಗೂಡಿಸಿದರು...

ಹೀಗೆ ಒಟ್ಟುಗೂಡಿದ ಸಿಪಾಯಿಗಳು ಮತ್ತು ಜನರು , ಮೇ ೧೦ ರ ಸಂಜೆ ಪ್ರಾರ್ಥನೆಗೆಂದು ಚರ್ಚ್ ಗೆ ತೆರಳುತ್ತಿದ್ದ ಬಿಳಿಯರ ಮೇಲೆ 'ಹರ ಹರ ಮಹಾದೇವ್','ಮಾರೋ ಫಿರಂಗಿ ಕೋ' ಎಂದು ಕೂಗುತ್ತ ದಾಳಿ ನಡೆಸಿದರು... ಭಾರತೀಯರನ್ನು ಗುಲಾಮರೆಂದು ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಸಂಹರಿಸಿದರು.. ಜೊತೆಗೆ ಸೆರೆಮನೆಯಲ್ಲಿದ್ದ ದೇಶೀ ಸಿಪಾಯಿಗಳನ್ನೆಲ್ಲ ಬಿಡಿಸಿದರು.. ಆ ಬಿಡುಗಡೆಯಾದ ಸಿಪಾಯಿಗಳೂ ಎಲ್ಲರ ಜೊತೆ ಸೇರಿ, ಆಕ್ರಮಣಕ್ಕೆ ಮುಂದಾದರು..
ಅಂದು ಭಾರತೀಯರ ಮನದಲ್ಲಿದ್ದ ಸೇಡಿನ ಅಗ್ನಿಯಲ್ಲಿ ಎಲ್ಲ ಬಿಳಿಯರೂ ಬೆಂದು ಹೋದರು.. ಆದರೆ ಈ ಯಾವ ದಾಳಿಯಲ್ಲಿಯೂ ಭಾರತೀಯ ಸಿಪಾಯಿಗಳು ಯಾವ ಬ್ರಿಟಿಶ್-ಹೆಂಗಸನ್ನೂ ಅಪಮಾನಿಸಲಿಲ್ಲ ಅನ್ನೋದು ಭಾರತೀಯತೆಗೆ ಹಿಡಿದ ಕೈಗನ್ನಡಿ...

ಅದೆಷ್ಟೋ ಜನ ಬ್ರಿಟಿಷರು ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು, ವೇಷ ಮರೆಸಿಕೊಂಡು, ದಿಕ್ಕಾಪಾಲಾಗಿ ಓಡಿಹೋದರು.. ಹೀಗೆ ಮೇ ೧೦ ರಂದು ಮೀರತ್ ನಲ್ಲಿ ಪ್ರಾರಂಭವಾದ ಕ್ರಾಂತಿಕಿಡಿ ಕ್ರಮೇಣ ಕಾನ್ಪುರ, ಝಾನ್ಸಿ , ದೆಹಲಿ ತನಕ ಹಬ್ಬಿತು... ಆದರೂ ನಮ್ಮ ಸೈನ್ಯದಲ್ಲಿ ಇನ್ನೂ ಸಾಕಷ್ಟು ಪೂರ್ವತಯಾರಿ ಇಲ್ಲದಿದ್ದ ಕಾರಣ, ಬ್ರಿಟಿಷರ ಬೃಹತ್ ಸೈನ್ಯದ ಮುಂದೆ ಭಾರತೀಯ ಸಿಪಾಯಿಗಳ ಸಂಗ್ರಾಮ ಸೋಲಬೇಕಾಯಿತು...

ಈ ಪ್ರಥಮ-ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತಕ್ಕೆ ಯಶಸ್ಸು ದೊರೆಯದಿದ್ದರೂ, ಅದು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತೂ ಖಂಡಿತ..ಅಲ್ಲದೆ ಆ ಸಿಪಾಯಿಗಳ ದೇಶಭಕ್ತಿ, ಮುಂದೆ ಬಂದ ಅನೇಕ ಸ್ವಾತಂತ್ರ ಹೋರಾಟಗಾರರಿಗೆ ಸ್ಫೂರ್ತಿಯಾಯಿತು ಅನ್ನೋದೂ ಇತಿಹಾಸವಿದಿತ.. ವೀರ ಸಾವರ್ಕರ್ ಅವರು ಈ ಪ್ರಥಮ-ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪುಸ್ತಕ ಬರೆದರು. ಅದು ಎಷ್ಟೊಂದು ಪ್ರಖರವಾಗಿತ್ತೆಂದರೆ ಆ ಪುಸ್ತಕ ಪ್ರಕಟಣೆಯಾಗುವುದಕ್ಕೂ ಮೊದಲೇ ವಿಶ್ವಾದ್ಯಂತ ಬ್ರಿಟಿಷರಿಂದ ನಿಷೇಧಿತವಾಗಿತ್ತು... ಆದರೂ ಹೇಗೋ ಭಾರತವನ್ನು ತಲುಪಿದ ಆ ಪುಸ್ತಕ ಸಹಸ್ರಾರು ಯುವ ಸ್ವಾತಂತ್ರ ಯೋಧರಲ್ಲಿ ಕೆಚ್ಚನ್ನು ತುಂಬಿತು.. ಭಗತ್ ಸಿಂಗ್ ಮೂರು ಬಾರಿ ಈ ಪುಸ್ತಕವನ್ನು ಪ್ರಕಟಿಸಿದ.. ನೇತಾಜಿ ಸುಭಾಷಚಂದ್ರ ಬೋಸರ ಅಜಾದ್ ಹಿಂದ್ ಫೌಜ್ ನ ಸೈನಿಕರಿಗೆ ಪವಿತ್ರ ಗ್ರಂಥವಾಯಿತು.. ಹೀಗೆ ಆರಂಭವಾದ ಸ್ವಾತಂತ್ರ ಸಂಗ್ರಾಮ ಅನೇಕ ಯುವಕರ ರುಧಿರಾಭಿಷೆಕದಿಂದ ೧೯೪೭ ಆಗಸ್ಟ್ ೧೫ ಸ್ವತಂತ್ರವಾಯಿತು...

ಇವತ್ತು ಮೇ ೧೦ .. ಅಂದರೆ ನಮ್ಮ ಸ್ವಾತಂತ್ರಕ್ಕೆ ಅಡಿಗಲ್ಲನಿಟ್ಟ ಆ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ ನಲ್ಲಿ ಆರಂಭವಾಗಿ ಇಂದಿಗೆ ೧೫೪ ವರ್ಷ.. ಎಲ್ಲ ನ್ಯೂಸ್ ಚಾನೆಲ್ ಗಳು, ಮಾಧ್ಯಮಗಳು ಇದನ್ನು ಮರೆತರೂ, ಕಡೆ ಪಕ್ಷ ನಾವಾದರೂ ಆ ಭೀಕರ ಸಂಗ್ರಾಮವನ್ನು ಮತ್ತು ಅದರಲ್ಲಿ ಮಡಿದು ಹುತಾತ್ಮರಾದ ಹೋರಾಟಗಾರರನ್ನು ಒಮ್ಮೆ ನೆನೆಯೋಣ...
ಆ ಎಲ್ಲ ಸ್ವಾತಂತ್ರ್ಯ ಯೋಧರಿಗೆ ನನ್ನ ಭಾವಪೂರ್ಣ ಅಶ್ರುತರ್ಪಣ......