Tuesday, 24 January 2012

ಭವ್ಯಭಾರತೀ..

( ಭಾಮಿನಿ ಷಟ್ಪದಿಯಲ್ಲಿ ವಿರಚಿತ, ಭಾರತಾಂಬೆಯ ವರ್ಣನಾ ಸ್ತುತಿ..)

                          
 
ಸುತ್ತ ಸಾಗರದೊತ್ತಲೆಯ ಮುಗಿ-
ಲೆತ್ತರಗ ಭೋರ್ಗರೆವ ನದಿ ಫಲ
ಹೊತ್ತ ತರುಗಳ ಮುತ್ತು ರತ್ನವ ಬಿತ್ತಿ ಬೆಳೆದಿಹರ..
ಉತ್ತಮತ್ವದಿ ನಿತ್ಯ ರಾಜಿಪ
ಹೆತ್ತ ಭಾರತತಾಯಿಯಂಘ್ರಿಗೆ
ಮತ್ತೆ ಮತ್ತೆ ನಮಸ್ಕರಿಸಿ ಸಂಪ್ರಾರ್ಥಿಸುವೆ ಶುಭಕೆ...||೧||
 
ಆರ್ಷಚರಣಾರಾಮ ಗೋಪೀ
ಹರ್ಷಕನ ಲೀಲಾಲಹರಿಯಾ
ಕರ್ಷಿಸುವ ಮಹಿಮಾಮಹೀಪತಿವೃಂದ ತೇಜವನು..
ವರ್ಷಿಸುತಲಿರೆ ನಾಕಲೋಕವು
ಈರ್ಷಿಸುವ ತೆರದಲಿಹ ದೇವಮ-
ಹರ್ಷಿಗಣಸನ್ನಮಿತ ಭಾರತದೇವಿಗಾನಮಿಪೆ...||೨||
 
ನೇತ್ರವಹ್ನಿಯ ರೂಪೆರಡುದಶ
ಪುತ್ರಿ ದಕ್ಷನ ತಾಳ್ದ ನವಕೃತಿ
ಮಿತ್ರಪಾದ್ಯಧಿದೇವತಾ ಬಹುಪುಣ್ಯಪೂರುಷರ..
ಸತ್ರಯಾಗತಪೋಬಲದಿ ಸುಪ
ವಿತ್ರಭೂತಳಸಂಖ್ಯ ದಿವ್ಯ
ಕ್ಷೇತ್ರಧಾಮ ಪುನೀತಭಾರತದೇವಿಗಾನಮಿಪೆ...||೩||
 
ಸಾಲುಗೂಡುತ ಮಾರುತಗಳನು
ಕೂಲಿಸುವ ಹಿಮವಿಂಧ್ಯಸಹ್ಯಸು
ಶೈಲದಾವಳಿ ಬಗೆಯ ಖಗಮೃಗಸಂಗವಿಂಬಿಟ್ಟು..
ಹಾಲುನೊರೆಜಲಪಾತ ಝರಿಯನು
ಗಾಲ ಹಸಿರಿನ ವಸ್ತ್ರಧರ ವನ
ಮಾಲೆಯಿಂ ಭ್ರಾಜಿಸುವ ಭಾರತದೇವಿಗಾನಮಿಪೆ...||೪||
 
ದೇವನದಿ ಯಮುನಾ ಸರಸ್ವತಿ
ಪಾವನಾ ಕಾವೇರಿ ಕೃಷ್ಣೆಯ
ರಾವಗಂ ಮೈದುಂಬಿ ನರ್ತಿಸಿ ನಾಡಮೈದೊಳೆದು
ಹೂವುಕೇಸರಘನವ ಚಿಗುರಿಸಿ
ಜೀವಸಂಕುಲಗಳನು ಪೋಷಿಸಿ
ಕಾವ ಧುನಿತೀರ್ಥಗಳ ಭಾರತದೇವಿಗಾನಮಿಪೆ...||೫||
 
ವ್ಯಾಸಮುಖಸುಜ್ಞನಿಧಿ ಕಾಳಿಯ
ದಾಸಬಾಣಪ್ರಭೃತಿ ಪದದು
ಲ್ಲಾಸ ಪಂಪಾದಿಕವಿವಾಣೀಸ್ರೋತವುಗಮಿಸಿಹ..
ಲೇಸುಧರ್ಮಪ್ರಚುರಗೊಳಿಸಿದ
ಸಾಸಿರ ಮತಾಚಾರ್ಯಗುರುವಾ-
ಗ್ಭಾಸದಿಂ ಶೋಭಿಸಿಹ  ಭಾರತದೇವಿಗಾನಮಿಪೆ...||೬||
 
ವೇದಗೀತೊಂಕಾರದಿಂದ
ಪ್ರಾದಿಗೊಂಡತಿವಿಸ್ತರಿಪ ಸಂ
ವಾದಿಮುಖ್ಯಸ್ವರದಿ ನೈಕಧ ರಾಗರಾಗಿಗಳ..
ನಾದಭಾವದಲಯಕೆ ಭಂಗಿಯ
ಭೇದ ಮುದ್ರಿಪ ಕೋವಿದರ ಮನ
ಮೋದನಾಟ್ಯಪ್ರಥಿತ ಭಾರತದೇವಿಗಾನಮಿಪೆ...||೭|| 
 

ಕಲ್ಲಿನಲಿ ಕಾವ್ಯಗಳ ಮೂರ್ತಿಸಿ
ಪಲ್ಲವಿಸಿ ಗುಡಿಗೋಪುರಗಳತಿ
ಮಲ್ಲರಾಜರ ವಿಜಯಚಿಹ್ನೆಯ ಶಿಲ್ಪ ರಚಿಸಿಹರ..
ಫುಲ್ಲವರ್ಣದ ಕುಂಚದಲಿ ಸವಿ
ಫುಲ್ಲರೂಪದಚಿತ್ರಗಳ ಪರಿ-
ಫುಲ್ಲಿಸಿದ ಕಲೆಗಾರಭಾರತದೇವಿಗಾನಮಿಪೆ...||೮||

ಪ್ರಾಂತದೇಶಕೆ ಭಿನ್ನತೆಯ ಸಿರಿ
ವಂತ ಭಾಷಾಪ್ರಕರಯುಕ್ತ ನಿ
ತಾಂತ ಶಿಷ್ಟಾಚರಣಶೀಲ ಸುಸಂಸ್ಕೃತರು ಬೆರೆತ..
ಶಾಂತಿ ನಾಡಿನ ಕದಡಿದಧಮರ
ನಂತಿಸಲು ಮೊಳಗಿದ ಯುವಜನ
ಕ್ರಾಂತಿಗಳ ವಿಕ್ರಾಂತಭಾರತದೇವಿಗಾನಮಿಪೆ...||೯||  
 
ಲೋಕಮಾತೆಯೆ ಕಮಲೆ ವೀಣೆಯ 
ಝೇಂಕರಿಪ ವಾಗ್ದೇವಿ ದುರ್ಗೆಯೆ
ಪಂಕಜಾನನೆ ವಿಮಲೆ ಸರ್ವಪ್ರೇರಕಳೆ ಒಲಿದು..
ಶ್ರೀಕರಳೆ ನಿಜಕರದೊಳೆನ್ನ
ಸ್ವೀಕರಿಸು ಮಜ್ಜನನಿ ಭಾರತಿ
ಯೇಕಮಾತ್ರಭಿಲಾಷೆಯಿದುವೀ 'ಭಾರತೀಯ'ನಿಗೆ...||೧೦||

Thursday, 19 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3


ಜೂನ್ 28-1930.ಚಿತ್ತಗಾಂಗ್ ನ ಜನತೆಗೆ ಆಘಾತಕಾರಿ ವಿಷಯವೊಂದು ತಿಳಿಯಿತು.ಕ್ರಾಂತಿಯ ನಾಯಕರಲ್ಲಿ ಒಬ್ಬನಾದ "ಅನಂತ ಸಿಂಹ" ಆಂಗ್ಲರಿಗೆ ಶರಣಾದ ಸುದ್ದಿ ಅದು.ವಿಷಯ ತಿಳಿದಾಕ್ಷಣ ಎಲ್ಲರಿಗೂ ದಿಗ್ಭ್ರಮೆ.ಯಾರೊಬ್ಬರೂ ಇದನ್ನು ನಂಬಲು ತಯಾರಿರಲಿಲ್ಲ.

ಜೊತೆಗೆ ಜನರಲ್ಲಿ ಅನೇಕ ಗಾಳಿಸುದ್ದಿಗಳೂ ಹರಿದಾಡಲಾರಂಭಿಸಿದವು."ಇದು ಬ್ರಿಟಿಶರೇ ಹಬ್ಬಿಸಿರುವ ಸುಳ್ಳು ಸುದ್ದಿ ಇರಬೇಕು. ಯಾಕಂದ್ರೆ ಬಂಧನಕ್ಕೆ ಉಳಿದಿರೋದು ಅನಂತ ಒಬ್ಬನೆ.ಈಗ ಅವನನ್ನೂ ಹಿಡಿದು ಬಾಯಿ ಬಿಡಿಸುತ್ತಿದ್ದೇವೆ ಅಂತ ಸುದ್ದಿ ಹಬ್ಬಿಸಿದರೆ, ಉಳಿದ ಕ್ರಾಂತಿಕಾರಿಗಳು ಅನಂತನನ್ನು ಕೊಲ್ಲಬಹುದು ಅನ್ನೋ ಉದ್ದೆಶದಿಂದ ಈ ಸುದ್ದಿ ಎದ್ದಿರಬಹುದು." ಅಂತ ಕೆಲವು ಜನ ಅಂದುಕೊಂಡ್ರು.. "ಇಲ್ಲ, ಇದು ಸೂರ್ಯಸೇನನೇ ರೂಪಿಸಿರುವ ಯೊಜನೆ ಇರಬೇಕು. ಉಳಿದ ಯುವಕರಿಗೆ ಜೈಲಿನಲ್ಲಿ ಹಿಂಸೆ ಕೊಡದಿರಲು ಅನಂತ ಈ ನಿರ್ಧಾರ ತೊಗೊಂಡಿರಬಹುದು." ಅಂತ ಇನ್ನೂ ಕೆಲವರು ಭಾವಿಸಿದರು..ಆದರೆ, ಅನಂತ ಬ್ರಿಟಿಶರಿಂದ ಬಂಧಿತನಾಗಿದ್ದಂತೂ ನಿಜವೇ ಆಗಿತ್ತು..

