ಗೆಂದಾಲಾಲ್ ದಿಕ್ಷಿತ್ -- ಅಪರೂಪದ ಅಜ್ಞಾತ ಕ್ರಾಂತಿಕಾರಿ..!!!
ಭಾಳ ಅಂದ್ರೆ ಆ ಹುಡುಗನಿಗೆ 9-10 ವರ್ಷ ವಯಸ್ಸಿರಬಹುದು.. ಅವತ್ತೊಂದಿನ, ಬೆಳಗಿನ ನಸುಕಿನಲ್ಲಿಯೇ ಎದ್ದು, ತನ್ನೂರಿನಲ್ಲಿ ಹರಿಯುತ್ತಿದ್ದ ಯಮುನಾ ನದಿಗೆ ತೆರಳಿ ಸ್ನಾನ ಮಾಡಿ ಶುದ್ಧನಾದ. ಮಿಂದೆದ್ದು ಬಂದವನೇ, ದಡದ ಮೇಲಿದ್ದ ಕಾಳಿಯ ಗುಡಿಯೆಡೆ ಹೊರಟ.. ಪೂಜೆಗೆ ಹೋಗ್ತಾ ಇರಬಹುದೆಂದು ಎಲ್ಲರೂ ಅನ್ಕೊಂಡಿದ್ರು.. ಆದ್ರೆ ಅವನು ಹೋಗ್ತಿದ್ದಿದ್ದು ಪೂಜೆಗಲ್ಲ, ಪ್ರತಿಜ್ಞೆಗೆ..!!!!!!!!
" ತಾಯೆ, ಆಂಗ್ಲರ ದುರಾಡಳಿತದಲ್ಲಿ ನಲುಗುತಿರುವ ದೇಶದ ಸ್ವಾತಂತ್ರ್ಯವೇ ನನ್ನ ಜೀವನದ ಧ್ಯೇಯ.. ನನ್ನ ಕೊನೆ ಉಸಿರಿನವರೆಗೂ, ಕೊನೆ ರಕ್ತದ ಹನಿ ಪುಟಿಯುವವರೆಗೂ ಭಾರತಿಯ ಸೇವೆಗಾಗಿ ನನ್ನ ಬದುಕು ಮುಡಿಪು", ಅಂತ ಆ ಸಣ್ಣ ಬಾಲಕ ಶಪಥಗೈದಿದ್ದ..!!!!
ಅವನ ಹೆಸರು "ಗೆಂದಾಲಾಲ್ ದಿಕ್ಷಿತ್". 1888 ರಲ್ಲಿ, ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ಹಳ್ಳಿಯೊಂದರಲ್ಲಿ ಜನನ. ಸಣ್ಣವನಿಂದಲೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದವ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಮೇಲೆ, DAV ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡ..
ಅದು 1905. 'ಒಡೆದು ಆಳುವ' ನೀತಿಯನ್ನೇ ಅನುಸರಿಸುತ್ತಿದ್ದ ಆಂಗ್ಲರ ಅಧಿಕಾರಿ "ಲಾರ್ಡ್ ಕರ್ಜನ್" ಬಂಗಾಳವನ್ನು ವಿಭಜಿಸಿದ. ಅವನೇನೋ ಜನರನ್ನು ಒಡೆಯಲು ಹಾಗೆ ಮಾಡಿದ.. ಆದರೆ ಆದದ್ದೇ ಬೇರೆ. ಅವನ ಈ ಕೃತ್ಯಕ್ಕೆ ಇಡೀ ದೇಶವೇ ಎದ್ದು ನಿಂತಿತು. ಎಲ್ಲೆಲ್ಲೂ ಹರತಾಳ, ಮೆರವಣಿಗೆ, ಹೋರಾಟಗಳು ನಡೆದವು. ತಿಲಕರಂತೂ ತಮ್ಮ ಕೇಸರಿ ಪತ್ರಿಕೆಯಲ್ಲಿ ಪ್ರತಿದಿನ, ಬಂಗಾಳ-ವಿಭಜನೆಯ ವಿರುದ್ಧ ಬೆಂಕಿಯ ಬರಹಗಳನ್ನು ಪ್ರಕಟಿಸ್ತಿದ್ರು.. ಅದರ ಕಿಡಿ, ಗೆನ್ದಾಲಾಲನಿಗೂ ಬಡಿಯಿತು. ತಿಲಕರಿಂದ ತುಂಬಾ ಸ್ಫೂರ್ತಿಗೊಂಡ ಗೆಂದಾಲಾಲ್, ಅವರು ಶುರುಮಾಡಿದ ಶಿವಾಜಿ-ಉತ್ಸವ, ಸಾರ್ವಜನಿಕ ಗಣೇಶ-ಉತ್ಸವ ಇದರಿಂದಲೂ ಪ್ರಭಾವಿತನಾದ. ಶಿವಾಜಿಯ ಚರಿತೆಯನ್ನು ಓದಿ, ಆ ಛತ್ರಪತಿಯ ಸಂಘಟನಾ ಕೌಶಲ್ಯ, ಧೈರ್ಯಗಳಿಂದ ಉತ್ತೇಜಿತಗೊಂಡ. ಗೆಂದಾಲಾಲ್ ಸಣ್ಣವನಿದ್ದಾಗ ಮಾಡಿದ್ದ ಪ್ರತಿಜ್ಞೆ ಈಡೇರುವ ಕಾಲ ಆಗ ಬಂದಿತ್ತು.. ಅದರ ಫಲವೇ, ಭಾರತದ ಕ್ರಾಂತಿ ಇತಿಹಾಸದಲ್ಲಿ, ಮತ್ತೊಂದು ಕ್ರಾಂತಿ ಸಂಘಟನೆಯ ಜನನ..
ಅದುವೇ ಗೆನ್ದಾಲಾಲನ "ಶಿವಾಜಿ ಸಮಿತಿ"..!!!
ಮೊದಮೊದಲು ಗೆನ್ದಾಲಾಲ್, ಊರಿನ ವಿದ್ಯಾವಂತರನ್ನ, ಶ್ರೀಮಂತರನ್ನ ಸೇರಿಸಿಕೊಂಡು ಸಂಘಟನೆ ಬೆಳೆಸುವ ಉತ್ಸಾಹದಲ್ಲಿದ್ದ.. ಆದರೆ ಆತ ಕಂಡಿದ್ದು ನಿರಾಶೆ.. ಬ್ರಿಟಿಷರ ಆಂಗ್ಲ ಶಿಕ್ಷಣದಲ್ಲಿ ಬೆಳೆದಿದ್ದ ವಿದ್ಯಾವಂತರೆಲ್ಲ, ಭಾರತದ ಬಗ್ಗೆ ಕಿಂಚಿತ್ತೂ ಗೌರವ ಉಳಿಸಿಕೊಂಡಿರಲಿಲ್ಲ. ಆಂಗ್ಲರು ಭಾರತದ ಉದ್ಧಾರಕ್ಕಾಗಿಯೇ ಬಂದಿದ್ದಾರೆ ಎಂಬ ಭ್ರಮೆಯಲ್ಲಿದ್ದರು.. ಜೊತೆಗೆ ಊರಿನ ಶ್ರೀಮಂತರೂ ಆಂಗ್ಲರ ಬಾಲಬಡುಕರಾಗಿದ್ದರು.. ಹೀಗಾಗಿ ಗೆನ್ದಾಲಾಲನಿಗೆ ಯಾವ ಸಹಾಯವೂ ಸಿಗಲೇ ಇಲ್ಲ..
ಆಗ ಅವನಿಗೆ ಹೊಳೆದದ್ದೆ ಚಂಬಲ್ ಕಣಿವೆ.. ಕಳ್ಳ-ಕಾಕರ ಪ್ರಸಿದ್ಧ ತಾಣ, ಚಂಬಲ್ ಕಣಿವೆ ಇದ್ದದ್ದು ಅಲ್ಲೇ. ಅಲ್ಲಿನ ಡಕಾಯಿತರನ್ನೇ ಸೇರಿಸಿಕೊಂಡು ಸಂಘಟನೆ ಕಟ್ಟುವ ಸಂಕಲ್ಪ ಮಾಡಿದ.. ಅಂಥ ವಿಚಾರ ಬಂದೊಡನೆ, ಚಂಬಲ್ ಕಣಿವೆಗೆ ಹೊರಟು ನಿಂತ.ಅಂಥಾ ಕಡಿದಾದ ಕಣಿವೆಯಲ್ಲಿ ಸಂಚರಿಸುವುದು ಅದೇನೂ ಅಷ್ಟು ಸಣ್ಣ ಕೆಲಸವಾಗಿರಲಿಲ್ಲ..ಆದರೂ ದೇಶಕ್ಕಾಗಿ ದುಡಿಯಲೆಬೇಕೆಂಬ ಇಚ್ಛೆ ಅವನಲ್ಲಿ ಭೀಮಬಲ ತುಮ್ಬಿಸಿತ್ತು..ಅಲ್ಲಿನ ಡಕಾಯಿತರನ್ನ ಭೇಟಿ ಮಾಡಿ ಅವರ ಮನವೊಲಿಸುವ ಕೆಲಸ ಮಾಡಿದ.
