Sunday, 26 February 2012

"ಸ್ವಾತಂತ್ರ್ಯವೀರ"ನ ವ್ಯಕ್ತಿತ್ವ ಅನಾವರಣ..!!

" ಭಗತ್ ಸಿಂಗ್, ರಾಜಗುರು,ಆಜಾದ್ ಮುಂತಾದ ಕ್ರಾಂತಿಕಾರಗಳ ಹೆಸರುಗಳನ್ನು ಕೇಳಿದಾಗಲೆಲ್ಲ ನಾವು ಆದರದಿಂದ ತಲೆಬಾಗುತ್ತೇವೆ.ಆದರೆ, ಇಂತಹ ನೂರಾರು ಕ್ರಾಂತಿಕಾರಗಳನ್ನ ನಿರ್ಮಿಸಿದ 'ಸಾವರ್ಕರ'ರನ್ನು ಸ್ಮರಿಸುವಾಗ ಸಂಕೋಚಕ್ಕೆ ಒಳಗಾಗುವುದು ಬಹಳ ದೌರ್ಭಾಗ್ಯದ ಸಂಗತಿ. ವೀರ ಸಾವರ್ಕರರ ಬಗ್ಗೆ ಅನೇಕ ಭ್ರಮೆಗಳನ್ನು ಹಬ್ಬಿಸಿರುವುದೇ ಇದಕ್ಕೆ ಕಾರಣ.."


ಮಾಜಿ ಕೇಂದ್ರಮಂತ್ರಿ ಹಾಗು ಕಾಂಗ್ರೆಸ್ ನಾಯಕ  'ವಸಂತ ಸಾಠೆ' ಯವರ ಈ ಮಾತು ಯಾವಾಗಲೂ ನನ್ನನ್ನು ಕಾಡಿವೆ.. ಇಲ್ಲಸಲ್ಲದ, ಮಿಥ್ಯಾ ಆರೋಪಗಳನ್ನೇ ನಿಜವೆಂದು ನಂಬಿ, ಒಬ್ಬ ರಾಷ್ಟ್ರೀಯ ಪುರುಷನನ್ನು ಹಿಂಬದಿಗೆ ಸರಿಸಿ, ಅವರ ತೇಜೋವಧೆಯನ್ನೇ ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯೇ..
ಕೇವಲ ಸಾವರ್ಕರರ ಮೇಲಿನ ವೃಥಾ ಅಭಿಮಾನದಿಂದ ಈ ಲೇಖನ ಹೊರಟಿಲ್ಲ.. ಬದಲಾಗಿ ಸಾವರ್ಕರರ ನಿಜಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಷ್ಟೇ..


                                                                             
ಸಾವರ್ಕರ್-ದೇಶಭಕ್ತಿ-ಸ್ವಾತಂತ್ರ್ಯ ಹೋರಾಟ..
ಸಾವರ್ಕರಜೀಯವರ ದೇಶಪ್ರೇಮ ವಿವಾದಾತೀತ.. ಬಾಲ್ಯದಿಂದಲೂ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಬದುಕು ಅದು. ಚಿಕ್ಕಂದಿನಲ್ಲೇ 'ಮಿತ್ರಮೇಳ'ವನ್ನು ಸ್ಥಾಪಿಸಿ ಗೆಳೆಯರಿಗೆ ರಾಷ್ಟ್ರೀಯತೆಯ ಪಾಠ ಕಲಿಸುತ್ತಿದ್ದವರು 
ಅವರು. ಆನಂತರ "ಅಭಿನವ ಭಾರತ"ವನ್ನು ಸ್ಥಾಪಿಸಿ ದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿದ್ದು ಇತಿಹಾಸ..
ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ’ಸಿಪಾಯಿ ದಂಗೆ’ ಎಂದು ಹೀಗಳೆಯುತ್ತಿದ್ದವರಿಗೆ, ಅದು ಬರೀ ಜಗಳವಲ್ಲ, ಸ್ವಾತಂತ್ರ್ಯದ ಅಡಿಗಲ್ಲು ಎಂಬುದನ್ನು ಪ್ರಮಾಣ ಸಹಿತವಾಗಿ ನಿರೂಪಿಸಿದ್ದರು. ಅವರ ಆ ಪುಸ್ತಕವೇ, ಪ್ರಕಟಣೆಗೂ ಮುನ್ನವೇ ವಿಶ್ವಾದ್ಯಂತ ನಿಷೇಧಕ್ಕೊಳಗಾಯಿತು.. ಆದರೂ ಆ ಪುಸ್ತಕ ರಹಸ್ಯವಾಗಿ ಭಾರತವನ್ನು ಸೇರಿದ್ದಷ್ಟೇ ಅಲ್ಲ, ಬದಲಾಗಿ ವಿಶ್ವದ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಿತಗೊಂಡಿತು..


ಲಂಡನ್ನಿಗೆ ಬ್ಯಾರಿಸ್ಟರ್ ಪದವಿ ತರಲು ಹೋಗಿದ್ದ ಸಾವರ್ಕರ್, ಮರಳಿ ಬಂದದ್ದು ಕೈತುಂಬ ಕೋಳಗಳನ್ನು ತೊಡಿಸಿಕೊಂಡು..!!
ಅಲ್ಲಿಯೇ, ’ಸಾಗರೋತ್ತರ ಅಭಿನವ ಭಾರತ’ದ ಶಾಖೆಯೊಂದನ್ನು ಸ್ಥಾಪಿಸಿದ್ದರು. ಪಂಡಿತ್ ಶ್ಯಾಮಜಿ ಕ್ರಿಷ್ಣವರ್ಮಾರವರು ಕಟ್ಟಿಸಿದ್ದ ’ಭಾರತ ಭವನ’ದಲ್ಲಿ ಪ್ರತಿನಿತ್ಯ ಸಾವರ್ಕರರ ಅಗ್ನಿಜ್ವಾಲೆಯ ಉಪನ್ಯಾಸಗಳು ನಡಿತಿದ್ವು..ಅದರಿಂದ ಪ್ರೇರಿತರಾಗಿ ಸ್ವಾತಂತ್ರ್ಯಸಂಗ್ರಾಮಕ್ಕೆ ಧುಮುಕಿದ ತರುಣರು ಅಸಂಖ್ಯ.
ಮದನ್ ಲಾಲ್ ಧಿಂಗ್ರ, ವಿ.ವಿ.ಎಸ್.ಅಯ್ಯರ್, ಮೇಡಂ ಕಾಮಾ ಎಲ್ಲರೂ ಸಾವರ್ಕರರ ಗರಡಿಯಲ್ಲಿ ಪಳಗಿದವರೇ..
ಬ್ರಿಟಿಶ್ ಸರ್ಕಾರದ ವಿರುದ್ಧ ಕೆಲಸಗಳನ್ನು ಮಾಡುತ್ತಿದ್ದ ಆರೋಪದ ಮೇಲೆ ಆಂಗ್ಲರು ಅವರನ್ನು ಬಂಧಿಸಿ ಭಾರತಕ್ಕೆ ಕಳಿಸಲು ತಯಾರು ಮಾಡಿದರು.. ಮಾರ್ಗಮಧ್ಯೆ ಹಡಗಿನಿಂದಲೇ ಹಾರಿ, ಮಹಾ ಸಮುದ್ರವನ್ನೇ ಈಜಿ, ಫ಼್ರಾನ್ಸ್ ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ದುರ್ದೈವದಿಂದ ಸಾಧ್ಯವಾಗಲಿಲ್ಲ.