ಅನಂತ ಸಿಂಹ
                                

ಅನಂತ ಒಬ್ಬ ಮಹಾನ್ ಯೋದ್ಧಾ.. ಇಡೀ ಚಿತ್ತಗಾಂಗ್ ನ ಕ್ರಾಂತಿಯಲ್ಲಿ ಮೊದಲಿಂದಲೂ ಯೋಜನೆಯಲ್ಲಿ ಇದ್ದವನು ಇವನು..ಪ್ಲಾನಿನ ಪ್ರಕಾರ, ಒಟ್ಟು ಎರಡು ಶಸ್ತ್ರಾಗಾರಗಳ ಮೇಲೆ ಆಕ್ರಮಣ ಆಗಬೇಕಿತ್ತು. ಒಂದು ಪೋಲಿಸ್ ಶಸ್ತ್ರಾಗಾರ. ಮತ್ತೊಂದು ಅರೆಸೈನ್ಯದ ತುಕಡಿಯ ಶಸ್ತ್ರಾಗಾರ. ಇವೆರಡರಲ್ಲಿ ಪೋಲಿಸ್ ಶಸ್ತ್ರಾಗಾರವನ್ನು ಆಕ್ರಮಿಸುವ ಹೊಣೆ ಗಣೇಶ್ ಘೋಷ್ ಮತ್ತು ಅನಂತ ಸಿಂಹನ ಹೆಗಲೇರಿತ್ತು.

ದಾಳಿಯೇನೋ ಸುಸೂತ್ರವಾಗಿ ನಡೆಯಿತು. ಒಟ್ಟು ೧೪ ಪಿಸ್ತೊಲ್ ಮತ್ತು ಹತ್ತಾರು ಬನ್ದೂಕುಗಳನ್ನು ಸಂಗ್ರಹಿಸುವಲ್ಲಿ ಅನಂತ ಯಶಸ್ವಿಯಾಗಿದ್ದ,. ಆದರೆ ದಾಳಿಯ ಮಧ್ಯದಲ್ಲಿ "ಹಿಮಾಂಶು ದತ್ತ" ಎಂಬ ಹುಡುಗನ ಬಟ್ಟೆಗೆ ಬೆಂಕಿ ತಗುಲಿಬಿಟ್ಟಿತು.. ಧಗೆಯಲ್ಲಿ ಒದ್ದಾಡುತ್ತಿದ್ದ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಅನಂತನ ಜವಾಬ್ದಾರಿಯಾಯಿತು.. ಹಾಗೆ ಕರೆದೊಯ್ಯುವಾಗ, ಪ್ರಯಾಣದ ಮಧ್ಯದಲ್ಲಿ ಬ್ರಿಟಿಶರು ಕ್ರಾಂತಿಕಾರಿಗಳನ್ನು ಸುತ್ತುವರೆದರು. ಉಪಾಯದಿಂದ ಅನಂತ, ಬಳಲಿದ್ದ ಹಿಮಾಂಶುವನ್ನು ವ್ಯಕ್ತಿಯೊಬ್ಬರ ವಶಕ್ಕೆ ಸುರಕ್ಷಿತವಾಗಿ ಒಪ್ಪಿಸಿ, ತಾನು ತಪ್ಪಿಸಿಕೊಂಡುಬಿಟ್ಟ..ಆಮೇಲೆ, ಅದೆಷ್ಟೋ ದಿನಗಳ ನಂತರ, ಬಂದೀಖಾನೆಯಲ್ಲಿ ಆಂಗ್ಲರು ತನ್ನ ಯುವ ಸ್ನೇಹಿತರಿಗೆ ಕೊಡುತ್ತಿದ್ದ ಹಿಂಸೆಯನ್ನು ಕೇಳಿ ತಾನು ಶರಣಾಗಬೇಕೆಂದು ಅನ್ನಿಸಿ  ಶರಣಾಗಿಬಿಟ್ಟ.ಅನಂತನ ಶರಣಾಗತಿ ನಿಜಕ್ಕೂ ಸೂರ್ಯಸೇನನ ಒಂದು ಯೋಜನೆಯೇ ಆಗಿತ್ತು. ಈಗಾಗಲೇ ಬಂಧಿತರಾಗಿ ಜೈಲಿನಲ್ಲಿ ಹಿಂಸೆ ಅನುಭವಿಸುತ್ತಿದ್ದ ಯುವಕರಿಗೆ ಮತ್ತೆ ಜೀವನೋತ್ಸಾಹ ತುಂಬಿಸಲು ಅನಂತ ತಾನೇ ಬಂಧಿತನಾದ..

ವಿಚಾರಣೆಯ ವೇಳೆ, ಅನಂತನಿಗೆ ಇನ್ನಿಲ್ಲದಂತೆ ಹಿಂಸೆ ನೀಡಲಾಯಿತು. ದೇಶಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಆತ, ಎಲ್ಲವನ್ನೂ ರಾಷ್ಟ್ರಕ್ಕಾಗಿ ಸಹಿಸಿಕೊಂಡ. ಕಡೆಗೆ ಅನಂತನಿಗೆ 'ಕರಿನೀರಿನ' ಶಿಕ್ಷೆ ವಿಧಿಸಿ, ಅಂಡಮಾನಿಗೆ ಅಟ್ಟಲಾಯಿತು..ಇವನ ಸಹನಾಯಕನಾಗಿದ್ದ ಗಣೇಶ್ ಘೋಷ್ ನೂ ಬಂಧಿತನಾಗಿ ಅಂಡಮಾನಿನ ಶಿಕ್ಷೆಗೆ ಗುರಿಯಾದ..ಅನಂತ್ ಸಿಂಹ, ಸ್ವಾತಂತ್ರ್ಯಾನಂತರ ೧೯೭೯ ರಲ್ಲಿ ಜನವರಿ ೨೫ ರಂದು ಇಹಲೋಕ ತ್ಯಜಿಸಿದ.. ಹಾಗೆಯೇ ಗಣೇಶ್ ಘೋಶನು ೧೯೯೪ ಅಕ್ಟೋಬರ್ ೧೬ ರಂದು ನಿಧನನಾದನು..

ಇತ್ತ ಲೊಕನಾಥ ಬಲ್ ಕೂಡ ತಲೆಮರೆಸಿಕೊಂಡಿದ್ದ. ಜಲಾಲಬಾದ್ ಗುಡ್ಡದಲ್ಲಿ ನಡೆದ ಹೊರಾಟದಲ್ಲಿ ತನ್ನ ಕಣ್ಣೆದುರೇ, ತನ್ನ ತಮ್ಮ ಹರಿಗೋಪಾಲ್ ಬಲ್(ಟೇಗ್ರ) ಆಂಗ್ಲರ ಗುಂಡಿಗೆ ಬಲಿಯಾದದ್ದನ್ನು ನೋಡಿ ತುಂಬಾ ದುಃಖಿತನಾಗಿದ್ದ.ಬ್ರಿಟಿಶರ ಕೈಗೆ ಸಿಗದಿರಲು, ಫ್ರೆಂಚರ ತಾಣವಾದ "ಚಂದ್ರನಗರ"ದಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದ.. ಆದರೆ ಅಲ್ಲಿಗೂ ಆಂಗ್ಲರ ಪಡೆ ದೌಡಾಯಿಸಿತು. ಮತ್ತೊಂದು ಗುಂಡಿನ ಚಕಮಕಿ ಕ್ರಾಂತಿಕಾರಿಗಳ  ಹಾಗೂ ಬ್ರಿಟಿಶರ ನಡುವೆ ನಡೆಯಿತು.. ಆ ಹೋರಾಟದಲ್ಲಿ ಲೊಕನಾಥನ ಸಹಚರ "ಜಿಬನ್ ಘೋಶಾಲ್" ಹುತಾತ್ಮನಾದ. ಲೊಕನಾಥ್ ಕಡೆಗೂ ಆಂಗ್ಲರ ಸೆರೆಯಾದ..ಅವನ ವಿಚಾರಣೆಯೂ ನಡೆದು, ಅವನಿಗೂ ಭಯಾನಕ "ಕರಿನೀರಿನ" ಶಿಕ್ಷೆ ವಿಧಿಸಲಾಯಿತು..!!!

ಕಲ್ಪನಾ ದತ್ತ, ಪ್ಲಾನಿನ ಪ್ರಕಾರ ಪ್ರೀತಿಲತಾಳ ಜೊತೆಗೆ "ಯುರೋಪಿಯನ್ ಕ್ಲಬ್" ಮೆಲೆ ದಾಳಿ ಮಾಡಬೇಕಿತ್ತು.ಆದರೆ ಹೋರಾಟಕ್ಕೂ ಒಂದು ವಾರದ ಮೊದಲೇ ಸ್ಟೇಶನ್ ಒಂದರಲ್ಲಿ ಬ್ರಿಟಿಷರು ಆಕೆಯನ್ನು ಬಂಧಿಸಿದರು..ಹೇಗೋ ಜಾಮೀನಿನ ಮೇಲೆ ಹೊರಬಂದ ನಂತರ, ಭೂಗತಳಾದಳು..ಆನಂತರ, ಅದೊಮ್ಮೆ ಕಲ್ಪನಾ ಮತ್ತು ಸೂರ್ಯಸೇನ್ ಅವಿತಿಟ್ಟುಕೊಂಡಿದ್ದ ಮನೆಯ ಮೇಲೆ ಬ್ರಿಟಿಷರು ದಾಳಿ ಮಾಡಿದರು.ಆ ಹೋರಾಟದಲ್ಲಿ ಸೂರ್ಯಸೇನ್ ಬಂಧಿತನಾದ. ಕಲ್ಪನಾ ಮತ್ತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು..ಬಂಧಿತನಾದ ಸೂರ್ಯಸೇನ್ ಗಲ್ಲಿಗೇರಿದ್ದುಇತಿಹಾಸವಿದಿತ..ಬಹು ದಿನಗಳ ನಂತರ, ಮತ್ತೆ ಕಲ್ಪನಾ ಬಂಧಿತಳಾಗಿ, ಅವಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು..!!!!

ಇವೆಲ್ಲದರ ಮಧ್ಯೆ ಹರಿಪಾದ ಎಲ್ಲೋ ಅಡಗಿದ್ದ.ಬಹುಶಃ ಆ ಭಾರತಮಾತೆ ಇನ್ನೂ ಒಂದು ಕಾರ್ಯಕ್ಕಾಗಿ ಕಾಯುತ್ತಿದ್ದಳೇನೋ..!!ಜಲಾಲಬಾದ್ ಗುಡ್ಡದಲ್ಲಿ ನಡೆದ ಹೋರಾಟದಲ್ಲಿ, ತನ್ನ ಸ್ನೇಹಿತರೆಲ್ಲ ಗುಂಡೇಟಿಗೆ ಬಲಿಯಾದದ್ದನ್ನ ನೋಡಿದ್ದ ಹರಿಪಾದನಿಗೆ, ಬ್ರಿಟಿಷರ ಬಗ್ಗೆ ಇನ್ನಷ್ಟು ಕೋಪ ಉಕ್ಕಿತ್ತು.ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅಷ್ಟೇ..
ಅಲ್ಲೊಬ್ಬ ಬ್ರಿಟಿಶ್ ಅಧಿಕಾರಿ, ಈ ಎಲ್ಲ ಸಾವಿಗೆ ಕಾರಣನಾದವನು, ಚಿತ್ತಗಾಂಗ್ ನಲ್ಲೇ ಹಾಯಾಗಿ ಇದ್ದ.ಬಂಧಿತರಾದ ಉಳಿದ ಕ್ರಾಂತಿಕಾರಿಗಳನ್ನ ವಿಚಾರಣೆಯ ವೇಳೆ ಹಿಂಸಿಸುತ್ತಿದ್ದ. ಅವನಿಗೆ ಫುಟ್ಬಾಲ್ ಆಟವೆಂದರೆ ಪ್ರಾಣ.ಸದಾ ಮೈದಾನದಲ್ಲಿ ನಡೆಯುತ್ತಿದ್ದ ಆಟವನ್ನು ನೋಡುತ್ತಾ ಕೂರುತ್ತಿದ್ದ.ಅದನ್ನೇ ಹರಿಪಾದ ವಧಾಸ್ಥಳವನ್ನಾಗಿಸಿಕೊಂಡಿದ್ದ.ಅದೊಮ್ಮೆ, ಫುಟ್ಬಾಲ್ ಆಟದ ವೀಕ್ಷಣೆಯಲ್ಲಿ, ಆ ಅಧಿಕಾರಿ ಮಗ್ನನಾಗಿದ್ದಾಗ, ಹೊಂಚು ಹಾಕಿ ಕುಳಿತಿದ್ದ ಹರಿಪಾದ, ನೇರ ಅವನ ಹತ್ರ ಬಂದವನೇ, ಸೊಂಟದಲ್ಲಿದ್ದ ಪಿಸ್ತೋಲ್ ಹೊರತೆಗೆದು ಗುಂಡು ಹಾರಿಸಿಯೇ ಬಿಟ್ಟ. ನೋಡುನೋಡುತ್ತಲೇ ಬ್ರಿಟಿಶ್ ಅಧಿಕಾರಿ ಕೊನೆಯುಸಿರೆಳೆದ. ತನ್ನ ಸಹಚರರಿಗೆ ನೋವುಣಿಸಿದ್ದ ಆ ಆಂಗ್ಲರಿಗೆ ಚಿಕ್ಕ ಬಾಲಕ, ಚುರುಕು ಮುಟ್ಟಿಸಿದ್ದ.ಆನಂತರ, ಅವನನ್ನು ಬಂಧಿಸಿ, ನೆಪಕ್ಕೆಂದು ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿದರು.ಆ ವಿದ್ಯಾರ್ಥಿ 'ಹರಿಪಾದ ಮಹಾಜನ್' ನೇಣಿಗೇರಿದಾಗ ಅವನಿಗೆ ಕೇವಲ 14 ವರ್ಷ.!!!!

ಅಂತೂ ಕೊನೆಗೆ, ಸೂರ್ಯಸೇನ್ ಎಂಬ ಮಹಾನ್ ಸಂಘಟಕ, ಕ್ರಾಂತಿಕಾರಿ, ಅಪ್ಪಟ ದೇಶಾಭಿಮಾನಿ ಹಚ್ಚಿದ ಆ ಕಿಚ್ಚು, ಯಶಸ್ವಿಯಾಯಿತಾದರೂ, ಕ್ರಾಂತಿಕಾರಿಗಳ ಬಂಧನದಿಂದ ಮಂಕು ಕವಿದಿದ್ದು ದಿಟ.ಆದರೂ, ಆ ಕಿಚ್ಚನ್ನು ಮನದೊಳಗೆ ಉರಿಸಿಕೊಂಡಿದ್ದ ಯುವಕರು ಮತ್ತೆ ಮತ್ತೆ ಮೇಲೆದ್ದು ಬ್ರಿಟಿಷರನ್ನು ನಿರಂತರ ಹಣ್ಣಾಗಿಸಿ, ತಾಯಿ ಭಾರತಿಯ ದಾಸ್ಯವನ್ನು ಕಳಚುವಲ್ಲಿ ವಿಜಯ ಸಾಧಿಸಿದರು..!!!!

ಉಳಿದೆಲ್ಲ ಹೋರಾಟ,ಸತ್ಯಾಗ್ರಹಗಳ ಜೊತೆಗೆ ಚಿತ್ತಗಾಂಗ್ ನ ಈ ಕ್ರಾಂತಿಯನ್ನೂ ನಮ್ಮ ಪುಸ್ತಕದಲ್ಲಿ ಹೇಳಬೇಕಿತ್ತು.!! ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೂ ಸಿಡಿದೆದ್ದು, ಬ್ರಿಟಿಶ್ ಪ್ರಭುತ್ವದ ವಿರುದ್ಧ ಮಾಡಿದ ಹೋರಾಟವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೂ ಹೇಳಬೇಕಿತ್ತು..!!ವಯಸ್ಸು ಚಿಕ್ಕದಿದ್ದರೂ ಆಂಗ್ಲರ ಬಂದೂಕಿಗೆ ಎದೆ ಸೆಟೆಸಿ ನಿಂತ ವೀರರ ಧೈರ್ಯ ಸಾಹಸವನ್ನು ನಮ್ಮ ಯುವಕರಿಗೂ ಹೇಳಬೇಕಿತ್ತು..!! ಹ್ಯಾರಿಪಾಟರ್, ಸ್ಪೈಡರ್ ಮ್ಯಾನ್ ನಂತಹ ಕಾಲ್ಪನಿಕ 'ಹೀರೋ'ಗಳ ಕಥೆ ಹೇಳೋದಕ್ಕಿಂತ ಮೊದಲು, ದೇಶಕ್ಕಾಗಿ ಪ್ರಾಣತೆತ್ತ ಈ ನಿಜವಾದ 'ಹೀರೋ'ಗಳ ಕಥೆಯನ್ನ ನಮ್ಮ ಮಕ್ಕಳಿಗೆ ಹೇಳಬೇಕಿತ್ತು..!!!ಆದರೆ ಅದೇಕೋ ನಮ್ಮ ದಿವ್ಯ ನಿರ್ಲಕ್ಷ್ಯದಿಂದ, ಅವರೆಲ್ಲ ತೆರೆಯಲ್ಲಿ ಮರೆಯಾದರು..

ಕಡೆ ಪಕ್ಷ,ಅವರು ತಮ್ಮ ರಕ್ತತೈಲವನ್ನೆರೆದು ಹಚ್ಚಿದ ಈ ಸ್ವಾತಂತ್ರ್ಯಜ್ಯೋತಿಯನ್ನು ಆರದಂತೆ, ನಂದಾದೀಪವಾಗಿಸಲಾದರೂ ಅವರ ಸ್ಮರಣೆ ನಾವು ಮಾಡಲೇಬೇಕಲ್ಲವೇ..?!!!! 
 ವಂದೇ ಮಾತರಂ..



[ ಈ ಲೇಖನದ ಮೊದಲೆರಡು ಭಾಗಗಳು 
ಭಾಗ-೧ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೧
ಭಾಗ-೨ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೨
]


Friday, 13 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 2

ಚಿತ್ತಗಾಂಗ್ ನಲ್ಲಿ ಕ್ರಾಂತಿ ಯಶಸ್ವಿಯಾಗಿ  ನಡೆದು, ಕೊನೆಗೆ ಅದರ ಸಂಪೂರ್ಣ ರೂವಾರಿ ಸೂರ್ಯಸೇನ್ ಹುತಾತ್ಮನಾಗಿಹೋದ.
ಅದರ ಮಧ್ಯದ ಘಟನೆಗಳು ನಿಜಕ್ಕೂ ರೋಮಾಂಚಕಾರಿ ಮತ್ತು ಕುತೂಹಲಕಾರಿ..
ಇತಿಹಾಸದ ಗರ್ಭದಲ್ಲಿ ಅಡಗಿಹೋದ ಆ ಅದ್ಭುತ ಘಟನಾವಳಿಗಳನ್ನ ನಿಮ್ಮೊಡನೆ ಹಂಚಿಕೊಳ್ಳಲೇಬೇಕೆಂದು ಇನ್ನೆರಡು ಭಾಗಗಳಲ್ಲಿ  ಇಲ್ಲಿ ಹೊರತರುತ್ತಿದ್ದೇನೆ.
 
