Friday, 17 February 2012

ಸಶಸ್ತ್ರಕ್ರಾಂತಿಯ ಪೀಠಿಕೆ - ಬರೆದಿತ್ತವನು ಫಡ್ಕೆ...!!!!!!

ಆಗ ತಾನೆ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಭೀಕರತೆಯಿಂದ ಸುಧಾರಿಸಿಕೊಳ್ಳುತ್ತಿದ್ದ ಬ್ರಿಟಿಷರಿಗೆ, ಅದರಷ್ಟೇ ಪ್ರಖರ ಭಯವನ್ನು ಒಬ್ಬನೇ ವ್ಯಕ್ತಿ ಮತ್ತೊಮ್ಮೆ ಹುಟ್ಟಿಸಿದ್ದ..


                                                 


ಅವನ ಹೆಸರು "ವಾಸುದೇವ ಬಲವಂತ ಫಡ್ಕೆ". ಮಹಾರಾಷ್ಟ್ರದ ಶಿರ್ಧೋನ್ ನಲ್ಲಿ ಜನನ. 1857 ಸಂಗ್ರಾಮ ನಡೆದಾಗ, ಆತ ಹೈಸ್ಕೂಲ್ ಓದುತ್ತಿದ್ದ. ಅದರಿಂದ ಪ್ರೇರಿತಗೊಂಡ ಫಡ್ಕೆ ಅರ್ಧಕ್ಕೆ ಶಾಲೆಗೆ ನಮಸ್ಕಾರ ಹೇಳಿದ.
1860 ರಲ್ಲಿಯೇ ಅವನ ಮದುವೆಯೂ ಆಯಿತು. ಇಷ್ಟ ಇಲ್ಲದಿದ್ದರೂ ಸಂಸಾರದ  ನಿರ್ವಹಣೆಗೆ  ಒಂದು ವೈದ್ಯಕೀಯ ಕಾಲೇಜಿನಲ್ಲಿ ನೌಕರಿ ಸೇರಿದ.
ಅದೊಮ್ಮೆ ಅವನ ತಾಯಿ ತೀರಾ ಅಸ್ವಸ್ಥರಾದ ಸಂದೇಶ ಬಂತು. ಕೂಡಲೇ ರಜೆಗೆ ಅರ್ಜಿ ಹಾಕಿದರೂ ಅನುಮತಿ ಸಿಗಲಿಲ್ಲ. ಆದರೂ ಲೆಕ್ಕಿಸದೆ ಊರಿಗೆ ಹೋದಾಗ ಅವನ ತಾಯಿ ಅದಾಗಲೇ ಸ್ವರ್ಗಸ್ಥರಾಗಿದ್ದರು. ಇದರಿಂದ ಆಕ್ರೋಶಗೊಂಡ ಫಡ್ಕೆ ಕೆಲಸಕ್ಕೆ ರಾಜೀನಾಮೆ ನೀಡಿದ..