ನಿಜ ಹೇಳ್ಬೇಕಂದ್ರೆ, ಆ ಡಕಾಯಿತರು ಮೂಲತಃ ಕ್ರೂರಿಗಳಲ್ಲ.. ಆಂಗ್ಲರ ದಬ್ಬಾಳಿಕೆಗೆ, ಸಮಾಜದ ಕೆಲವು ಹುಳುಕುಗಳಿಗೆ ನೊಂದು, ಬೇಸತ್ತು, ಆಕ್ರೋಶದಿಂದ ಕಳ್ಳರಾದವರು.. ಆ ವಿಷಯ ಗೆನ್ದಾಲಾಲನಿಗೂ ಗೊತ್ತಿತ್ತು. ಹೀಗಾಗಿಯೇ, ಅವರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದು, 'ಶಿಕ್ಷಕ'ನಾಗಿದ್ದ ಅವನಿಗೆ ಅಷ್ಟೇನೂ ಕಷ್ಟವಾಗಲಿಲ್ಲ.. ಪ್ರತಿನಿತ್ಯ 'ಶಿವಾಜಿ', 'ಮಹಾರಾಣಾ ಪ್ರತಾಪ ಸಿಂಹ','ಝಾನ್ಸಿಯ ರಾಣಿ' ಯ ಕಥೆಗಳನ್ನು ಹೇಳಿ, ಆ ಕಳ್ಳರ ಮನಸ್ಸನ್ನು ದೇಶಭಕ್ತಿಯೆಡೆ ಪರಿವರ್ತಿಸಿದ. ಹೀಗೆ ಸಂಘಟನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ನಿರಂತರ ಯುದ್ಧ ಸಾರಿದ. ಅನೇಕ ಅಧಿಕಾರಿಗಳ ಮನೆಗಳ ದರೋಡೆಯನ್ನೂ ಮಾಡಿದ. ಗೆನ್ದಾಲಾಲ್ ಆಂಗ್ಲರಿಗೆ ಬೆಮ್ಬೆತ್ತಿದ ಬೇತಾಳದಂತೆ ಆಗಿದ್ದ.
ಆಗಲೇ, ಮತ್ತೊಂದು ಬೆಳವಣಿಗೆ ಆ ಪ್ರಾಂತದಲ್ಲಾಯಿತು. ರಾಮ್ ಪ್ರಸಾದ್ ಬಿಸ್ಮಿಲ್ ಆಗಿನ್ನೂ ಯುವಕ. ಅವನು ಷಹಜಹಾನ್ ಪುರದಲ್ಲಿ, "ಮಾತೃವೇದಿ" ಎಂಬ ಕ್ರಾಂತಿ ಸಂಘಟನೆ ಕಟ್ಟಿ, ಕಾರ್ಯ ನಿರ್ವಹಿಸುತ್ತಿದ್ದ. ಬಿಸ್ಮಿಲ್ಲನಿಗೆ, ಸ್ವಾಮೀ ಸೋಮದೇವರಿಂದ ಈ ಗೆನ್ದಾಲಾಲನ ಬಗ್ಗೆ ತಿಳಿಯಿತು. ಕೂಡಲೇ, ಬಿಸ್ಮಿಲ್, ಗೆನ್ದಾಲಾಲ್ ನನ್ನು ಸಂಧಿಸಿ ತನಗೆ ಮಾರ್ಗದರ್ಶನ ನೀಡಬೇಕೆಂದು ಕೋರಿದ..ಕ್ರಾಂತಿಯ ಬಗ್ಗೆ ಚರ್ಚೆ ನಡೆಸಿದ.. ಗೆನ್ದಾಲಾಲನಿಗೂ ಬಿಸ್ಮಿಲ್ಲನ ಪರಿಚಯ ಇನ್ನಷ್ಟು ಬಲ ತಂದಿತು.. ಇಬ್ಬರೂ ಕೂಡಿ ಮತ್ತೆ ಸಂಘಟನೆಯನ್ನು ಬಲಗೊಳಿಸಿದರು.
