Thursday, 19 January 2012

'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3


ಜೂನ್ 28-1930.ಚಿತ್ತಗಾಂಗ್ ನ ಜನತೆಗೆ ಆಘಾತಕಾರಿ ವಿಷಯವೊಂದು ತಿಳಿಯಿತು.ಕ್ರಾಂತಿಯ ನಾಯಕರಲ್ಲಿ ಒಬ್ಬನಾದ "ಅನಂತ ಸಿಂಹ" ಆಂಗ್ಲರಿಗೆ ಶರಣಾದ ಸುದ್ದಿ ಅದು.ವಿಷಯ ತಿಳಿದಾಕ್ಷಣ ಎಲ್ಲರಿಗೂ ದಿಗ್ಭ್ರಮೆ.ಯಾರೊಬ್ಬರೂ ಇದನ್ನು ನಂಬಲು ತಯಾರಿರಲಿಲ್ಲ.

ಜೊತೆಗೆ ಜನರಲ್ಲಿ ಅನೇಕ ಗಾಳಿಸುದ್ದಿಗಳೂ ಹರಿದಾಡಲಾರಂಭಿಸಿದವು."ಇದು ಬ್ರಿಟಿಶರೇ ಹಬ್ಬಿಸಿರುವ ಸುಳ್ಳು ಸುದ್ದಿ ಇರಬೇಕು. ಯಾಕಂದ್ರೆ ಬಂಧನಕ್ಕೆ ಉಳಿದಿರೋದು ಅನಂತ ಒಬ್ಬನೆ.ಈಗ ಅವನನ್ನೂ ಹಿಡಿದು ಬಾಯಿ ಬಿಡಿಸುತ್ತಿದ್ದೇವೆ ಅಂತ ಸುದ್ದಿ ಹಬ್ಬಿಸಿದರೆ, ಉಳಿದ ಕ್ರಾಂತಿಕಾರಿಗಳು ಅನಂತನನ್ನು ಕೊಲ್ಲಬಹುದು ಅನ್ನೋ ಉದ್ದೆಶದಿಂದ ಈ ಸುದ್ದಿ ಎದ್ದಿರಬಹುದು." ಅಂತ ಕೆಲವು ಜನ ಅಂದುಕೊಂಡ್ರು.. "ಇಲ್ಲ, ಇದು ಸೂರ್ಯಸೇನನೇ ರೂಪಿಸಿರುವ ಯೊಜನೆ ಇರಬೇಕು. ಉಳಿದ ಯುವಕರಿಗೆ ಜೈಲಿನಲ್ಲಿ ಹಿಂಸೆ ಕೊಡದಿರಲು ಅನಂತ ಈ ನಿರ್ಧಾರ ತೊಗೊಂಡಿರಬಹುದು." ಅಂತ ಇನ್ನೂ ಕೆಲವರು ಭಾವಿಸಿದರು..ಆದರೆ, ಅನಂತ ಬ್ರಿಟಿಶರಿಂದ ಬಂಧಿತನಾಗಿದ್ದಂತೂ ನಿಜವೇ ಆಗಿತ್ತು..

ಅನಂತ ಸಿಂಹ
                                

ಅನಂತ ಒಬ್ಬ ಮಹಾನ್ ಯೋದ್ಧಾ.. ಇಡೀ ಚಿತ್ತಗಾಂಗ್ ನ ಕ್ರಾಂತಿಯಲ್ಲಿ ಮೊದಲಿಂದಲೂ ಯೋಜನೆಯಲ್ಲಿ ಇದ್ದವನು ಇವನು..ಪ್ಲಾನಿನ ಪ್ರಕಾರ, ಒಟ್ಟು ಎರಡು ಶಸ್ತ್ರಾಗಾರಗಳ ಮೇಲೆ ಆಕ್ರಮಣ ಆಗಬೇಕಿತ್ತು. ಒಂದು ಪೋಲಿಸ್ ಶಸ್ತ್ರಾಗಾರ. ಮತ್ತೊಂದು ಅರೆಸೈನ್ಯದ ತುಕಡಿಯ ಶಸ್ತ್ರಾಗಾರ. ಇವೆರಡರಲ್ಲಿ ಪೋಲಿಸ್ ಶಸ್ತ್ರಾಗಾರವನ್ನು ಆಕ್ರಮಿಸುವ ಹೊಣೆ ಗಣೇಶ್ ಘೋಷ್ ಮತ್ತು ಅನಂತ ಸಿಂಹನ ಹೆಗಲೇರಿತ್ತು.

