Thursday 10 May 2012

೧೮೫೭ ಮೇ ೧೦ ರ ಕಿಡಿ - ಸ್ವಾತಂತ್ರ್ಯದ ಮುನ್ನುಡಿ..

೧೮೫೭ ಮೇ ೧೦ , ಅಂದು ನಡೆಯಲಿದ್ದ ಮಹಾ ಸಂಗ್ರಾಮಕ್ಕೆ ಸಾಕ್ಷಿಯಾಗಲು ಸೂರ್ಯ ಆಗ ತಾನೇ ಉದಿಸುತ್ತಿದ್ದ.. ಮೀರತ್ ನಲ್ಲಿದ್ದ ೨೦ ನೆ ಪದಾತಿ ರೆಜಿಮೆಂಟಿನವರು ಮತ್ತು ೩ ನೆ ಅಶ್ವಾರೋಹಿ ದಳದವರೂ ತಮ್ಮಲ್ಲಿ ಭುಗಿಲೆದ್ದಿದ್ದ ದೇಶಪ್ರೇಮದ ಜ್ವಾಲೆಯನ್ನು ಕಾಳ್ಗಿಚ್ಚಿನಂತೆ ಹರಡಿಸಲು ತವಕಿಸುತ್ತಿದ್ದರು. ಅದಕ್ಕೆ ಕಾರಣ ೧೮೫೭ ಏಪ್ರಿಲ್ ೮ ರಂದು ನಡೆದ ಮಂಗಲ್ ಪಾಂಡೆಯ ಬಲಿದಾನ. 

೧೮೫೭ ಮಾರ್ಚ್ ೨೯ ರಂದೇ ಬ್ಯಾರಕ್ಪುರದ ೧೯ ನೆ ರೆಜಿಮೆಂಟಿನ ಮಂಗಲ್ ಪಾಂಡೆ ಉಕ್ಕುತ್ತಿದ್ದ ದೇಶಪ್ರೇಮವನ್ನು ಬದಿಗೊತ್ತದೆ, ತನ್ನ ಸಹ-ಸೈನಿಕರನ್ನೆಲ್ಲಾ ಹುರಿದುಂಬಿಸುತ್ತ ಸ್ವಾತಂತ್ರ ಸಂಗ್ರಾಮಕ್ಕೆ ಶ್ರೀಗಣೇಶ ಮಾಡಿಯೇ ಬಿಟ್ಟ. ಸಾರ್ಜಂಟ್-ಮೇಜರ್ ಹ್ಯುಸನ್ ನನ್ನು ಗುಂಡಿಕ್ಕಿ ಕೊಂದು ರಣಕಹಳೆ ಊದಿದ..ಆ ಕಾರಣಕ್ಕಾಗಿಯೇ ಆತನನ್ನು ಏಪ್ರಿಲ್ ೮ ರಂದು ನೇಣಿಗೇರಿಸಲಾಯಿತು..

ಇದರ ಜೊತೆ ಇನ್ನೊಂದು ಹೃದಯ-ವಿದ್ರಾವಕ ಘಟನೆಯೊಂದು ನಡೆಯಿತು.. ಬ್ರಿಟಿಷರು ಕೊಟ್ಟಿದ್ದ ಕಾಡತೂಸುಗಳನ್ನು ಉಪಯೋಗಿಸಲು ನಿರಾಕರಿಸಿದ ೮೫ ಜನ ದೇಶೀ ಸೈನಿಕರನ್ನು ಬೆತ್ತಲಾಗಿಸಿ, ಬೇಡಿಗಳನ್ನು ತೊಡಿಸಿ ಕಾರಾಗೃಹಕ್ಕೆ ತಳ್ಳಿದರು. ತಮ್ಮ ಮುಂದೆಯೇ ತಮ್ಮ ಸಹೋದರರಿಗಾದ ಅಪಮಾನವನ್ನು ನೋಡಿ ಉಳಿದ ಸೈನಿಕರು ಕುದ್ದು ಹೋದರು..ಇದು ನಡೆದಿದ್ದು ಮೇ ೯ ರಂದು..