ಮಣಿಪುರಿ ಅನ್ನೋ ಗ್ರಾಮ. ಅಲ್ಲಿ ಬಿಸ್ಮಿಲ್ ಜನರನ್ನು ಸಂಘಟಿಸಲು, "ಮಣಿಪುರಿಯ ಪ್ರತಿಜ್ಞೆ" ಎಂಬ ಕರಪತ್ರ ಹಂಚಿದ. ಜೊತೆಗೆ ಗೆನ್ದಾಲಾಲನ ಜೊತೆಗೂಡಿ, ಮಣಿಪುರಿಯ ಕೆಲವು ಶ್ರೀಮಂತರ ಮನೆಗಳ ಮೇಲೆ, ದಾಳಿಯೂ ಆಯಿತು.. ಆದರೆ, ಜೊತೆಗೆ ಬ್ರಿಟಿಷರೂ ಎಚ್ಚೆತ್ತರು. ಈ ಕ್ರಾಂತಿಕಾರಿಗಳನ್ನು ಬಂಧಿಸಲು ಬಲೆ ಬೀಸಿದರು. ಅದರ ಸುಳಿವು ಸಿಕ್ಕ ಕೂಡಲೇ, ಬಿಸ್ಮಿಲ್ ಭೂಗತನಾದ. ಆದರೆ ಗೆನ್ದಾಲಾಲ್ ಸೆರೆ ಸಿಕ್ಕುಬಿಟ್ಟ...
once again,ವಿಚಾರಣೆ ಶುರುವಾಯಿತು. ಸಂಘಟನೆಯ ಬಗ್ಗೆ ತಿಳಿದುಕೊಳ್ಳಲು ಆಂಗ್ಲರು ಅನೇಕ ವಿಧದ ಪ್ರಯೋಗ ನಡೆಸಿದರು. ಕೊನೆಗೆ ಗೆನ್ದಾಲಾಲ್ ಒಂದು ಉಪಾಯ ಮಾಡಿ, ತನ್ನ ಸಂಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲು ಒಪ್ಪಿಕೊಂಡ.. ಅದನ್ನು ನಂಬಿದ ಆಂಗ್ಲರು, ಗೆನ್ದಾಲಾಲನನ್ನು, ಉಳಿದ ಬಂಧಿತ ಕ್ರಾಂತಿಕಾರಿಗಳ ಜೊತೆ ಇಟ್ರು. ಅದೇ ಸಮಯಕ್ಕೆ ಕಾಯುತ್ತಿದ್ದ ಗೆನ್ದಾಲಾಲ್ ಉಳಿದ ಸಹಚರರ ಸಹಾಯದೊಂದಿಗೆ, ಜೈಲಿನಿಂದ ತಪ್ಪಿಸಿಕೊಂಡುಬಿಟ್ಟ...
ಆನಂತರ, ಭೂಗತನಾದ ಗೆನ್ದಾಲಾಲನನ್ನು ಹಿಡಿಯಲು, ಬ್ರಿಟಿಷರು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಕೊನೆಗೂ ಆತ ಸಿಗಲೇ ಇಲ್ಲ.ಇಷ್ಟರಲ್ಲೇ ಅವನಿಗೆ ಮಾರಣಾಂತಿಕ ಕ್ಷಯ ರೋಗ ತಗುಲಿಬಿಟ್ಟಿತು.. ಅದಕ್ಕೆ ಅವನ ನಿರಂತರವಾದ ಕೆಲಸವೇ ಕಾರಣ. ಚಂಬಲ್ ಕಣಿವೆಯಲ್ಲಿ, ಡಕಾಯಿತರನ್ನು ಸಂಘಟಿಸುವಾಗ, ತನ್ನ ಆರೋಗ್ಯದ ಪರಿವೆಯೂ ಇಲ್ಲದೆ, ಸತತ ಅಲೆದಾಟ, ಅದೂ ಪಾದರಕ್ಷೆಗಳೂ ಇಲ್ಲದೆ, ಊಟ-ನೀರು ಇಲ್ಲದೆ ಅದೆಷ್ಟೋ ದಿನ ಉಪವಾಸದಲ್ಲೇ ದಿನವನ್ನೂ ದೂಡಿದ್ದ.