ದಾಳಿಯೇನೋ ಸುಸೂತ್ರವಾಗಿ ನಡೆಯಿತು. ಒಟ್ಟು ೧೪ ಪಿಸ್ತೊಲ್ ಮತ್ತು ಹತ್ತಾರು ಬನ್ದೂಕುಗಳನ್ನು ಸಂಗ್ರಹಿಸುವಲ್ಲಿ ಅನಂತ ಯಶಸ್ವಿಯಾಗಿದ್ದ,. ಆದರೆ ದಾಳಿಯ ಮಧ್ಯದಲ್ಲಿ "ಹಿಮಾಂಶು ದತ್ತ" ಎಂಬ ಹುಡುಗನ ಬಟ್ಟೆಗೆ ಬೆಂಕಿ ತಗುಲಿಬಿಟ್ಟಿತು.. ಧಗೆಯಲ್ಲಿ ಒದ್ದಾಡುತ್ತಿದ್ದ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಅನಂತನ ಜವಾಬ್ದಾರಿಯಾಯಿತು.. ಹಾಗೆ ಕರೆದೊಯ್ಯುವಾಗ, ಪ್ರಯಾಣದ ಮಧ್ಯದಲ್ಲಿ ಬ್ರಿಟಿಶರು ಕ್ರಾಂತಿಕಾರಿಗಳನ್ನು ಸುತ್ತುವರೆದರು. ಉಪಾಯದಿಂದ ಅನಂತ, ಬಳಲಿದ್ದ ಹಿಮಾಂಶುವನ್ನು ವ್ಯಕ್ತಿಯೊಬ್ಬರ ವಶಕ್ಕೆ ಸುರಕ್ಷಿತವಾಗಿ ಒಪ್ಪಿಸಿ, ತಾನು ತಪ್ಪಿಸಿಕೊಂಡುಬಿಟ್ಟ..ಆಮೇಲೆ, ಅದೆಷ್ಟೋ ದಿನಗಳ ನಂತರ, ಬಂದೀಖಾನೆಯಲ್ಲಿ ಆಂಗ್ಲರು ತನ್ನ ಯುವ ಸ್ನೇಹಿತರಿಗೆ ಕೊಡುತ್ತಿದ್ದ ಹಿಂಸೆಯನ್ನು ಕೇಳಿ ತಾನು ಶರಣಾಗಬೇಕೆಂದು ಅನ್ನಿಸಿ  ಶರಣಾಗಿಬಿಟ್ಟ.ಅನಂತನ ಶರಣಾಗತಿ ನಿಜಕ್ಕೂ ಸೂರ್ಯಸೇನನ ಒಂದು ಯೋಜನೆಯೇ ಆಗಿತ್ತು. ಈಗಾಗಲೇ ಬಂಧಿತರಾಗಿ ಜೈಲಿನಲ್ಲಿ ಹಿಂಸೆ ಅನುಭವಿಸುತ್ತಿದ್ದ ಯುವಕರಿಗೆ ಮತ್ತೆ ಜೀವನೋತ್ಸಾಹ ತುಂಬಿಸಲು ಅನಂತ ತಾನೇ ಬಂಧಿತನಾದ..