ಭಾರತದಲ್ಲಿ ವಿಚಾರಣೆ ನಡೆದ ಬಳಿಕ ಬರೋಬ್ಬರಿ 50 ವರ್ಷಗಳ ಅಂಡಮಾನಿನ ಕರಿನೀರಿನ ಶಿಕ್ಷೆ ವಿಧಿಸಲಾಯಿತು.. ಅದನ್ನೂ ನಿರಮ್ಮಳವಾಗಿ ಸ್ವೀಕರಿಸಿದ ಸಾವರ್ಕರ್ ಆ ಅಂಡಮಾನಿನಲ್ಲೂ ರಾಷ್ಟ್ರೀಯತೆಯ ಕಂಪನ್ನು ಪಸರಿಸಿದ ವಾಯು..
ತೆಂಗಿನ ನಾರು ಸುಲಿಯುವ, ಗಾನದ ಎಣ್ಣೆ ತೆಗೆಯುವ, ಒಂಟಿಕೋಣೆಯಲ್ಲಿನ ನರಕಯಾತನೆ ಅನುಭವಿಸಿದರೂ, ಬಿಡುವಾದಾಗಲೆಲ್ಲ ಅಲ್ಲಿಯ ಜನರಿಗೆ ದೇಶದ ಪಾಠ ಹೇಳಿಕೊಡುತ್ತಿದ್ದ ಅದ್ಭುತ ವ್ಯಕ್ತಿ..


ಅಂಡಮಾನಿನ ಕೈದಿಗಳಿಗೆ ಉಳಿದವರಂತೆ ಓದಲು, ಬರೆಯಲೂ ಅವಕಾಶವಿರಲಿಲ್ಲ.. ಆದರೆ ಸಾವರ್ಕರ್ ಮಾತ್ರ ಸುಮ್ಮನೆ ಕೂಡುವವರಲ್ಲ. ಹೇಗೋ ಒಂದು ಮೊಳೆಯನ್ನು ಸಂಪಾದಿಸಿ ಅದರಿಂದಲೇ ಜೈಲಿನ ಗೋಡೆಗಳ ಮೇಲೆಲ್ಲಾ ದೇಶಭಕ್ತಿಯ ಕವನಗಳನ್ನು ಕೆತ್ತಿ, ಬೇರೆಯವರೂ ಅದನ್ನು ಓದಿ ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಿದ್ದ ಚಾಣಾಕ್ಷರು. ಒಟ್ಟು ಹತ್ತುಸಾವಿರ ಸಾಲುಗಳ ಕಾವ್ಯವನ್ನು ಆ ಜೈಲಿನಲ್ಲೇ ರಚಿಸಿ, ಬಿಡುಗಡೆಯಾದ ಮೇಲೆ "ಕಮಲಾ" ಎಂಬ ಹೆಸರಿನಲ್ಲಿ ಪ್ರಕಟಿಸಿದರು..


                   



ಸಾವರ್ಕರ್ ಮತ್ತು ಹಿಂದುತ್ವ..!!

ಸಾವರ್ಕರ್ ಹಿಂದುತ್ವವಾದಿಗಳು ಅನ್ನೋದು ಇತಿಹಾಸವಿದಿತವೆ.. ಆದರೆ ಅದರ ಜೊತೆಗೆ ಅವರು ಅನ್ಯಧರ್ಮಗಳ ಕಟ್ಟಾ ದ್ವೇಷಿಗಳು ಅನ್ನೋ ಆರೋಪವನ್ನ ವಿನಾಕಾರಣ ಮಾಡಲಾಗುತ್ತೆ.
ಸಾವರ್ಕರ್ ಎಂದೂ ಸುಖಾಸುಮ್ಮನೆ ಧರ್ಮಗಳನ್ನ ಹೀಗಳೆದವರಲ್ಲ.. ಗಾಂಧೀಜಿಗೂ ಮುಂಚೆಯೇ "ಹಿಂದೂ-ಮುಸ್ಲಿಂ" ಏಕತೆ ಆಗಬೇಕು ಆನೋದನ್ನ ಮನಗಂಡಿದ್ದವರು. ಅವರ "ಪ್ರಥಮ ಸ್ವಾತಂತ್ರ್ಯ ಸಂಗ್ರಾಮ"ದ ಪುಸ್ತಕ ಓದಿದಾಗಲೇ ಅದರ ಅರಿವಾಗುತ್ತೆ.. ಅಂದು, ನಾನಾ ಸಾಹಿಬ್ ಪೇಶ್ವೆ ಮತ್ತು ಸಹಚರರು, ಹಾಗೂ ಮುಘಲ್ ದೊರೆ 'ಬಹಾದ್ದೂರ್ ಷಾ' ಅದೆಂತಹ ಐಕ್ಯತೆಯನ್ನು ಬೆಳೆಸಿ ಒಟ್ಟುಗೂಡಿ ಆಂಗ್ಲರ ವಿರುದ್ಧ ಬಂಡೆದ್ದ ಘಟನೆಯನ್ನು ಹೇಳುವಾಗಲೇ ಅವರ ಆಂತರ್ಯ ಅರ್ಥವಾಗುತ್ತೆ..