ಚಿತ್ತಗಾಂಗ್
                                    
ಚಿತ್ತಗಾಂಗ್ ನ ಹೋರಾಟ ನಡೆದದ್ದು ಎಪ್ರಿಲ್ 18 1930. ಪ್ಲಾನಿನಂತೆ ಎಲ್ಲ ಕೆಲಸಗಳು ಮುಗಿದ ಮೇಲೆ, ಕ್ರಾಂತಿಕಾರಿಗಳು ಜಲಾಲಬಾದ್ ಗುಡ್ಡದ ಮೇಲೆ ಅಡಗಿಕೊಂಡಿದ್ದ್ರು.
ಅದಾದ 4  ದಿನಗಳ ನಂತರ, ಅಂದ್ರೆ 22 ಏಪ್ರಿಲ್ 1930 , ಆ ಕ್ರಾಂತಿಕಾರಿಗಳ ಪಾಲಿಗೆ ಘೋರವಾಗಿತ್ತು.. ಕೆಲವು ತನಿಖೆಯ ಮೂಲಕ ಪೊಲೀಸರು ಕ್ರಾಂತಿಕಾರಿಗಳ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ಹೀಗಾಗಿ 80 ಸಶಸ್ತ್ರ ಪಡೆಯೊಂದಿಗೆ ಬ್ರಿಟಿಶ್ ಸೈನ್ಯ ಆ ಜಲಾಲಬಾದ್ ಗುಡ್ಡವನ್ನು ಸುತ್ತುವರೆಯಿತು.
4 ದಿನಗಳಿಂದ ಸರಿಯಾದ ಆಹಾರ ಇಲ್ಲದೆ,ನಿದ್ರೆ ಇಲ್ಲದೆ ದಣಿದು ಹೋಗಿದ್ದ ಆ ಯುವಕರಿಗೆ ಇದು ಮತ್ತೊಂದು ಸವಾಲಾಗಿ ಪರಿಣಮಿಸಿತ್ತು.. ದಣಿವಾಗಿದ್ದು ದೇಹಕ್ಕೆ, ದೇಶಭಕ್ತಿಗೆ ಅಲ್ವಲಾ..!!!!

ಸೇನಾಪತಿ ಲೋಕನಾಥ್ ಬಲ್ ನ ಆಜ್ನೆಯನ್ನನುಸರಿಸಿ ಎಲ್ಲ ವಿದ್ಯಾರ್ಥಿಗಳು ಯುದ್ಧಕ್ಕೆ ಸನ್ನದ್ಧರಾದರು.ಆ ಯುವಕರ ಹೆಸರು ಹೀಗಿವೆ..
೧)ಸುರೇಶ ದೇವ್           ೨)ವಿನೋದ್ ಚೌಧರಿ        ೩)ಜಿತೇಂದ್ರ ದಾಸ್ಗುಪ್ತ       ೪)ಶಂಭು ದಸ್ತಿದಾರ್
೫)ಕೃಷ್ಣ ಚೌಧರಿ             ೬)ಸರೋಜ ಗುಹ            ೭)ಮಲಿನ್ ಘೋಷ್          ೮)ಕಾಳಿಡೇ
೯)ಮಧುಸೂದನ್ ದತ್ತ    ೧೦)ನಾಣಿ ದೇವ್            ೧೧)ಖಿರೋದ್ ಬ್ಯಾನರ್ಜೀ   ೧೨)ಹಿಮೇಂದು ದಸ್ತಿದಾರ್
೧೩)ಕಾಳಿ ಚಕ್ರವರ್ತಿ      ೧೪)ಅರ್ಧೆಂದು ದಸ್ತಿದಾರ್   ೧೫)ರಣಧೀರ್ ದಾಸ್ಗುಪ್ತ     ೧೬)ಶ್ಯಾಮರಾಂ ದಾಸ್
೧೭)ಮೋತಿ ಕನುನ್ಗೋ   ೧೮)ವಿಧು ಭಟ್ಟಾಚಾರ್ಯ    ೧೯)ನಾರಾಯಣ್ ಸೇನ್     ೨೦)ಪುಲಿನ್ ವಿಕಾಸ್ ಘೋಷ್
೨೧)ಮಹೇಂದ್ರ ಚೌಧರಿ    ೨೨)ನಿರ್ಮಲ ಲಾಲ         ೨೩)ವೀರೇಂದ್ರ ಡೇ          ೨೪)ವಿಜಯ್ ಸೇನ್
೨೫)ನಿತ್ಯಪಾದ ಘೋಷ್   ೨೬)ಅಶ್ವಿನಿ ಚೌಧರಿ         ೨೭)ವನವಿಹಾರಿ ದತ್ತ         ೨೮)ಶಶಾಂಕ್ ದತ್ತ
೨೯)ಸುಬೋದ್ಹ್ ಪಾಲ್     ೩೦)ಫಣೀಂದ್ರ ನಂದಿ       ೩೧)ಹರಿಪಾದ ಮಹಾಜನ್    ೩೨)ಬಾಬುತೊಶ್ ಭಟ್ಟಾಚಾರ್ಯ
೩೩)ಸುಧಾಂಶು ಬೋಸ್   ೩೪)ಸುಬೋದ್ಹ್ ಚೌಧರಿ    ೩೫)ಬ್ರಿಗೇಡಿಯರ್ ತ್ರಿಪುರ ಸೇನ್
೩೬)ಮನೋರಂಜನ್ ಸೇನ್     ೩೭)ದೇವಪ್ರಸಾದ್ ಗುಪ್ತಾ   ೩೮)ಹರಿ ಬಲ್ (ಟೇಗ್ರ)
೩೯)ರಜತ್ ಸೇನ್   ೪೦)ಸ್ವದೇಶ್ ರೋಯ್    ೪೧)ವಿನೋದ್ ಬಿಹಾರಿ ದತ್ತ

ಈ ಎಲ್ಲ ಯುವಕರ ಹತ್ರ ಇದ್ದಿದ್ದು "ಮಸ್ಕೆತ್ರಿ" ರೈಫಲ್ ಗಳು..ಇವು ಸ್ವಲ್ಪ ಹಳೆ ಕಾಲದವು..
ಬ್ರಿಟಿಷರು ಗುಡ್ಡವನ್ನು ಸಮೀಪಿಸುತ್ತಿದ್ದಂತೆ, ಲೋಕನಾಥ್ ಆದೇಶ ನೀಡಿದ. ಕೂಡಲೇ ಯುವಕರ ಬಂದೂಕಿನಿಂದ ಗುಂಡುಗಳು ಹೊರಬಂದವು. ಬ್ರಿಟಿಷರಿಗೆ ದಿಗ್ಭ್ರಮೆಯಾಯಿತು.. ಅಲ್ಲಿನ ಯುವಕರ ರೌದ್ರರೂಪ ಆಗತಾನೆ ಅರ್ಥವಾಗಿತ್ತು ಅವರಿಗೆ.
ಬ್ರಿಟಿಷರೂ ಅತ್ಯಾಧುನಿಕ ವಿಕರ್ ಮಷಿನ್ ಗನ್ ಗಳಿಂದ ದಾಳಿ ನಡೆಸಿದರು..
 
"ಮಸ್ಕೆತ್ರಿ" ರೈಫಲ್
                                    
ವಿಕರ್ ಮಷಿನ್ ಗನ್
                              
ಆ ಹೋರಾಟದಲ್ಲಿ ಗುಂಡೊಂದು ಟೇಗ್ರಾನಿಗೆ ಬಡಿಯಿತು..ಬರೀ 14 ವರ್ಷದ ಆ ಪುಟ್ಟಪೋರ ಆ ಸಾವಿನಲ್ಲೂ ನಗುತ್ತ ಸಹಚರರಿಗೆ " ನಾನಿನ್ನು ಹೊರಟಿದ್ದೇನೆ.ನೀವು ನಿಲ್ಲಿಸಬೇಡಿ.ದಾಳಿ ಮುಂದುವರೆಯಲಿ" ಎನ್ನುತ್ತಲೇ ಹುತಾತ್ಮನಾದ..ಹೀಗೇ ಒಬ್ಬರ ಹಿಂದೊಬ್ಬರು ಅಸುನೀಗುತ್ತಾ ಹೋದರು.ಅಂಬಿಕಾ ಚಕ್ರವರ್ತಿಗೂ ಗುಂಡು ತಗುಲಿತು.

ಪರಿಸ್ಥಿತಿಯ ವಿಷಮತೆ ತಿಳಿದಾಕ್ಷಣ, ಸೇನಾಪತಿ ಲೋಕನಾಥ ಕೂಗಿದ, "ಗೆಳೆಯರೇ, ನಿಲ್ಲಬೇಡಿ, ಗೆಲ್ಲುವವರೆಗೂ ದಾಳಿ ಹಾಗೆ ಮುಂದುವರೆಯಲಿ" ಅಂತ. ಉತ್ತೇಜಿತಗೊಂಡ ಯುವಕರು, ದುಪ್ಪಟ್ಟು ಹುಮ್ಮಸ್ಸಿನಿಂದ ದಾಳಿ ನಡೆಸಿದರು.
ಕೊನೆಗೂ, ಪುಟ್ಟ ಬಾಲಕರು ಹಿಡಿದ ಹಳೆ ಕಾಲದ ಬಂದೂಕಿನ ಎದುರಿಗೆ, ದೊಡ್ಡ ಬ್ರಿಟಿಶ್ ಪಡೆಯ ಅತ್ಯಾಧುನಿಕ ಯಂತ್ರವೂ ಸೋಲೊಪ್ಪಿಕೊಂಡಿತು.. ಅದಾಗಲೇ ರಾತ್ರಿಯಾಗಿದ್ದರಿಂದ ಬ್ರಿಟಿಷರು ಅಲ್ಲಿರಲು ಸಾಧ್ಯವಾಗದೆ ಓಡಿ ಹೋದರು.. ಚಿತ್ತಗಾಂಗ್ ನ ಯುವಕರಿಗೆ ಮತ್ತೊಮ್ಮೆ ವಿಜಯ ಒಲಿದಿತ್ತು..

