ಸ್ವಾತಂತ್ರ್ಯದ ಬೆಳಕು
ಸ್ವಾತಂತ್ರ್ಯದ ಬೆಳಕು ಮತ್ತೆ ಪ್ರಜ್ವಲಿಸಿಹುದು
ತಮದಿಂದ ನಾಡನುತ್ತರಿಸಲೆಂದೇ..
ಮಂಜಿನಲಿ ಮರೆಯಾದ ನಾಡಚರಿತೆಯ ಮತ್ತೆ
ಎಲ್ಲರೆದೆಯಲೂ ಸ್ಫುಟಿಸಿ ಬಿತ್ತರಿಸಲೆಂದೇ...||
ಬರಿಯ ಪ್ರಭೆಯನು ಕೊಡುವ ಬೆಳಕಲ್ಲ ಇದು ನಿತ್ಯ,
ರಾಷ್ಟ್ರಚೈತನ್ಯವನು ಬೆಳಗಿಸುವ ಜ್ಯೋತಿ..
ರಾಷ್ಟ್ರಚೈತನ್ಯವನು ಬೆಳಗಿಸುವ ಜ್ಯೋತಿ..
ನಾಡರಕ್ಷಣೆಗೆಂದು ಪ್ರಾಣಕೊಟ್ಟಿಹ ವೀರ,
ಜನರ ರುಧಿರಾಜ್ಯದಿಂ ಝಗಮಗಿಪ ದೀಪ್ತಿ...||
ಸುಖದ ನಶೆಯಲಿ ನಾಡುನುಡಿಗಳೆಲ್ಲವ ಮರೆತು,
ಮೈಹೊದ್ದು ಮಲಗಿರುವ ಯುವಕರನ್ನೇ,
ದೇಶಭಕ್ತಿಯ ದಿವ್ಯ ಕಿರಣವನೆ ಸೋಕಿಸುತ
ಬಡಿದೆಬ್ಬಿಸಲು ಪುಟಿಸಿ ನೆತ್ತರನ್ನೇ..
ಹೇಡಿತನ,ಜಾಡ್ಯತೆಗಳಿಂದ ದುರ್ಬಲರಿಹರ
ನರಗಳಲಿ ಹುರುಪೂಡಿ ಹೊಸೆದು ಧೈರ್ಯ
ಕಣಕಣವ ಹುರಿದುಂಬಿಸುತ, ಮನದಿ ಹೊತ್ತಿಸಲು,
ಅನ್ಯಾಯವೆದುರಿಸುವ ಕ್ರಾಂತಿಕಿಡಿಯ...||
ರತ್ನಸಿಂಹಾಸನದಿ ಕಂಗೊಳಿಪ ಭಾರತಿಯ
ಭವ್ಯರೂಪವ ಮತ್ತೆ ತೋರಲಿಂದೇ
ಸತ್ಯ ಧರ್ಮದ ಶುಭ್ರ ಪ್ರಗತಿ ಮಾರ್ಗದಿ ಮುಂದೆ,
ಕಣ್ತೆರೆಸಿ ಕೈಪಿಡಿದು ನಡೆಸಲೆಂದೇ...||
ಕವಿತೆ ಪ್ರಸ್ತುತವಾಗಿದೆ... ಅಭಿನಂದನೆಗಳು...
ReplyDeleteಅತ್ಯಂತ ಪ್ರಸ್ತುತ ಪದಗಳು👌👌
ReplyDelete