Thursday 12 January 2012

ಮಿಡ್ನಾಪುರದಲ್ಲಿ ಕ್ರಾಂತಿಯ ಕಲರವ..

ಪ್ರದ್ಯೋತ ಕುಮಾರ ಭಟ್ಟಾಚಾರ್ಯ
                                  
ಬಂಗಾಳದ ತೋಟದಿಂದ, ತಾಯಿ ಭಾರತಿಗೆ ಪೂಜಿತಗೊಂಡ ಕ್ರಾಂತಿಯ ಹೂವುಗಳು ಅಸಂಖ್ಯ.
ಅಂಥಾ ಒಬ್ಬ ಯುವಕನ ಸ್ಮರಣೆ ಇದು.

ಮಿಡ್ನಾಪುರ ಅನ್ನೋದು ಬಂಗಾಳದ ಒಂದು ಜಿಲ್ಲೆ. "ಅನುಶೀಲನ ಸಮಿತಿ"ಯ ಪ್ರಭಾವದಿಂದ ಅನೇಕ ಯುವಕ ಕ್ರಾಂತಿಕಾರಿಗಳು ಅಲ್ಲಿ ಬೆಳೆದಿದ್ರು..
ಮಿಡ್ನಾಪುರದಲ್ಲಿ ಇದ್ದ ಆಂಗ್ಲ ಅಧಿಕಾರಿಗಳು ಅತಿಕ್ರೂರತನದಿಂದ ಆಳ್ವಿಕೆ ನಡೆಸ್ತಿದ್ರು.
ಅಲ್ಲಿನ ಮ್ಯಾಜಿಸ್ಟ್ರೇಟ್ ಗಳಂತೂ, ಕ್ರಾಂತಿಕಾರಿಗಳ ಮೇಲೆ ಕೇಸುಗಳನ್ನ ಹಾಕಿ, ವಿವಿಧ ಶಿಕ್ಷೆಗಳನ್ನ ವಿಧಿಸ್ತಿದ್ರು.

ಹೀಗಾಗಿಯೇ, ಮಿಡ್ನಾಪುರದ ಯುವಕರು ಆಲ್ಲಿನ ಬ್ರಿಟಿಷರಿಗೆ ಒಂದು ಬಿಸಿ ಮುಟ್ಟಿಸಿದರು. ತಮ್ಮ ಜಿಲ್ಲೆಗೆ ಒಬ್ಬ ಭಾರತೀಯನನ್ನು ಮ್ಯಾಜಿಸ್ಟ್ರೇಟ್ ಮಾಡೋ ವರೆಗೂ, ಉಳಿದ ಆಂಗ್ಲ ಮ್ಯಾಜಿಸ್ಟ್ರೇಟ್ ಗಳನ್ನ ಕೊಲ್ತಿವಿ ಅಂತ..
ಬ್ರಿಟಿಷರು ಇದನ್ನು ಅಷ್ಟೊಂದು ಪರಿಗಣಿಸಲಿಲ್ಲ.

ಆಗ ಅಲ್ಲಿಗೆ 'ಜೇಮ್ಸ್ ಪ್ಯಾಡಿ' ಅನ್ನೋನು ಮ್ಯಾಜಿಸ್ಟ್ರೇಟ್ ಆಗಿ ಬಂದ. ಪ್ರತಿಜ್ಞೆ ಮಾಡಿದ್ದ ಕ್ರಾಂತಿಕಾರಿಗಳು, ಅದೊಂದು ಸಮಾರಂಭದಲ್ಲಿ, ಅತಿಥಿಯಾಗಿ ಬಂದಿದ್ದ ಅವನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು. 
ಬ್ರಿಟಿಷರು ಕಲ್ಕತ್ತೆಯಿಂದ ವೈದ್ಯರನ್ನು ಕರೆಸಿದರು. ವೈದ್ಯರು ಪ್ಯಾಡಿ ಯಾ ದೇಹದಿಂದ ಗುಂಡುಗಳನ್ನು ಹೊರತೆಗೆದರೂ, ಅವನನ್ನು ಬದುಕಿಸಲಾಗಲಿಲ್ಲ.. ಯುವಕರ ನಿಲುವು ಸ್ಪಷ್ಟವಾಗಿತ್ತು. ಆಂಗ್ಲರು ಈಗ ಸ್ವಲ್ಪ ಚಿನ್ತಿಸಲಾರಮ್ಭಿಸಿದರು..