ಆದರೆ, ಆ ಐಕ್ಯತೆಗಾಗಿ ನಮ್ಮತನವನ್ನೆಲ್ಲ ಬಲಿಕೊಡಲು ಸಾವರ್ಕರ್ ಎಂದೂ ಸಿದ್ಧರಿರಲಿಲ್ಲ..
'ಮುಸ್ಲಿಂ ಲೀಗ್' ಅನ್ನು ಸಾವರ್ಕರ್ ವಿರೋಧಿಸಿದ್ದು ಅದಕ್ಕೇ.. ಮುಸ್ಲಿಂ ಲೀಗ್ ಯಾವತ್ತೂ ಭಾರತದ ಮುಸ್ಲಿಮರ ಪ್ರತೀಕವಾಗಿರಲಿಲ್ಲ.. ತಮ್ಮ ತಮ್ಮ ಸ್ವಾರ್ಥ-ಅಧಿಕಾರಗಳಿಗಾಗಿ ಹಂಬಲಿಸುತ್ತಿದ್ದ ಕೆಲವೇ ಕೆಲವು ನಾಯಕರ ಗೂಡು ಅದು..  ದೇಶ ಒಡೆಯಲೆಂದೇ ಹುಟ್ಟಿದ್ದ ಆ ಸಂಘಟನೆಗೆ ಗಾಂಧೀಜಿ ಎಲ್ಲ ಸವಲತ್ತುಗಳನ್ನು ಕೊಡಲಾರಂಭಿಸಿದರು. ಆದರೆ ಮುಸ್ಲಿಂ ಲೀಗ್ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು??????.. "ಕ್ವಿಟ್ ಇಂಡಿಯಾ" ಚಳುವಳಿಗೆ ಸ್ವತಃ ಲೀಗ್ ವಿರೋಧ ವ್ಯಕ್ತಪಡಿಸಿತ್ತು..
ಇಷ್ಟಾದರೂ ಅಂಥಾ ದೇಶದ್ರೋಹಿಗಳನ್ನು ನೆಹರು ಅಂತಹ ದ್ವಿಮುಖಿಗಳು ಬೆಂಬಲಿಸಿದ್ದರು..
ಆದರೆ ಒಬ್ಬ ಸಾವರ್ಕರ್ ಮಾತ್ರ ಸ್ಪಷ್ಟವಾಗಿ ಹೇಳಿದ್ದರು.. "ನೀವು ಬರುವುದಾದರೆ ನಿಮ್ಮ ಜೊತೆಗೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಮೆಟ್ಟಿ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಇರುತ್ತೇವೆ" ಅಂತ..


ರಾಷ್ಟ್ರವನ್ನು ದುರ್ಬಲಗೊಳಿಸುವ ಎಲ್ಲಾ ಕಾರ್ಯಗಳನ್ನು ಅವರು ವಿರೋಧಿಸಿತ್ತಿದ್ದರು.. ಹೀಗಾಗಿಯೇ ಪುನಃ "ಶುದ್ಧಿ" ಚಳುವಳಿಯನ್ನ ಅವರು ಆರಂಭಿಸಿದ್ದು.. 
ಮತಾಂತರಕ್ಕೆ 'ಹಿಂದೂ' ಧರ್ಮದ ದೋಷಗಳು ಎಷ್ಟು ಕಾರಣವೋ, ಅಷ್ಟೇ ಬಲವಂತ, ಹಿಂಸೆಯೂ ಕಾರಣ ಅನ್ನೋದನ್ನ ಅವರು ಅಂಡಮಾನಿನಲ್ಲಿ ಸ್ವತಃ ಕಂಡಿದ್ದರು.. 
ಅಲ್ಲಿನ ಪಠಾಣರು ಬಲವಂತವಾಗಿ ಹಿಂದೂಗಳನ್ನ ಮತಾಂತರ ಮಾಡುತ್ತಿದ್ದರೂ ಜೈಲಿನ ಅಧಿಕಾರಿ 'ಮತಾಂತರಕ್ಕೆ ನಮ್ಮ ಸರ್ಕಾರದಲ್ಲಿ ಅವಕಾಶವಿದೆ' ಅಂತ ಹೇಳಿ ಸುಮ್ಮನಾಗಿದ್ದ.. ಹಾಗೆ ಹೇಳಿದ ಮರುದಿನವೇ, ಸಾವರ್ಕರ್ ಮತಾಂತರಗೊಂಡಿದ್ದ ಒಬ್ಬನನ್ನು ಕರೆದು ತಂದು, ಅವನಿಗೆ ತುಳಸಿಯ ನೀರನ್ನು ಕುಡಿಸಿ, ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ತಂದರು..  ಈ ಕಾರ್ಯವನ್ನು ಪ್ರಶ್ನೆ ಮಾಡಿದ ಜೈಲಿನ ಅಧಿಕಾರಿಗೆ, ಸಾವರ್ಕರ್ ನಿಧಾನವಾಗಿಯೇ "ನೀವೇ ಹೇಳಿದ್ದಿರಿ, ನಿಮ್ಮಲ್ಲಿ ಮತಾಂತರಕ್ಕೆ ಅವಕಾಶವಿದೆ ಅಂತ. ಅವರು ಮುಸ್ಲಿಮನಾಗಿ ಮತಾಂತರ ಮಾಡಿದ್ದರು. ನಾನು ಮತ್ತೆ ಹಿಂದೂವಾಗಿ ಮತಾಂತರ ಮಾಡಿದ್ದೇನೆ. ಅದು ತಪ್ಪಲ್ಲ ಅಂದ್ರೆ, ಇದೂ ತಪ್ಪಲ್ಲ." ಎಂದು ಹೇಳಿದಾಗ ಆ ಆಧಿಕಾರಿ ನಿರುತ್ತರನಾಗಿದ್ದ.