ಇಷ್ಟೆಲ್ಲಾ ಕಷ್ಟಗಳನ್ನೂ ಸಹಿಸಿದ್ದು ದೇಶಕ್ಕಾಗಿಯೇ, ತನ್ನ ಪ್ರತಿಜ್ನೆಗಾಗಿಯೇ.... ಅವೆಲ್ಲದರ ರೂಪವಾಗಿ TB ತಗುಲಿತು..
ಹೇಗೋ ಅವನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆತನ ಹೆಂಡತಿಯೂ ಸೇವೆಗಾಗಿ ಬಂದಳು. ಆದರೆ, ಅದು ಮಾರಣಾಂತಿಕ ಕಾಯಿಲೆ, ಅವನು ಬದುಕುಳಿಯುವುದು ಸಾಧ್ಯವಿರಲಿಲ್ಲ. ಅವನ ಹೆಂಡತಿಯ ಮನವೊಲಿಸಿ, ಮನೆಗೆ ಕಳಿಸಲಾಯಿತು..
ಕೊನೆಗೆ 1920 ರಲ್ಲಿ, ಆ ರೋಗದ ನರಳುವಿಕೆಯಲ್ಲಿಯೇ ಆಸ್ಪತ್ರೆಯಲ್ಲಿ ಅಸುನೀಗಿದ..
ಜೀವನದುದ್ದಕ್ಕೂ ಯಾವ ಸಂಸಾರದ ಸುಖವನ್ನೂ ಬಯಸದೆ, ತನ್ನ ಶಪಥದಂತೆ ಬದುಕಿದ ವ್ಯಕ್ತಿ ಆತ. ಕೇವಲ ಸ್ವಾತಂತ್ರ್ಯಕ್ಕಾಗಿ ಅಲ್ಲದೆ, ಸಮಾಜವಿರೋಧಿಗಳಾಗಿದ್ದ ಡಕಾಯಿತರನ್ನು ಮತ್ತೆ ಸಂಸ್ಕೃತಿಯ ದಾರಿಗೆ ತಂದ ಅಪರೂಪದ ಕ್ರಾಂತಿಕಾರಿ ಆತ..
ಆದರೆ ಎಲ್ಲ ಇತಿಹಾಸದಿಂದ ಅಜ್ಞಾತವಾಗಿಯೇ ಉಳಿದುಹೋದ.
ಒಂದಂತೂ ನಿಜ. ಅವನಂತೂ ತನಗೆ ಪ್ರಸಿದ್ಧಿ ಸಿಗಲಿ ಅನ್ನೋ ಕಾರಣಕ್ಕೆ, ಹೋರಾಟ ಮಾಡಿದವನಲ್ಲ. ಕೇವಲ ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿದ ಧೀರೋದಾತ್ತ ವ್ಯಕ್ತಿ ಅವನು.. ಆದ್ರೆ ನಮ್ಮ ಕೃತಘ್ನತೆಯಿಂದ,ಮರೆಯುವಿಕೆಯಿಂದ ಅಂಥಾ ವೀರರೆಲ್ಲ ಮರೆಯಾಗಿದ್ದಾರೆ ಅನ್ನೋದು ದೇಶದ ದುರಂತ..!!
ನವೆಂಬರ್ 30, ಆ ಕ್ರಾಂತಿಕಾರನ ಜನ್ಮದಿನ.. ಆ ಪುಣ್ಯಚೇತನಕ್ಕೆ, ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ, ಅವನ ರಾಷ್ಟ್ರಭಕ್ತಿ ನಮಗೆ ಪ್ರೇರಣೆಯಾಗಲಿ ಎಂಬ ಹಾರೈಕೆಯೊಂದಿಗೆ..
ವಂದೇ ಮಾತರಂ..
No comments:
Post a Comment