ಆನಂತರ 'ಡಾಗ್ಲಾಸ್' ಎಂಬ ಆಂಗ್ಲನನ್ನು ಮತ್ತೆ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಿದರು.. ಆತ ಮೊದಲಿಂದಲೂ ಹೆದರಿದ್ದ.
ಅದೊಮ್ಮೆ "ಡಿಸ್ಟ್ರಿಕ್ಟ್ ಬೋರ್ಡ್" ನ ಸಭೆ ಇತ್ತು. ಸಂಜೆಯವರೆಗೂ ಶಾಂತಿಯುತವಾಗಿಯೇ ಇತ್ತು. ಆದರೆ ಗಂಟೆ ೫ ಆಗುತ್ತಿದ್ದಂತೆ ಇಬ್ರು ಯುವಕರು, 'ಡಾಗ್ಲಾಸ್' ನ ಹತ್ರ ಬಂದ್ರು. ನೋಡುನೋಡುತ್ತಲೇ ಆ ಆಂಗ್ಲನ ಮೇಲೆ ಗುಂಡು ಹಾರಿಸಲಾಯಿತು..ಆ ಅಧಿಕಾರಿ ಧರೆಗುರುಳಿದ.
ತಕ್ಷಣ ಇಬ್ರೂ ಯುವಕರು ಓಡಿ ಹೋದರು. ಒಬ್ಬ ಅಲ್ಲೇ ಇದ್ದ ಪಾರ್ಕಿನಲ್ಲಿ ಅಡಗಿ ಕುಳಿತ. ಮತ್ತೊಬ್ಬ ಹತ್ತಿರದ ಲಾಡ್ಜ್ ಒಳಗೆ ನುಸುಳಿ ಹೋದ.

ಪಾರ್ಕಿನ ಒಳಗೆ ಬಚ್ಚಿಟ್ಟುಕೊಂಡ ಯುವಕ ಸುಲಭವಾಗಿ ಬ್ರಿಟಿಷರ ಕಣ್ಣಿಗೆ ಬಿದ್ದುಬಿಟ್ಟ. ಕೂಡಲೇ ಪಾರ್ಕಿಗೆ ಬಂದ ಬ್ರಿಟಿಶ್ ಪಡೆ ಅವನ ಮೇಲೆ ಗುಂಡಿನ ದಾಳಿ ನಡೆಸಿತು.. ಎಷ್ಟೇ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆ ಹುಡುಗನಿಗೆ ಗುಂಡುಗಳು ತಗುಲಿದವು. ಕೆಳಗೆ ಬಿದ್ದ ಆತನನ್ನು ಆಂಗ್ಲರು ಸೆರೆ ಹಿಡಿದರು..
ಅವನ ಹೆಸರು "ಪ್ರದ್ಯೋತ ಕುಮಾರ ಭಟ್ಟಾಚಾರ್ಯ"..

ಗುಂಡಿನಿಂದ ಬಳಲಿದ್ದ 'ಡಾಗ್ಲಾಸ್' ಬದುಕಿ ಉಳಿಯಲಿಲ್ಲ.. ಇತ್ತ ಸೆರೆಮನೆಯಲ್ಲಿ 'ಪ್ರದ್ಯೋತ'ನಿಗೆ ಅವನ ಸಹಚರರ ಬಗ್ಗೆ ಸುಳಿವು ನೀಡಬೇಕೆಂದು ಚಿತ್ರ-ವಿಚಿತ್ರ ಹಿಂಸೆ ನೀಡಲಾಯಿತು. ದೇಶಕ್ಕಾಗಿ ಎಲ್ಲ ನೋವನ್ನೂ ಸಹಿಸಿಕೊಂಡನೆ ಹೊರತು, ಯಾರ ಹೆಸರನ್ನೂ ಹೇಳಲಿಲ್ಲ..!!

ಕೊನೆಗೆ ವಿಚಾರಣೆಯ ನಂತರ "ಪ್ರದ್ಯೋತ"ನಿಗೆ, ಮರಣದಂಡನೆಯ ಶಿಕ್ಷೆ ವಿಧಿಸಲಾಯಿತು. 1933 ಜನವರಿ 12 ರಂದು ಆತನನ್ನು ನೇಣಿಗೇರಿಸಿದರು..