ಕೂಡಲೇ, ಕ್ರಾಂತಿಕಾರಿಗಳೂ ಬೆಟ್ಟವನ್ನು ಇಳಿದು ಬೇರೆ ಜಾಗಗಳಿಗೆ ಗುಂಪುಗುಂಪಾಗಿ ಚದುರಿಹೋದರು..
ಇಡೀ ಹೋರಾಟದಲ್ಲಿ ಒಟ್ಟು 12 ಜನ ಹುತಾತ್ಮರಾದರು. 11 ವಿದ್ಯಾರ್ಥಿಗಳು ಸ್ಥಳದಲ್ಲೇ ಅಸುನೀಗಿದರೆ, ಅರ್ಧೆಂದು ದಸ್ತಿದಾರ್ ಆಸ್ಪತ್ರೆಯಲ್ಲಿ ಮರಣಹೊಂದಿದ..
ಅಂಬಿಕಾ ಚಕ್ರವರ್ತಿಗೆ ಗುಂಡು ಬಡಿದಿದ್ದರಿಂದ ಅವನನ್ನು ಅಲ್ಲೇ ಬಿಟ್ಟು ಹೊರಟುಹೋದರು. ಆದರೆ ಅವನು ಇನ್ನೂ ಬದುಕಿದ್ದ..!!! ಹೇಗೋ ಆನಂತರ ತಲೆಮರೆಸಿಕೊಂಡ..!!!

ಇತ್ತ ಓಡಿ ಹೋದ ಯುವಕರಲ್ಲಿ ಕೆಲವರು ಬ್ರಿಟಿಷರಿಂದ ಬಂಧಿತರಾದರು.ಕೆಲವರು ತಾವು ಬ್ರಿಟಿಷರ ಕೈಗೆ ಸಿಕ್ಕು ಗುಲಾಮರಾಗಬಾರದೆಂದು ತಮಗೆ ತಾವೇ ಗುಂಡು ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡರು.ಇನ್ನು ಕೆಲವರು ಹಾಗೆಯೇ ತಮ್ಮ ತಮ್ಮ ಊರನ್ನು ಸೇರಿಕೊಂಡುಬಿಟ್ಟರು.. ಅದೇನೇ ಇರಲಿ, ಒಟ್ಟಿನಲ್ಲಿ ಆ ಎಲ್ಲರೂ, ತಾಯಿ ಭಾರತಿಗೆ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು..!!!!!

ಸೂರ್ಯಸೇನ್, ನಿರ್ಮಲ್ ಸೇನ್ ಮತ್ತು ಪ್ರೀತಿಲತಾ ಗುಟ್ಟಾಗಿ ಒಬ್ಬ ವಿಧವೆಯ ಮನೆಯಲ್ಲಿ ಆಶ್ರಯ ಪಡೆದರು.. ಆದರೆ ಅದೂ ಹೇಗೋ ಆಂಗ್ಲರಿಗೆ ಗೊತ್ತಾಗಿ, ಕೂಡಲೇ ಬ್ರಿಟಿಷರು ಕಾರ್ಯೋನ್ಮುಖರಾದರು.. ದೊಡ್ಡ ಪಡೆಯೇ ಆ ಮನೆಯನ್ನು ಆವರಿಸಿ, ದಾಳಿ ನಡೆಸಲಾಯಿತು.. ಒಳಗಿದ್ದ ಕ್ರಾಂತಿಕಾರಿಗಳೂ ಪ್ರತಿದಾಳಿ ನಡೆಸಿದರು.ಆದರೆ, ಈ ದಾಳಿಯ ಬಗ್ಗೆ ಪೂರ್ವತಯಾರಿ ಇಲ್ಲದೆ ಇದ್ದಿದ್ದರಿಂದ ಕ್ರಾಂತಿಕಾರಿಗಳಿಗೆ ದಾಳಿ ಮಾಡೋದು ಕಷ್ಟವಾಯಿತು.. ಆ ಹೋರಾಟದಲ್ಲಿ ನಿರಂತರ ಗುಂಡಿನ ಹೊಡೆತಕ್ಕೆ ಸಿಲುಕಿ ನಿರ್ಮಲ್ ಸೇನ್ ಹುತಾತ್ಮನಾದ..
ಆದರೆ, ಸೂರ್ಯಸೇನ್ ಮತ್ತು ಪ್ರೀತಿಲತಾ ತಪ್ಪಿಸಿಕೊಂಡರು..!!

ಸೂರ್ಯಸೇನ್, ಎಷ್ಟೋ ದಿನ ಬ್ರಿಟಿಷರಿಗೆ ಸಿಂಹಸ್ವಾಪ್ನವಾಗಿಯೇ ಉಳಿದಿದ್ದ.. ಆದರೆ ದೇಶದ್ರೋಹಿಯೊಬ್ಬ ಅವನ ಇರುವಿಕೆಯ ಸುಳಿವು ಕೊಟ್ಟಕ್ಷಣ, ಬ್ರಿಟಿಷರು ಸೂರ್ಯಸೆನನನ್ನು ಬಂಧಿಸಿಬಿಟ್ಟರು..!!
ಜೊತೆಗೆ, ಒಬ್ಬ ಕ್ರಾಂತಿಕಾರಿ ಆ ದ್ರೋಹಿಯನ್ನೂ ಕೊಂದುಬಿಟ್ಟ..ಆದರೆ ಆ ಕ್ರಾಂತಿಕಾರಿ ಯಾರು ಅಂತ ಕಡೆಗೂ ಪೊಲೀಸರಿಗೆ ಗೊತ್ತಾಗ್ಲಿಲ್ಲ..ಯಾಕಂದ್ರೆ, ಕೊಲೆಯಾದ ನೇತ್ರಸೇನನ ಹೆಂಡತಿ ಸೂರ್ಯಸೆನನನ್ನು ಅಪಾರವಾಗಿ ಗೌರವಿಸುತ್ತಿದ್ದಳು.ಹೀಗಾಗಿ ತನ್ನ ಗಂಡ ದುಡ್ಡಿಗಾಗಿ ಮಾಡಿದ ನಾಡದ್ರೋಹಕ್ಕೆ ಅವಳೂ ತಪ್ತಳಾಗಿದ್ದಳು. ಪೊಲೀಸರು ಆಕೆಯನ್ನು ಎಷ್ಟೇ ಹಿಮ್ಸಿಸಿದರೂ, ತನ್ನ ಪತಿಯ ಕೊಲೆ ಮಾಡಿದವನ ಹೆಸರನ್ನ ಆಕೆ ಹೇಳಲೇ ಇಲ್ಲ.. ಇಂತಹ ಸ್ತ್ರೀಯರಿಂದಲೇ ಭಾರತ ಇನ್ನೂ ಉಸಿರಾಡುತ್ತಿದೆ..!!!!

ಮತ್ತೊಬ್ಬ ನಾಯಕ ಗಣೇಶ್ ಘೋಷ್ ನನ್ನು ಬಂಧಿಸಲಾಯಿತು.ಅವನ ವಿಚಾರಣೆಯೂ ನಡೆದು, ಅವನಿಗೆ ಅಂಡಮಾನಿನ ಭಯಾನಕ "ಕರಿನೀರಿನ"ಶಿಕ್ಷೆಗೆ ಗುರಿಮಾಡಲಾಯಿತು..

ಇಷ್ಟೆಲ್ಲದರ ನಡುವೆ, ಅನಂತ, ಲೋಕನಾಥ,ಕಲ್ಪನಾ ಏನಾದ್ರು..????
ಬಾಲಕ ಹರಿಪಾದ ಮಹಾಜನ್ ಎಲ್ಲಿ ಅಡಗಿದ್ದ..?????!!!!

[ಮುಂದಿನ ಭಾಗದಲ್ಲಿ]


[ ಉಳಿದೆರಡು ಭಾಗಗಳು,
ಭಾಗ-೧ - "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೧
ಭಾಗ-೩ -  "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೩


(ಚಿತ್ರಕೃಪೆ -- http://shantigrouprealhistory.blogspot.com )
 

Thursday, 12 January 2012

ಮಿಡ್ನಾಪುರದಲ್ಲಿ ಕ್ರಾಂತಿಯ ಕಲರವ..

ಪ್ರದ್ಯೋತ ಕುಮಾರ ಭಟ್ಟಾಚಾರ್ಯ
                                  
ಬಂಗಾಳದ ತೋಟದಿಂದ, ತಾಯಿ ಭಾರತಿಗೆ ಪೂಜಿತಗೊಂಡ ಕ್ರಾಂತಿಯ ಹೂವುಗಳು ಅಸಂಖ್ಯ.
ಅಂಥಾ ಒಬ್ಬ ಯುವಕನ ಸ್ಮರಣೆ ಇದು.

ಮಿಡ್ನಾಪುರ ಅನ್ನೋದು ಬಂಗಾಳದ ಒಂದು ಜಿಲ್ಲೆ. "ಅನುಶೀಲನ ಸಮಿತಿ"ಯ ಪ್ರಭಾವದಿಂದ ಅನೇಕ ಯುವಕ ಕ್ರಾಂತಿಕಾರಿಗಳು ಅಲ್ಲಿ ಬೆಳೆದಿದ್ರು..
ಮಿಡ್ನಾಪುರದಲ್ಲಿ ಇದ್ದ ಆಂಗ್ಲ ಅಧಿಕಾರಿಗಳು ಅತಿಕ್ರೂರತನದಿಂದ ಆಳ್ವಿಕೆ ನಡೆಸ್ತಿದ್ರು.
ಅಲ್ಲಿನ ಮ್ಯಾಜಿಸ್ಟ್ರೇಟ್ ಗಳಂತೂ, ಕ್ರಾಂತಿಕಾರಿಗಳ ಮೇಲೆ ಕೇಸುಗಳನ್ನ ಹಾಕಿ, ವಿವಿಧ ಶಿಕ್ಷೆಗಳನ್ನ ವಿಧಿಸ್ತಿದ್ರು.