ನಿಜವಾಗಿ ಇತಿಹಾಸ ಗಮನಿಸೋದಾದ್ರೆ, ಈ "ಸ್ವದೇಶೀ" ಚಳುವಳಿಯನ್ನು ಮನೆಮನೆಗೂ ಕೊಂಡೊಯ್ದ ಮೊದಲಿಗ ಅಂದ್ರೆ ಈ ಫಡ್ಕೇನೆ.. ಜಸ್ಟಿಸ್ ಮಹದೇವ್ ಗೋವಿಂದ್ ರಾನಡೆಯವರ ಸ್ವದೇಶೀ ವಿಚಾರಗಳಿಂದ ಸ್ಫೂರ್ತಿ ಪಡೆದ ಫಡ್ಕೆ, ಗಲ್ಲಿ ಗಲ್ಲಿಗಳಿಗೂ ಹೋಗಿ, ಸ್ವದೆಶಿತನದ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಿದ್ದ.
ಆದರೆ, ಜನರಲ್ಲಿ ಅಂತಸ್ಸತ್ವ ಕಳೆದುಹೋಗಿತ್ತು. ಕೇವಲ ಭಾಷಣಗಳಿಂದ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಬೇಗನೆ ಅರ್ಥವಾಯಿತು. ಅಲ್ಲದೆ ಯುವಕರಿಗೆ ರಾಷ್ಟ್ರೀಯ ಶಿಕ್ಷಣ ಅವಶ್ಯಕ ಎಂಬ ದೃಷ್ಟಿಯಲ್ಲಿ ಶಿಕ್ಷಣ ಸಂಸ್ಥೆಯನ್ನೂ ತೆರೆದ.
ಇದರ ಮಧ್ಯೆಯೇ, ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ತಲೆದೋರಿತು.ಜನ ಒಪ್ಪತ್ತು ತುತ್ತಿಗೂ ಗತಿಯಿಲ್ಲದೆ ಪರದಾಡುವಂತಾಯಿತು. ಆದ್ರೆ ಕ್ರೂರ ಬ್ರಿಟಿಶ್ ಸರ್ಕಾರ ಮಾತ್ರ, ಎಂದಿನಂತೆ ತೆರಿಗೆಯ ವಸೂಲಿಯನ್ನು ಮುಂದುವರೆಸಿತು.ಬ್ರಿಟಿಷರ ಈ ನೀಚಕೃತ್ಯಗಳಿಂದ ಕುಪಿತನಾದ ಫಡ್ಕೆ ಮುಂದೆ ಇಟ್ಟ ಹೆಜ್ಜೆಯೇ ಇತಿಹಾಸ..


ಮಹಾರಾಷ್ಟ್ರದ ಗುಡ್ಡಗಾಡಿನಲ್ಲಿ "ರಾಮೋಷಿ" ಎಂಬ ಜನಾಂಗ ವಾಸವಾಗಿತ್ತು. ಕಾಡಿನ ರಕ್ಷಣೆಯೇ ಅವರ ಕಾಯಕ.. ಆದರೆ ಆಂಗ್ಲರು ಕಾಡನ್ನು ನಾಶಗೊಳಿಸಿದಾಗ, ಸಹಜವಾಗಿಯೇ ಆ ಜನರಲ್ಲಿ ಬ್ರಿಟಿಷರ ವಿರುದ್ಧ ಒಂದು ದ್ವೇಷ ಮನೆಮಾಡ್ತು. ಫಡ್ಕೆಗೆ ಬೇಕಾಗಿದ್ದೂ ಇದೆ. ಅದೇ ರಾಮೋಷಿ ಜನರನ್ನು ಗುಮ್ಪುಮಾಡಿ, ಅವರೆಲ್ಲರಿಗೂ ಶಸ್ತ್ರಗಳ ತರಬೇತಿ ಕೊಟ್ಟ. ಗೆರಿಲ್ಲಾ ಯುದ್ಧತಂತ್ರಗಳನ್ನು ಕಲಿಸಿದ. ಅಲ್ಲೊಂದು ದೊಡ್ಡ ಸೈನ್ಯವೇ ತಯಾರುಗೊಂಡಿತ್ತು..ಕೊನೆಗೆ 23 ಫೆಬ್ರುವರಿ 1879 ರಲ್ಲಿ, 'ಧಮರಿ' ಗ್ರಾಮದಲ್ಲಿ ತನ್ನ ಬಂಡಾಯದ ಬಾವುಟವನ್ನು ಏರಿಸಿಯೇ ಬಿಟ್ಟ..!!!
ಮೊದಮೊದಲಿಗೆ, ಫಡ್ಕೆ ನಡೆಸಿದ್ದು, ಆಂಗ್ಲರನ್ನು ಓಲೈಸುತ್ತಿದ್ದ ಶ್ರೀಮಂತರ ಮನೆಗಳ ಮೇಲೆ ದಾಳಿ. ಅಲ್ಲಿ ಸಿಕ್ಕ ಹಣವನ್ನು, ಶಸ್ತ್ರಗಳನ್ನೂ ಸಂಘಟನೆಯ ಬಲವರ್ಧನೆಗೆ ಬಳಸುತ್ತಿದ್ದ.. ಹೀಗೆ ಮುಂದಿನ 4-5 ವರ್ಷಗಳ ವರೆಗೂ ಆಂಗ್ಲರ ವಿರುದ್ಧದ ಹೋರಾಟಗಳು ನಿರಂತರ ನಡೆದವು. ಫಡ್ಕೆ ಆಂಗ್ಲರಿಗೆ ಅಕ್ಷರಶಃ "ಸಿಂಹಸ್ವಪ್ನ"ವಾಗಿದ್ದ..