                                 


ಸಾವರ್ಕರ್ ಮತ್ತು ಭಾರತ..!!
ಸಾವರ್ಕರ ಕನಸಿನ ಭಾರತ ವಿಶಿಷ್ಠವೇ ಆಗಿತ್ತು.. ಸಾವರ್ಕರರ ಭಾರತದಲ್ಲಿ ಪ್ರತಿಯೂಬ್ಬರಿಗೂ ಸಮಾನ ಹಕ್ಕು ಕರ್ತವ್ಯಗಳಿದ್ದವು.ಆದರೆ ದೇಶದೊಳಗೆ ಮತ್ತೊಂದು ದೇಶ ನಿರ್ಮಿಸುವ ಹಕ್ಕು ಯಾರಿಗೂ ಇರಲಿಲ್ಲ..


ಸಾವರ್ಕರ್ ಬಹುಮುಂಚೆಯೆ ಸಮಾಜಸುಧಾರಣೆಯ ಮಹತ್ವವನ್ನು ಅರಿತವರು. ಅದಕ್ಕೆಂದೇ ರತ್ನಾಗಿರಿಯಲ್ಲಿ "ಪತಿತಪಾವನ" ಮಂದಿರ ನಿರ್ಮಿಸಿದರು. ಅಲ್ಲಿ ಹಿಂದುಳಿದವರೇ ಪೂಜಾರಿಗಳು. ಅವರೇ ತೀರ್ಥ-ಪ್ರಸಾದ ವಿತರಕರು..ಅದಕ್ಕೆ ಚಕಾರ ಎತ್ತಿದವರೆಲ್ಲಾ ಸಾವರ್ಕರರ ತರ್ಕಬದ್ಧ ವಿಚಾರಗಳ ಎದುರು ಸೋತು, ಸಾವರ್ಕರರನ್ನೇ ಹಿಂಬಾಲಿಸಿದರು.

ಸಾವರ್ಕರರನ್ನ ನಾವು ನೆನಪಿಸಿಕೊಳ್ಳಬೇಕಾದದ್ದು ಅವರ ಸೈನ್ಯಕೀಕರಣವನ್ನ. ಎಷ್ಟೇ ಜನ ವಿರೋಧಿಸಿದರೂ ಸಾವರ್ಕರ್ ಮಾತ್ರ ಹಿಂದೂಗಳಿಗೆ ಸೈನ್ಯ ಸೇರಲು ಕರೆ ನೀಡಿದ್ದರು. ಅದರಿಂದ ಪ್ರೇರಿತರಾದ ಅನೇಕರು ಸೈನ್ಯ ಸೇರಿಯೇ ಬಿಟ್ಟರು.. ಅವರ ಆ ದೂರದೃಷ್ಟಿಯ ಪರಿಣಾಮವಾಗಿಯೇ ಇವತ್ತು ಹೈದರಾಬಾದ್ ಪ್ರಾಂತ, ಕಾಶ್ಮೀರಗಳು ಭಾರತದ ಭೂಪಟದಲ್ಲಿವೆ.. ಆದರೂ ಸಾವರ್ಕರರ ಎಣಿಕೆಯಂತೆ ಆ ಕಾರ್ಯ ಪೂರ್ಣವಾಗಿರಲಿಲ್ಲ..
ಚೈನಾ ಯುದ್ಧದಲ್ಲಿ  ಬೇಜವಾಬ್ದಾರಿಯಿಂದ  ಭಾರತ ಸೋತಾಗ ಆಗಿನ ಸೈನ್ಯಾಧಿಕಾರಿ ಕಾರಿಯಪ್ಪನವರು ಹೇಳಿದ್ದು ಅದನ್ನೇ.."ಒಂದು ವೇಳೆ ಭಾರತವು ಸಾವರ್ಕರರ ಸೈನ್ಯಕೀಕರಣದ ನೀತಿಯನ್ನು ಸ್ವೀಕರಿಸಿ ಅದಕ್ಕನುರೂಪವಾಗಿ ಸಿದ್ಧವಾಗಿದ್ದರೆ ಇಂದಿನ ಅಪ್ರಿಯ ಸ್ಥಿತಿಗೆ ಬರುತ್ತಿರಲಿಲ್ಲ.." ಅಂತ..!!

                            


ಸಾವರ್ಕರ್ ಮತ್ತು ಗಾಂಧೀಹತ್ಯೆ 
ಸಾವರ್ಕರ್ ಗಾಂಧೆಹತ್ಯೆಯ ರೂವಾರಿ ಎಂಬೀ ವಾದ, ಗಾಂಧೀಜಿ ಕೊಲೆಯಾದಾಗಿನಿಂದ ಇವತ್ತಿಗೂ ಜೀವಂತವಾಗಿ ಇದೆ.


"ಗಾಂಧೀ ಹತ್ಯೆಯಲ್ಲಿ,ಸಾವರ್ಕರರ ಪಾತ್ರವೇನೂ ಇಲ್ಲ. ಅದಕ್ಕೆ ಯಾವುದೇ ಸಾಕ್ಷ್ಯಗಳೂ ಇಲ್ಲ.ಅದೊಂದು ಹುರುಳಿಲ್ಲದ ಆರೋಪ.ಅವರನ್ನು ಬಿಟ್ಟುಬಿಡಿ"- ಅಂತ ಅಂದಿನ ಕಾನೂನು ಸಚಿವರಾಗಿದ್ದ 'ಶ್ರೀಯುತ ಅಂಬೇಡ್ಕರ'ರು ಸಾರಿ ಸಾರಿ ಹೇಳಿದರೂ, ಪ್ರಧಾನಿ ನೆಹರು ಮಾತ್ರ ಕಿವುಡರಾಗಿದ್ದರು..