ಹೀಗಾಗಿಯೇ, ಮಿಡ್ನಾಪುರದ ಯುವಕರು ಆಲ್ಲಿನ ಬ್ರಿಟಿಷರಿಗೆ ಒಂದು ಬಿಸಿ ಮುಟ್ಟಿಸಿದರು. ತಮ್ಮ ಜಿಲ್ಲೆಗೆ ಒಬ್ಬ ಭಾರತೀಯನನ್ನು ಮ್ಯಾಜಿಸ್ಟ್ರೇಟ್ ಮಾಡೋ ವರೆಗೂ, ಉಳಿದ ಆಂಗ್ಲ ಮ್ಯಾಜಿಸ್ಟ್ರೇಟ್ ಗಳನ್ನ ಕೊಲ್ತಿವಿ ಅಂತ..
ಬ್ರಿಟಿಷರು ಇದನ್ನು ಅಷ್ಟೊಂದು ಪರಿಗಣಿಸಲಿಲ್ಲ.

ಆಗ ಅಲ್ಲಿಗೆ 'ಜೇಮ್ಸ್ ಪ್ಯಾಡಿ' ಅನ್ನೋನು ಮ್ಯಾಜಿಸ್ಟ್ರೇಟ್ ಆಗಿ ಬಂದ. ಪ್ರತಿಜ್ಞೆ ಮಾಡಿದ್ದ ಕ್ರಾಂತಿಕಾರಿಗಳು, ಅದೊಂದು ಸಮಾರಂಭದಲ್ಲಿ, ಅತಿಥಿಯಾಗಿ ಬಂದಿದ್ದ ಅವನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು. 
ಬ್ರಿಟಿಷರು ಕಲ್ಕತ್ತೆಯಿಂದ ವೈದ್ಯರನ್ನು ಕರೆಸಿದರು. ವೈದ್ಯರು ಪ್ಯಾಡಿ ಯಾ ದೇಹದಿಂದ ಗುಂಡುಗಳನ್ನು ಹೊರತೆಗೆದರೂ, ಅವನನ್ನು ಬದುಕಿಸಲಾಗಲಿಲ್ಲ.. ಯುವಕರ ನಿಲುವು ಸ್ಪಷ್ಟವಾಗಿತ್ತು. ಆಂಗ್ಲರು ಈಗ ಸ್ವಲ್ಪ ಚಿನ್ತಿಸಲಾರಮ್ಭಿಸಿದರು..

ಆನಂತರ 'ಡಾಗ್ಲಾಸ್' ಎಂಬ ಆಂಗ್ಲನನ್ನು ಮತ್ತೆ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಿದರು.. ಆತ ಮೊದಲಿಂದಲೂ ಹೆದರಿದ್ದ.
ಅದೊಮ್ಮೆ "ಡಿಸ್ಟ್ರಿಕ್ಟ್ ಬೋರ್ಡ್" ನ ಸಭೆ ಇತ್ತು. ಸಂಜೆಯವರೆಗೂ ಶಾಂತಿಯುತವಾಗಿಯೇ ಇತ್ತು. ಆದರೆ ಗಂಟೆ ೫ ಆಗುತ್ತಿದ್ದಂತೆ ಇಬ್ರು ಯುವಕರು, 'ಡಾಗ್ಲಾಸ್' ನ ಹತ್ರ ಬಂದ್ರು. ನೋಡುನೋಡುತ್ತಲೇ ಆ ಆಂಗ್ಲನ ಮೇಲೆ ಗುಂಡು ಹಾರಿಸಲಾಯಿತು..ಆ ಅಧಿಕಾರಿ ಧರೆಗುರುಳಿದ.
ತಕ್ಷಣ ಇಬ್ರೂ ಯುವಕರು ಓಡಿ ಹೋದರು. ಒಬ್ಬ ಅಲ್ಲೇ ಇದ್ದ ಪಾರ್ಕಿನಲ್ಲಿ ಅಡಗಿ ಕುಳಿತ. ಮತ್ತೊಬ್ಬ ಹತ್ತಿರದ ಲಾಡ್ಜ್ ಒಳಗೆ ನುಸುಳಿ ಹೋದ.

ಪಾರ್ಕಿನ ಒಳಗೆ ಬಚ್ಚಿಟ್ಟುಕೊಂಡ ಯುವಕ ಸುಲಭವಾಗಿ ಬ್ರಿಟಿಷರ ಕಣ್ಣಿಗೆ ಬಿದ್ದುಬಿಟ್ಟ. ಕೂಡಲೇ ಪಾರ್ಕಿಗೆ ಬಂದ ಬ್ರಿಟಿಶ್ ಪಡೆ ಅವನ ಮೇಲೆ ಗುಂಡಿನ ದಾಳಿ ನಡೆಸಿತು.. ಎಷ್ಟೇ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆ ಹುಡುಗನಿಗೆ ಗುಂಡುಗಳು ತಗುಲಿದವು. ಕೆಳಗೆ ಬಿದ್ದ ಆತನನ್ನು ಆಂಗ್ಲರು ಸೆರೆ ಹಿಡಿದರು..
ಅವನ ಹೆಸರು "ಪ್ರದ್ಯೋತ ಕುಮಾರ ಭಟ್ಟಾಚಾರ್ಯ"..

ಗುಂಡಿನಿಂದ ಬಳಲಿದ್ದ 'ಡಾಗ್ಲಾಸ್' ಬದುಕಿ ಉಳಿಯಲಿಲ್ಲ.. ಇತ್ತ ಸೆರೆಮನೆಯಲ್ಲಿ 'ಪ್ರದ್ಯೋತ'ನಿಗೆ ಅವನ ಸಹಚರರ ಬಗ್ಗೆ ಸುಳಿವು ನೀಡಬೇಕೆಂದು ಚಿತ್ರ-ವಿಚಿತ್ರ ಹಿಂಸೆ ನೀಡಲಾಯಿತು. ದೇಶಕ್ಕಾಗಿ ಎಲ್ಲ ನೋವನ್ನೂ ಸಹಿಸಿಕೊಂಡನೆ ಹೊರತು, ಯಾರ ಹೆಸರನ್ನೂ ಹೇಳಲಿಲ್ಲ..!!

ಕೊನೆಗೆ ವಿಚಾರಣೆಯ ನಂತರ "ಪ್ರದ್ಯೋತ"ನಿಗೆ, ಮರಣದಂಡನೆಯ ಶಿಕ್ಷೆ ವಿಧಿಸಲಾಯಿತು. 1933 ಜನವರಿ 12 ರಂದು ಆತನನ್ನು ನೇಣಿಗೇರಿಸಿದರು..

ಆದರೂ ಆಂಗ್ಲರು ಮತ್ತೊಮ್ಮೆ "ಬರ್ಗ್' ಎಂಬ ಮತ್ತೊಬ್ಬನನ್ನು ಮಾಡಿದರು.
ತಾವೂ ಅಷ್ಟೇ ಬಲವಂತರು ಅಂತ, ಪಟ್ಟು ಹಿಡಿದ ಕ್ರಾಂತಿಕಾರಿಗಳು ಆ ಅಧಿಕಾರಿಯನ್ನೂ ಕೊಂದರು.
ಆ ಕಾರಣಕ್ಕೆ "ನಿರ್ಮಲ್ ಜೀವನ ಘೋಷ್", "ಬ್ರಿಜ್ ಕಿಶೋರ್ ಚಕ್ರವರ್ತಿ", "ರಾಮಕೃಷ್ಣ ರೈ" ಈ ಮೂವರನ್ನೂ ಗಲ್ಲಿಗೇರಿಸಲಾಯಿತು..
ಕಡೆಗೂ ಎಚ್ಚೆತ್ತ ಬ್ರಿಟಿಷರು, ಕ್ರಾಂತಿಕಾರಿಗಳ ಬೇಡಿಕೆಯಂತೆ, ಮುಂದೆ ಭಾರತೀಯನನ್ನೇ ಮಾಡಿದರು. ಅಲ್ಲಿಗೆ ಆ ಎಲ್ಲ ಹುತಾತ್ಮರ, ಕ್ರಾಂತಿಕಾರಿಗಳ ಗೆಲುವಾಗಿತ್ತು..

ಸ್ನೇಹಿತರೆ, ನಮಗೆ ಸ್ವಾತಂತ್ರ್ಯ ಪುಗಸಟ್ಟೆ ಸಿಕ್ಕಿಲ್ಲ.. ನಮ್ಮೀ ಸ್ವಾತಂತ್ರದ ಮಹಲು, ಅದೆಷ್ಟೋ ಕ್ರಾಂತಿಕಾರಿಗಳ ಬಲಿದಾನದ ಭದ್ರ ಅಡಿಪಾಯದ ಮೇಲೆ ನಿಂತಿದೆ ಅನ್ನೋದು, ಬಹಳಷ್ಟು ಮಂದಿಗೆ ಗೊತ್ತಾಗಲೇ ಇಲ್ಲ.. ಯಾಕಂದ್ರೆ, ಅಂಥಾ ಹುತಾತ್ಮರನ್ನು ಪರಿಚಯಿಸುವ ಕೆಲಸ, ಯಾವ ಶಾಲಾ ಪುಸ್ತಕಗಳೂ ಮಾಡಲೇ ಇಲ್ಲ...

ಅಣುಮಾತ್ರವೂ, ಕ್ಷಣಮಾತ್ರವೂ ತಮ್ಮ ಬದುಕಿನ ಬಗ್ಗೆ ಯೋಚಿಸದೆ, ಮಾತೃಭೂಮಿಯ ಸೇವೆಗಾಗಿ ಸಂಪೂರ್ಣವಾಗಿ ಅರ್ಪಿಸಿಕೊಂಡ ಯುವಕರೆಷ್ಟೋ.. ವಿದ್ಯಾರ್ಥಿಗಳೆಷ್ಟೋ..
ಅವರೆಲ್ಲರ ತ್ಯಾಗವನ್ನು ಮರೆತಿದ್ದರ ಪರಿಣಾಮವೇ, ಇವತ್ತಿನ ದೇಶದ ಈ ಸ್ಥಿತಿ..!!!

ಆ ಹುತಾತ್ಮ, "ಪ್ರದ್ಯೋತ"ನಿಗೊಂದು ಭಾವಪೂರ್ಣ ನಮನ..