ಮೊದಲಿನ ನಿರ್ಧಾರದಂತೆ, ನಿಜವಾಗಿಯೂ ೧೮೫೭ ಮೇ ೩೧ ರಂದು ಇಡೀ ದೇಶವೇ ಭುಗಿಲೇಳಬೇಕೆಂದು ನಾನಾ-ಸಾಹಿಬ್-ಪೇಶ್ವ , ರಾಣಿ ಲಕ್ಷ್ಮಿಬಾಯಿ ಅವರ ಸಹಮತದೊಂದಿಗೆ ನಿರ್ಣಯವಾಗಿತ್ತು... ಆದರೆ ಇಷ್ಟೆಲ್ಲಾ ಬ್ರಿಟಿಷರ ಕುಕೃತ್ಯಗಳಿಂದ ತಪ್ತರಾಗಿದ್ದ ಮೀರತ್ ನ ಸಿಪಾಯಿಗಳು ಮೇ ೩೧ ರ ತನಕ ಕಾಯುವ ತಾಳ್ಮೆಯನ್ನು ಕಳೆದುಕೊಂಡಿದ್ದರು... ಹೀಗಾಗಿ ಮೇ ೧೦ ರಂದೇ ಆಂಗ್ಲರ ಮೇಲೆ ಆಕ್ರಮಿಸಲು ನಿರ್ಧರಿಸಿದರು.. ಅವರ ಜೊತೆ ಸುತ್ತಲಿದ್ದ ಹಳ್ಳಿಗಳ ಜನರೂ ಕೈಗೂಡಿಸಿದರು...

ಹೀಗೆ ಒಟ್ಟುಗೂಡಿದ ಸಿಪಾಯಿಗಳು ಮತ್ತು ಜನರು , ಮೇ ೧೦ ರ ಸಂಜೆ ಪ್ರಾರ್ಥನೆಗೆಂದು ಚರ್ಚ್ ಗೆ ತೆರಳುತ್ತಿದ್ದ ಬಿಳಿಯರ ಮೇಲೆ 'ಹರ ಹರ ಮಹಾದೇವ್','ಮಾರೋ ಫಿರಂಗಿ ಕೋ' ಎಂದು ಕೂಗುತ್ತ ದಾಳಿ ನಡೆಸಿದರು... ಭಾರತೀಯರನ್ನು ಗುಲಾಮರೆಂದು ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಸಂಹರಿಸಿದರು.. ಜೊತೆಗೆ ಸೆರೆಮನೆಯಲ್ಲಿದ್ದ ದೇಶೀ ಸಿಪಾಯಿಗಳನ್ನೆಲ್ಲ ಬಿಡಿಸಿದರು.. ಆ ಬಿಡುಗಡೆಯಾದ ಸಿಪಾಯಿಗಳೂ ಎಲ್ಲರ ಜೊತೆ ಸೇರಿ, ಆಕ್ರಮಣಕ್ಕೆ ಮುಂದಾದರು..
ಅಂದು ಭಾರತೀಯರ ಮನದಲ್ಲಿದ್ದ ಸೇಡಿನ ಅಗ್ನಿಯಲ್ಲಿ ಎಲ್ಲ ಬಿಳಿಯರೂ ಬೆಂದು ಹೋದರು.. ಆದರೆ ಈ ಯಾವ ದಾಳಿಯಲ್ಲಿಯೂ ಭಾರತೀಯ ಸಿಪಾಯಿಗಳು ಯಾವ ಬ್ರಿಟಿಶ್-ಹೆಂಗಸನ್ನೂ ಅಪಮಾನಿಸಲಿಲ್ಲ ಅನ್ನೋದು ಭಾರತೀಯತೆಗೆ ಹಿಡಿದ ಕೈಗನ್ನಡಿ...