ಸಾವರ್ಕರರನ್ನು ಅವಮಾನಿಸಲು ತನಗೆ ಸಿಕ್ಕ ಈ ಅವಕಾಶವನ್ನು, ಆ 'ಗುಲಾಬಿಯ ಚಾಚಾ' ಹೇಗೆ ತಾನೇ ಬಿಡಲು ಸಾಧ್ಯವಿತ್ತು.??!!... ಜೈಲಿನಲ್ಲಿಯೂ ಫ್ಯಾನು, ಸೋಫಾಗಳ ಸುಖದಲ್ಲಿ ದಿನ ಕಳೆಯುತ್ತಿದ್ದ ಆ 'ಗುಲಾಬಿ'ಗೆ, ಅಂಡಮಾನಿನ ಭೀಕರ ಮೃತ್ಯುಕೂಪವನ್ನು ಜಯಿಸಿ ಬಂದ  'ವೀರ'ನ ಬಗ್ಗೆ ತಿಳಿದಿರಬೇಕಿತ್ತು ಅನ್ನೋದೇ ನಮ್ಮ ಮೂರ್ಖತನ..!!!
ಸ್ವಾತಂತ್ರಕ್ಕೂ ಮುಂಚೆ,  ದೇಶಕ್ಕಾಗಿ ಕೋರ್ಟಿನ ಕಟಕಟೆ ಹತ್ತಿದ್ದ ಸಾವರ್ಕರರನ್ನು,  ಸ್ವಾತಂತ್ರ್ಯ ಬಂದ ಮೇಲೂ,ಸುಳ್ಳು ಆರೋಪದೊಂದಿಗೆ, ಕಡೆಗೂ ಕೋರ್ಟಿಗೆ, ಜೈಲಿಗೆ ಅಲೆದಾಡಿಸಿದರು.. ಆದರೆ ನ್ಯಾಯಾಲಯ ಅಂತ ಒಂದಿದೆಯಲಾ.. ಅದಂತೂ ಸ್ಪಷ್ಟವಾಗಿ ಸಾವರ್ಕರರನ್ನು ನಿರ್ದೋಷಿ ಅಂತ ಕೂಗಿ ಹೇಳಿತು..


1949 ಫೆಬ್ರವರಿ 10 ರಂದು, ನ್ಯಾಯಾಧೀಶರಾದ ಆತ್ಮಾಚರಣರು ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ.
"There is no reason to support that Vinayak Damodar Savarkar had any hand in what took place at Delhi on 20-1-1948 and 30-1-1938"..
ತೀರ್ಪಿನ ಕಡೆಯಲ್ಲಿ ಮತ್ತೊಮ್ಮೆ ಈ ಅಂಶವನ್ನು ಸ್ಪಷ್ಟಪಡಿಸುತ್ತಾ ಹೀಗೆ ಹೇಳಲಾಗಿದೆ..
"Vinayak Damodar Savarkar is found not guilty on the offences as specified in the charge and is acquitted there under he is in custody and can be released forthwith"..
ಇಷ್ಟು ಸ್ಪಷ್ಟವಾದ ನಿರ್ಣಯವಾಗಿದ್ದರೂ, ಕಂಡೂ ಕುರುಡರಂತೆ ಕೆಲವರು ವರ್ತಿಸುತ್ತಿದ್ದಾರೆ ಅಂದ್ರೆ, ಅವರ ಬಗ್ಗೆ ಒಂದು ಸಣ್ಣ ಮರುಕವನ್ನಷ್ಟೇ ಪಡಬಹುದು..!!!!!!!!!




ಸಾವರ್ಕರರ ಬೆಗ್ಗೆ ಅಪಾರ ಅಭಿಮಾನ ಮೂಡುವುದೇ ಈ ಎಲ್ಲ ಕಾರಣಕ್ಕಾಗಿ.. ಅವರದು ಹತ್ತು ಹಲವು ಮುಖ. ಸದಾ 'ರಾಷ್ಟ್ರ'ದಲ್ಲೇ 'ಧ್ಯಾನಾ'ಸಕ್ತ ಮನಸ್ಸು ಅವರದು..ಆದರೆ ಅವರ ಜೀವನದ ಒಂದಿಂಚನ್ನೂ ಓದದ, ಓದಿದರೂ ಅರ್ಥೈಸಿಕೊಳ್ಳಲಾಗದವರು ಕೇವಲ  ಆರೋಪಗಳನ್ನು ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ..ಆದರೆ, ಬದುಕಿಡೀ ದೇಶಕ್ಕಾಗಿ ಜೀವವನ್ನು ಬಲಿಕೊಟ್ಟ ಅವರಿಗೆ, ಒಂದು ಸಣ್ಣ ಕೃತಜ್ಞತೆಯನ್ನೂ ಹೇಳಲು ಹಿಂಜರಿಯುವಂತಾಯಿತಲ್ಲಾ..! ಅದೇ ಬೇಸರ..!!



ಸಾವರ್ಕರ್ಜೀ ನೀವು ಸದಾ ನಮ್ಮ ಮನದಲ್ಲಿದ್ದೀರಿ..
ನಿಮ್ಮ ತಾರ್ಕಿಕ, ರಾಷ್ಟ್ರೀಯ ವಿಚಾರಗಳು ಎಂದಿಗೂ ನಮಗೆ ಸ್ಫೂರ್ತಿ..
ಸಶಕ್ತ ಭಾರತಕ್ಕಾಗಿ ನಿಮ್ಮ ವಿಚಾರಧಾರೆ ನಮಗೆ ಬೇಕಾಗಿದೆ.. 
ನಿಮ್ಮ ಅದ್ಭುತ ವ್ಯಕ್ತಿತ್ವದ ಒಂದಂಶವನ್ನು ನಮಗೂ ಹರಸಿ..


ವಂದೇ ಮಾತರಂ...........!!!!!






Friday, 17 February 2012

ಸಶಸ್ತ್ರಕ್ರಾಂತಿಯ ಪೀಠಿಕೆ - ಬರೆದಿತ್ತವನು ಫಡ್ಕೆ...!!!!!!

ಆಗ ತಾನೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಭೀಕರತೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಬ್ರಿಟಿಷರಿಗೆ, ಅದರಷ್ಟೇ ಪ್ರಖರ ಭಯವನ್ನು ಒಬ್ಬನೇ ವ್ಯಕ್ತಿ ಮತ್ತೊಮ್ಮೆ ಹುಟ್ಟಿಸಿದ್ದ..


