( ಈ ಹಾಡು " जहां डाल डाल पर सोने की चिड़ियाँ कराती है बसेरा " ಎಂಬ ಹಿಂದಿ ಗೀತೆಗೆ ಅದೇ ಧಾಟಿಯಲ್ಲಿ ಬರೆದ ಕನ್ನಡಾನುವಾದ )
ನನ್ನ ಭಾರತ ದೇಶ
ಪ್ರತಿರೆಂಬೆಯಲೂ , ಚಿನ್ನದ ಹಕ್ಕಿಗಳಿಂಚರ ಕೇಳಿಸುವ ದೇಶ
ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ..
ಪ್ರತಿಹೆಜ್ಜೆಗೂ ಧರ್ಮ,ಅಹಿಂಸೆ,ಸತ್ಯಗಳ ಭವ್ಯಭವನವಿಹ ದೇಶ
ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇ...
ಜೈ ಭಾರತಿ . . . . . . ಜೈ ಭಾರತಿ . . . . . .
ಋಷಿಮುನಿಗಳು ಪ್ರಭುವಿನ ಜಪ ಮಾಡಿಹ ಪಾವನತಮ ಈ ಭೂಮಿಕೆಯೂ
ಪ್ರತಿ ಬಾಲಕನೆಲ್ಲೀ ಮೋಹನನು.. ಆ ರಾಧಾ ಪ್ರತಿ ಬಾಲಿಕೆಯೂ..
ಆ ಸೂರ್ಯನೆಲ್ಲಿಗೆ ಮೊದಲಾಗಮಿಸಿ , ಚೆಲ್ಲುವ ತನ್ನ ಪ್ರಕಾಶ
ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...
ಗಂಗಾ,ಯಮುನಾ,ಕಾವೇರಿ,ಕೃಷ್ಣೆ ಮೈದುಂಬಿ ಹರಿಯುವುವು ಇಲ್ಲಿ
ಸುಧೆಯುಣಿಸುತ ಜನಕೆ , ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ..
ಹರಡಿಸಿವೆ ಕೇಸರವೆಲ್ಲಿ , ಚಿಗುರಿಸಿ ಫಲ-ಪುಷ್ಪವ ಪ್ರತಿ ವರುಷ
ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...
ವಿಧ-ವಿಧ ಜನರಿಹ ಈ ನಾಡೊಳಿವೆ, ಬಹುವಿಧ ಹಬ್ಬಗಳ ಕೂಟ
ದೀಪಾವಳಿಯುತ್ಸವ ಸಡಗರ , ಮತ್ತೆ ಬಣ್ಣದ ಹೋಳೀ ಆಟ..
ಎಲ್ಲೆಲ್ಲೆಡೆ ತುಂಬಿದೆ ರಾಗ-ವರ್ಣಸಂಗಮ , ಪ್ರತಿದಿನ ನಗು ಹರುಷ
ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...
ಆಕಾಶದೊಡನೆ ಮಾತಾಡುವುವೆಲ್ಲಿ ಗುಡಿ ಮಂದಿರ ಗೋಪುರವು,
ನಮ್ಮೀ ನಗರಗಳೀ ದ್ವಾರಗಳೆಂದೂ , ಭಯವಿಲ್ಲದೆ ತೆರೆದಿಹವು..
ನಿಶಿದಿನವೂ ಹೊಮ್ಮುವುದೆಲ್ಲಿ , ಪ್ರೇಮದ ವೇಣುನಾದ ಪ್ರತಿನಿಮಿಷ
ಅದು ನನ್ನಯ ಭಾರತ ದೇಶ , ಅದು ನನ್ನಯ ಭಾರತ ದೇಶ...
ಜೈ ಭಾರತಿ . . . . ಜೈ ಭಾರತಿ . . . . . .
No comments:
Post a Comment