ವಿಚಾರಣೆಯ ವೇಳೆ, ಅನಂತನಿಗೆ ಇನ್ನಿಲ್ಲದಂತೆ ಹಿಂಸೆ ನೀಡಲಾಯಿತು. ದೇಶಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಆತ, ಎಲ್ಲವನ್ನೂ ರಾಷ್ಟ್ರಕ್ಕಾಗಿ ಸಹಿಸಿಕೊಂಡ. ಕಡೆಗೆ ಅನಂತನಿಗೆ 'ಕರಿನೀರಿನ' ಶಿಕ್ಷೆ ವಿಧಿಸಿ, ಅಂಡಮಾನಿಗೆ ಅಟ್ಟಲಾಯಿತು..ಇವನ ಸಹನಾಯಕನಾಗಿದ್ದ ಗಣೇಶ್ ಘೋಷ್ ನೂ ಬಂಧಿತನಾಗಿ ಅಂಡಮಾನಿನ ಶಿಕ್ಷೆಗೆ ಗುರಿಯಾದ..ಅನಂತ್ ಸಿಂಹ, ಸ್ವಾತಂತ್ರ್ಯಾನಂತರ ೧೯೭೯ ರಲ್ಲಿ ಜನವರಿ ೨೫ ರಂದು ಇಹಲೋಕ ತ್ಯಜಿಸಿದ.. ಹಾಗೆಯೇ ಗಣೇಶ್ ಘೋಶನು ೧೯೯೪ ಅಕ್ಟೋಬರ್ ೧೬ ರಂದು ನಿಧನನಾದನು..

ಇತ್ತ ಲೊಕನಾಥ ಬಲ್ ಕೂಡ ತಲೆಮರೆಸಿಕೊಂಡಿದ್ದ. ಜಲಾಲಬಾದ್ ಗುಡ್ಡದಲ್ಲಿ ನಡೆದ ಹೊರಾಟದಲ್ಲಿ ತನ್ನ ಕಣ್ಣೆದುರೇ, ತನ್ನ ತಮ್ಮ ಹರಿಗೋಪಾಲ್ ಬಲ್(ಟೇಗ್ರ) ಆಂಗ್ಲರ ಗುಂಡಿಗೆ ಬಲಿಯಾದದ್ದನ್ನು ನೋಡಿ ತುಂಬಾ ದುಃಖಿತನಾಗಿದ್ದ.ಬ್ರಿಟಿಶರ ಕೈಗೆ ಸಿಗದಿರಲು, ಫ್ರೆಂಚರ ತಾಣವಾದ "ಚಂದ್ರನಗರ"ದಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದ.. ಆದರೆ ಅಲ್ಲಿಗೂ ಆಂಗ್ಲರ ಪಡೆ ದೌಡಾಯಿಸಿತು. ಮತ್ತೊಂದು ಗುಂಡಿನ ಚಕಮಕಿ ಕ್ರಾಂತಿಕಾರಿಗಳ  ಹಾಗೂ ಬ್ರಿಟಿಶರ ನಡುವೆ ನಡೆಯಿತು.. ಆ ಹೋರಾಟದಲ್ಲಿ ಲೊಕನಾಥನ ಸಹಚರ "ಜಿಬನ್ ಘೋಶಾಲ್" ಹುತಾತ್ಮನಾದ. ಲೊಕನಾಥ್ ಕಡೆಗೂ ಆಂಗ್ಲರ ಸೆರೆಯಾದ..ಅವನ ವಿಚಾರಣೆಯೂ ನಡೆದು, ಅವನಿಗೂ ಭಯಾನಕ "ಕರಿನೀರಿನ" ಶಿಕ್ಷೆ ವಿಧಿಸಲಾಯಿತು..!!!