                                                 


ಅವನ ಹೆಸರು "ವಾಸುದೇವ ಬಲವಂತ ಫಡ್ಕೆ". ಮಹಾರಾಷ್ಟ್ರದ ಶಿರ್ಧೋನ್ ನಲ್ಲಿ ಜನನ. 1857 ಸಂಗ್ರಾಮ ನಡೆದಾಗ, ಆತ ಹೈಸ್ಕೂಲ್ ಓದುತ್ತಿದ್ದ. ಅದರಿಂದ ಪ್ರೇರಿತಗೊಂಡ ಫಡ್ಕೆ ಅರ್ಧಕ್ಕೆ ಶಾಲೆಗೆ ನಮಸ್ಕಾರ ಹೇಳಿದ.
1860 ರಲ್ಲಿಯೇ ಅವನ ಮದುವೆಯೂ ಆಯಿತು. ಇಷ್ಟ ಇಲ್ಲದಿದ್ದರೂ ಸಂಸಾರದ  ನಿರ್ವಹಣೆಗೆ  ಒಂದು ವೈದ್ಯಕೀಯ ಕಾಲೇಜಿನಲ್ಲಿ ನೌಕರಿ ಸೇರಿದ.
ಅದೊಮ್ಮೆ ಅವನ ತಾಯಿ ತೀರಾ ಅಸ್ವಸ್ಥರಾದ ಸಂದೇಶ ಬಂತು. ಕೂಡಲೇ ರಜೆಗೆ ಅರ್ಜಿ ಹಾಕಿದರೂ ಅನುಮತಿ ಸಿಗಲಿಲ್ಲ. ಆದರೂ ಲೆಕ್ಕಿಸದೆ ಊರಿಗೆ ಹೋದಾಗ ಅವನ ತಾಯಿ ಅದಾಗಲೇ ಸ್ವರ್ಗಸ್ಥರಾಗಿದ್ದರು. ಇದರಿಂದ ಆಕ್ರೋಶಗೊಂಡ ಫಡ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ..


ನಿಜವಾಗಿ ಇತಿಹಾಸ ಗಮನಿಸೋದಾದ್ರೆ, ಈ "ಸ್ವದೇಶೀ" ಚಳುವಳಿಯನ್ನು ಮನೆಮನೆಗೂ ಕೊಂಡೊಯ್ದ ಮೊದಲಿಗ ಅಂದ್ರೆ ಈ ಫಡ್ಕೇನೆ.. ಜಸ್ಟಿಸ್ ಮಹದೇವ್ ಗೋವಿಂದ್ ರಾನಡೆಯವರ ಸ್ವದೇಶೀ ವಿಚಾರಗಳಿಂದ ಸ್ಫೂರ್ತಿ ಪಡೆದ ಫಡ್ಕೆ, ಗಲ್ಲಿ ಗಲ್ಲಿಗಳಿಗೂ ಹೋಗಿ, ಸ್ವದೆಶಿತನದ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಿದ್ದ.
ಆದರೆ, ಜನರಲ್ಲಿ ಅಂತಸ್ಸತ್ವ ಕಳೆದುಹೋಗಿತ್ತು. ಕೇವಲ ಭಾಷಣಗಳಿಂದ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬೇಗನೆ ಅರ್ಥವಾಯಿತು. ಅಲ್ಲದೆ ಯುವಕರಿಗೆ ರಾಷ್ಟ್ರೀಯ ಶಿಕ್ಷಣ ಅವಶ್ಯಕ ಎಂಬ ದೃಷ್ಟಿಯಲ್ಲಿ ಶಿಕ್ಷಣ ಸಂಸ್ಥೆಯನ್ನೂ ತೆರೆದ.
ಇದರ ಮಧ್ಯೆಯೇ, ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ತಲೆದೋರಿತು.ಜನ ಒಪ್ಪತ್ತು ತುತ್ತಿಗೂ ಗತಿಯಿಲ್ಲದೆ ಪರದಾಡುವಂತಾಯಿತು. ಆದ್ರೆ ಕ್ರೂರ ಬ್ರಿಟಿಶ್ ಸರ್ಕಾರ ಮಾತ್ರ, ಎಂದಿನಂತೆ ತೆರಿಗೆಯ ವಸೂಲಿಯನ್ನು ಮುಂದುವರೆಸಿತು.ಬ್ರಿಟಿಷರ ಈ ನೀಚಕೃತ್ಯಗಳಿಂದ ಕುಪಿತನಾದ ಫಡ್ಕೆ ಮುಂದೆ ಇಟ್ಟ ಹೆಜ್ಜೆಯೇ ಇತಿಹಾಸ..


ಮಹಾರಾಷ್ಟ್ರದ ಗುಡ್ಡಗಾಡಿನಲ್ಲಿ "ರಾಮೋಷಿ" ಎಂಬ ಜನಾಂಗ ವಾಸವಾಗಿತ್ತು. ಕಾಡಿನ ರಕ್ಷಣೆಯೇ ಅವರ ಕಾಯಕ.. ಆದರೆ ಆಂಗ್ಲರು ಕಾಡನ್ನು ನಾಶಗೊಳಿಸಿದಾಗ, ಸಹಜವಾಗಿಯೇ ಆ ಜನರಲ್ಲಿ ಬ್ರಿಟಿಷರ ವಿರುದ್ಧ ಒಂದು ದ್ವೇಷ ಮನೆಮಾಡ್ತು. ಫಡ್ಕೆಗೆ ಬೇಕಾಗಿದ್ದೂ ಇದೆ. ಅದೇ ರಾಮೋಷಿ ಜನರನ್ನು ಗುಮ್ಪುಮಾಡಿ, ಅವರೆಲ್ಲರಿಗೂ ಶಸ್ತ್ರಗಳ ತರಬೇತಿ ಕೊಟ್ಟ. ಗೆರಿಲ್ಲಾ ಯುದ್ಧತಂತ್ರಗಳನ್ನು ಕಲಿಸಿದ. ಅಲ್ಲೊಂದು ದೊಡ್ಡ ಸೈನ್ಯವೇ ತಯಾರುಗೊಂಡಿತ್ತು..ಕೊನೆಗೆ 23 ಫೆಬ್ರುವರಿ 1879 ರಲ್ಲಿ, 'ಧಮರಿ' ಗ್ರಾಮದಲ್ಲಿ ತನ್ನ ಬಂಡಾಯದ ಬಾವುಟವನ್ನು ಏರಿಸಿಯೇ ಬಿಟ್ಟ..!!!
ಮೊದಮೊದಲಿಗೆ, ಫಡ್ಕೆ ನಡೆಸಿದ್ದು, ಆಂಗ್ಲರನ್ನು ಓಲೈಸುತ್ತಿದ್ದ ಶ್ರೀಮಂತರ ಮನೆಗಳ ಮೇಲೆ ದಾಳಿ. ಅಲ್ಲಿ ಸಿಕ್ಕ ಹಣವನ್ನು, ಶಸ್ತ್ರಗಳನ್ನೂ ಸಂಘಟನೆಯ ಬಲವರ್ಧನೆಗೆ ಬಳಸುತ್ತಿದ್ದ.. ಹೀಗೆ ಮುಂದಿನ 4-5 ವರ್ಷಗಳ ವರೆಗೂ ಆಂಗ್ಲರ ವಿರುದ್ಧದ ಹೋರಾಟಗಳು ನಿರಂತರ ನಡೆದವು. ಫಡ್ಕೆ ಆಂಗ್ಲರಿಗೆ ಅಕ್ಷರಶಃ "ಸಿಂಹಸ್ವಪ್ನ"ವಾಗಿದ್ದ..


