ನಾನೊಬ್ಬನೆ ಬದಲಾದರೆ, ದೇಶವು ಬದಲಾಗದು.
ಎನ್ನುವ ಭ್ರಮೆಯ ಬಿಡದೆ, ದೇಶಕೆ ಒಳಿತಾಗದು..
ಸಾವಿರಾರು ಮೈಲಿಗಳ ದೂರದ ಪ್ರಯಾಣಕ್ಕೆ,
ಪ್ರಾರಂಭವು ಒಂದು ಪುಟ್ಟ ಹೆಜ್ಜೆಯೇ ಅಲ್ಲವೇ ?
ಆ ಹೆಜ್ಜೆಯನಿಡಲೂ ಆಲಸ್ಯವ ತೋರಿದರೆ
ದಿಗಂತದ ಗುರಿಯೆಡೆಗೆ ತಲುಪುವುದು ಸಾಧ್ಯವೇ?
ವಿಸ್ತಾರದ ಸಾಗರವೂ ಇತ್ತು ಮೊದಲು ಬಿಂದು,
ಒಂದು ಕಾಳಿನಿಂದ ಬೆಳೆಯ ರಾಶಿಯಾಯಿತಿಂದು.
ಗಣಿತದೆಲ್ಲ ಎಣಿಕೆಗಳಿಗೆ ಆರಂಭವೇ ಒಂದು,
ಒಂದರಿಂದಲೇ ಅನಂತ, ಸತ್ಯವಿದೆಂದೆಂದೂ..
ಬಯಲಿನಲಿ ರಭಸದಿ, ಪ್ರವಹಿಸುವ ನದಿಗಳು,
ಗಿರಿ ಒಡಲಲಿ ಜನಿಸುತಲೇ, ಭೋರ್ಗರೆಯುವುವೇ
ಗಗನವನೆ ಮುಟ್ಟುವಂತೆ ಕಟ್ಟಿರುವ ಸೌಧಗಳು,
ಅಡಿಗಲ್ಲನೆ ಇಡದೆ, ಸುಸ್ಥಿರದಿ ನಿಲ್ಲುವುವೇ..???
ಸತ್ಕಾರ್ಯದ ಆರಂಭವು ಇರುವುದೆಂದೂ ಕ್ಷೀಣ,
ಮುನ್ನಡೆಯುತ ಆಗುವುದು ಬೃಹತ್ಕಾರ್ಯ ಕ್ರಮೇಣ..
ಒಬ್ಬನೇ ಇದ್ದರೂ ಏನು? ಮನದೊಳಿರೆ ಸಚ್ಚಲ,
ಭಾರತದುನ್ನತಿಯಾಗುವುದು.. ಅತಿ ನಿಶ್ಚಲ.....
ರಾಷ್ಟ್ರ ಪ್ರೇಮವನ್ನು ತುಂಬುವ ನಿಮ್ಮ ಆಶಯ ಪ್ರಶಂಸನೀಯ.
ReplyDeleteನನ್ನ ಬ್ಲಾಗಿಗೆ ಸ್ವಾಗತ.
ಬದಲಾವಣೆ ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು ಎಂಬ ನಿಮ್ಮ ಕವಿತೆಯ ಆಶಯ ಮೆಚ್ಚುವಂತದ್ದು ಭೀಮಣ್ಣ.. ಮತ್ತೆ ಮನದ ಕಣ ಕಣಕ್ಕೆ ದೇಶ ಭಕ್ತಿಯನು ಧಾರೆಯಾಗಿಸ ಬಂದ ನಿಮ್ಮ ಕವಿತೆಯ ಪರಿ ತುಂಬಾ ಚೆನ್ನಾಗಿದೆ.. ನಿಮ್ಮ ಕವಿತೆಯ ಆಶಯವನ್ನು ಸಮರ್ಥಿಸಲು ನೀವು ಒದಗಿಸಿರುವ ಉಪಮೆಗಳು ಸುಂದರವಾಗಿ ಪಡಿ ಮೂಡಿವೆ.. ಬಿಂದುವಿನಿಂದ ಸಾಗರ, ಕಣಗಳಿಂದ ರಾಶಿ, ಹಾಗೆಯೇ ಒಬ್ಬನಿಂದ ಅಸಂಖ್ಯ.. ತುಂಬಾ ಅರ್ಥಗರ್ಭಿತವಾಗಿ ಕವಿತೆಯನ್ನು ವಿಸ್ತರಿಸಿದ್ದೀರಿ.. ದೇಶದ ಉನ್ನತಿಗೆ ಒಬ್ಬ ಕಟಿ ಬದ್ಧನಾದರೆ, ಅವನನ್ನು ಸಾವಿರ ಮಂದಿ ಹಿಂಬಾಲಿಸುತ್ತಾರೆ.. ಹಾಗೆ ಮುನ್ನುಗ್ಗುವವನು ನಾಯಕನಾಗಿ ನಿಲ್ಲುತ್ತಾನೆ.. ತುಂಬಾ ಹಿಡಿಸಿತು ನಿಮ್ಮ ಕವಿತೆ..:)))
ReplyDelete