ಕಲ್ಪನಾ ದತ್ತ, ಪ್ಲಾನಿನ ಪ್ರಕಾರ ಪ್ರೀತಿಲತಾಳ ಜೊತೆಗೆ "ಯುರೋಪಿಯನ್ ಕ್ಲಬ್" ಮೆಲೆ ದಾಳಿ ಮಾಡಬೇಕಿತ್ತು.ಆದರೆ ಹೋರಾಟಕ್ಕೂ ಒಂದು ವಾರದ ಮೊದಲೇ ಸ್ಟೇಶನ್ ಒಂದರಲ್ಲಿ ಬ್ರಿಟಿಷರು ಆಕೆಯನ್ನು ಬಂಧಿಸಿದರು..ಹೇಗೋ ಜಾಮೀನಿನ ಮೇಲೆ ಹೊರಬಂದ ನಂತರ, ಭೂಗತಳಾದಳು..ಆನಂತರ, ಅದೊಮ್ಮೆ ಕಲ್ಪನಾ ಮತ್ತು ಸೂರ್ಯಸೇನ್ ಅವಿತಿಟ್ಟುಕೊಂಡಿದ್ದ ಮನೆಯ ಮೇಲೆ ಬ್ರಿಟಿಷರು ದಾಳಿ ಮಾಡಿದರು.ಆ ಹೋರಾಟದಲ್ಲಿ ಸೂರ್ಯಸೇನ್ ಬಂಧಿತನಾದ. ಕಲ್ಪನಾ ಮತ್ತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು..ಬಂಧಿತನಾದ ಸೂರ್ಯಸೇನ್ ಗಲ್ಲಿಗೇರಿದ್ದುಇತಿಹಾಸವಿದಿತ..ಬಹು ದಿನಗಳ ನಂತರ, ಮತ್ತೆ ಕಲ್ಪನಾ ಬಂಧಿತಳಾಗಿ, ಅವಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು..!!!!

ಇವೆಲ್ಲದರ ಮಧ್ಯೆ ಹರಿಪಾದ ಎಲ್ಲೋ ಅಡಗಿದ್ದ.ಬಹುಶಃ ಆ ಭಾರತಮಾತೆ ಇನ್ನೂ ಒಂದು ಕಾರ್ಯಕ್ಕಾಗಿ ಕಾಯುತ್ತಿದ್ದಳೇನೋ..!!ಜಲಾಲಬಾದ್ ಗುಡ್ಡದಲ್ಲಿ ನಡೆದ ಹೋರಾಟದಲ್ಲಿ, ತನ್ನ ಸ್ನೇಹಿತರೆಲ್ಲ ಗುಂಡೇಟಿಗೆ ಬಲಿಯಾದದ್ದನ್ನ ನೋಡಿದ್ದ ಹರಿಪಾದನಿಗೆ, ಬ್ರಿಟಿಷರ ಬಗ್ಗೆ ಇನ್ನಷ್ಟು ಕೋಪ ಉಕ್ಕಿತ್ತು.ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅಷ್ಟೇ..
ಅಲ್ಲೊಬ್ಬ ಬ್ರಿಟಿಶ್ ಅಧಿಕಾರಿ, ಈ ಎಲ್ಲ ಸಾವಿಗೆ ಕಾರಣನಾದವನು, ಚಿತ್ತಗಾಂಗ್ ನಲ್ಲೇ ಹಾಯಾಗಿ ಇದ್ದ.ಬಂಧಿತರಾದ ಉಳಿದ ಕ್ರಾಂತಿಕಾರಿಗಳನ್ನ ವಿಚಾರಣೆಯ ವೇಳೆ ಹಿಂಸಿಸುತ್ತಿದ್ದ. ಅವನಿಗೆ ಫುಟ್ಬಾಲ್ ಆಟವೆಂದರೆ ಪ್ರಾಣ.ಸದಾ ಮೈದಾನದಲ್ಲಿ ನಡೆಯುತ್ತಿದ್ದ ಆಟವನ್ನು ನೋಡುತ್ತಾ ಕೂರುತ್ತಿದ್ದ.ಅದನ್ನೇ ಹರಿಪಾದ ವಧಾಸ್ಥಳವನ್ನಾಗಿಸಿಕೊಂಡಿದ್ದ.ಅದೊಮ್ಮೆ, ಫುಟ್ಬಾಲ್ ಆಟದ ವೀಕ್ಷಣೆಯಲ್ಲಿ, ಆ ಅಧಿಕಾರಿ ಮಗ್ನನಾಗಿದ್ದಾಗ, ಹೊಂಚು ಹಾಕಿ ಕುಳಿತಿದ್ದ ಹರಿಪಾದ, ನೇರ ಅವನ ಹತ್ರ ಬಂದವನೇ, ಸೊಂಟದಲ್ಲಿದ್ದ ಪಿಸ್ತೋಲ್ ಹೊರತೆಗೆದು ಗುಂಡು ಹಾರಿಸಿಯೇ ಬಿಟ್ಟ. ನೋಡುನೋಡುತ್ತಲೇ ಬ್ರಿಟಿಶ್ ಅಧಿಕಾರಿ ಕೊನೆಯುಸಿರೆಳೆದ. ತನ್ನ ಸಹಚರರಿಗೆ ನೋವುಣಿಸಿದ್ದ ಆ ಆಂಗ್ಲರಿಗೆ ಚಿಕ್ಕ ಬಾಲಕ, ಚುರುಕು ಮುಟ್ಟಿಸಿದ್ದ.ಆನಂತರ, ಅವನನ್ನು ಬಂಧಿಸಿ, ನೆಪಕ್ಕೆಂದು ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿದರು.ಆ ವಿದ್ಯಾರ್ಥಿ 'ಹರಿಪಾದ ಮಹಾಜನ್' ನೇಣಿಗೇರಿದಾಗ ಅವನಿಗೆ ಕೇವಲ 14 ವರ್ಷ.!!!!