ಅದೆಷ್ಟೋ ಜನ ಬ್ರಿಟಿಷರು ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡು, ವೇಷ ಮರೆಸಿಕೊಂಡು, ದಿಕ್ಕಾಪಾಲಾಗಿ ಓಡಿಹೋದರು.. ಹೀಗೆ ಮೇ ೧೦ ರಂದು ಮೀರತ್ ನಲ್ಲಿ ಪ್ರಾರಂಭವಾದ ಕ್ರಾಂತಿಕಿಡಿ ಕ್ರಮೇಣ ಕಾನ್ಪುರ, ಝಾನ್ಸಿ , ದೆಹಲಿ ತನಕ ಹಬ್ಬಿತು... ಆದರೂ ನಮ್ಮ ಸೈನ್ಯದಲ್ಲಿ ಇನ್ನೂ ಸಾಕಷ್ಟು ಪೂರ್ವತಯಾರಿ ಇಲ್ಲದಿದ್ದ ಕಾರಣ, ಬ್ರಿಟಿಷರ ಬೃಹತ್ ಸೈನ್ಯದ ಮುಂದೆ ಭಾರತೀಯ ಸಿಪಾಯಿಗಳ ಸಂಗ್ರಾಮ ಸೋಲಬೇಕಾಯಿತು...

ಈ ಪ್ರಥಮ-ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತಕ್ಕೆ ಯಶಸ್ಸು ದೊರೆಯದಿದ್ದರೂ, ಅದು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದಂತೂ ಖಂಡಿತ..ಅಲ್ಲದೆ ಆ ಸಿಪಾಯಿಗಳ ದೇಶಭಕ್ತಿ, ಮುಂದೆ ಬಂದ ಅನೇಕ ಸ್ವಾತಂತ್ರ ಹೋರಾಟಗಾರರಿಗೆ ಸ್ಫೂರ್ತಿಯಾಯಿತು ಅನ್ನೋದೂ ಇತಿಹಾಸವಿದಿತ.. ವೀರ ಸಾವರ್ಕರ್ ಅವರು ಈ ಪ್ರಥಮ-ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪುಸ್ತಕ ಬರೆದರು. ಅದು ಎಷ್ಟೊಂದು ಪ್ರಖರವಾಗಿತ್ತೆಂದರೆ ಆ ಪುಸ್ತಕ ಪ್ರಕಟಣೆಯಾಗುವುದಕ್ಕೂ ಮೊದಲೇ ವಿಶ್ವಾದ್ಯಂತ ಬ್ರಿಟಿಷರಿಂದ ನಿಷೇಧಿತವಾಗಿತ್ತು... ಆದರೂ ಹೇಗೋ ಭಾರತವನ್ನು ತಲುಪಿದ ಆ ಪುಸ್ತಕ ಸಹಸ್ರಾರು ಯುವ ಸ್ವಾತಂತ್ರ ಯೋಧರಲ್ಲಿ ಕೆಚ್ಚನ್ನು ತುಂಬಿತು.. ಭಗತ್ ಸಿಂಗ್ ಮೂರು ಬಾರಿ ಈ ಪುಸ್ತಕವನ್ನು ಪ್ರಕಟಿಸಿದ.. ನೇತಾಜಿ ಸುಭಾಷಚಂದ್ರ ಬೋಸರ ಅಜಾದ್ ಹಿಂದ್ ಫೌಜ್ ನ ಸೈನಿಕರಿಗೆ ಪವಿತ್ರ ಗ್ರಂಥವಾಯಿತು.. ಹೀಗೆ ಆರಂಭವಾದ ಸ್ವಾತಂತ್ರ ಸಂಗ್ರಾಮ ಅನೇಕ ಯುವಕರ ರುಧಿರಾಭಿಷೆಕದಿಂದ ೧೯೪೭ ಆಗಸ್ಟ್ ೧೫ ಸ್ವತಂತ್ರವಾಯಿತು...