ಬ್ರಿಟಿಶ್ ಸರ್ಕಾರ, ಮೇಜರ್ ಡೆನಿಯಲ್ ನ ಮುಂದಾಳತ್ವದಲ್ಲಿ ಒಂದು ಪಡೆ ರಚನೆ ಮಾಡಿತು.. ಅದರ ವಾಸನೆ ಬಡಿದ ಕೂಡಲೇ, ಫಡ್ಕೆ ಭೂಗತನಾದ. ಬ್ರಿಟಿಷರ ಎಲ್ಲ ಪ್ರಯತ್ನ ವ್ಯರ್ಥವಾಯಿತು..ಆದರೆ ದೇಶದ ದೌರ್ಭಾಗ್ಯವೆಂಬಂತೆ, ಅದೊಮ್ಮೆ ಅತೀವ ಜ್ವರದಿಂದ ಬಳಲಿ, ಕದಲಗಿ  ಎಂಬಲ್ಲಿ ಮರೆಸಿಕೊಂಡಿದ್ದಾಗ, ಬ್ರಿಟಿಷರ ಸೆರೆಯಾದ. ಅಲ್ಲಿಂದ ಆತನ ಬದುಕು ಯಾತನಾಮಯ..!!!


ನೆಪಕ್ಕೆಂದು ವಿಚಾರಣೆ ನಡೆಸಿದ ಕೋರ್ಟ್, ಆಂಗ್ಲರ ವಿರುದ್ಧ ಬಂಡೆದ್ದ ಕಾರಣಕ್ಕೆ ಶಿಕ್ಷೆ ವಿಧಿಸಲಾಯಿತು. ಅದೂ ಎಲ್ಲಿಗೆ, ದೂರದ ಅರಬ್ ನ ಎಡನ್ನಿನ ಸೆರೆಮನೆ..!!!!
ಭಾರತದ ಯಾವುದೋ ಸೆರೆಮನೆಯಲ್ಲಿ ಇಡಬಹುದಾಗಿತ್ತಾದರೂ, ಅವನನ್ನು ಎಡನ್ನಿಗೆ ಸಾಗುಹಾಕಲಾಯಿತು..ಯಾಕಂದ್ರೆ ಆಂಗ್ಲರಿಗೂ ಗೊತ್ತಾಗಿತ್ತು. ಈ ಭೂಪ, ದೇಶದ ಯಾವ ಮೂಲೆಯಲ್ಲಿದ್ದರೂ ಮತ್ತೆ ಭುಗಿಲೆದ್ದು ಬರುವ ಜ್ವಾಲಾಮುಖಿ ಅಂತ..