ಬ್ರಿಟಿಶ್ ಸರ್ಕಾರ, ಮೇಜರ್ ಡೆನಿಯಲ್ ನ ಮುಂದಾಳತ್ವದಲ್ಲಿ ಒಂದು ಪಡೆ ರಚನೆ ಮಾಡಿತು.. ಅದರ ವಾಸನೆ ಬಡಿದ ಕೂಡಲೇ, ಫಡ್ಕೆ ಭೂಗತನಾದ. ಬ್ರಿಟಿಷರ ಎಲ್ಲ ಪ್ರಯತ್ನ ವ್ಯರ್ಥವಾಯಿತು..ಆದರೆ ದೇಶದ ದೌರ್ಭಾಗ್ಯವೆಂಬಂತೆ, ಅದೊಮ್ಮೆ ಅತೀವ ಜ್ವರದಿಂದ ಬಳಲಿ, ಕದಲಗಿ  ಎಂಬಲ್ಲಿ ಮರೆಸಿಕೊಂಡಿದ್ದಾಗ, ಬ್ರಿಟಿಷರ ಸೆರೆಯಾದ. ಅಲ್ಲಿಂದ ಆತನ ಬದುಕು ಯಾತನಾಮಯ..!!!


ನೆಪಕ್ಕೆಂದು ವಿಚಾರಣೆ ನಡೆಸಿದ ಕೋರ್ಟ್, ಆಂಗ್ಲರ ವಿರುದ್ಧ ಬಂಡೆದ್ದ ಕಾರಣಕ್ಕೆ ಶಿಕ್ಷೆ ವಿಧಿಸಲಾಯಿತು. ಅದೂ ಎಲ್ಲಿಗೆ, ದೂರದ ಅರಬ್ ನ ಎಡನ್ನಿನ ಸೆರೆಮನೆ..!!!!
ಭಾರತದ ಯಾವುದೋ ಸೆರೆಮನೆಯಲ್ಲಿ ಇಡಬಹುದಾಗಿತ್ತಾದರೂ, ಅವನನ್ನು ಎಡನ್ನಿಗೆ ಸಾಗುಹಾಕಲಾಯಿತು..ಯಾಕಂದ್ರೆ ಆಂಗ್ಲರಿಗೂ ಗೊತ್ತಾಗಿತ್ತು. ಈ ಭೂಪ, ದೇಶದ ಯಾವ ಮೂಲೆಯಲ್ಲಿದ್ದರೂ ಮತ್ತೆ ಭುಗಿಲೆದ್ದು ಬರುವ ಜ್ವಾಲಾಮುಖಿ ಅಂತ..


ಫಡ್ಕೆ ಅತೀಭಾವುಕನಾಗಿ, ತನ್ನ ತಾಯ್ನಾಡನ್ನು ತೊರೆದು ಹೊರಟ. ಅದೊಂದು ಮೃತ್ಯುಕೂಪ. ತಿನ್ನಲು ಅರೆಬೆಂದ ಆಹಾರ., ಕುಡಿಯಲು ಹೊಲಸು ನೀರು, ಅದೂ ಚರ್ಮದ ಚೀಲದಲ್ಲಿ..!!
ದಿನನಿತ್ಯದ ಕಷ್ಟಗಳಿಂದ ಫಡ್ಕೆ ನೊಂದಿದ್ದರೂ, ಅವನ ದೇಶಭಕ್ತಿಗೆ ಕಿಂಚಿತ್ತೂ ಧಕ್ಕೆ ಆಗಿರಲಿಲ್ಲ. ತನ್ನ ದೇಶಕ್ಕೆ ಮತ್ತೆ ಹೋಗಬೇಕೆಂಬ ವಾಂಛೆ ಸದಾ ಅವನಲ್ಲಿತ್ತು. ಭಾರತವನ್ನು ಸ್ವಾತಂತ್ರಗೊಳಿಸಬೇಕು ಅನ್ನೋದೊಂದೇ ಅವನಲ್ಲಿದ್ದ ತುಡಿತ.. ಹೇಗಾದರೂ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ಯಾವಾಗಲೂ ಚಿಂತಿಸುತ್ತಿದ್ದ..ಹಾಗೆ ಯೋಚಿಸಿ ಒಮ್ಮೆ, ಜೈಲಿನ ಬಾಗಿಲನ್ನೇ ಮುರಿದು, ಅದನೆ ಏಣಿಯಂತೆ ಏರಿ, ಜೈಲಿನಿಂದ ತಪ್ಪಿಸಿಕೊಂಡುಬಿಟ್ಟ. ಆದರೆ ಹೋಗೋದಾದ್ರೂ ಎಲ್ಲಿಗೆ.? ಸುತ್ತಲೂ ಮರುಳುಗಾಡು. ಜನ-ಭಾಷೆ-ದಾರಿ ಯಾವುದೂ ಗೊತ್ತಿಲ್ಲ.. ಆದರೂ ನಿರಂತರ ಓಡಿದ. ಕೊನೆಗೆ ಸುಸ್ತಾಗಿ ಮೂರ್ಚೆತಪ್ಪಿ ಬಿದ್ದ.. ಅಲ್ಲಿನ ಕೆಲವರು ಅವನನ್ನು ಹಿಡಿದು ಮತ್ತೆ ಆಂಗ್ಲರಿಗೆ ಒಪ್ಪಿಸಿದರು.
ಅಂದಿನಿದ ಅವನ ಮೇಲಿನ ನಿಗಾ ತೀವ್ರವಾಯಿತು.ಇನ್ನೂ ಹೆಚ್ಚಿನ ಕ್ರೂರತನವನ್ನು ತೋರಿಸಲಾರಮ್ಭಿಸಿದರು.