ಆದರೂ ಆಂಗ್ಲರು ಮತ್ತೊಮ್ಮೆ "ಬರ್ಗ್' ಎಂಬ ಮತ್ತೊಬ್ಬನನ್ನು ಮಾಡಿದರು.
ತಾವೂ ಅಷ್ಟೇ ಬಲವಂತರು ಅಂತ, ಪಟ್ಟು ಹಿಡಿದ ಕ್ರಾಂತಿಕಾರಿಗಳು ಆ ಅಧಿಕಾರಿಯನ್ನೂ ಕೊಂದರು.
ಆ ಕಾರಣಕ್ಕೆ "ನಿರ್ಮಲ್ ಜೀವನ ಘೋಷ್", "ಬ್ರಿಜ್ ಕಿಶೋರ್ ಚಕ್ರವರ್ತಿ", "ರಾಮಕೃಷ್ಣ ರೈ" ಈ ಮೂವರನ್ನೂ ಗಲ್ಲಿಗೇರಿಸಲಾಯಿತು..
ಕಡೆಗೂ ಎಚ್ಚೆತ್ತ ಬ್ರಿಟಿಷರು, ಕ್ರಾಂತಿಕಾರಿಗಳ ಬೇಡಿಕೆಯಂತೆ, ಮುಂದೆ ಭಾರತೀಯನನ್ನೇ ಮಾಡಿದರು. ಅಲ್ಲಿಗೆ ಆ ಎಲ್ಲ ಹುತಾತ್ಮರ, ಕ್ರಾಂತಿಕಾರಿಗಳ ಗೆಲುವಾಗಿತ್ತು..

ಸ್ನೇಹಿತರೆ, ನಮಗೆ ಸ್ವಾತಂತ್ರ್ಯ ಪುಗಸಟ್ಟೆ ಸಿಕ್ಕಿಲ್ಲ.. ನಮ್ಮೀ ಸ್ವಾತಂತ್ರದ ಮಹಲು, ಅದೆಷ್ಟೋ ಕ್ರಾಂತಿಕಾರಿಗಳ ಬಲಿದಾನದ ಭದ್ರ ಅಡಿಪಾಯದ ಮೇಲೆ ನಿಂತಿದೆ ಅನ್ನೋದು, ಬಹಳಷ್ಟು ಮಂದಿಗೆ ಗೊತ್ತಾಗಲೇ ಇಲ್ಲ.. ಯಾಕಂದ್ರೆ, ಅಂಥಾ ಹುತಾತ್ಮರನ್ನು ಪರಿಚಯಿಸುವ ಕೆಲಸ, ಯಾವ ಶಾಲಾ ಪುಸ್ತಕಗಳೂ ಮಾಡಲೇ ಇಲ್ಲ...

ಅಣುಮಾತ್ರವೂ, ಕ್ಷಣಮಾತ್ರವೂ ತಮ್ಮ ಬದುಕಿನ ಬಗ್ಗೆ ಯೋಚಿಸದೆ, ಮಾತೃಭೂಮಿಯ ಸೇವೆಗಾಗಿ ಸಂಪೂರ್ಣವಾಗಿ ಅರ್ಪಿಸಿಕೊಂಡ ಯುವಕರೆಷ್ಟೋ.. ವಿದ್ಯಾರ್ಥಿಗಳೆಷ್ಟೋ..
ಅವರೆಲ್ಲರ ತ್ಯಾಗವನ್ನು ಮರೆತಿದ್ದರ ಪರಿಣಾಮವೇ, ಇವತ್ತಿನ ದೇಶದ ಈ ಸ್ಥಿತಿ..!!!

ಆ ಹುತಾತ್ಮ, "ಪ್ರದ್ಯೋತ"ನಿಗೊಂದು ಭಾವಪೂರ್ಣ ನಮನ..

1 comment:

  1. ಗೆಳೆಯ ಭೀಮಸೇನ, ಮಿಡ್ನಾಪುರ ಎಂದು ನೀವು ಬರೆದಿರುವುದನ್ನು ಬೆಂಗಾಳಿಗಳು ಮೇದಿನಿಪುರ್ ಅಂತ ಕರೆಯುತ್ತಾರೆ.. ಬರಹ ಮತ್ತು ಉಚ್ಛಾರಣೆ ಎರಡು ಬೆಂಗಾಳಿಯಲ್ಲಿ ಬೇರೆ ಬೇರೆ...ನಿಮ್ಮ ಈ ಲೇಖನಮಾಲೆಗೆ ಶುಭ ಹಾರೈಕೆಗಳು..

    ReplyDelete