ಫಡ್ಕೆ ಅತೀಭಾವುಕನಾಗಿ, ತನ್ನ ತಾಯ್ನಾಡನ್ನು ತೊರೆದು ಹೊರಟ. ಅದೊಂದು ಮೃತ್ಯುಕೂಪ. ತಿನ್ನಲು ಅರೆಬೆಂದ ಆಹಾರ., ಕುಡಿಯಲು ಹೊಲಸು ನೀರು, ಅದೂ ಚರ್ಮದ ಚೀಲದಲ್ಲಿ..!!
ದಿನನಿತ್ಯದ ಕಷ್ಟಗಳಿಂದ ಫಡ್ಕೆ ನೊಂದಿದ್ದರೂ, ಅವನ ದೇಶಭಕ್ತಿಗೆ ಕಿಂಚಿತ್ತೂ ಧಕ್ಕೆ ಆಗಿರಲಿಲ್ಲ. ತನ್ನ ದೇಶಕ್ಕೆ ಮತ್ತೆ ಹೋಗಬೇಕೆಂಬ ವಾಂಛೆ ಸದಾ ಅವನಲ್ಲಿತ್ತು. ಭಾರತವನ್ನು ಸ್ವಾತಂತ್ರಗೊಳಿಸಬೇಕು ಅನ್ನೋದೊಂದೇ ಅವನಲ್ಲಿದ್ದ ತುಡಿತ.. ಹೇಗಾದರೂ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ಯಾವಾಗಲೂ ಚಿಂತಿಸುತ್ತಿದ್ದ..ಹಾಗೆ ಯೋಚಿಸಿ ಒಮ್ಮೆ, ಜೈಲಿನ ಬಾಗಿಲನ್ನೇ ಮುರಿದು, ಅದನೆ ಏಣಿಯಂತೆ ಏರಿ, ಜೈಲಿನಿಂದ ತಪ್ಪಿಸಿಕೊಂಡುಬಿಟ್ಟ. ಆದರೆ ಹೋಗೋದಾದ್ರೂ ಎಲ್ಲಿಗೆ.? ಸುತ್ತಲೂ ಮರುಳುಗಾಡು. ಜನ-ಭಾಷೆ-ದಾರಿ ಯಾವುದೂ ಗೊತ್ತಿಲ್ಲ.. ಆದರೂ ನಿರಂತರ ಓಡಿದ. ಕೊನೆಗೆ ಸುಸ್ತಾಗಿ ಮೂರ್ಚೆತಪ್ಪಿ ಬಿದ್ದ.. ಅಲ್ಲಿನ ಕೆಲವರು ಅವನನ್ನು ಹಿಡಿದು ಮತ್ತೆ ಆಂಗ್ಲರಿಗೆ ಒಪ್ಪಿಸಿದರು.
ಅಂದಿನಿದ ಅವನ ಮೇಲಿನ ನಿಗಾ ತೀವ್ರವಾಯಿತು.ಇನ್ನೂ ಹೆಚ್ಚಿನ ಕ್ರೂರತನವನ್ನು ತೋರಿಸಲಾರಮ್ಭಿಸಿದರು.


ಭಾರತಮಾತೆಗಾಗಿ, ಅವಳ ಸ್ವಾತಂತ್ರಕ್ಕಾಗಿ ಇದೆಲ್ಲವೂ ಕರ್ತವ್ಯವೇ ಎಂದು ಎಲ್ಲವನ್ನೂ ಸಹಿಸಿಕೊಂಡ..
ಆದರೆ, ಅಷ್ಟರಲ್ಲೇ ಅವನಿಗೆ ಕ್ಷಯ ರೋಗ ತಗುಲಿತು. ಆ ರೋಗದ ನಿರಂತರ ನರುಳುವಿಕೆಯಲ್ಲೇ ಫಡ್ಕೆ 17 ಫೆಬ್ರುವರಿ 1883 ರಂದು ಹುತಾತ್ಮನಾದ.. ಅವನು ಸಾಯುವಾಗಲೂ ಅವನ ಕೈಯಲ್ಲೊಂದು ಗಂಟಿತ್ತು. ಅದರಲ್ಲಿ "ಪುಣ್ಯ ಭಾರತ"ದ ಮಣ್ಣು ಇತ್ತು..(ಭಾರತದಿಂದ ಹೊರಡುವಾಗ ಅದನ್ನ ತುಂಬಿಕೊಂಡು ಬಂದಿದ್ದ ಆ ಭೂಪ..)!!!


ತಮ್ಮದೆಲ್ಲವನ್ನೂ ನಾಡಿಗೆ ಅರ್ಪಿಸಿದ ಇಂತಹ ಮಹಾನೀಯರಿಂದಲೇ, ಇವತ್ತು ನಾವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ.. ಆದರೆ ಆ ಸ್ವಾತಂತ್ರ್ಯದ ಅಮಲಿನಲ್ಲಿ, ಅದಕ್ಕಾಗಿ ಶ್ರಮಿಸಿದವರನ್ನು ಮರೆತಿರುವುದು ಮಾತ್ರ ದೌರ್ಭಾಗ್ಯ..!!!


