Sunday 8 January 2012


 ಜನನಿಯ ಘೋಷ 

ಅವಳು ನನ್ನ ಮನವ ಹೆತ್ತ ಜನನಿ
ಸುಧೆಯುಣಿಸಿ ಬೆಳೆಸಿದ ಕಾರುಣಿ.,
ನಿತ್ಯಸುಂದರಿ ಆಕೆ, ವನನದಿಪರ್ವತಗಳಲಿ..
ಸಂಗೀತಪ್ರಿಯೆ ಝರಿಪಕ್ಷಿಕವಿಗಳ ಘೋಷದಲಿ..,   
ನಾಟ್ಯವಾಡಿಹಳು ಸರ್ವರ ಮನರಂಗದಲಿ.,
ಅವಳೇ ನನ್ನ ತಾಯಿ ಭಾರತಿ
ಈ ನಾಡ ನಿಜ ಒಡತಿ..


ಸಾವಿರ ಸೂರ್ಯರಿಗಿಂತ
ದೇದೀಪ್ಯಮಾನವಾದ ಅವಳ 
ಮುಗುಳ್ನಗೆಯ ಮೊಗಕ್ಕೆ ಬಡಿಯಿತಂದು ಗ್ರಹಣ..
ಎಗ್ಗಿಲ್ಲದೆ ನುಗ್ಗಿಬಂದ 
ಪರರ ಸಂಕೋಲೆಯ ಬಂಧನ..


ಮಾತೆಯ ಮಾಂಗಲ್ಯವನೆ ಸೀಳಹೊರಟ
ಪರಂಗಿಗಳ ಫಿರಂಗಿಗೆ, ಬಂದೂಕಿನ ನಳಿಕೆಗೆ
ಎದೆಯೊಡ್ಡಿದ ಕಲಿಗಳು,
ಸಜ್ಜುಗೊಳಿಸಿದ ಉರುಳಿಗೆ ಕೊರಳಿತ್ತು
ಸ್ವರಾಜ್ಯದರಮನೆಗೆ ತೋರಣಗಳಾದ
ಗುಂಡಿಗೆಯ ಪ್ರಚಂಡರು,.
ಹೂತುಹೋದರು ಇತಿಹಾಸದೊಳು..
ಕಾಲಗರ್ಭದಲ್ಲಿ ಇಂಗಿಹೋದ, ಹೆಪ್ಪುಗಟ್ಟಿದ 
ರಕ್ತದಮಡು ನಮಗೀಗ ಕಾಣುತ್ತಲೇ ಇಲ್ಲ.
ಅದರಿಂದ ಚಿಗುರೊಡೆದ ಸ್ವಾತಂತ್ರ್ಯವೃಕ್ಷವಷ್ಟೇ ನಮಗೆ ಕಂಡಿದ್ದು..!!


ಈಗ ಈ ಮರಕ್ಕೂ ಗೆದ್ದಲು,
ಕಾಂಡ ಕೊರೆದು ಪೊಳ್ಳಾಗಿಸುವ ಹುಳು..
ಬೃಹತ್ತಾಗಿ ಬೆಳೆದ ಈ ಮರದ
ನಿತ್ಯಹಸಿರಿನಲ್ಲಿ, ಹಾಡಬೇಕಿತ್ತು ಕೋಗಿಲೆ,
ಕುಸುಮಗಳ ನಡುವೆ, ಚಿಟ್ಟೆಗಳ ಕಲೆ..
ಆದರೆ, ಇಲ್ಲೀಗ ವಾಸ ಬಾವುಲಿಗಳ ಟ್ಹಾವು 
ಎಲ್ಲವನು ತಿಂದು ಮಬ್ಬಾದ ಹೆಬ್ಬಾವು..


ಮತ್ತೆ ಭಾರತಿಗೆ ಕವಿದಿದೆ ಗ್ರಹಣ.,
ನಮ್ಮ ಅನ್ಯಾಯಗಳ ಕೇತುವಿನಿಂದ
ಅಕ್ರಮಗಳ ರಾಹುವಿಂದ ಗ್ರಸ್ತಗ್ರಹಣ..
ಪ್ರಕೃತಿಯ ಗ್ರಹಣ ತಾನಾಗೇ ಸರಿದೀತು..,
ಈ ಗ್ರಹಣ... ಉಹೂ..
ಕಳಚಲು ಒಗ್ಗೂಡಿ ಕೈಹಚ್ಚಲೇಬೇಕು.
ಜನಮಾನಸವ ಬೆಸೆದು...


ಸರ್ವಶಕ್ತಳಾಕೆ ಭಾರತಾಂಬೆ,
ನಮ್ಮ ಮನದಾಳದ ಕೂಗಿಗೆ
ಒಂದಾಗಿ ಅವಳೆಡೆ ಚಾಚುವ ಕೈಗೆ
ಕಾದು ಹೊಸ್ತಿಲಲ್ಲೇ ನಿಂತು
ಹವಣಿಸುತ್ತಿಹಳು..
ಕೇಳಿಸದಾಯಿತೇ ಆಕೆಯ ಕರೆ.??
ಬನ್ನಿ ಜೊತೆಗೂಡಿ ಮುನ್ನಡೆಯಲು,
ತಾಯ ಹೊನ್ನ ಚರಿತೆಯ ಮತ್ತೆ ಬೆಳಗಿಸಲು,
ಮೈಕೊಡವಿ ಆಲಸ್ಯವನು
ಪಾಂಚಜನ್ಯವ ಮೊಳಗಿಸಲು 
ನಾಡನಿರ್ಮಾಣದಲಿ ಅಡಿಗಲ್ಲನಿಡಲು.... 

No comments:

Post a Comment