ಅಂತೂ ಕೊನೆಗೆ, ಸೂರ್ಯಸೇನ್ ಎಂಬ ಮಹಾನ್ ಸಂಘಟಕ, ಕ್ರಾಂತಿಕಾರಿ, ಅಪ್ಪಟ ದೇಶಾಭಿಮಾನಿ ಹಚ್ಚಿದ ಆ ಕಿಚ್ಚು, ಯಶಸ್ವಿಯಾಯಿತಾದರೂ, ಕ್ರಾಂತಿಕಾರಿಗಳ ಬಂಧನದಿಂದ ಮಂಕು ಕವಿದಿದ್ದು ದಿಟ.ಆದರೂ, ಆ ಕಿಚ್ಚನ್ನು ಮನದೊಳಗೆ ಉರಿಸಿಕೊಂಡಿದ್ದ ಯುವಕರು ಮತ್ತೆ ಮತ್ತೆ ಮೇಲೆದ್ದು ಬ್ರಿಟಿಷರನ್ನು ನಿರಂತರ ಹಣ್ಣಾಗಿಸಿ, ತಾಯಿ ಭಾರತಿಯ ದಾಸ್ಯವನ್ನು ಕಳಚುವಲ್ಲಿ ವಿಜಯ ಸಾಧಿಸಿದರು..!!!!