ವಾಸುದೇವ ಬಲವಂತ ಫಡ್ಕೆಯ ಹೌತಾತ್ಮ್ಯದಿನವಾದ ಇಂದು, ಅವನ ದಿವ್ಯಚೇತನಕ್ಕೆ ವಂದಿಸುತ್ತಾ, ಇನ್ನಷ್ಟು ಅಂತಹ ಸಿಂಹಗಳು ಭಾರತಗರ್ಭದಲ್ಲಿ ಜನ್ಮಿಸಲಿ ಎಂಬ ಹಾರೈಕೆಯೊಂದಿಗೆ..
ವಂದೇ ಮಾತರಂ...!!!!!!!

4 comments:

 1. ಅದ್ಭುತವಾದ ದೇಶಭಕ್ತಿಯ ಧಾರೆ ಭೀಮಣ್ಣ.. ಮತ್ತೊಮ್ಮೆ ಲೇಖನಿ ಹಿಡಿದ ’ಮಹಾಭಾರತೀಯ’ನಿಗೆ ನಮಿಸುತ್ತೇನೆ.. ನನ್ನ ಒತ್ತಡಗಳ ಕಾರಣದಿಂದ ಪ್ರತಿಕ್ರಿಯೆ ತಡವಾಗುತ್ತಿದೆ, ಆದರೆ ’ವಾಸುದೇವ ಬಲವಂತ ಫಡ್ಕೆ’ ಎಂಬ ಮಹಾತ್ಮ ಮತ್ತು ಹುತಾತ್ಮನ ದೇಶಭಕ್ತಿಯ ಪುಟವನ್ನು ನರನಾಡಿಗಳಲ್ಲಿ ತುಂಬಿಸಿಕೊಳ್ಳಲು ಯಾವ ದಿನವಾದರೇನು? ನಿಜ ಹೇಳಬೇಕೆಂದರೆ ಫಾಡ್ಕೆಯ ವ್ಯಕ್ತಿ ಮತ್ತು ವ್ಯಕ್ತಿತ್ವ ಪರಿಚಯ ನನಗೇ ಇರಲಿಲ್ಲ, ಇದು ನಮ್ಮ ಶಿಕ್ಷಣದ ಪಠ್ಯಕ್ರಮ ಎಂದು ಹೇಳಲು ವಿಷಾದವೆನಿಸುತ್ತಿದೆ..:( ಅದ್ಭುತವಾದ ದೇಶಭಕ್ತಿಯ ಪುಟಗಳನ್ನು ದಶದ ಇತಿಹಾಸದೊಳಕ್ಕೆ ಹೊಕ್ಕು ತೆಗೆದಿಡುತ್ತಿದ್ದೀರಿ.. ನಿಮ್ಮ ಶ್ರದ್ಧೆ ಮತ್ತು ದೇಶಭಕ್ತಿಗೆ ಭೇಷ್ ಹೇಳಲೇಬೇಕು.. ದೇಶಭಕ್ತಿ ಎಲ್ಲರ ನರನಾಡಿಗಳಲ್ಲೂ ಪ್ರವಹಿಸಲಿ.. ಅಭಿನಂದನೆಗಳು ನಿಮಗೆ.. ಇನ್ನಷ್ಟು ಇಂತಹ ಪುಟಗಳನ್ನು ನಮಗಾಗಿ ಹೆಕ್ಕಿ ತನ್ನಿ..:))) ವಂದೇ ಮಾತರಂ..

  ReplyDelete
 2. ಉದಾತ್ತ ವ್ಯಕ್ತಿಗಳನ್ನು ಪರಿಚಯಿಸುವ ನಿಮ್ಮ ಲೇಖನ ಸರಮಾಲೆ ಪ್ರಶಂಶನೀಯ ಭೀಮಸೇನರೆ. ಹೀಗೆ ಸಾಗಲಿ ನಿಮ್ಮ ಪಯಣ.