Wednesday, 11 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 1

ಸೂರ್ಯಸೇನ್ - ಮಾಸ್ಟರ್ ದಾ..
                                       
ಗಣೇಶ್ ಘೋಷ್
                                                                                
ಅಂಬಿಕಾ ಚಕ್ರವರ್ತಿ
                                                                                      
'ಚಿತ್ತಗಾಂಗ್' ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ 'ಬಾಂಗ್ಲಾದೇಶ'ದಲ್ಲಿದೆ..

 ಅವನ ಹೆಸರು 'ಸೂರ್ಯಸೇನ್'. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ 'ಮಾಸ್ಟರ್ ದಾ'.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ...ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ 'ಅನುಶೀಲನ ಸಮಿತಿ' ಮತ್ತು 'ಜುಗಾಂತರ' ದಿಂದ ಪ್ರಭಾವಿತನಾಗಿದ್ದ..
 

ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು..
ಸುಮಾರು ೬೦ ವಿದ್ಯಾರ್ಥಿಗಳ ದೊಡ್ಡ ಸೈನ್ಯವೆ ತಯಾರಾಯ್ತು.
ಗಣೇಶ್ ಘೊಶ್,ಅನಂತ ಸಿಂಹ,ನಿರ್ಮಲ್ ಸೇನ್,ಲೊಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವದ್ದೆದಾರ್, ಕಲ್ಪನಾ ದತ್ತ ಇವರ ಮುನ್ದಾಳತ್ವದಲ್ಲಿ ಅನೆಕ ಪಡೆಗಳನ್ನು ಸೂರ್ಯಸೇನ್ ರಚಿಸಿದ. ಹರಿಗೊಪಾಲ್ ಬಲ್(ಟೆಗ್ರ), ದೇವಪ್ರಸಾದ್ ಗುಪ್ತಾ, ಆನಂದಪ್ರಸಾದ ಗುಪ್ತಾ, ಹರಿಪಾದ ಚಕ್ರವರ್ತಿ, ಜಿಬನ್ ಘೋಶಾಲ್ ಮುಂತಾದ ಉತ್ಸಾಹಿ ತರುಣರು ಆ ಪಡೆಗಳಲ್ಲಿದ್ರು.
ಪ್ರತಿ ಪಡೆಗೂ ಒಂದೊಂದು ಕೆಲಸ ನೀಡಲಾಯಿತು.



ಕಲ್ಪನಾ ದತ್ತ
                                                                 
ಪ್ರೀತಿಲತಾ ವದ್ದೆದಾರ್
                                                                       
ಲೋಕನಾಥ್ ಬಲ್
                                                                        


ಅದು ಎಪ್ರಿಲ್ 18 - 1930. ಸೂರ್ಯಸೇನನ ಪ್ಲಾನಿನಂತೆ ಅವತ್ತು ರಾತ್ರಿ 10 ಗಂಟೆಗೆ ಸರಿಯಾಗಿ, ಒಮ್ಮೆಲೇ ಚಿತ್ತಗಾಂಗ್ ನ ಎಲ್ಲ ಆಂಗ್ಲ ಕಛೇರಿಗಳ ಮೇಲೆ ದಾಳಿ ಮಾಡಲಾಯಿತು.. 
ಪೂರ್ವ ಯೋಜಿತದಂತೆ, ಗಣೇಶ್ ಘೊಶನ ತಂಡ ಪೊಲಿಸ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡರೆ, ಲೋಕನಾಥನ ತಂಡ 'ಅರೆಸೈನ್ಯ'ದ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿತು. ಅಂಬಿಕಾ ಚಕ್ರವರ್ತಿಯ ಜೊತೆಗಾರರು, ಚಿತ್ತಗಾಂಗ್ ಗೆ ಕೂಡುವ ಎಲ್ಲ ರೈಲ್ವೆ ಮಾರ್ಗವನ್ನು ಭಗ್ನಗೊಳಿಸಿದರು. ನಿರ್ಮಲ್ ಸೇನ್ ಟೆಲಿಗ್ರಾಫ್ ಸಂಪರ್ಕವನ್ನು ಕಡಿತಗೊಳಿಸಿದ.
ಈ ಎಲ್ಲ ಕಾರ್ಯಗಳ ನಂತರ, ಸೂರ್ಯಸೇನನ ನಾಯಕತ್ವದಲ್ಲಿ, ಪೋಲಿಸ್ ಶಸ್ತ್ರಾಗಾರದ ಮುಂದೆ ಎಲ್ಲರೂ ಸೇರಿ, ಅಲ್ಲೇ ಭಾರತದ ಬಾವುಟ ಹಾರಿಸಿ, "ವಂದೇ ಮಾತರಂ" ಹೇಳಿ, ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು..


ಆನಂತರ, ಚಿತ್ತಗಾಂಗ್ ನ ಪರ್ವತಶ್ರೇಣಿಗಳಲ್ಲಿ ಕ್ರಾಂತಿಕಾರಿಗಳು ಅಡಗಿಕೊಂಡರು. ಆದರೆ ಸುಳಿವನ್ನು ಹಿಡಿದು ಬೆನ್ನುಹತ್ತಿದ ಆಂಗ್ಲರು, ಇಡೀ ಆ ಪರ್ವತವನ್ನು ಸುತ್ತುವರೆದರು.
ಸುಮಾರು 80 ಬ್ರಿಟಿಶ್ ಪಡೆಗಳ ಜೊತೆಗೆ, ಆ ಪುಟ್ಟ ವಿದ್ಯಾರ್ಥಿಗಳ ಪಡೆ ಗುಂಡಿನ ದಾಳಿ ನಡೆಸಿತು.. 12 ಜನ ಆ ಹೋರಾಟದಲ್ಲಿ ಮೃತರಾದರು. ಕೆಲವರು ಕಲ್ಕತ್ತೆಗೆ ಓಡಿಹೋದರು. ಸೂರ್ಯಸೇನ್ ಮಾತ್ರ ವೇಷಮರೆಸಿಕೊಂಡಿದ್ದ..!!

ಇದಾದ ಮೇಲೆ, ಅಜ್ಞಾತ ಮನೆಯೊಂದರಲ್ಲಿ ಅಡಗಿದ್ದಾಗ, ಬ್ರಿಟಿಷರ ದಾಳಿಗೆ 'ನಿರ್ಮಲ್ ಸೇನ್' ಬಲಿಯಾದ. ನಂತರ ಪ್ರೀತಿಲತಾ, ಊರಿನ "ಯುರೋಪೆಯನ್ ಕ್ಲಬ್' ಮೇಲೆ ದಾಳಿ ನಡೆಸಿ, ದುಷ್ಟ ಆಂಗ್ಲರನ್ನು ಕೊಂದು, ತಾನೂ ಹುತಾತ್ಮಳಾದಳು..
ಆದರೂ ಕೊನೆಗೆ, 'ನೇತ್ರ ಸೇನ್' ಎಂಬ ದ್ರೋಹಿಯ ಕಾರಣದಿಂದ, ಸೂರ್ಯಸೇನ್ ಬಂಧಿತನಾಗಿಬಿಟ್ಟ.. ಆ ಸಿಟ್ಟಿಗೆ, ಉಳಿದ ಕ್ರಾಂತಿ ಯುವಕರು ಆ ಮನೆಮುರುಕನನ್ನು ಕೊಂದು, ದೇಶದ್ರೋಹಕ್ಕೆ ಸಾವೇ ಶಿಕ್ಷೆ ಅನ್ನೋದನ್ನ ತೋರಿಸಿದರು..
 

ಬಂಧಿತ ಸೂರ್ಯಸೇನನ ವಿಚಾರಣೆ ನಡೆದು, ಅವನಿಗೆ ಮತ್ತು ಜುಗಾಂತರ ಪಾರ್ಟಿಯ "ತಾರಕೆಶ್ವರ ದಸ್ತಿದಾರ್' ಇಬ್ರಿಗೂ ಗಲ್ಲು ಶಿಕ್ಷೆ ಪ್ರಕಟಿಸಲಾಯಿತು..
ಜನವರಿ 12 ರಂದು ಅವರನ್ನು ನೇಣು ಹಾಕಲಾಯಿತು..
ಆದರೆ, ಗಲ್ಲಿಗೆರಿಸುವುದಕ್ಕಿಂತ ಮುಂಚೆ, ಸೂರ್ಯಸೆನನನ್ನು ಅಮಾನುಷವಾಗಿ ಬ್ರಿಟಿಷರು ಹಿಂಸಿಸಿದರು..
ಹ್ಯಾಮರ್ ನಿಂದ ಅವನ ಹಲ್ಲುಗಳನ್ನು ಒಡೆದರು. ಕಟಿಂಗ್ ಪ್ಲೇಯರ್ ನಿಂದ ಅವನ ಉಗುರುಗಳನ್ನ ಕೀಳಲಾಯಿತು.. ತೊಡೆಯ ಸಂದಿಗಳಲ್ಲಿ ತಿವಿದರು. ಕೈಕಾಲಿನ ಕೀಲುಗಳನ್ನ ಮುರಿದರು. ಇಂಥಾ ಹಿಂಸೆಯಿಂದ ಮೂರ್ಚೆ ಹೋಗಿದ್ದ ಸೂರ್ಯಸೇನನನ್ನು ಅನಾಮತ್ತಾಗಿ ಎಳೆದುಕೊಂಡು ಬಂದು ನೇಣಿಗೇರಿಸಿದರು
.