ಉಳಿದೆಲ್ಲ ಹೋರಾಟ,ಸತ್ಯಾಗ್ರಹಗಳ ಜೊತೆಗೆ ಚಿತ್ತಗಾಂಗ್ ನ ಈ ಕ್ರಾಂತಿಯನ್ನೂ ನಮ್ಮ ಪುಸ್ತಕದಲ್ಲಿ ಹೇಳಬೇಕಿತ್ತು.!! ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೂ ಸಿಡಿದೆದ್ದು, ಬ್ರಿಟಿಶ್ ಪ್ರಭುತ್ವದ ವಿರುದ್ಧ ಮಾಡಿದ ಹೋರಾಟವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೂ ಹೇಳಬೇಕಿತ್ತು..!!ವಯಸ್ಸು ಚಿಕ್ಕದಿದ್ದರೂ ಆಂಗ್ಲರ ಬಂದೂಕಿಗೆ ಎದೆ ಸೆಟೆಸಿ ನಿಂತ ವೀರರ ಧೈರ್ಯ ಸಾಹಸವನ್ನು ನಮ್ಮ ಯುವಕರಿಗೂ ಹೇಳಬೇಕಿತ್ತು..!! ಹ್ಯಾರಿಪಾಟರ್, ಸ್ಪೈಡರ್ ಮ್ಯಾನ್ ನಂತಹ ಕಾಲ್ಪನಿಕ 'ಹೀರೋ'ಗಳ ಕಥೆ ಹೇಳೋದಕ್ಕಿಂತ ಮೊದಲು, ದೇಶಕ್ಕಾಗಿ ಪ್ರಾಣತೆತ್ತ ಈ ನಿಜವಾದ 'ಹೀರೋ'ಗಳ ಕಥೆಯನ್ನ ನಮ್ಮ ಮಕ್ಕಳಿಗೆ ಹೇಳಬೇಕಿತ್ತು..!!!ಆದರೆ ಅದೇಕೋ ನಮ್ಮ ದಿವ್ಯ ನಿರ್ಲಕ್ಷ್ಯದಿಂದ, ಅವರೆಲ್ಲ ತೆರೆಯಲ್ಲಿ ಮರೆಯಾದರು..

ಕಡೆ ಪಕ್ಷ,ಅವರು ತಮ್ಮ ರಕ್ತತೈಲವನ್ನೆರೆದು ಹಚ್ಚಿದ ಈ ಸ್ವಾತಂತ್ರ್ಯಜ್ಯೋತಿಯನ್ನು ಆರದಂತೆ, ನಂದಾದೀಪವಾಗಿಸಲಾದರೂ ಅವರ ಸ್ಮರಣೆ ನಾವು ಮಾಡಲೇಬೇಕಲ್ಲವೇ..?!!!! 
 ವಂದೇ ಮಾತರಂ..



[ ಈ ಲೇಖನದ ಮೊದಲೆರಡು ಭಾಗಗಳು 
ಭಾಗ-೧ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೧
ಭಾಗ-೨ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೨
]


1 comment:

  1. ಭೀಮಣ್ಣ ನಿಮ್ಮ ದೇಶಭಕ್ತಿಗೆ ಶಿರಭಾಗಿ ನಮಿಸುತ್ತೇನೆ.. 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ ಎಂಬ ಶೀರ್ಷಿಕೆಯಡಿ ಮೂರು ಭಾಗಗಳಾಗಿ ಮೂಡಿ ಬಂದ ಲೇಖನ ಪ್ರತಿಯೊಬ್ಬ ಓದುಗನಲ್ಲಿಯು ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿವೆ.. ಮತ್ತು ಕಡೆಯಲ್ಲಿನ ಆ ಸಾಲುಗಳು ನಿಜವಾಗಲು ನಮ್ಮ ಶಿಕ್ಷಣದ ಪಠ್ಯಕ್ರಮವನ್ನು ವಿಡಂಬಿಸಿವೆ.. ನೀವು ಹೇಳಿದಂತೆ ಮಕ್ಕಳಿಗೆ ಕಾಲ್ಪನಿಕ ಹೀರೋಗಳನ್ನು ಪರಿಚಯಿಸುವುದಕ್ಕಿಂತ ಇಂತಹ ಅಪ್ಪಟ ರಾಷ್ಟ್ರಭಕ್ತರನ್ನು ಪರಿಚಯಿಸಬೇಕು ಎಂಬ ಲೇಖನದ ಆಶಯ ಮೆಚ್ಚುವಂತದ್ದು..

    ReplyDelete