( ನಮ್ಮ ನಾಡರಕ್ಷಣೆಗೆ ತಮ್ಮ ಮಾಂಗಲ್ಯಗಳನ್ನು-ಮಡಿಲಕಂದರನ್ನು ಅರ್ಪಿಸಿದಂತಹ ಎಲ್ಲ ಸೈನಿಕರ ಪತ್ನಿ-ತಾಯಂದಿರ ಪಾದಾರವಿಂದಗಳಲ್ಲಿ ಈ ಕವನ ಸಮರ್ಪಣೆ..)
ತ್ಯಾಗಮಯಿ
ಹೊರಟು ನಿಂದಿಹನು ವೀರಸೈನಿಕ
ರಾಷ್ಟ್ರಯುದ್ಧದ ತಯಾರಿಯಲಿ,
ವೀರ ತಿಲಕವ ಹಣೆಯೊಳಿಟ್ಟಳು
ಪತ್ನಿ ಶುಭವ ಹಾರೈಸುತಲಿ..
ಮರಳಿ ನೋಡುವ ಭರವಸೆಯಿಲ್ಲ
ತುಂಬಿಕೊಂಡಳು ಹೃನ್ಮನದಿ.
ನೆನೆದು ನೆನೆದು ಉಮ್ಮಳಿಸಿತು ದುಃಖ
ಅಪ್ಪಿಕೊಂಡಳವನೆದೆ ಭರದಿ..
ಮಾಂಗಲ್ಯಭಾಗ್ಯವನೆ ಅರ್ಪಿಸುತಿಹಳು
ಮಾತೃಭೂಮಿಯ ರಕ್ಷಣೆಗೆ.
ಇಂತಹ ತ್ಯಾಗವೇ ಮಾತೆಯ ಮೊಗದಲಿ
ಅರಳಿಸುವುದು ನೆಮ್ಮದಿಯ ನಗೆ..
ಮದ್ದಿನ ಸದ್ದು , ಗುಂಡಿನ ಅಬ್ಬರ
ಗಡಿಯಲಿ ಯುದ್ಧ ಭೀಕರ.
ಧೈರ್ಯದಿ ನುಗ್ಗಿ , ಶತ್ರುವ ಮೆಟ್ಟಿ
ಆದರು ಶತ ಸೈನಿಕರಮರ..
ಕೊನೆ ಉಸಿರಿನವರೆಗೂ ಹೊರಾಡಿದನು
ಮರೆತು ತನ್ನಯ ಮನೆ-ಮಾರು.
ನಾಡಸೇವೆಯ, ಪೂರೈಸಿದನು
ಬಸಿದು ತನ್ನ ಬಿಸಿ ನೆತ್ತರು..
ಬಲಿದಾನದ ಈ ಯಜ್ಞಕುಂಡದಲಿ,
ಆಹುತಿಯಾದನು ಯೋಧಪತಿ.
ಸುದ್ದಿಯ ತಿಳಿದೂ ಧೃತಿಗೆಡಲಿಲ್ಲ,
ಗರ್ವ ಪಟ್ಟಳಾ ವೀರಸತಿ..
ಮಗುವನು ಅಪ್ಪಿ ಮುತ್ತನಿಟ್ಟಳು,
ಎದೆಯಲಿ ನೋವು ಅಗಾಧ.
ಅಣಿಯಾದಳು ಪತಿವಾಕ್ಯವ ನಡೆಸಲು,
ಮಾಡಲವನ ನವಯೋಧ..
ತನಯನ ಪೊರೆದಳು ಅನುದಿನ ನೀಡಿ,
ರಾಷ್ಟ್ರೀಯತೆಯ ಸಂಸ್ಕೃತಿ.
ಮಗುವಿನ ಮನದಿ , ಚಿಗುರಿತು ಬಲದಿ
ರಾಷ್ಟ್ರಭಕ್ತಿಯ ಜಾಗೃತಿ..
ತಂದೆಯ ಮಾರ್ಗವ ಹಿಡಿದನು ಮಗನು,
ಹೊರಟು ನಿಂತ ಗಡಿರಕ್ಷಣೆಗೆ.
ಕರುಳಬಳ್ಳಿಯನೂ ಅರ್ಪಿಸಿಬಿಟ್ಟಳು
ನಾಡಿಗೆ, ಸಮರಾರೀಕೆಗೆ ?!.
ತ್ಯಾಗ ಚಿಂತನೆಯ ಪರಮೋನ್ನತಿಯಿದು,
ಸರ್ವವು ರಾಷ್ಟ್ರಕೆ ಅರ್ಪಣೆ.
ಆ ತ್ಯಾಗಮಯಿಗೆ ನಾ ಶಿರಬಾಗುವೆನು
ಅವಳ ತ್ಯಾಗವೇ ಪ್ರೇರಣೆ...