ಸಾವಿಗೂ ಮುಂಚೆ, ಆತ ತನ್ನ ಯುವಕರಿಗೆ ಪತ್ರವೊಂದನ್ನು ಬರೆದಿದ್ದ..
" ಸಾವು ನನ್ನನ್ನು ಆಲಂಗಿಸುತ್ತಿದೆ.. ಆ ಅನಂತದೆಡೆಗೆ ನಾನು ಹೊರಟಿದ್ದೇನೆ.. ಮಾತೃಭೂಮಿಗೆ ಪ್ರಾಣ ಕೊಡುತ್ತಿರುವ ಈ ಸೌಭಾಗ್ಯದ ಸಂದರ್ಭದಲ್ಲಿ, ನಾನು ನಿಮಗೆ ನೀಡುವ ಆದೇಶ ಒಂದೇ. ಅದು ನನ್ನ ದೇಶದ "ಸ್ವರಾಜ್ಯ"ದ ಕನಸು. ಚಿತ್ತಗಾಂಗ್ ನ ಕ್ರಾಂತಿಯನ್ನು ಎಂದಿಗೂ ಮರೆಯಬೇಡಿ.. ನಿಮ್ಮ ಮನದಲ್ಲಿ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲ ವೀರರ ಹೆಸರನ್ನು ರಕ್ತದಲ್ಲಿ ಬರೆದುಕೊಳ್ಳಿರಿ.. ಮತ್ತು ಸ್ವಾತಂತ್ರ್ಯ ಸಿಗೋವರೆಗೂ ಹೋರಾಟ ನಿಲ್ಲಿಸದಿರಿ.."


ಹೋರಾಟದಲ್ಲಿ ಹುತಾತ್ಮರಾದ - ಟೆಗ್ರ( ಹರಿಗೋಪಾಲ್ ಬಲ್) ಮತ್ತು ಮೋತಿ ಕನುನ್ಗೋ.
                                                           
ಹುತಾತ್ಮರಾದ - ನರೇಶ್ ರೋಯ್, ತ್ರಿಪುರ ಸೇನ್, ವಿಧು ಭಟ್ಟಾಚಾರ್ಯ.
ಹುತಾತ್ಮರಾದ ಪ್ರಭಾಸ್ ಬಲ್, ಶಶಾಂಕ್ ದತ್ತ, ನಿರ್ಮಲ ಲಾಲಾ.
ಹುತಾತ್ಮರಾದ ಜಿತೇಂದ್ರ ದಾಸಗುಪ್ತ, ಮಧುಸೂದನ್ ದತ್ತ, ಪುಲಿನ್ ವಿಕಾಸ್ ಘೋಷ್..
                                                            
ಅವನ ಶಿಷ್ಯರೆನೋ, ಹುತಾತ್ಮರ ಹೆಸರನ್ನು ಸ್ಮರಿಸಿ, ಅದರಂತೆ ಹೋರಾಡಿ ದೇಶವನ್ನು ಬಿಡುಗಡೆಗೊಳಿಸಿದರು..
ಆದರೆ, ನಾವು ನಮ್ಮ ಹೃದಯದಾಳದಲ್ಲಿ, ಆ ತ್ಯಾಗಮಯಿಗಳ ಹೆಸರನ್ನು ಬರೆದುಕೊಳ್ಳಲೆ ಇಲ್ಲವಲ್ಲ..!!!!!!!
ಇದೇ ಚಿತ್ತಗಾಂಗ್ ಹೋರಾಟವನ್ನು ಆಧರಿಸಿ ಆಶುತೋಷ್ ಗೊವಾರಿಕರ್ ಅವ್ರ ನಿರ್ದೇಶನದಲ್ಲಿ, "ಖೇಲೇ ಹಂ ಜೀ ಜಾನ್ ಸೆ" ಎಂಬ ಅದ್ಭುತ ಚಿತ್ರ ತೆರೆಕಂಡಿತ್ತು. ಆದರೆ ಡಾನ್-2, ಬಾಡಿಗಾರ್ಡ್ ಮುಂತಾದ ಚಿತ್ರವನ್ನು ನೋಡುವ ನಮ್ಮ ಯುವಕರು ಇಂಥಾ ಅಪರೂಪದ ಚಿತ್ರವನ್ನು ಪ್ರೋತ್ಸಾಹಿಸಲಿಲ್ಲ.( ಅದೆಷ್ಟೋ ಮಂದಿಗೆ ಇಂಥಾ ಸಿನೆಮಾ ಇದೆ ಅನ್ನೋದೇ ಗೊತ್ತಿಲ್ಲ.)


ಸೂರ್ಯಸೇನನ ಹೌತಾತ್ಮ್ಯದಿನವಾದ ಇಂದು, ಆ ವೀರಚೇತನಕ್ಕೆ ಭಾವಪೂರ್ಣ ಶ್ರಧಾಂಜಲಿ..  


(ಚಿತ್ರಕೃಪೆ - http://shantigrouprealhistory.blogspot.com)
 

[ಉಳಿದೆರಡು ಭಾಗಗಳು
ಭಾಗ-೨ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೨
ಭಾಗ-೩ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೩
]

Sunday, 8 January 2012


 ಜನನಿಯ ಘೋಷ 

ಅವಳು ನನ್ನ ಮನವ ಹೆತ್ತ ಜನನಿ
ಸುಧೆಯುಣಿಸಿ ಬೆಳೆಸಿದ ಕಾರುಣಿ.,
ನಿತ್ಯಸುಂದರಿ ಆಕೆ, ವನನದಿಪರ್ವತಗಳಲಿ..
ಸಂಗೀತಪ್ರಿಯೆ ಝರಿಪಕ್ಷಿಕವಿಗಳ ಘೋಷದಲಿ..,   
ನಾಟ್ಯವಾಡಿಹಳು ಸರ್ವರ ಮನರಂಗದಲಿ.,
ಅವಳೇ ನನ್ನ ತಾಯಿ ಭಾರತಿ
ಈ ನಾಡ ನಿಜ ಒಡತಿ..


ಸಾವಿರ ಸೂರ್ಯರಿಗಿಂತ
ದೇದೀಪ್ಯಮಾನವಾದ ಅವಳ 
ಮುಗುಳ್ನಗೆಯ ಮೊಗಕ್ಕೆ ಬಡಿಯಿತಂದು ಗ್ರಹಣ..
ಎಗ್ಗಿಲ್ಲದೆ ನುಗ್ಗಿಬಂದ 
ಪರರ ಸಂಕೋಲೆಯ ಬಂಧನ..


ಮಾತೆಯ ಮಾಂಗಲ್ಯವನೆ ಸೀಳಹೊರಟ
ಪರಂಗಿಗಳ ಫಿರಂಗಿಗೆ, ಬಂದೂಕಿನ ನಳಿಕೆಗೆ
ಎದೆಯೊಡ್ಡಿದ ಕಲಿಗಳು,
ಸಜ್ಜುಗೊಳಿಸಿದ ಉರುಳಿಗೆ ಕೊರಳಿತ್ತು
ಸ್ವರಾಜ್ಯದರಮನೆಗೆ ತೋರಣಗಳಾದ
ಗುಂಡಿಗೆಯ ಪ್ರಚಂಡರು,.
ಹೂತುಹೋದರು ಇತಿಹಾಸದೊಳು..
ಕಾಲಗರ್ಭದಲ್ಲಿ ಇಂಗಿಹೋದ, ಹೆಪ್ಪುಗಟ್ಟಿದ 
ರಕ್ತದಮಡು ನಮಗೀಗ ಕಾಣುತ್ತಲೇ ಇಲ್ಲ.
ಅದರಿಂದ ಚಿಗುರೊಡೆದ ಸ್ವಾತಂತ್ರ್ಯವೃಕ್ಷವಷ್ಟೇ ನಮಗೆ ಕಂಡಿದ್ದು..!!


ಈಗ ಈ ಮರಕ್ಕೂ ಗೆದ್ದಲು,
ಕಾಂಡ ಕೊರೆದು ಪೊಳ್ಳಾಗಿಸುವ ಹುಳು..
ಬೃಹತ್ತಾಗಿ ಬೆಳೆದ ಈ ಮರದ
ನಿತ್ಯಹಸಿರಿನಲ್ಲಿ, ಹಾಡಬೇಕಿತ್ತು ಕೋಗಿಲೆ,
ಕುಸುಮಗಳ ನಡುವೆ, ಚಿಟ್ಟೆಗಳ ಕಲೆ..
ಆದರೆ, ಇಲ್ಲೀಗ ವಾಸ ಬಾವುಲಿಗಳ ಟ್ಹಾವು 
ಎಲ್ಲವನು ತಿಂದು ಮಬ್ಬಾದ ಹೆಬ್ಬಾವು..


ಮತ್ತೆ ಭಾರತಿಗೆ ಕವಿದಿದೆ ಗ್ರಹಣ.,
ನಮ್ಮ ಅನ್ಯಾಯಗಳ ಕೇತುವಿನಿಂದ
ಅಕ್ರಮಗಳ ರಾಹುವಿಂದ ಗ್ರಸ್ತಗ್ರಹಣ..
ಪ್ರಕೃತಿಯ ಗ್ರಹಣ ತಾನಾಗೇ ಸರಿದೀತು..,
ಈ ಗ್ರಹಣ... ಉಹೂ..
ಕಳಚಲು ಒಗ್ಗೂಡಿ ಕೈಹಚ್ಚಲೇಬೇಕು.
ಜನಮಾನಸವ ಬೆಸೆದು...


ಸರ್ವಶಕ್ತಳಾಕೆ ಭಾರತಾಂಬೆ,
ನಮ್ಮ ಮನದಾಳದ ಕೂಗಿಗೆ
ಒಂದಾಗಿ ಅವಳೆಡೆ ಚಾಚುವ ಕೈಗೆ
ಕಾದು ಹೊಸ್ತಿಲಲ್ಲೇ ನಿಂತು
ಹವಣಿಸುತ್ತಿಹಳು..
ಕೇಳಿಸದಾಯಿತೇ ಆಕೆಯ ಕರೆ.??
ಬನ್ನಿ ಜೊತೆಗೂಡಿ ಮುನ್ನಡೆಯಲು,
ತಾಯ ಹೊನ್ನ ಚರಿತೆಯ ಮತ್ತೆ ಬೆಳಗಿಸಲು,
ಮೈಕೊಡವಿ ಆಲಸ್ಯವನು
ಪಾಂಚಜನ್ಯವ ಮೊಳಗಿಸಲು 
ನಾಡನಿರ್ಮಾಣದಲಿ ಅಡಿಗಲ್ಲನಿಡಲು....