ಭಾರತಮಾತೆಗಾಗಿ, ಅವಳ ಸ್ವಾತಂತ್ರಕ್ಕಾಗಿ ಇದೆಲ್ಲವೂ ಕರ್ತವ್ಯವೇ ಎಂದು ಎಲ್ಲವನ್ನೂ ಸಹಿಸಿಕೊಂಡ..
ಆದರೆ, ಅಷ್ಟರಲ್ಲೇ ಅವನಿಗೆ ಕ್ಷಯ ರೋಗ ತಗುಲಿತು. ಆ ರೋಗದ ನಿರಂತರ ನರುಳುವಿಕೆಯಲ್ಲೇ ಫಡ್ಕೆ 17 ಫೆಬ್ರುವರಿ 1883 ರಂದು ಹುತಾತ್ಮನಾದ.. ಅವನು ಸಾಯುವಾಗಲೂ ಅವನ ಕೈಯಲ್ಲೊಂದು ಗಂಟಿತ್ತು. ಅದರಲ್ಲಿ "ಪುಣ್ಯ ಭಾರತ"ದ ಮಣ್ಣು ಇತ್ತು..(ಭಾರತದಿಂದ ಹೊರಡುವಾಗ ಅದನ್ನ ತುಂಬಿಕೊಂಡು ಬಂದಿದ್ದ ಆ ಭೂಪ..)!!!


ತಮ್ಮದೆಲ್ಲವನ್ನೂ ನಾಡಿಗೆ ಅರ್ಪಿಸಿದ ಇಂತಹ ಮಹಾನೀಯರಿಂದಲೇ, ಇವತ್ತು ನಾವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ.. ಆದರೆ ಆ ಸ್ವಾತಂತ್ರ್ಯದ ಅಮಲಿನಲ್ಲಿ, ಅದಕ್ಕಾಗಿ ಶ್ರಮಿಸಿದವರನ್ನು ಮರೆತಿರುವುದು ಮಾತ್ರ ದೌರ್ಭಾಗ್ಯ..!!!


ವಾಸುದೇವ ಬಲವಂತ ಫಡ್ಕೆಯ ಹೌತಾತ್ಮ್ಯದಿನವಾದ ಇಂದು, ಅವನ ದಿವ್ಯಚೇತನಕ್ಕೆ ವಂದಿಸುತ್ತಾ, ಇನ್ನಷ್ಟು ಅಂತಹ ಸಿಂಹಗಳು ಭಾರತಗರ್ಭದಲ್ಲಿ ಜನ್ಮಿಸಲಿ ಎಂಬ ಹಾರೈಕೆಯೊಂದಿಗೆ..
ವಂದೇ ಮಾತರಂ...!!!!!!!

Wednesday, 1 February 2012

ನಾನೊಬ್ಬನೆ ಬದಲಾದರೆ....

ನಾನೊಬ್ಬನೆ ಬದಲಾದರೆ, ದೇಶವು ಬದಲಾಗದು.
ಎನ್ನುವ ಭ್ರಮೆಯ ಬಿಡದೆ, ದೇಶಕೆ ಒಳಿತಾಗದು..

ಸಾವಿರಾರು ಮೈಲಿಗಳ ದೂರದ ಪ್ರಯಾಣಕ್ಕೆ,
ಪ್ರಾರಂಭವು ಒಂದು ಪುಟ್ಟ ಹೆಜ್ಜೆಯೇ ಅಲ್ಲವೇ ?
ಆ ಹೆಜ್ಜೆಯನಿಡಲೂ ಆಲಸ್ಯವ ತೋರಿದರೆ 
ದಿಗಂತದ ಗುರಿಯೆಡೆಗೆ ತಲುಪುವುದು ಸಾಧ್ಯವೇ?

ವಿಸ್ತಾರದ ಸಾಗರವೂ ಇತ್ತು ಮೊದಲು ಬಿಂದು,
ಒಂದು ಕಾಳಿನಿಂದ ಬೆಳೆಯ ರಾಶಿಯಾಯಿತಿಂದು.
ಗಣಿತದೆಲ್ಲ ಎಣಿಕೆಗಳಿಗೆ ಆರಂಭವೇ ಒಂದು,
ಒಂದರಿಂದಲೇ ಅನಂತ, ಸತ್ಯವಿದೆಂದೆಂದೂ..

ಬಯಲಿನಲಿ ರಭಸದಿ, ಪ್ರವಹಿಸುವ ನದಿಗಳು,
ಗಿರಿ ಒಡಲಲಿ ಜನಿಸುತಲೇ, ಭೋರ್ಗರೆಯುವುವೇ
ಗಗನವನೆ ಮುಟ್ಟುವಂತೆ ಕಟ್ಟಿರುವ ಸೌಧಗಳು,
ಅಡಿಗಲ್ಲನೆ ಇಡದೆ, ಸುಸ್ಥಿರದಿ ನಿಲ್ಲುವುವೇ..???

ಸತ್ಕಾರ್ಯದ ಆರಂಭವು ಇರುವುದೆಂದೂ ಕ್ಷೀಣ,
ಮುನ್ನಡೆಯುತ ಆಗುವುದು ಬೃಹತ್ಕಾರ್ಯ ಕ್ರಮೇಣ..
ಒಬ್ಬನೇ ಇದ್ದರೂ ಏನು? ಮನದೊಳಿರೆ ಸಚ್ಚಲ,
ಭಾರತದುನ್ನತಿಯಾಗುವುದು.. ಅತಿ ನಿಶ್ಚಲ.....