ಇವತ್ತು ಮೇ ೧೦ .. ಅಂದರೆ ನಮ್ಮ ಸ್ವಾತಂತ್ರಕ್ಕೆ ಅಡಿಗಲ್ಲನಿಟ್ಟ ಆ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ ನಲ್ಲಿ ಆರಂಭವಾಗಿ ಇಂದಿಗೆ ೧೫೪ ವರ್ಷ.. ಎಲ್ಲ ನ್ಯೂಸ್ ಚಾನೆಲ್ ಗಳು, ಮಾಧ್ಯಮಗಳು ಇದನ್ನು ಮರೆತರೂ, ಕಡೆ ಪಕ್ಷ ನಾವಾದರೂ ಆ ಭೀಕರ ಸಂಗ್ರಾಮವನ್ನು ಮತ್ತು ಅದರಲ್ಲಿ ಮಡಿದು ಹುತಾತ್ಮರಾದ ಹೋರಾಟಗಾರರನ್ನು ಒಮ್ಮೆ ನೆನೆಯೋಣ...
ಆ ಎಲ್ಲ ಸ್ವಾತಂತ್ರ್ಯ ಯೋಧರಿಗೆ ನನ್ನ ಭಾವಪೂರ್ಣ ಅಶ್ರುತರ್ಪಣ......

2 comments:

  1. ಭೀಮಣ್ಣ..

    ತುಂಬಾ ಉತ್ತಮವಾದ ಸಾಂದರ್ಭಿಕ ಲೇಖನ! ಇದನ್ನು ಕೇವಲ ಸಂದರ್ಭಕ್ಕೆ ಅನ್ನುವ ಕಾರಣಕ್ಕಾಗಿಯೇ ಅಲ್ಲ, ಗುಲಾಮಗಿರಿಯಲ್ಲಿ ಬೆಂದು ಬಸವಳಿದಿದ್ದ ಅಂದಿನ ನಮ್ಮ ಪೂರ್ವಜರ ಧೀಮಂತ ಇಚ್ಛಾಶಕ್ತಿ, ಸಂಘಟನೆಯ ಕೊರತೆ ಕೆಲವೇ ಮಂದಿ ಸ್ವಾರ್ಥಪರರ ಹೊಣೆಗೇಡಿತನ ಹೀಗೆ ಹಲವು ಹತ್ತು ಮುಖಗಳನ್ನು ನೆನಪಿಸುವ ಸಲುವಿಗಾಗಿ ಹಾಗೂ ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಉಳಿದು ಬಂದಿರುವ ಒಗ್ಗಟ್ಟಿನ ಕೊರತೆಯನ್ನು ನೀಗಿಸಿಕೊಳ್ಳುವುದಕ್ಕೋಸ್ಕರ ಹಾಗೂ ಅಂದಿನ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ಸಂದರ್ಭವನ್ನು ಎದುರಿಸಿದ ರೀತಿ, ಇವುಗಳನ್ನು ಮಾದರಿಯನ್ನಾಗಿರಿಸಿಕೊಳ್ಳಬೇಕು.

    ReplyDelete
  2. ಎಂದೋ ಇತಿಹಾಸದ ಪಥ್ಯದಲ್ಲಿ ಓದಿದ ನೆನಪು.. ಮತ್ತೆ ಮೆಲುಕು ಹಾಕಿದಂತಾಯಿತು.. ನಿಮ್ಮ ಒಂದೊಂದು ಲೇಖನವೂ
    ದೇಶಭಕ್ತಿಯ ಕಿಚ್ಚು ಹಚ್ಚುತ್ತದೆ.. ರಾಷ್ಟ್ರಧ್ಯಾನ ನಿರಂತರವಾಗಿರಲಿ.. ಶುಭವಾಗಲಿ :)

    ReplyDelete