  ReplyDelete
 3. ಫಡ್ಕೆಯಂತಹ ಧೀರ ಯೋಧರ ಸಾಹಸದ ಫಲವನ್ನು ನಾವುಗಳು ಈ ದಿನ ಉಣ್ಣುತಿದ್ದೇವೆ. ಅಂತಹ ಮಹಾನ್ ಕ್ರಾಂತಿಕಾರಿಗಳ ನೆನಪೇ ಅಸಹ್ಯವೆಂಬಂತೆ ವರ್ತಿಸುತ್ತದೆ ನಮ್ಮ ಸರ್ಕಾರ. ಈ ದೇಶಕ್ಕಾಗಿ ತ್ಯಾಗ ಬಲಿಧಾನಗೈದ ಯಾವ ಯಾವ ಮಹನೀಯರ ಹೆಸರುಗಳನ್ನೂ ನೆನಪಿಸುವ ಸೌಧವಾಗಲಿ, ಆಟದ ಮೈದಾನವಾಗಲಿ, ಸರಕಾರದ ಅಭಿವೃದ್ಧಿಗೆ ಕೊಡನೀಡುವ ಹೆಸರಾಗಲಿ, ಯಾವುದೇ ಮಹತ್ ಕಾರ್ಯಗಳಿಗಾಗಲಿ ಅಂಥವರ ಹೆಸರುಗಳಿಲ್ಲ. ಭಾರತ ದೇಶ ತಮ್ಮ ವಂಶಾಡಳಿತದ ಸ್ವತ್ತು ಎಂಬಂತೆ ತಾತ, ಮಗ, ಮಗಳು, ಹೀಗೆ ಅವರ ವಂಶಸ್ಥರ ಹೆಸರುಗಳು ಮಾತ್ರ ಇವೆ. ಫಡ್ಕೆಯಂತಹ ಕೆಚ್ಚೆದೆಯ ವೀರ ಯೋಧರ ಪರಿಚಯ ನಮ್ಮ ಇಂದಿನ ಯುವ ಜನಾಂಗ ಅರಿಯಬೇಕಾಗಿದೆ. ಆದ್ದರಿಂದ ಆ ದಿಕ್ಕಿನಲ್ಲಿ ನಿಮ್ಮ ಈ ರೀತಿಯ ಲೇಖನ ಮಾಲೆ ಉಪಯುಕ್ತವಾದುದು. ವಂದನೆಗಳು.

  ReplyDelete
 4. ಫಡ್ಕೆಯಂತಹ ಧೀರ ಯೋಧರು ಈ ಕಾಲದಲ್ಲೂ ಇರಬೇಕಿತ್ತು.ಇಲ್ಲಿನ ಹೊಲಸುತನಕ್ಕೆ ಅವರಿಂದ ಒಂದು ಪರಿಹಾರವಾದರೂ ಸಿಗಬಹುದಿತ್ತೇನೆ. ಇಂಥ ಮಹಾನೀಯರ ಬಗ್ಗೆ ನನಗೂ ಸಹ ಈ ದಿನದವರೆಗೆ ಮಾಹಿತಿಯಿರಲಿಲ್ಲ ಅವರ ದಿಟ್ಟತನವನ್ನು ಪ್ರಶಂಷಿಸಲೇ ಬೇಕು. ಆದರೆ ಅವರ ಕಡೆಗಾಲದ ದಿನಗಳು ನನಗೂ ಸಹ ತುಂಬಾ ನೋವನ್ನು ತಂದಿದೆ ಆ ಶೇತನ ನಮ್ಮ ಮಣ್ಣಿನಲ್ಲೇ ಮರೆಯಾಗಿದ್ದರೆ ಒಂದು ಗುಡಿಯನ್ನಾರೂ ಕಟ್ಟಿ ಪೂಜಿಸ ಬಹುದಿತ್ತೇನೋ ಆದರೆ ಆ ಭಾಗ್ಯದಿಂದ ನಮ್ಮ ಭಾರವ ವಂಚಿತವಾಗಿದೆ. ಫಡ್ಕೆಯವರ ದೇಶ ಪ್ರೇಮಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು. ಲೇಖನ ಮನ ಕಲಕುವಂತಿದೆ ಧನ್ಯವಾದಗಳು...

  ReplyDelete